|| ಶ್ರೀ ರಾಮ ಜಯ ರಾಮ ಜಯ ಜಯ ರಾಮ ||

Wednesday, September 15, 2010

ಬೆಲಗೂರಿನಲ್ಲಿ ನಡೆದ ಮಹಾಲಕ್ಷ್ಮೀ ಯಾಗದ ಕೆಲವು ಚಿತ್ರಗಳು


ಇತ್ತೀಚೆಗಷ್ಟೇ ಹೊಸದುರ್ಗ ತಾಲೂಕಿನ ಬೆಲಗೂರಿನಲ್ಲಿ ಶ್ರೀ ವೀರಪ್ರತಾಪ ಆಂಜನೇಯ ಸ್ವಾಮಿಯ ಸನ್ನಿಧಿಯಲ್ಲಿ ಶ್ರೀ ಶ್ರೀ ಬಿಂದು ಮಾಧವ ಶರ್ಮ ಸ್ವಾಮೀಜಿಗಳ ನೇತೃತ್ವದಲ್ಲಿ ಸುಮಾರು 8 ದಿನಗಳ ಕಾಲ ಅನೇಕ ಹೋಮ-ಯಾಗಗಳ ನಡುವೆ ಪ್ರಮುಖವಾಗಿ ಶ್ರೀ ಮಹಾಲಕ್ಷ್ಮೀ ಯಾಗ ಬಹು ವಿಜೃಂಭಣೆಯಿಂದ, ವಿಧಿ ವತ್ತಾಗಿ ನಡೆಯಿತು. ಆಗ ತೆಗೆದ ಕೆಲವು ಚಿತ್ರಗಳನ್ನು ಆಸಕ್ತರಿಗೆ ಇಲ್ಲಿ ಕೊಡಲಾಗಿದೆ. ಪ್ರಾರಂಭದ ದಿನ ಉತ್ಸವ ಮೂರ್ತಿಯ ಮೆರವಣಿಗೆಯ ಜೊತೆಗೆ "ವೇದೋತ್ಸವ" ವನ್ನೂ ಹಮ್ಮಿಕೊಳ್ಳಲಾಗಿತ್ತು. ಕ್ಷೇತ್ರದಲ್ಲಿ ಚತುರ್ವೇದ ಸಂಹಿತಾ ಯಾಗಗಳನ್ನೂ ನಡೆಸಲಾಯಿತು. ವೇದಕ್ಕೆ ಸಂಬಂಧಪಟ್ಟ ಮತ್ತು ಶಾಸ್ತ್ರ ಪುರಾಣಗಳಿಗೆ ಸಂಬಂಧಪಟ್ಟ ಪವಿತ್ರ ಗ್ರಂಥಗಳನ್ನು ಸಾಲಂಕೃತ ರಥದ ಮೇಲೆ ಇರಿಸಿ ಸುಮಾರು 300ಕ್ಕೂ ಹೆಚ್ಚು ಋತ್ವಿಜರ ವೇದಘೋಷದೊಂದಿಗೆ ಸಾವಿರಾರು ಮಂದಿ ಭಕ್ತರೊಂದಿಗೆ ಊರಿನ ಪ್ರಮುಖ ಬೀದಿಗಳನ್ನು ಸಾಗಿದ್ದು ಬಹುಶ: ಇದೇ ಪ್ರಥಮವಿರಬಹುದು. 8 ದಿನಗಳ ಈ ಕಾಲಾವಧಿಯಲ್ಲಿ ಸುಮಾರು 3 ಲಕ್ಷ್ಕ್ಕೂ ಅಧಿಕ ಮಂದಿ ಭಕ್ತರು ಇಲ್ಲಿಗೆ ಬಂದಿದ್ದು, ಸರ್ವರಿಗೂ ಸದಾಕಾಲ ಪಾನೀಯ, ಉಪಹಾರ ಮತ್ತು ಭೋಜನದ ವ್ಯವಸ್ಥೆಯನ್ನು ಅಚ್ಚುಕಟ್ಟಾಗಿ ಮಾಡಲಾಗಿತ್ತು. ಸ್ವಾಮೀಜಿಯವರು 2-3 ದಿನ ಕ್ಷೇತ್ರಕ್ಕೆ ಬಂದ ಎಲ್ಲ ಸುಮಂಗಲಿಯರಿಗೆ (ಯಾವುದೇ ಭೇದ-ಭಾವವಿಲ್ಲದೆ) ಸೀರೆಗಳನ್ನು ಮತ್ತು ಮಂಗಳದ್ರವ್ಯಗಳನ್ನು ಆಶೀರ್ವಾದಪೂರ್ವಕವಾಗಿ ನೀಡಿದಾಗ ಅಲ್ಲಿ ಒಂದು ಜಾತ್ರೆಯೇ ನೆರೆದಂತಿತ್ತು. ಕ್ಷೇತ್ರಕ್ಕೆ ಹೆಬ್ಬೂರಿನ ಶ್ರೀ ದತ್ತಾವಧೂತರು ಭೇಟಿ ನೀಡಿದ್ದು ಮತ್ತು ಅವರಿಗೆ ಶ್ರೀ ಬಿಂದು ಮಾಧವ ಶರ್ಮ ಸ್ವಾಮೀಜಿಯವರು ಪಾದಪೂಜೆ ಮಾಡಿದ್ದು ಎಲ್ಲರಿಗೂ ಅವಿಸ್ಮರಣೀಯ ಅನುಭವವಾಯಿತು.

ಇಲ್ಲಿ ಭಕ್ತಾದಿಗಳು ನೀಡುವ ದಾನಧರ್ಮಗಳು, ನಡೆವ ದಾರ್ಮಿಕ ಕಾರ್ಯಕ್ರಮಗಳು ಇತ್ಯಾದಿಗಳನ್ನು ನೋಡಿದಾಗ, ಅನೇಕ ವಿಚಾರಗಳ ಬಗ್ಗೆ ನಮ್ಮನ್ನೇ ನಾವು ಬಲು ದೊಡ್ಡವರೆಂದು ಭಾವಿಸಿದ ನಮಗೆ, ನಮ್ಮ ಕುಬ್ಜತನದ ಅರಿವು ಉಂಟಾಗುವುದರಲ್ಲಿ ಸಂಶಯವಿಲ್ಲ. ಇಲ್ಲಿನ ಬಹುತೇಕ ಎಲ್ಲ ದಾನಿಗಳೂ ಅನಾಮಧೇಯರು. ಎಷ್ಟು ಅನುಕರಣೀಯ ನಡತೆ ಅಲ್ಲವೇ? ಇಲ್ಲಿ ನಡೆವ ಬೃಹತ್ ಕಾರ್ಯಗಳೂ ಕೂಡ ಎಷ್ಟು ಸುಲಭವಾಗಿ ನಡೆಯುತ್ತವೆ ಎಂದರೆ ಅದು ಒಂದು ಅಲೌಕಿಕ ಶಕ್ತಿಯ ಪವಾಡವೇ ಸರಿ. ಶ್ರೀ ವೀರಪ್ರತಾಪ ಆಂಜನೇಯ ಸ್ವಾಮಿಯ ಮತ್ತು ಶ್ರೀ ಗುರೂಜಿಗಳ ಕೃಪೆ ಎಲ್ಲರ ಮೇಲಿರಲಿ ಎಂಬ ಆಶಯದೊಂದಿಗೆ.























Tuesday, September 14, 2010

ಗುರುದರ್ಶನ




ಹೆಬ್ಬೂರಿನ ಶ್ರೀ ಶ್ರೀ ದತ್ತಾವಧೂತರು




ಬೆಲಗೂರಿನ ಶ್ರೀ ಶ್ರೀ ಬಿಂದು ಮಾಧವ ಶರ್ಮಸ್ವಾಮೀಜಿಗಳು



ಅರಸಿದೆ ನೆಮ್ಮದಿಯ ಬಂಧು-ಬಾಂಧವರಲ್ಲಿ
ಅರಸಿದೆ ಸಾಂತ್ವನವ ಮಿತ್ರ ಬಾಂಧವರಲ್ಲಿ
ಅರಸಿ ಸುಸ್ತಾದೆ ಸಿಗಲಿಲ್ಲ ನೆಮ್ಮದಿ
ನೆಮ್ಮದಿಗೆ ಶ್ರೀ ಗುರುಪಾದವೇ ಗತಿ!



** **

ವ್ಯಕ್ತ ಒಂದಾದರೆ ಅವ್ಯಕ್ತ ನೂರಾರು
ನುದಿ ಒಂದಾದರೆ ಅರ್ಥ ಹಲವಾರು
ಅರ್ಥವಾದದ್ದು ಒಂದಾದರೆ ಉಳಿದದ್ದು ಸಾವಿರಾರು
ಸರಿದಾರಿ ತೋರಿಸಿ ಮುನ್ನಡೆಸೋ ಓ ಸದ್ಗುರು!


** **

ಕಾವಿ ಬಟ್ಟೆಯಿಲ್ಲ, ಮಡಿ ಮೈಲಿಗೆಯಿಲ್ಲ
ಜಾತಿ ಮತ ಭೇದವಿಲ್ಲ, ಅಂತಸ್ತು ಐಶ್ವರ್ಯದ ಗೊಡವೆಯಿಲ್ಲ
ಸಮಷ್ಟಿ ಭಾವವೇ ಮಹಾನುಭಾವರ ಗುರಿ
ಅದುವೇ ನಮ್ಮ ಸದ್ಗುರುಗಳ ನಿತ್ಯದಾ ಪರಿ!