ಬಾಲ್ಯ, ಯೌವನ, ವೃದ್ದಾಪ್ಯ ಮತ್ತು ವಾನಪ್ರಸ್ಥಾಶ್ರಮ (ಸನ್ಯಾಸ) ಇವುಗಳು ನಮ್ಮ ಸನಾತನ ಧರ್ಮ ಗುರುತಿಸಿರುವ ಮಾನವ ಜೀವನದ ವಿವಿಧ ಘಟ್ಟಗಳು. ಪೂರ್ಣಾಯಸ್ಸಿನ ಕೃಪೆಯಿದ್ದಲ್ಲಿ ಪ್ರತಿಯೊಬ್ಬರೂ ಈ ಎಲ್ಲಾ ಹಂತಗಳನ್ನೂ (ಬಹುಶ: ಸನ್ಯಾಸವೊಂದನ್ನು ಬಿಟ್ಟು-ಅದು ವ್ಯಕ್ತಿಯ ವೈಯುಕ್ತಿಕ ತೀರ್ಮಾನ) ಅನುಭವಿಸಲೇ ಬೇಕು; ದಾಟಲೇ ಬೇಕು. ಬಾಲ್ಯಾವಸ್ಥೆಯಲ್ಲಿ ವಿದ್ಯಾರ್ಜನೆ,ಯೌವನದಲ್ಲಿ ವೈವಾಹಿಕ ಜೀವನ ನಿರ್ವಹಣೆ ಮತ್ತು ವೃದ್ಧಾಪ್ಯದಲ್ಲಿ ನೆಮ್ಮದಿಯ, ನಿರಪೇಕ್ಷವಾದ ಮತ್ತು ಶಾಂತಿಯ ಜೀವನ ಇವು ಸಾಮಾನ್ಯವಾಗಿ ನಾವೆಲ್ಲರ ಜೀವನದಲ್ಲಿ ನಿರೀಕ್ಷಿಸಬಹುದಾದ ಮತ್ತು ಸಹಜವಾದ ಕ್ರಿಯೆಗಳು. ಬಾಲ್ಯಾವಸ್ಥೆ ಜೀವನದ ಏಕೈಕ ನಿಶ್ಚಿಂತ ಮತ್ತು ಸುಂದರ ಕಾಲ - a golden period! ಅದೇ ರೀತಿ, ಯೌವನಾವಧಿ ಕೂಡ ಕನಸುಗಳ ಅಲೆಗಳನ್ನೇರಿ ಸುಖ-ಸಂತೋಷಗಳಿಂದ ಸಂಭ್ರಮಿಸುವ ವರ್ಣಮಯ ಕಾಲ. ಆದರೇನು ಮಾಡುವುದು? ಈ ಗಡಿಯಾರದ ಟಿಕ್ ಟಿಕ್ ನಿಲ್ಲುವುದೇ ಇಲ್ಲವಲ್ಲ. ಹಾಗಾಗಿ ಮತ್ತಷ್ಟು ಬೇಕೆಂದರೂ ಕೂಡ ಈ ಘಟ್ಟಗಳ ನಿಜವಾದ ಮತ್ತು ಸಂಪೂರ್ಣವಾದ ಸಂತೋಷವನ್ನು ಅನುಭವಿಸುತ್ತಿರುವಾಗಲೇ ಕಾಲವು ನಮಗರಿವಿಲ್ಲದೆಯೇ ಜಾರಿ ವೃದ್ಧಾಪ್ಯದ ಹೊಸಲಿಗೆ ಬಂದೇ ಬಿಡುತ್ತೇವೆ. ಕಳೆದು ಹೋದ ಸುಂದರ ಸಮಯ ಬರೀ ನೆನಪಾಗಿಯೇ ಉಳಿಯುತ್ತದೆ. ಏತನ್ಮಧ್ಯೆ ನಮ್ಮ ಸ್ವಂತ ಸುಖದ ಬಯಕೆ ಮತ್ತು ಹೆಚ್ಚು ಹೆಚ್ಚು ಗಳಿಸಬೇಕೆಂಬ ನಾಗಾಲೋಟದಲ್ಲಿ ಅನೇಕ ಸತ್ಕಾರ್ಯಗಳನ್ನು ಮುಂದೆ ಮಾಡಿದರಾಯಿತು, ಇನ್ನೂ ಸಮಯ ಇದೆಯಲ್ಲಾ ಇತ್ಯಾದಿ ಸಬೂಬುಗಳನ್ನು ಹೇಳಿ ನಾವು ಮುಂದೂಡುತ್ತಲೇ ಬರುತ್ತೇವೆ. ಹೀಗೆ ಮುಂದೂಡಿದ ಸತ್ಸಂಕಲ್ಪಗಳು ಸಾಕಷ್ಟು ದೊಡ್ಡದಾಗಿ ಬೆಳೆದು, ನಮ್ಮ ಒಳಮನಸ್ಸು ಎಚ್ಚರಿಸಿ ನಾವು ಜಾಗೃತರಾಗುವ ವೇಳೆಗೆ ವೃದ್ಧಾಪ್ಯ ಸನಿಹದಲ್ಲೇ ನಿಂತು ನಸುನಗುತ್ತಾ ನಮ್ಮನ್ನು ಸ್ವಾಗತಿಸುತ್ತಿರುತ್ತದೆ ಇಲ್ಲವೇ ಸಾಕಷ್ಟು ಆವರಿಸಿಬಿಟ್ಟಿರುತ್ತದೆ!!
ಅದುದರಿಂದ, ಜೀವನದಲ್ಲಿ ವೃದ್ಧಾಪ್ಯ ಒಂದು ಪರ್ವಕಾಲ. ಸಂಸಾರದ ಜವಾಬ್ದಾರಿಗಳನ್ನು ಒಂದೊಂದೇ ಕಳೆದು ನಿಶ್ಚಿಂತೆಯಿಂದಿರುವ ಕಾಲ. ವಿಶೇಷವಾಗಿ ಇರಲಿಕ್ಕೊಂದು ಮನೆ, ಹೆಣ್ಣು ಮಕ್ಕಳ ಮದುವೆ ಮತ್ತು ಗಂಡು ಮಕ್ಕಳಿಗೆ ಉದ್ಯೋಗ ಮತ್ತು ಸರಳ ವೃದ್ಧಾಪ್ಯದ ಜೀವನಕ್ಕೊಂದು ದಾರಿ ಪ್ರಾಪ್ತಿಯಾದರೆ ಆ ಸಂಸಾರಸ್ಥನ ಬಹುತೇಕ ಕರ್ತವ್ಯಗಳು ಮುಗಿದಿವೆಯೆಂದೇ ಭಾವಿಸಬಹುದು. ಸುಮಾರು 50-55 ವರ್ಷಗಳಾಗುತ್ತಲೇ ನಾವು ವೃದ್ಧಾಪ್ಯದೆಡೆಗೆ ಕಾಲಿಡುತ್ತಿದ್ದೇವೆ ಎಂಬ ಅರಿವು ನಮ್ಮಲ್ಲಿ ಜಾಗೃತಿಯಾಗಬೇಕು. ಅದು ಉದ್ಯೋಗ, ವ್ಯಾಪಾರ, ಶಿಕ್ಷಣ, ಸಂಶೋಧನೆ ಮುಂತಾದ ರಂಗಗಳಲ್ಲಿ ದುಡಿತು ಶಕ್ತಿ-ಸಾಮರ್ಥ್ಯಾನುಸಾರ ಮತ್ತು ಅರ್ಹತೆಯಾನುಸಾರ ಮೇಲ್ಮಟ್ಟವನ್ನು ತಲುಪಿರುವಂತಹ ಕಾಲ. ಹಾಗೆಯೇ ಸ್ವಲ್ಪ ಸಮಯದಲ್ಲಿಯೇ ರಿಟೈರ್ ಆಗಿ ಅವರವರ ಕ್ಷೇತ್ರಗಳಲ್ಲಿ ಸಾಧಿಸಿದ ಉತ್ತುಂಗದಿಂದ ಜಾರಿ ಪುನ: ಶೂನ್ಯಾವಸ್ಥೆಗೆ ತಲುಪಿ ಮನೆ ಸೇರುವ ಕಾಲ. ಏಕೆಂದರೆ ಕಾಲಚಕ್ರದಲ್ಲಿ ಮೇಲಕ್ಕೆ ಹೋದ ಮೇಲೆ ಕೆಳಗಿಳಿಯಲೇ ಬೇಕು. ಮೇಲೇರಿದಾಗ ಬಹು ಜನರಿಗೆ ಪ್ರಪಂಚವೇ ಕಾಣದು. ಯಶಸ್ಸಿನ ಮತ್ತು ಹಣದ ಮದ ಅವರ ಕಣ್ಣನ್ನು ಕುರುಡಾಗಿಸಿರುತ್ತದೆ. ವಾಸ್ತವವೆಂದರೆ, ನಾವು ಆ ಉತ್ತುಂಗದಿಂದ ಕೆಳಗಿಳಿದಾಗ ಪ್ರಪಂಚದ ಬೇರೆ ಯಾರಿಗೂ ಕೂಡ ನಾವೂ ಕಾಣಿಸುವುದಿಲ್ಲ! ಆ ಎಚ್ಚರ ಮತ್ತು ಅರಿವು ಇದ್ದಾಗ ನಾವು ಆ ಶಿಖರದಿಂದ ಇಳಿದಾಗ ವಾಸ್ತವವನ್ನು ಎದುರಿಸುವುದು ಅಷ್ಟರಮಟ್ಟಿಗೆ ಸುಲಭವಾದೀತು. ಜೀವನವೆಂದರೆ ಇಷ್ಟೇ ಎಂಬ ನಿರ್ವಿಕಾರ ಭಾವನೆ ಮೂಡಲೂ ಸಹಾಯಕವಾದೀತು. ಎಂತಲೇ, ನಮ್ಮ ವೃದ್ಧಾಪ್ಯ ಜೀವನದ ತಯಾರಿ ಸಕಾರಾತ್ಮಕವಾಗಿ ಮತ್ತು ಯೋಜಿತವಾಗಿ ಪ್ರಾರಂಭವಾಗಬೇಕು. ರಿಟೈರ್ ಆಗುವ ಮೊದಲೇ ರಿಟೈರ್ ಆದ ಮೇಲಿನ ಜೀವನಕ್ಕೆ ಸೂಕ್ತ ತಯಾರಿ ಮಾಡಿಕೊಳ್ಳುವುದು ಮತ್ತು ನೆಮ್ಮದಿಯ ಜೀವನಕ್ಕಾಗಿ ಪರ್ಯಾಯ ಹವ್ಯಾಸಗಳನ್ನು ಮತ್ತು ಚಿಂತನೆಗಳನ್ನು ಬೆಳೆಸಿಕೊಳ್ಳುವುದು ಅತ್ಯವಶ್ಯ.
ಲೌಕಿಕವಾಗಿ ಶಕ್ತ್ಯಾನುಸಾರ ಸಾಧನೆ-ಸಂಪಾದನೆ ಮಾಡಿದ ಮೇಲೆ ಮತ್ತು ಸಾಂಸಾರಿಕ ಜವಾಬ್ದಾರಿಗಳನ್ನು ನಿರ್ವಹಿಸಿದ ಮೇಲೆ, ಮುಂದಿನ ಮತ್ತು ಅಂತಿಮ ಘಟ್ಟದಲ್ಲಿಯಾದರೂ ಹಂತ-ಹಂತವಾಗಿ ಈ ಪ್ರಾಪಂಚಿಕ ಜಂಜಾಟಗಳಿಂದ, ಆಕರ್ಷಣೆಗಳಿಂದ ಮತ್ತು ಮೋಹದ ಪಾಶದಿಂದ ವಿಮುಖವಾಗುವ ಪ್ರಕ್ರಿಯೆ ಒಂದು ಅತೀ ಅಪೇಕ್ಷಣೀಯವಾದ ಮತ್ತು ಅತ್ಯಗತ್ಯವಾದ ಬೆಳವಣಿಗೆ. ಒಬ್ಬ ಕೋಟ್ಯಾಧಿಪತಿಯಾದ ವ್ಯಾಪರಸ್ಥನಿದ್ದನಂತೆ. ಸಾಕಷ್ಟು ವಯಸ್ಶಾದ ಮೇಲೆ, ತನ್ನ ಲೆಕ್ಕಾಧಿಕಾರಿಯನ್ನು ಕರೆದು ನನಗೆ ವಯಸ್ಸಾಗಿದೆ, ಸಾಕಾಗಿದೆ, ನಾನು ಮಾಡಿರುವ ಆಸ್ತಿ ಎಷ್ಟು ತಲೆಮಾರಿನವರೆಗೆ ಬರುತ್ತದೆ, ಲೆಕ್ಕ ಮಾಡಿ ಹೇಳು. ಇನ್ನು ಮುಂದೆ ನಾನು ವಿಶ್ರಾಂತಿ ತೆಗೆದುಕೊಳ್ಳಬಯಸುತ್ತೇನೆ ಎಂದ. ಲೆಕ್ಕ ಹಾಕಿನ ನಂತರ ಆ ಲೆಕ್ಕಾಧಿಕಾರಿ, ಸ್ವಾಮಿ, ತಾವು ಸಂಪಾದಿಸಿದ ಆಸ್ತಿ ಸುಮಾರು ಆರು ತಲೆಮಾರಿಗೆ ಸಾಕಾಗುತ್ತದೆ ಎಂದ. ವ್ಯಾಪಾರಿ ಹಾಗಿದ್ದರೆ, ನಾಳೆಯಿಂದಲೇ ನಾನು ವಿಶ್ರಾಂತ ಜೀವನ ನಡೆಸುತ್ತೇನೆ, ಅಂಗಡಿಗೆ ಬರಿವುದಿಲ್ಲ ಎಂದು ಹೇಳಿ ಮನೆಗೆ ತೆರಳಿದ. ಮಾರನೇ ದಿನ ಲೆಕ್ಕಾಧಿಕಾರಿ ಅಂಗಡಿಗೆ ಬಂದಾಗ ಆಶ್ಷರ್ಯ ಕಾದಿತ್ತು. ಆ ಮುದಿ ಯಜಮಾನ ಅರ್ಧ ಘಂಟೆ ಮುಂಚೆಯೇ ಅಂಗಡಿಗೆ ಬಂದು ಆಸೀನನಾಗಿದ್ದ. ಲೆಕ್ಕಾಧಿಕಾರಿಯ ಪ್ರಶ್ನಾರ್ಥಕ ನೋಟಕ್ಕೆ ಯಜಮಾನನ ಉತ್ತರ ಹೀಗಿತ್ತು: ನನಗೆ ರಾತ್ರಿ ಇಡೀ ನಿದ್ದೆ ಬರಲಿಲ್ಲ. ನೀನು ಹೇಳಿದಂತೆ ಈ ಆಸ್ತಿ ಕೇವಲ ಆರು ತಲೆಮಾರಿಗಷ್ಟೇ ಸಾಕು. ಏಳನೇ ತಲೆಮಾರಿಗೆ ಏನು ಮಾಡುವುದು ಎಂಬ ಚಿಂತೆಯಾಯಿತು. ಅದಕ್ಕೇ ಕೆಲಸಕ್ಕೆ ಬಂದು ಬಿಟ್ಟೆ! ಹಾಗಾಗಿ, ಈ ಪ್ರಾಪಂಚಿಕ ಮೋಹ-ಪಾಶಗಳಿಂದ ಬಿಡುಗಡೆ ಹೊಂದುವುದು ಅಷ್ಟು ಸುಲಭವಲ್ಲ. ಅದಕ್ಕೆ ತಕ್ಕ ಸಂಸ್ಕಾರ ಬೇಕು. ಶಿಸ್ತುಬದ್ಧವಾದ, ದೃಢಮನಸ್ಸಿನ ಸಂಕಲ್ಪ, ತಯಾರಿ ಮತ್ತು ಅನುಷ್ಠಾನ ಬೇಕು. ಜೀವನಪೂರ್ತಿ ನಾನು, ನನ್ನ ಸಂಸಾರ, ನನ್ನ ದುಡಿಮೆ, ಯಶಸ್ಸು, ಕೀರ್ತಿ ಇವುಗಳನ್ನೇ ನಾವು ಬೆನ್ನು ಹತ್ತಿಬಿಟ್ಟರೆ, ನಾನು ಎಂದರೇನು ಮತ್ತು ನನ್ನಾತ್ಮದ ಸದ್ಗತಿಯ ಮಾರ್ಗಗಳಾವುವು ಎಂಬುದರ ಬಗ್ಗೆ ಕಿಂಚಿತ್ತಾದರೂ ಚಿಂತಿಸುವುದು ಯಾವಾಗ? ಹಿಂದಿನ ಜನ್ಮಗಳಲ್ಲಿ ನಾವು ಮಾಡಿರುವ ಪಾಪ ಕರ್ಮಗಳು ನಮಗೆ ತಿಳಿಯವು. ಆದುದರಿಂದ, ಕನಿಷ್ಠಪಕ್ಷ ಹಿಂದಿನ ದಿನಗಳಲ್ಲಿ ತಿಳಿದೋ, ತಿಳಿಯದೆಯೋ ಮಾಡಿರಬಹುದಾದ ತಪ್ಪು-ಒಪ್ಪುಗಳ ತುಲನೆ/ಆತ್ಮಾವಲೋಕನ ಮಾಡಿ ಕೊಳ್ಳುವುದು ಯಾವಾಗ? ಅವುಗಳನ್ನು ತಿದ್ದಿಕೊಂಡು ಅಥವಾ ಕನಿಷ್ಟಪಕ್ಷ ಪಶ್ಚಾತ್ತಾಪ ಪಡುವುದು ಯಾವಾಗ? ಸುತ್ತಲಿನ ಆಗು-ಹೋಗುಗಳನ್ನು ಹಂಸ-ಕ್ಷೀರ ನ್ಯಾಯದಂತೆ ನೋಡುವ ದೃಷ್ಟಿಕೋನ ಬೆಳೆಸಿಕೊಳ್ಳುವುದು ಯಾವಾಗ? ನಾವಿಲ್ಲದಿದ್ದಾಗಲೂ ಈ ಪ್ರಪಂಚ ನಡೆದಿದೆ; ನಾವೂ ಸಹ ಅದನ್ನು ಅನುಭವಿಸಿದ್ದೇವೆ; ನಮ್ಮ ನಂತರವೂ ಈ ನಾಟಕ ಮುಂದುವರೆಯಲಿದೆ ಎಂಬ ಅಂಶ ನಮಗೆ ಮೊದಲು ಸ್ಪಷ್ಟವಾಗಬೇಕು. ನಾವು ಬಂದದ್ದರಿಂದ ಅಥವಾ ಬರದಿದ್ದುದರಿಂದ ಅಥವಾ ನಮ್ಮ ನಿರ್ಗಮನದಿಂದ ಈ ಪ್ರಪಂಚದ ಆಗು-ಹೋಗುಗಳಿಗೆ ಏನೂ ಪ್ರಭಾವ ಇಲ್ಲ. ನಾನಿಲ್ಲದಿದ್ದರೆ ಒಂದು ಹುಲ್ಲು ಕಡ್ಡಿಯೂ ಅಲುಗದು ಎಂದು ಪ್ರಪಂಚವನ್ನೆಲ್ಲವನ್ನೂ ತಮ್ಮ ತಲೆಯ ಮೇಲೇ ಹೊತ್ತವರಂತೆ ಪರದಾಡುವ ಅನೇಕ ವೃದ್ಧರನ್ನು ನಾವು ಹೇರಳವಾಗಿ ನೋಡಬಹುದು. ಈ ಭ್ರಮೆಯಿಂದಲೇ ಅವರು ತಮ್ಮ ಮಕ್ಕಳ ಹಾಗೂ ನೆಂಟರಿಷ್ಟರ ಬಾಳಿನಲ್ಲಿ ಪ್ರತಿ ವ್ಯವಹಾರದಲ್ಲೂ ಅನಾವಶ್ಯಕ ಮೂಗು ತೂರಿಸಿ ತಮ್ಮ ಹಾಗೂ ಇತರರ ಬಾಳನ್ನೂ ನೆಮ್ಮದಿಗೆಡಿಸುವ ಮೂರ್ಖತನದ ಕೆಲಸಕ್ಕೂ ಕೈ ಹಾಕುವದೂ ಕೂಡ ಈಗ ಸರ್ವೇ ಸಾಮಾನ್ಯ. ತಾವೂ ನೆಮ್ಮದಿಯಿಂದ ಬಾಳರು; ಇತರರನ್ನೂ ನೆಮ್ಮದಿಯಿಂದ ಬಾಳಲು ಬಿಡರು. ಸ್ವಾರ್ಥಸಾಧನೆಯೊಂದೇ ಗುರಿಯಾದಾಗ ಎಲ್ಲರ ನೆಮ್ಮದಿಗೂ ಕುತ್ತು. ಸಾಂಸಾರಿಕ ಮತ್ತು ವ್ಯಾವಹಾರಿ ಜವಾಬ್ದಾರಿಗಳನ್ನು ನಿಶ್ಚಿಂತೆಯಿಂದ ಬಾಧ್ಯಸ್ಥರಿಗೆ ವಹಿಸಿ ತಮ್ಮ ಪ್ರಸ್ತುತಕ್ಕೆ ಅವಶ್ಯವಿರುವಷ್ಟನ್ನು ಮಾತ್ರಾ ಸಂತೃಪ್ತ ಭಾವನೆಯಿಂದ ಅನುಭವಿಸುವ ಪ್ರವೃತ್ತಿ ಕೂಡ ಇಂದು ಮರೆಯಾಗುತ್ತಿದೆ. ಕಡೆಯವರೆಗೂ ಈ ಜಂಜಾಟದಲ್ಲೇ ಮುಳುಗುವವರೇ ಹೆಚ್ಚು. ಅಂತೆಯೇ ಮುಂದಿನ ಪೀಳಿಗೆಯೊಂದಿಗೆ ಸಂಘರ್ಷ ಕೂಡ ಸಾಮಾನ್ಯ. ವೃದ್ಧಾಶ್ರಮಗಳ ಹೆಚ್ಚಳಕ್ಕೆ ಬರೀ ಮಕ್ಕಳನ್ನೇ ಅಪರಾಧಿಗಳಂತೆ ಇಂದು ಬಿಂಬಿಸಲಾಗುತ್ತಿದೆ. ನಿಜ ಹೇಳಬೇಕೆಂದರೆ ನಾಣ್ಯದ ಎರಡು ಮುಖಗಳಂತೆ ಇಲ್ಲೂ ಎರಡು ಆಯಾಮಗಳಿವೆ. ಇತ್ತೀಚಿನ ಕುಟುಂಬಗಳ ವೃದ್ಧರನ್ನು ಗಮನಿಸಿದಾಗ ಸ್ವತಂತ್ರವಾಗಿಯೇ ಬಾಳಬೇಕೆಂಬ ಇರಾದೆ ಮತ್ತು ಕುಟುಂಬದ ಇತರರೊಂದಿಗೆ ಸಮರಸವಾಗಿ ಬೆರೆತು-ಬಾಳುವ ಮನೋಭಾವದ ಕೊರತೆ ಎದ್ದು ಕಾಣುತ್ತದೆ. ಮಕ್ಕಳು ವಯಸ್ಶಾದ ಕಾಲದಲ್ಲಿ ತಮ್ಮನ್ನು ನೋಡಿಕೊಳ್ಳುವ ಬಗ್ಗೆ ಅವರಿಗೇ ಅನುಮಾನ (ಬಹುಶ: ಅವರು ಹಿಂದೆ ಅವರ ತಂದೆ-ತಾಯಿಗಳನ್ನು ನೋಡಿಕೊಂಡ ರೀತಿ ನೆನಪಾಗಿ ಅದೇ ಗತಿ ತಮಗೂ ಬರಬಹುದೆಂಬ ಅಂಜಿಕೆಯೂ ಕಾಡಬಹುದೇನೋ?); ಅಂತಹ ಅನುಮಾನ ಅವರಲ್ಲಿ ಮೂಡಬೇಕಾದರೆ ಮಕ್ಕಳನ್ನು ಅವರು ಬೆಳೆಸಿ-ಪೋಷಿಸಿದ ರೀತಿಯಲ್ಲಿಯೇ ಏನೋ ದೋಷವಿದೆಯೆನಿಸುವುದೂ ಸಹಜ ತಾನೇ? ವೃದ್ಧಾಪ್ಯಕ್ಕೆ ಆರ್ಥಿಕ ಭದ್ರತೆ ಒದಗಿಸಿಕೊಂಡವರು ವಿಶೇಷವಾಗಿ ಆ ವಿಚಾರವನ್ನೇ ಪದೇ ಪದೇ ತಮ್ಮ ಕುಟುಂಬದ ಕಿರಿಯರಿಗೆ ನೆನಪಿಸುತ್ತಾ, ತಾವೇನೂ ಪರಾವಲಂಬಿಗಳಲ್ಲ, ಮಕ್ಕಳು ಬಿಟ್ಟಿ ಕೂಳು ಹಾಕುತ್ತಿಲ್ಲ ಎಂಬ ತಲೆಪ್ರತಿಷ್ಠೆಯ ಮತ್ತು ಅನಾವಶ್ಯಕ ನಡವಳಿಕೆ ತೋರಿದಾಗ ಸಂಬಂಧಗಳು ಹಳಸುತ್ತವೆ. ಆರ್ಥಿಕವಾಗಿ ಅವರಷ್ಟೇ ಮತ್ತು ಅನೇಕ ಸಂದರ್ಭಗಳಲ್ಲಿ ಅವರಿಗಿಂತ ಹೆಚ್ಚು ಸಬಲವಾಗಿರುವ ಕಿರಿಯರು ಸಹಜವಾಗಿಯೇ ಈ ಪ್ರವೃತ್ತಿಯಿಂದ ಬೇಸತ್ತು ಹಿರಿಯರನ್ನು ಇನ್ನಷ್ಟು ಹೆಚ್ಚು ನಿರ್ಲಕ್ಷಿಸಲು ಮತ್ತು ಪ್ರತಿಭಟಿಸಲು ಮುಂದಾಗುತ್ತಾರೆ. ಸಹಬಾಳ್ವೆಗೆ ಎಲ್ಲರ ಸಹಯೋಗ ಮತ್ತು ಸಹಕಾರ ಅಗತ್ಯ. ಯಾವ ಒಂದು ಕೊಂಡಿ ಸಡಿಲವಾದರೂ ಸಂಬಂಧಗಳು ಸೊರಗುತ್ತವೆ. ಹಾಗಾಗದಂತೆ ಎಚ್ಚರ ವಹಿಸುವ ಮತ್ತು ಸಕಾಲಿಕ ಮತ್ತು ಸೂಕ್ತ ಮಾರ್ಗದರ್ಶನ ನೀಡುವ ಮತ್ತು ಮೇಲ್ಪಂಕ್ತಿ ಹಾಕಿಕೊಡುವ ಜವಾಬ್ದಾರಿ ಕೂಡ ಹಿರಿಯರದ್ಧೇ ಅಲ್ಲವೇ? ಆದರೆ, ಪ್ರೀತಿ, ಪ್ರೇಮ, ಹಿರೀಕತನ ಮುಂತಾದವು ಇರಬೇಕಾದ ಕಡೆ ಇಂದು ಸ್ವಪ್ರತಿಷ್ಠೆ ಮತ್ತು ಅವಶ್ಯಕತೆಗೂ ಮೀರಿದ ಸ್ವಾಭಿಮಾನ (ದುರಭಿಮಾನ) ವಿರಾಜಿಸುತ್ತಿದೆ. ಹಾಗಾಗಿ ವೃದ್ಧಾಶ್ರಮ ಸೇರುವ ಸಾಕಷ್ಟು ಮಂದಿ ಸ್ವಯಂಕೃತ ಅಪರಾಧಿಗಳೇ ಎಂಬುದು ಕಟುವೆನಿಸಿದರೂ ಸತ್ಯವಾದ ಮತ್ತು ಒಪ್ಪಲೇಬೇಕಾದ ಸಂಗತಿ. ಒಟ್ಟಿನಲ್ಲಿ ಇದು ಕುಟುಂಬದ ಸುಮಧುರ ಬಾಂಧವ್ಯದ ಮತ್ತು ಬಂಧಗಳ ನಿರಂತರ ಪತನದ ದಿಕ್ಸೂಚಿಯೆಂದರೂ ಸರಿಯೇ. ಇಂತಹ ಅವನತಿಗೆ ಪ್ರಮುಖ ಕಾರಣಗಳಲ್ಲೊಂದು ಹಿರಿಯರ ಸ್ವಾರ್ಥಾರಾಧನೆ ಮತ್ತು ಸ್ವಪ್ರತಿಷ್ಠೆ. ಕಾಲ ಕಾಲಕ್ಕು, ತಲೆಮಾರಿನಿಂದ ತಲೆಮಾರಿಗೂ ಸಂಪ್ರದಾಯಗಳು, ಜೀವನಶೈಲಿ ಮತ್ತು ಯೋಚನಾಲಹರಿಗಳು ಬದಲಾಗುತ್ತವೆ; ಬದಲಾಗಲೇ ಬೇಕು. ಬದಲಾವಣೆ ಜಗದ ನಿಯಮ. ಈ ಅಂಶವನ್ನು ಅರಿತು, ಗೌರವಿಸಿದಷ್ಟೂ ಎಲ್ಲರ ಜೀವನ ಆನಂದಮಯವಾಗಿರಲು ಸಾಧ್ಯ. ಕಿರಿಯರಿಗೆ ಹಿರಿಯರ ಮಾರ್ಗದರ್ಶನ, ಒಡನಾಟ ಮತ್ತು ಆಶೀರ್ವಾದ ಬೇಕೇ ಬೇಕು. ಆದರೆ ವಿಶೇಷವಾಗಿ ಈ ಕಾಲದಲ್ಲಿ ಅದನ್ನು ಅವರಾಗಿಯೇ ಕಿರಿಯರ ಮೇಲೆ ಹೇರುವ ಹಠ ಮಾತ್ರಾ ತರವಲ್ಲ. ಅದು ಅವರ ಮತ್ತು ಕಿರಿಯರ ನಡುವೆ ಕೇವಲ ಕಿರಿಕಿರಿಯ ಅಸ್ತ್ರವೊಂದೇ ಆದೀತು. ಅದಕ್ಕೇ ಬಯಸದೇ ಇರುವ ಯಾವುದೇ ಸಲಹೆ ನೀಡಬೇಡಿ ಎಂದು ತಿಳಿದವರು ಹೇಳುವುದು.
ವೃದ್ಧಾಪ್ಯದ ಈ ಕಾಲ, ಈ ಹಿಂದೆ ಹೇಳಿದಂತೆ, ಒಂದು ಆತ್ಮಾವಲೋಕನದ ಕಾಲ. ಈ ಮೊದಲು ಮುಂದೂಡಿದ್ದ ಅನೇಕ ಸತ್ಸಂಕಲ್ಪಗಳನ್ನು ನೆರವೇರಿಸುವ ಕಾಲ. ಅದು ನಿಮ್ಮ ಕುಲದೇವರ ಕ್ಷೇತ್ರಕ್ಕೆ ಹೋಗುವುದಿರಬಹುದು, ತೀರ್ಥಯಾತ್ರೆಗೆ ಹೋಗುವ ವಿಚಾರವಿರಬಹುದು, ಪೂಜೆ, ಹೋಮ-ಹವನ, ದಾನಧರ್ಮಾದಿಗಳನ್ನು ಮಾಡುವುದಿರಬಹುದು, ಕನಿಷ್ಠಪಕ್ಷ ತಮ್ಮ ಕುಟುಂಬದ ಮಕ್ಕಳು-ಮೊಮ್ಮಕ್ಕಳು ವರ್ಷದೊಂದು ದಿನವಾದರೂ (ಹಬ್ಬ ಹರಿದಿನಗಳಲ್ಲಿ) ಒಂದೆಡೆ ಕಲೆತು ಬಾಂಧವ್ಯ ಬಲಗೊಳಿಸುವತ್ತ ಮಾರ್ಗದರ್ಶನ ನೀಡುವುದಿರಬಹುದು, ಕುಟುಂಬದ ಸಂಪ್ರದಾಯಗಳ ಬಗ್ಗೆ, ರೀತಿ ರಿವಾಜುಗಳ ಬಗ್ಗೆ ಮತ್ತು ಕುಟುಂಬದ ಹಿರಿಯರ ಬಗ್ಗೆ ಸೂಕ್ತ ತಿಳುವಳಿಕೆ ನೀಡುವುದಿರಬಹುದು ಇತ್ಯಾದಿ. ಜೀವನದ ಪರ್ವಕಾಲದಲ್ಲೂ ಇಂತಹ ಯೋಚನೆಗಳು ಬಾರದಿದ್ದಲ್ಲಿ ಅದು ಸ್ವಾರ್ಥದ, ಅಜ್ಞಾನದ ಮತ್ತು ಅಸಡ್ಡೆಯ ಪರಮಾವಧಿ ಎಂದರೆ ತಪ್ಪಾಗಲಾರದು. ಈ ಸಮಯ ಇಂತಹ ಸಂಕಲ್ಪಗಳನ್ನು ಸಾಕಾರಗೊಳಿಸಲು ಇರುವ ಸಕಾಲ ಮತ್ತು ಅಲ್ಪ ಕಾಲ! ಇನ್ನು ತಡಮಾಡಿದರೆ ಮುಂದೆಂದೂ ಆಗದು. ಅಂತ್ಯಕಾಲದಲ್ಲಿ ಭ್ರಮನಿರಸನ ಮತ್ತು ಆಪ್ತರ ತೆಗಳಿಕೆ ಬಿಟ್ಟರೆ ಬೇರೇನೂ ಲಭಿಸದು. ದುರದೃಷ್ಟವಶಾತ್, ಕೊನೆಗಾಲದಲ್ಲಿ ಅರಳು-ಮರುಳಾಗಿಬಿಟ್ಟರಂತೂ, ಅವರ ಅಂತ್ಯಕ್ಕೂ ಪ್ರಾಣಿಯ ಅಂತ್ಯಕ್ಕೂ ಯಾವುದೇ ವ್ಯತ್ಯಾಸ ಇರದು. ಏಕೆಂದರೆ, ಆಗ ದೇಹ ಮತ್ತು ಮನಸ್ಸು ಎರಡೂ ತಮ್ಮ ಸಮತೋಲನವನ್ನು ಸಂಪೂರ್ಣ ಕಳೆದುಕೊಂಡುಬಿಟ್ಟಿರುತ್ತದೆ. ಹಾಗಾಗಿ, ದೇವರು ಆ ಸ್ಥಿತಿ ತಲುಪಿಸುವ ಮೊದಲೇ ಮತ್ತು ಅಂತಹ ಲಕ್ಷಣಗಳು ಕಂಡೊಡನೆಯೇ, ಇರುವ ಶಕ್ತಿ-ಸಂಪನ್ನೂಲಗಳನ್ನು ಬಳಸಿ ಧರ್ಮಾಚರಣೆಯಲ್ಲಿ ತೊಡಗಿಕೊಳ್ಳಬೇಕು. ಮುಂದಿನ ಪೀಳಿಗೆಗೆ ತಿಳಿಸುವ ಯಾವುದಾದರೂ ಕುಟುಂಬದ ರಹಸ್ಯ ವಿಚಾರಗಳಿದ್ದಲ್ಲಿ ಮತ್ತು ಜವಾಬ್ದಾರಿಗಳನ್ನು ಹಸ್ತಾಂತರಿಸುವುದಿದ್ದಲ್ಲಿ, ಬುದ್ಧಿ ನೆಟ್ಟಗಿರುವಾಗಲೇ ಆ ಕರ್ತವ್ಯಗಳನ್ನು ಮುಗಿಸಿ, ನಿರಾಳವಾಗಿರಬೇಕು. ದಿನನಿತ್ಯದ ಹೆಚ್ಚಿನ ಸಮಯ ಜಪ-ತಪ, ಸದ್ವಿಚಾರ ಚಿಂತನೆ, ಹರಿಕಥೆ-ಸಂಗೀತಗಳ ಶ್ರವಣ, ಹಿತಮಿತವಾದ ದೇಹಕ್ಕೊಪ್ಪುವ ಉಡುಗೆ-ತೊಡುಗೆ ಮತ್ತು ಆಹಾರ-ವಿಹಾರಗಳಲ್ಲಿ ಕಳೆಯುವಂತೆ ಯೋಜನೆ ಮಾಡಿಕೊಳ್ಳಬೇಕು. ಕಿರಿಯರು ಮಾಡುವ ಪ್ರತಿಯೊಂದಕ್ಕೂ ತಪ್ಪು ಹುಡುಕಿ ಗೊಣಗುವುದು ನಿಲ್ಲಬೇಕು. ಸಾಂಸಾರಿಕ ದಿನನಿತ್ಯದ ಪಿರಿಪಿರಿಯಿಂದ ಸಾಕಷ್ಟು ದೂರವಿರಬೇಕು. ಹಾಗಿದ್ದಾಗ ಅನಾಯಾಸವಾದ ಅಂತ್ಯವೂ ಲಭ್ಯವಾದೀತು. ವಿಪರ್ಯಾಸವೆಂದರೆ, ಇಂದಿನ ಅನೇಕ ವೃದ್ಧರೂ ಕೂಡ ತಮ್ಮ ಬಹು ಸಮಯವನ್ನು ಮನೋವಿಕಾರಗೊಳಿಸುವ, ವಿಕೃತ ಕಾಮನೆಗಳನ್ನು ಉದ್ದೀಪಿಸುವ ಮತ್ತು ಯಾವುದೇ ಸದ್ವಿಚಾರಗಳಿಲ್ಲದ ದೂರದರ್ಶನದ ಧಾರಾವಾಹಿಗಳನ್ನು ನೋಡುವುದೇ ತಮ್ಮ ಜೀವನದ ಸಾರ್ಥಕ್ಯವೆಂದು ನಡೆದುಕೊಳ್ಳುತ್ತಿರುವುದು ನಿಜಕ್ಕೂ ಒಂದು ಅಸಹ್ಯಕರವಾದ ಮತ್ತು ಅನಪೇಕ್ಷಣೀಯವಾದ ಬೆಳವಣಿಗೆ. ಮನೆಯಲ್ಲಿರುವ ಮಕ್ಕಳ ಓದಿಗೆ ಕೂಡ ಇದು ತೊಡಕಾಗುತ್ತಿದೆ ಎಂಬ ಅಂಶ ಗೊತ್ತಿದ್ದರೂ ಗಮನಿಸದಂತೆ ತಮ್ಮ ಚಟವನ್ನು ತೀರಿಸಿಕೊಳ್ಳುವವರೇ ಇಂದು ಬಹುಮಂದಿ. ಎಲ್ಲರ ಸಬೂಬೂ ಒಂದೇ - ನಮಗೆ ಕಾಲ ಹೋಗುವುದಿಲ್ಲ; ನಮ್ಮನ್ನು ಯಾರೂ ಗಮನಿಸುವುದಿಲ್ಲ ಎಂದು. ಕಾಲವನ್ನು ಉಪಯೋಗವಾಗುವ ರೀತಿಯಲ್ಲಿ ಮತ್ತು ಸಂತೋಷದಿಂದ ಕಳೆಯಲು ನೂರೆಂಟು ಪರ್ಯಾಯವಾದ ಮತ್ತು ಉತ್ತಮವಾದ ಮಾರ್ಗಗಳಿವೆ. ಅವುಗಳನ್ನು ತಮ್ಮ ಅಭಿರುಚಿಯಾನುಸಾರ ಗುರುತಿಸಿ ಅಳವಡಿಸಿಕೊಳ್ಳುವ ಪ್ರಾಮಾಣಿಕ ಪ್ರಯತ್ನ ಮಾತ್ರಾ ಅವರೇ ಮಾಡಬೇಕು. ಬೇರೆಯವರ ಪ್ರೀತಿ, ವಾತ್ಸಲ್ಯ, ಸಮಯ ಮತ್ತು ಒಡನಾಟ ಬೇಕಿದ್ದರೆ ನೀವು ಕಿರಿಯರಿಗೆ ಅದನ್ನೇ ಮೊದಲು ನೀಡಬೇಕು. ಆದರೆ ಕಿರಿಯರಿಗೆ ಮಾರ್ಗದರ್ಶಕರಾಗಿರಬೇಕಾದ ಇವರೇ ಇಂತಹ ಕೀಳು ಹವ್ಯಾಸಗಳ ಗುಲಾಮರಾದರೆ, ಕಿರಿಯರ ಮತ್ತು ಮೊಮ್ಮಕ್ಕಳ ಒಟನಾಟದಿಂದ ದೂರ ಸರಿದರೆ, ಕಿರಿಯರಿಗೆ ಉತ್ತಮ ಪುಸ್ತಕಗಳ ಓದುವ ಹವ್ಯಾಸ, ಕಲೆ-ಆಟೋಟಗಳಲ್ಲಿ ಆಸಕ್ತಿ, ಸದಾಚರಣೆ ಮತ್ತು ಟಿ.ವಿ.ನೋಡುವ ಸಮಯವನ್ನು ಹೆಚ್ಚು ಲಾಭದಾಯಕವಾಗಿ ಬಳಸಿಕೊಳ್ಳುವ ಪ್ರವೃತ್ತಿ ಮುಂತಾದವುಗಳನ್ನು ಬೆಳೆಸುವವರಾರು?
ಈ ಘಟ್ಟದಲ್ಲಿ ಮೊದಲೇ ಹೇಳಿದಂತೆ, ಮಾನವ ತನ್ನ ಮನಸ್ಸನ್ನು ಯಾವಾಗಲೂ ಶಾಂತವಾಗಿ ಮತ್ತು ನೆಮ್ಮದಿಯಾಗಿ ಇಡುವಂತಹ ಕೆಲಸ ಕಾರ್ಯಗಳಲ್ಲಿ ತೊಡಗಿಸಿಕೊಳ್ಳುವುದು ಅಗತ್ಯ. ಪ್ರಾಜ್ಞರು ಹೇಳುವಂತೆ ಆ ಸಚ್ಚಿದಾನಂದದ ಅನುಭವದ ಗುರಿ ಮುಖ್ಯ. ದೇಹಕ್ಕೆ ವಯಸ್ಶಾದಂತೆ ಮನಸ್ಸೂ ಪರಿಪಕ್ವವಾಗುತ್ತಾ, ಮಾಗುತ್ತಾ ಸಾಗಬೇಕು. ಒಂದೊಂದು ಹಲ್ಲು ಬಿದ್ದಾಗಲೂ ಮನಸ್ಸಿನ ಒಂದೊಂದು ಕಲ್ಮಷವನ್ನೂ ತೊಳೆದು ಬಿಸಾಡಬೇಕು. ಆ ಹಂತದಲ್ಲಿ ಖಾಯಿಲೆಗಳು ಬಂದು ದೇವರ ದಯೆಯಿಂದ ಗುಣವಾದಾಗ ಪುನರ್ಜನ್ಮ ಸಿಕ್ಕದೆಯೆಂದೇ ಭಾವಿಸಬೇಕು. ವಯಸ್ಸಾದಾಗ ಬಿಳಿಯಾಗುವ ಕೂದಲು ಪರೋಕ್ಷವಾಗಿ ನಮ್ಮನ್ನು ಮನಸ್ಸಿನ ಶುಭ್ರತೆಯೆಡೆಗೆ ಸಾಗು ಎಂದು ಹೇಳುವ ಒಂದು ಅಲಾರಾಂ. ಮಾಗಿದ ಫಲದ ರುಚಿಯಂತೆ ಮೈಬಾಗಿದ ದೇಹದ ಮನಸ್ಸೂ ಪ್ರೀತಿ-ವಾತ್ಸಲ್ಯಗಳಿಂದ ತುಂಬಿ ಸಿಹಿಯಾಗಬೇಕು; ಆ ಸಿಹಿಯನ್ನು ಎಲ್ಲ ಆಪ್ತೇಷ್ಟರೊಡನೆ ತೆರೆಯ ಹೃದಯದಿಂದ ಹಂಚಿ ಸಂಭ್ರಮಿಸಬೇಕು. ಅಂತೆಯೇ ಈ ಸಮಯದಲ್ಲಿ ಹಿರಿಯರ ನಡೆ-ನುಡಿಗಳು ಕಿರಿಯರಿಗೆ ಮತ್ತು ಕುಟುಂಬಸ್ಥರಿಗೆ ಆಪ್ಯಾಯಮಾನವಾಗಿರಬೇಕು, ಆಹ್ಲಾದಕರವಾಗಿರಬೇಕು ಮತ್ತು ಪ್ರೀತಿ-ವಾತ್ಸಲ್ಯಗಳಿಂದ ತುಂಬಿರಬೇಕು. ಹಿರಿಯರು ತಮ್ಮ ದಿನನಿತ್ಯದ ಆತ್ಮ ಸಾಕ್ಷಾತ್ಕಾರದ ಕೈಂಕರ್ಯಗಳನ್ನು ನಿಷ್ಠೆಯಿಂದ ಮಾಡಿ ಹಿರಿತನದ ಸ್ಥಾನದ ಗೌರವವನ್ನು ಉಳಿಸಿಕೊಂಡಾಗ ನಿಜವಾದ ಅರ್ಥದಲ್ಲಿ ಹಿರೀಕರೆನಿಸಿಕೊಳ್ಳುತ್ತಾರೆ. ಅವರ ಕುಟುಂಬರ ಕಿರಿಯರು, ಅಷ್ಟೇಕೆ, ಇಡೀ ಸಮಾಜ ಅವರನ್ನು ಅತೀ ಗೌರವಾದರಗಳಿಂದ ನೋಡುತ್ತದೆ. ಆ ಮರ್ಯಾದೆ ಸಿಗಬೇಕಾದರೆ ಅದಕ್ಕೆ ತಕ್ಕಂತೆ ಹಿರಿಯರ ನಡೆ-ನುಡಿಗಳು ಇರುವದೂ ಅಷ್ಟೇ ಮುಖ್ಯ. ಕೇವಲ ವಯಸ್ಸು ಮತ್ತು ಮುದಿತನ ಒಂದೇ ಎಂದಿಗೂ ಗೌರವವನ್ನು ಗಳಿಸಲಾರವು. ಆದುದರಿಂದ, ವೃದ್ಧಾಪ್ಯದಲ್ಲೂ ಸಾಂಸಾರಿಕ ಜಂಜಾಟಕ್ಕೆ ತಾವೇ ಸಿಲುಕಿಕೊಳ್ಳುವ ಬದಲು ಆನಂದಭರಿತವಾದ ಮತ್ತು ತಮಗೂ ತಮ್ಮ ಕುಟುಂಬದವರೆಲ್ಲರಿಗೂ ಸಹನೀಯವಾಗುವಂತಹ ಸನ್ನಿವೇಶ ನಿರ್ಮಾಣವಾಗುವತ್ತ ಗಮನ ಕೇಂದ್ರೀಕರಿಸಿದರೆ ಮತ್ತು ಆ ದಿಸೆಯಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡಿದರೆ, ಕುಟುಂಬದ ಎಲ್ಲರ ಬಾಳೂ 'ಭಾಗ್ಯವಂತರು ನಾವು ಭಾಗ್ಯವಂತರು' ಎನ್ನುವಂತಾದೀತು. ಆದರೆ ಆ ಬದಲಾವಣೆ ಎಂದಿದ್ದರೂ ಮೇಲಿನಿಂದಲೇ ಪ್ರಾರಂಭವಾಗಬೇಕಲ್ಲವೇ?
ಈ ಭೂಮಿಯ ಮೇಲೆ ನಾವೆಲ್ಲರೂ ನಿಗದಿತ ಕಾಲದ ಅತಿಥಿಗಳು. ಅಲ್ಲಿದೆ ನಮ್ಮನೆ, ಇಲ್ಲಿರುವೆ ಸುಮ್ಮನೆ ಎಂಬಂತೆ, ಋಣಾನುಸಾರ, ಕರ್ಮಾನುಸಾರ ಮತ್ತು ಲಭ್ಯಾನುಸಾರ ಪ್ರಕೃತಿ ಇಲ್ಲಿ ನೀಡುವಷ್ಟನ್ನು ತೆಪ್ಪಗೆ ಮತ್ತು ಗೊಣಗುಟ್ಟದೇ ಅನುಭವಿಸಿ ಕಾಣದೂರಿಗೆ ಪ್ರಯಾಣ ಮುಂದುವರೆಸುವ ಒಂದು ತಾತ್ಕಾಲಿಕ ತಾಣ. ಇಲ್ಲಿಗೆ ನಾವು ತಂದದ್ದೂ ಶೂನ್ಯ; ತೆಗೆದುಕೊಂಡು ಹೋಗುವುದೂ ಶೂನ್ಯ. ಅದೇ ರೀತಿ, ವೃದ್ಧಾಪ್ಯಕ್ಕೆ ಕಾಲಿಡುತ್ತಿದ್ದಂತೆ ನಾವು ನಮ್ಮನ್ನು ಕುಟುಂಬದಲ್ಲಿ ಅತಿಥಿಗಳ ಸ್ಥಾನದಲ್ಲಿ ಪರಿಭಾವಿಸಿಕೊಂಡು ವರ್ತಿಸಬೇಕು. ಕುಟುಂಬದ ಒಳ ದೈನಂದಿನ ಆಗು-ಹೋಗುಗಳ ಬಗ್ಗೆ ಅತಿಥಿಗಳಂತೆ ನಿರ್ವಿಕಾರ ಭಾವದಿಂದಿದ್ದು ಇರುವ ಸವಲತ್ತುಗಳನ್ನು ಸಂತೃಪ್ತ ಭಾವದಿಂದ ಅನುಭವಿಸುವ ಮನೋಸಂಕಲ್ಪ ಮಾಡಬೇಕು. ತಾವರೆ ಎಲೆ ಮೇಲೆ ಅಂಟಿಕೊಳ್ಳದೇ ಮುತ್ತಿನಂತೆ ಹೊಳೆದು ಹೊಯ್ದಾಡುವ ನೀರಿನ ಹನಿಗಳ ಸೌಂದರ್ಯವೂ ಇರಬೇಕು; ದೈನಂದಿನ ಸಾಂಸಾರಿಕ ಆಗು-ಹೋಗುಗಳ ಬಗ್ಗೆ ಎಲೆಗೆ ಅಂಟಿಕೊಳ್ಳದ ನೀರಿನ ಹನಿಗಳ ಪರಿ ವಿರಕ್ತಿಯೂ ಇರಬೇಕು. ಆಗ ಮಾತ್ರ ಜೀವನದ ಸಂಜೆಗಳು ಅವರಿಗೂ ಮತ್ತು ಅವರ ಕುಟುಂಬಸ್ಥರಿಗೂ ಪ್ರೀತಿ, ವಾತ್ಸಲ್ಯಗಳ ಸೆಲೆಯಾದೀತು ಮತ್ತು ಹಿರೀಕರ ಬಗ್ಗೆ ಗೌರವಾದರಗಳು ಇನ್ನೂ ಉಳಿದೀತು. ಒಣ-ಮದ ಬಿಟ್ಟು ಮುದದಿಂದ ನಡೆದಾಗ ತಾನೆ ಬಾಳು ಸುಂದರ?
ನಿರ್ಮಲ ಪ್ರೀತಿ, ಆರೋಗ್ಯ-ವೈರಾಗ್ಯ, ಋಣರಾಹಿತ್ಯ, ಪಾಪವಿಮುಕ್ತಿ, ನಿಶ್ಚಿಂತೆ ಹಾಗೂ ಭಗವಂತನಲ್ಲಿ ನಂಬಿಕೆ ಇವಿಷ್ಟಿದ್ದರೆ ವೃಧ್ದಾಪ್ಯ ನಿಜವಾಗಿಯೂ ಶೋಭಿಸುತ್ತದೆ; ಆತ್ಮ ಸಂತೃಪ್ತಿಗೆ ಸೋಪಾನವಾಗುತ್ತದೆ. ವಯಸ್ಸಾಗುತ್ತಿರುವವರಿಗೆ ಮತ್ತು ವಯಸ್ಸಾದರವರೆಲ್ಲರಿಗೂ ಆ ಭಗವಂತ ಈ ಜ್ಞಾನವನ್ನು ಮೂಡಿಸಿದರೆಷ್ಟು ಚೆನ್ನ ಅಲ್ಲವೇ?
ಜೀವನ ಸಂಜೆಯ ಹೊಂಗಿರಣ
ಆಗಲಿ ಎಲ್ಲರ ಬಾಳಿನ ಸವಿ ಹೂರಣ |
ಅದ್ಭುತವಾದ ಚಿಂತನಶೀಲ ಲೇಖನ!
ReplyDeleteತಮ್ಮ ಆಶಯ ದೊಡ್ಡದು ಮಹೋತ್ತರವಾದುದು.
"ನಿರ್ಮಲ ಪ್ರೀತಿ, ಆರೋಗ್ಯ-ವೈರಾಗ್ಯ, ಋಣರಾಹಿತ್ಯ, ಪಾಪವಿಮುಕ್ತಿ, ನಿಶ್ಚಿಂತೆ ಹಾಗೂ ಭಗವಂತನಲ್ಲಿ ನಂಬಿಕೆ ಇವಿಷ್ಟಿದ್ದರೆ ವೃಧ್ದಾಪ್ಯ ನಿಜವಾಗಿಯೂ ಶೋಭಿಸುತ್ತದೆ; ಆತ್ಮ ಸಂತೃಪ್ತಿಗೆ ಸೋಪಾನವಾಗುತ್ತದೆ"
ತಮ್ಮ ಮೆಚ್ಚುಗೆಗೆ ಧನ್ಯವಾದಗಳು.
ReplyDeleteಬಹಳ ಅರ್ಥಗರ್ಭಿತ ಮತ್ತು ಚಿಂತನ ಯೋಗ್ಯ ಬರಹ, ಹೀಗೇ ಬರೆಯಿರಿ, ಧನ್ಯವಾದಗಳು
ReplyDeleteಧನ್ಯವಾದಗಳು ಭಟ್ ರವರೇ.
ReplyDelete