|| ಶ್ರೀ ರಾಮ ಜಯ ರಾಮ ಜಯ ಜಯ ರಾಮ ||

Tuesday, July 13, 2010

ತೋಚಿದ್ದು-ಗೀಚಿದ್ದು

ನಾನೆಂಬುದು ನಾನಲ್ಲ,
ನನದೆಂಬುದು ನನದಲ್ಲ,
ನನ್ನವರೆಂಬುವರು ನನ್ನವರಲ್ಲ,
ಆದರೂ ಈ ಸತ್ಯ ನಾ ತಿಳಿದಿಲ್ಲ!
*** *** ***


ಬದುಕುವಾಸೆ ವರ್ಷ ನೂರು,
ಅಂದು ಕೊಂಡದ್ದು ನೂರು,
ಕನಸು ಕಂಡಿದ್ದು ನೂರು,
ಆದರೂ ಆಗಲಿಲ್ಲ ಚೂರು-ಪಾರು!
*** *** ***

ಬರುವಾಗ ಒಂಟಿ,
ಹೋಗುವಾಗ ಒಂಟಿ,
ನಡುವಿನಲೇಕೆ ಈ ಜಂಟಿ?
*** *** ***

ನನದೆಲ್ಲವೂ ಸರಿ
ನಾ ನುಡಿವುದೆಲ್ಲವೂ ಸರಿ
ನಾ ಮಾಡುವುದೆಲ್ಲವೂ ಸರಿ
ಹೌದಲ್ಲವೇ? ನೀವೇನಂತೀರಿ?
ಖಂಡಿತಾ ಅಲ್ಲ! ಸಧ್ಯಕ್ಕೆ ನೀ ಪಕ್ಕಕ್ಕೆ ಸರಿ!!
*** *** ***

ನನ್ನ ನಿತ್ಯಾನುಷ್ಠಾನದ ಮೂಲ ಜಪಮಂತ್ರ 'ಬೇಕು'
ಎಲ್ಲವೂ ಬೇಕು, ಎಲ್ಲವೂ ನನಗೇ ಬೇಕು,
ಆದರೂ ತಿಳಿಯದಾಗಿದೆ, 'ನನಗೇನು ಬೇಕು'
ಯಾರಾದರೂ ತಿಳಿಸುವಿರಾ ಈ ಬೇಕಿಗೊಂದು ಬ್ರೇಕು?
*** *** ***

ಬದುಕಬೇಡ ನೀ ನೂರು ವರುಷ
ಖಂಡಿತಾ ತರಲಾರದು ಅದು ನಿನಗೆ ಹರುಷ
ಬದುಕಾಗುವುದು ನಿತ್ಯ ಗೋಳಾಟದ ಬೇಗುದಿ
ತೊಲಗಿದರೆ ಸಾಕಪ್ಪಾ ಎಂದು ಕಾಯ್ವರೇ ಬಲು ಮಂದಿ!
*** *** ***

ದಿನಾ ನಡೆಯುತ್ತೇನೆ, ದಿನಾ ಎಡವುತ್ತೇನೆ
ದಿನಾ ನುಡಿಯುತ್ತೇನೆ, ದಿನಾ ತೊದಲುತ್ತೇನೆ
ದಿನಾ ಅಳುತ್ತೇನೆ, ದಿನಾ ನಗುತ್ತೇನೆ
ದಿನದಿನದ ಬಾಳಿನ ಅನುಭವವೆ ಇದೇ ತಾನೆ?
*** *** ***

ಒಳಗೆ ಜ್ವಾಲಾಮುಖಿ, ಹೊರಗೆ ಹಸನ್ಮುಖಿ,
ಒಳಗೆ ನಾನಾ ಜಂಜಾಟದ ನಡುವೆಯೂ ಜೀವನ್ಮುಖಿ,
ಬದುಕುವುದು ನನಗಲ್ಲ, ಪರರಿಗೆ,
ಅದುವೇ ಸದಾ ಇರಲಿ ನನ ಪಾಲಿಗೆ!
*** *** ***

ಕಡೆಗಣಿಸಬೇಡ ನಿನ್ನೀ ದೇಹವನು
ಅದೇ ಆ ಭಗವಂತನ ಅನುಪಮ ಸೃಷ್ಠಿ
ಸದಾ ಇರಲಿ ಸ್ವಸ್ಥ ದೇಹ, ಸ್ವಸ್ಥ ಮನಸ್ಸು
ಅದುವೇ ಇಹಲೋಕದಿಂದ ಪರಲೋಕಕ್ಕೊಯ್ಯುವ ಸಾಧನ ಸಂಪತ್ತು!
*** *** ***

ಸುರಿಯುತಿಹುದು ಮಳೆ

ತಂಪಾಗಿಹುದು ಇಳೆ

ಬಸಿರೊಡೆಯಿತು ಧರೆ,

ಹೊದ್ದಿತು ಹಸಿರಿನಾ ಝರಿ-ಸೀರೆ!
*** *** ***

ನಿನಗಿರಲು ಅಧಿಕಾರ
ಇರುವುದು ವಂದಿ ಮಾದಿಗರ ಜೈಜೈಕಾರ
ಅಧಿಕಾರ ಹೋದೊಡನೆ ವಂದಿ ಮಾದಿಗರು ಮಾಯ
ಕಾಲ್ಗೆ ಬೀಳುವವರಿಲ್ಲ, ಕಾಲೆಳೆಯುವವರೇ ಎಲ್ಲ!
*** *** ***

ಒಳಗೆ ತುಂಬಿದಾ ನಗು, ಹೊರಬಾರದ ನಗು,
ಒಳಗೆ ತುಂಬಿದಾ ಹರುಷ, ಹೊರಗೆ ಬರೀ ವರ್ಷ
ಒಳಗೆ ತುಂಬಿದಾ ಭಾವನೆಗಳು, ಹೊರಗೆ ಬರೀ ಗೋಜಲುಗಳು
ಉಕ್ಕಬಾರದೇ ಈ ಅಗ್ನಿಪರ್ವತ, ಉಗುಳಬಾರದೇ ತನ್ನೊಡಲಿನ ತುಡಿತಗಳ?
*** *** ***

ಒಳಗೊಂದು ಮುಖ, ಹೊರಗೆ ನಾನಾ ಮುಖ
ಒಳಗೆ ಒಂದೇ ಭಾವನೆ, ಹೊರಗೆ ಹರಿವುದು ನಾನಾ ಭಾವನೆ
ಒಳಗೆಲ್ಲ ತಳಮಳ-ಕಳವಳ, ಹೊರಗೆ ಮಾತ್ರ ಫಳಫಳ
ಒಳಗೆಲ್ಲ ಬರೀ ಬೇಗುದಿ, ಹೊರಗೆ ತೋರಿಕೆಯ ನೆಮ್ಮದಿ
ಒಳಗಿದೆ ಎಡವಿದ ನೋವು, ಹೊರಗೆ ಮಾತ್ರ ಸತ್ಯದ ಸಾವು
ನನಗಿರಲಿ ಎಲ್ಲವೂ, ಉಳಿದವರಿಗೇಕೆ ಅನ್ಯಥಾ ಎಲ್ಲವೂ?

*** *** ***
ನನಗ್ಯಾರಿಲ್ಲ ನಾನೊಬ್ಬನೇ ಎಲ್ಲ
ಎಲ್ಲವೂ ಇದೆ ಆದರೆ ನನಗೇನಿಲ್ಲ
ಹೊಳೆ ದಾಟಿದ ಮೇಲೆ ಅಂಬಿಗ ಮಿಂಡ
ಅಂಬಿಗನ ಬಾಳಿನ ಪರಿ ನನ ಬಾಳೂ ದಂಡ!
*** *** ***
ನೊಂದು ಮೂಕಾಗಿ

ಬೆಂದು ಬೆಂಡಾಗಿ

ಸೋತು ಸುಣ್ಣಾಗಿ, ಸುಟ್ಟು ಕರಕಲಾಗಿ

ರೋಧಿಸುತಿಹುದೀ ಜೀವ

*** *** ***

ಬಳಸಿದರು ನನ್ನನ್ನು ಕಬ್ಬಿನ ಜೆಲ್ಲೆಯಂತೆ

ಬಳಸಿ ಮೂಲೆ ಸೇರಿಸಿದರು ಕಸಪೊರಕೆಯಂತೆ

ಮೊಸರನ್ನ ತಿಂದು ನನ ಮೂತಿಗೆ ಸವರಿದರು ಕೋತಿಯಂತೆ

ಎಸೆದರು ಉಂಡಾದ ಮೇಲೆ ಬಾಳೆಎಲೆಯ ಪರಿಯಂತೆ!

*** *** ***

ಮಾತಾಡಿ ಕೆಟ್ಟರು ಕೆಲವರು

ಮಾಡಿ ಕೆಟ್ಟರು ಕೆಲವರು

ಮಾತಾಡಿ-ಮಾಡಿ ಕೆಟ್ಟವರೂ ಕೆಲವರು

ಮಾತಾಡದೇ, ಮಾಡದೇ ಜಾಣರಾದರು ಹಲವರು!

*** *** ***


ದುರ್ಬಳಿಸಿಹರು ಎನ್ನ ಸಹನೆಯನ್ನ

ದುರ್ಬಳಿಸಿಹರು ಎನ್ನ ಮೌನವನ್ನ

ದುರ್ಬಳಿಸಿಹರು ಎನ್ನ ಮೃದು ಮನಸ್ಸನ್ನ

ನಾನೀಗ ಬರೀ ಹಳಸಿದ ಚಿತ್ರಾನ್ನ!*** *** ***


ಋಣದಿಂದ ಬಂತು ಸಂಬಂಧ

ಸಂಬಂಧದಿಂದ ಹೆಚ್ಚಿತು ಋಣಬಂಧ

ಅದುವೇ ಜೀವ-ಜೀವನದ ಋಣಾನುಬಂಧ

ಅದುವೇ ತಪ್ಪಿಸಿಕೊಳ್ಳಲಾರದ ಪಾಶ-ಬಂಧ!


*** *** ***


4 comments:

 1. ಸೋತೆನೆಂದೆನಬೇಡ ಸೋಲು ನೀನರಿತೆ|
  ಬಿದ್ದೆನೆಂದೆನಬೇಡ ನೋವು ನೀನರಿತೆ|
  ಸ್ವಮಂಥನದಿ ಗಳಿಸು ಸ್ಥಿತಪ್ರಜ್ಞತೆ, ಬದುಕಿಗದುವೆ ದಾರಿ!

  ReplyDelete
 2. ಸುರೇಶ್ ಜಿ,
  ತೋಚಿದ್ದೇ ಗೀಚಿದ್ದಾದರೂ ಮನಮುಟ್ಟುವ ಕವನ-ಚುಟುಕುಗಳು..........
  ಇಷ್ಟವಾಯಿತು.
  ಧನ್ಯವಾದಗಳು.

  ReplyDelete
 3. ನಿಮ್ಮ ಅನಿಸಿಕೆಗೆ ಧನ್ಯವಾದಗಳು. ನಮಸ್ಕಾರದೊಂದಿಗೆ

  ReplyDelete