೧೯೭೩ರಲ್ಲಿ ನಾನು ಶಿವಮೊಗ್ಗದ ಬ್ರಾಹ್ಮಣರ ವಸತಿ ನಿಲಯದಲ್ಲಿದ್ದುಕೊಂಡು ಡಿ.ವಿ.ಎಸ್. ಕಾಲೇಜಿನಲ್ಲಿ ಪ್ರಥಮ ಪಿ.ಯು.ಸಿ. ಓದುತ್ತಿದ್ದೆ. ಎಸ್.ಎಸ್.ಎಲ್.ಸಿ.ಯಲ್ಲಿ ಫಸ್ಟ್ ಕ್ಲಾಸ್ ಬಂದಿದ್ದರಿಂದ ನನಗೆ ಪೂರ್ಣ ಸ್ಕಾಲರ್‌ಷಿಪ್ ಸಿಕ್ಕಿತ್ತು; ಊಟ-ತಿಂಡಿ ಫ್ರೀ; ರೂಂ ಬಾಡಿಗೆ ತಿಂಗಳಿಗೆ ರೂ.೧೩ ಮಾತ್ರಾ ಕಟ್ಟಬೇಕಾಗಿತ್ತು. ಅಲ್ಲಿನ ಎಲ್ಲಾ ವ್ಯವಸ್ಥೆಗಳೂ ಕೂಡ ಅಚ್ಚುಕಟ್ಟಾಗಿತ್ತು. ಸುಮಾರು ೪ ತಿಂಗಳ ನಂತರ ನಮ್ಮ ತಂದೆಯವರಿಗೆ ನರಸಿಂಹರಾಜಪುರದಿಂದ ಮೈಸೂರಿಗೆ ವರ್ಗವಾಯಿತು. ಹಾಗಾಗಿ ನಾನು ಆಗಾಗ ಶಿವಮೊಗ್ಗೆಯಿಂದ ಮೈಸೂರಿಗೆ ಬೆಳಿಗ್ಗೆ ೫ ಕ್ಕೆ ಹೊರಡುವ ಖಾಸಗೀ ಬಸ್ಸಿನಲ್ಲಿ ಹೋಗುತ್ತಿದ್ದೆ. ವಸತಿ ನಿಲಯದಲ್ಲಿ ಅಡಿಗೆ ಮಾಡುವ ನಾಲ್ಕೈದು ಮಂದಿಯಲ್ಲಿ ಸುಮಾರು ೭೦ ದಾಟಿದ ವಯೋವೃದ್ಧರೊಬ್ಬರಿದ್ದರು. ಒಮ್ಮೆ ನಾನು ಮೈಸೂರಿನಿಂದ ವಾಪಸಾದಾಗ ಅವರು ನನ್ನನ್ನು ಕರೆದು, ನೀನು ಎಷ್ಟು ಹೊತ್ತಿಗೆ ಶಿವಮೊಗ್ಗ ಬಿಟ್ಟೆ ಎಂದು ಕೇಳಿದರು. ನಾನು ೪.೩೦ ಕ್ಕೇ ಬಿಟ್ಟೆ; ೫ಕ್ಕೆ ಬಸ್ಸು ಎಂದೆ. ದಿನಾ ಬೆಳಿಗ್ಗೆ ೬ ಘಂಟೆಯಾಗಿ ಎಲ್ಲರೂ ಪ್ರಾಥ:ಸಂಧ್ಯಾ ವಂದನೆ ಮುಗಿಸದ ಹೊರತೂ ಕಾಫಿ ಕೊಡುತ್ತಿರಲಿಲ್ಲ. ಅವರೆಂದರು ಇನ್ನು ಮುಂದೆ ಮೈಸೂರಿಗೆ ಹೋಗುವಾಗ ನನಗೆ ಹಿಂದಿನ ದಿನ ರಾತ್ರಿಯೇ ತಿಳಿಸು; ಹೋಗುವ ಮುನ್ನ ಅಡಿಗೆ ಮನೆಗೆ ಬಂದು ಹೋಗು ಎಂದರು. ಅಂದಿನಿಂದ ನಾನು ಬೆಳಿಗ್ಗೆ ಅಲ್ಲಿಗೆ ಹೋದರೆ ಅವರು ನನ್ನನ್ನು ಪ್ರತ್ಯೇಕವಾಗಿ ಕರೆದು ಒಂದು ಲೋಟ ತುಂಬ ಬಿಸಿ ಬಿಸಿ ಹಾಲನ್ನು ನೀಡಿ, ನಾನು ಕುಡಿಯುವುದನ್ನೇ ಅಕ್ಕರೆಯಿಂದ ನೋಡುತ್ತಿದ್ದು, ಮುಗಿದ ಮೇಲೆ ಹುಷಾರಾಗಿ ಹೋಗಿ ಬಾ ಎಂದು ತಲೆ ಸವರಿ ಕಳಿಸುತ್ತಿದ್ದರು. ಆ ವಯಸ್ಸಿನಲ್ಲಿಯೂ ಅವರು ದುಡಿಯುವ ಅನಿವಾರ್ಯತೆ ಏನಿತ್ತೋ ಮತ್ತು ಅವರು ನನ್ನಲ್ಲಿ ಯಾರನ್ನು ಕಾಣುತ್ತಿದ್ದರೋ ನನಗೆ ಗೊತ್ತಿಲ್ಲ. ಅವರ ಹೆಸರೂ ಸಹ ನನಗೆ ನೆನಪಿಲ್ಲ. ಆದರೆ ಅವರ ಅಕ್ಕರೆ, ಅವರ ಪ್ರೀತಿ ತುಂಬಿದ ನೋಟ ಮತ್ತು ನನ್ನ ಮೇಲಿದ್ದ ಅವರ ಮಮಕಾರ-ಅನುಕಂಪ ಇಂದಿಗೂ ನನ್ನ ಮನದಲ್ಲಿ ಹಚ್ಚ ಹಸಿರಾಗಿದೆ.
No comments:
Post a Comment