|| ಶ್ರೀ ರಾಮ ಜಯ ರಾಮ ಜಯ ಜಯ ರಾಮ ||

Sunday, August 8, 2010

ತೋಚಿದ್ದು-ಗೀಚಿದ್ದು - ಭಾಗ-2


ಸಾಹಿತ್ಯ ಗೊತ್ತಿಲ್ಲ, ಸಾಹಿತ್ಯ ಪ್ರಾಕಾರ ಗೊತ್ತಿಲ್ಲ,
ಗದ್ಯ ಗೊತ್ತಿಲ್ಲ, ಪದ್ಯ ತಿಳಿದಿಲ್ಲ,
ಗದ್ಯ ಮೀಮಾಂಸೆ ಗೊತ್ತಿಲ್ಲ, ಕಾವ್ಯ ಮೀಮಾಂಸೆ ಅರಿವಿಲ್ಲ,
ಆದರೂ ಬರೆವುದ ನಾ ಬಿಟ್ಟಿಲ್ಲ!!
*** *** *** ***

ಪರಿ
ಪರಿಯಾಗಿ ನನ್ನನ್ನು ಹಳಿವವರೇ ಎಲ್ಲರೂ
ನಿಜವನರಿವ ಸಹನೆ ಇಲ್ಲದವರೇ ಎಲ್ಲರೂ
ನಾನೇನು ಮಾಡಿದೆನೋ ಮಹಾಪರಾಧ
ನನಗೇಕೆ ಶಿಕ್ಷೆ? ನನಗೇಕೆ ಬೇಗುದಿ?
*** *** *** ***
ಬಾಳಿನಂಗಳದಲ್ಲಿ ಕವಿದಿಹುದು ದು:ಖದಾ ಕಾರ್ಮೋಡ
ಎಲ್ಲೆಲ್ಲೂ ಮೂಡಿಹುದು ಮಿಂಚು-ಗುಡುಗಿನ ಅಬ್ಬರ
ಸುರಿಯಬಾರದೇ ವರ್ಷ ಧಾರಾಕಾರ
ಮೂಡಬಾರದೇ ಬಾನಂಗಳದಲಿ ಶುಭ್ರ ನೀಲಾಂಬರ!
*** *** *** ***

ಹಾಕಿಹರು ಬೆನ್ನಿಗೆ ಅಪನಂಬಿಕೆಯ ಚೂರಿ
ಮುಖದ ತುಂಬಾ ಮುಂದೆ ನಸುನಗೆಯ ಬೀರಿ
ಕೆಲಸವಾಗುವ ತನಕ ಅಂದರು ನೀನೇ ಮಹಾತ್ಮ
ಕೆಲಸವಾದೊಡನೆ ಬೈಯ್ದರು ನೀನೇ ಪಿಶಾತಾತ್ಮ!
*** *** *** ***

ಚಿಂತೆ ಚಿಂತೆ ಚಿಂತೆ ಚಿಂತೆ
ಅದುವೇ ಹೊರಲಾರದ ಜೀವನದ ಕಂತೆ
ಚಿಂತೆ ಮರೆತಷ್ಟೂ ಮತ್ತೊಂದು ಮಗದೊಂದು ಚಿಂತೆ
ಜೀವನದುದ್ದಕ್ಕೂ ಚಿಂತೆಯದೇ ಸಂತೆ!
*** *** *** ***

ಕೊಂದಿಹರು ಎನ್ನ ಬಿರುಗಣ್ಣ ನೋಟದಲಿ
ಕೊಂದಿಹರು ಎನ್ನ ಬಿರುಮಾತ ಚಾವುಟಿಯಲಿ
ಬದುಕಲೇಬೇಕು ಕರ್ತವ್ಯ ಪೂರೈಸುವತನ
ಅಲ್ಲಿಯವರೆಗೆ ನಾ ಬರೀ ನಡೆದಾಡುವ ಹೆಣ!
*** *** *** ***

ಹಸಿದಿಹುದೀ ಜೀವ ಸಾಂತ್ವನದೂಟಕ್ಕೆ
ಯಾರಾದರೂ ಬಡಿಸುವಿರಾ ಮನದುಂಬಿ ಉಣಲಿಕ್ಕೆ
ಬೇಡ ನಯಮಾತಿನ ಪರಮಾನ್ನ, ಬೇಡ ಅನುಕಂಪದ ಮೃಷ್ಟಾನ್ನ
ಹರಿಸಿರೊಮ್ಮೆ ಸಾಕು ನಿಮ್ಮ ಪ್ರೀತಿಯ ನೋಟವನ್ನ!
*** *** *** ***

ಆಗದಿರಲಿ ಒಬ್ಬರ ದು: ಇನ್ನೊಬ್ಬರ ಸುಖ
ಆಗದಿರಲಿ ಒಬ್ಬರ ನೋವು ಇನ್ನೊಬ್ಬರ ನಲಿವು
ನೋವು-ನಲಿವು ಎಲ್ಲರ ಬಾಳಿನ ಕಟ್ಟಿಟ್ಟ ಬುತ್ತಿ
ಸಾಧ್ಯವಾದರೆ ಹಂಚೋಣ ಬರೀ ನಲಿವಿನಾ ಬುತ್ತಿ!
*** *** ***

ದೇಹಕ್ಕಾದ ಗಾಯ ಬಲು ಬೇಗ ಮಾಯ
ಮಾಯಲೊಲ್ಲದು ಮನಸ್ಸಿಗಾದ ಗಾಯ
ಕಟು ಮಾತನಾಡದಿರಿ
ಅನ್ಯರಲ್ಲಿರಲಿ ಸದಾ ಪ್ರತಿಯೆಂಬ ಐಸಿರಿ!
*** *** ***

ಮನದೊಳಗೆ ಮರ್ಕಟವೋ ಮರ್ಕಟದೊಳಗೆ ಮನವೋ
ಜೀವದೊಳು ಭಾವವೋ ಭಾವದೊಳು ಜೀವವೋ
ಪ್ರಪಂಚದಾ ರೀತಿ ಬಲು ನಿಗೂಢ ನೋಡಾ
ಅರಿವಾಗದ್ದಕ್ಕೆ ತಲೆ ಬಾಗಿ ವಂದಿಪನೇ ಜಾಣ!
*** *** ***

ನನ್ನಿಂದ್ಯಾರಿಗೂ ಸುಖವಿಲ್ಲ
ನನ್ನಿಂದೆಲ್ಲರಿಗೂ ಬರೀ ದು:ಖವೇ ಎಲ್ಲ
ಏನು ಮಾಡಿದ್ದೆನೋ ಪಾಪವ ತಿಳಿಹೇಳು
ಹೇ ಭಗವಂತ! ಕೈ ಹಿಡಿದು ಮುನ್ನಡೆಸು ಎನ್ನನು
*** *** ***

ಮನವ ಹೊಕ್ಕಿತು ಸಂಶಯವೆಂಬ ಗೆದ್ದಲು
ಮನದಿಂದ ಮನಕ್ಕೆ ಹಬ್ಬಿತೀ ಗೆದ್ದಲು
ಮುರಿದು ಬಿದ್ದವು ಪ್ರೀತಿ-ವಾತ್ಸಲ್ಯದಾ ಮಹಲು
ಎಲ್ಲೆಲ್ಲೂ ಗೆದ್ದಲುಗಳೇ ಗೆದ್ದಲುಗಳು!
*** *** ***

ಮನದಲಿ ಸದಾ ತುಂಬಿರಲಿ ಚಿನ್ಮಯ ಭಕ್ತಿ
ಸುಷುಪ್ತಿಯಲೂ ಜಾಗೃತವಿರಲಿ ಭಾವ ವಿರಕ್ತಿ
ಅರಿಯದೆಯೂ ಚಿಂತಿಸದಿರಲಿ ಮನ ಕುಯುಕ್ತಿ
ಅನವರತ ಕೊಡು ನೀ ಸನ್ನಡತೆಯಾ ಶಕ್ತಿ
*** *** ***

ತಿಳಿಯಾಗಿತ್ತೊಮ್ಮೆ ನನ್ನ ಮನವೆಂಬ ಕೊಳ
ಎಲ್ಲೆಲ್ಲೂ ಕಂಗೊಳಿಸಿತ್ತು ಸುಂದರ ಕಮಲ
ಕಮಲ ಕಿತ್ತರು, ಕೊಳವ ರಾಡಿ ಮಾಡಿದರು
ನೆಮ್ಮದಿಯ ಸಹಿಸದಾ ಜನರು!
*** *** ***

ಎಲ್ಲ ಓದಲಿ ಎಂದು ನಾನು ಬರೆಯುವುದಿಲ್ಲ
ನಾ ಬರೆವುದು ನನ್ನ ನಾ ತಿಳಿಯಲಿಕ್ಕೆ
ನಾ ಬರೆವುದು ನನ್ನ ಆತ್ಮ ಸಾಕ್ಷಾತ್ಕಾರಕ್ಕೆ
ಅದಕಿರಲಿ ಸದಾ ಶ್ರೀ ಗುರುವಿನ ಶ್ರೀ ರಕ್ಷೆ

*** *** ***

3 comments:

 1. appa its a wonderful poem......but never feel like that anytime....v r all with u.......n myself, a comedian! is with u pa.....then watz thr to think ha.....plz do'nt worry pa....

  ReplyDelete
 2. ಸುರೇಶ, ನಿನ್ನ ಕವನಕ್ಕೆ ಶೃತಿಗೂಡಿಸಿದೆ 'ಕವಿಮನ'ದ ಈ ಕವನ:
  ಕೆಂಪು ಬೆಳೆ.
  ಒಳ್ಳೆಯದು ನಿರೀಕ್ಷಿಸಿದರಾಯಿತು, ಕೆಟ್ಟದ್ದಾದರೆ ಎದುರಿಸಿದರಾಯಿತು!

  ReplyDelete
 3. ಹೌದು. ನಿಜ. ಅದುವೇ ಅಂತಿಮವಾದ ಸತ್ಯ.

  ReplyDelete