|| ಶ್ರೀ ರಾಮ ಜಯ ರಾಮ ಜಯ ಜಯ ರಾಮ ||

Monday, May 9, 2011

ಅಂಬಿಗ ನಾ ನಿನ್ನ ನಂಬಿದೆ

ಎಚ್ಚರ-ನಿದ್ದೆ-ಕನಸು ಇವು ಪ್ರತಿ ನಿತ್ಯ ಮಾನವ ಅನುಭವಿಸುವ ಮೂರು ಅವಸ್ಥೆಗಳು. ನಿದ್ರಾವಸ್ಥೆ ಬಗ್ಗೆ ಹೆಚ್ಚಿಗೆ ಹೇಳಬೇಕಾಗಿಲ್ಲ. ಅದೊಂದು ಅರೆ-ಸಾವಿನ ಸ್ಥಿತಿ! ಇಂದ್ರಿಯಾದಿಗಳೆಲ್ಲವೂ ನಿಶ್ಚೇಷ್ಟವಾಗಿ, ನಿಷ್ಕ್ರಿಯವಾಗಿ ಹಾಗೂ ಪ್ರತಿಕ್ರಿಯಾಶೂನ್ಯವಾಗಿರುವ ಸ್ಥಿತಿ. ಇನ್ನು ಕನಸುಗಳ ಲೋಕವೇ ಬೇರೆ. ಅವುಗಳ ರೂಪಗಳೂ ಮತ್ತು ಲಕ್ಷಣಗಳೂ ಚಿತ್ರ-ವಿಚಿತ್ರವಾದವುಗಳು. ಅವು ಮನಸ್ಸನ್ನು ಮುದಗೊಳಿಸಲೂಬಹುದು; ಭಯಗೊಳಿಸಲೂ ಬಹುದು. ಮುಂದೊದಗಬಹುದಾದ ಘಟನೆಗಳ ಬಗ್ಗೆ ಮುನ್ಸೂಚನೆಯನ್ನೂ ಅನೇಕ ಬಾರಿ ನೀಡಬಲ್ಲವು. ಕನಸಿನಲ್ಲಿ ಬೆಟ್ಟದಿಂದ ನಾವು ಬೀಳಬಹುದು; ಆನೆ ಅಟ್ಟಿಸಿಕೊಂಡು ಬಂದು ತುಳಿಯಬಹುದು. ಆದರೆ ಈ ಭೌತಿಕ ಶರೀರಕ್ಕೆ ಮಾತ್ರಾ ಏನೂ ಘಾಸಿಯಾಗದು! ಕನಸಿನ ಸಾಮ್ರಾಜ್ಯವೇ ಹಾಗೆ. ಹಾಗಾಗಿ ಅವುಗಳ ಬಗ್ಗೆ ಹೆಚ್ಚಿನ ವಿಶ್ಲೇಷಣೆ ಇಲ್ಲಿ ಅಪ್ರಸ್ತುತ.

ನಿದ್ದೆ-ಕನಸಿನ ನಂತರ ಬಹು ಮಹತ್ತರವಾದ ಅವಸ್ಥೆ ಎಚ್ಚರ. ಎಚ್ಚರದಲ್ಲಿ ಮನುಷ್ಯನ ಇಂದ್ರಿಯಾದಿಗಳು ಮತ್ತು ಬುದ್ಧಿ-ಮನಸ್ಸು ಕೂಡಾ ಸಂಪೂರ್ಣ ಜಾಗೃದಾವಸ್ಥೆಯಲ್ಲಿರುತ್ತವೆ. ಮಾತಿಗೆ ತಕ್ಕ ಮಾತು, ನಗುವಿಗೆ ಪ್ರತಿ ನಗು, ಮುಳ್ಳು ಚುಚ್ಚಿದಾಗ ನೋವಿನ ಅನುಭವ, ದು:ಖದ ವಿಚಾರ ಬಂದಾಗ ಅಳು-ನೋವು, ಸುಖ ಬಂದಾಗ ಪ್ರಸನ್ನತೆ, ಆಹ್ಲಾದ - ಹೀಗೆ ನಾನಾ ಪ್ರತಿಕ್ರಿಯೆಗಳನ್ನು ಎಚ್ಚರದ ಸ್ಥಿತಿಯಲ್ಲಿ ಉಚ್ಛ್ರಾಯ ಮಟ್ಟದಲ್ಲಿ ಗಮನಿಸಬಹುದು.

ಎಚ್ಚರದ ಅವಸ್ಥೆಯಲ್ಲಿ ನಾವು ಏನು ಮಾಡುತ್ತೇವೆಯೋ (ಅದು ಕೆಟ್ಟದ್ದೂ ಇರಬಹುದು), ಏನು ಮಾತನಾಡುತ್ತೇವೆಯೋ (ಅದು ಸುಳ್ಳು ಇರಬಹುದು) ಮತ್ತು ಏನು ಯೋಚಿಸುತ್ತೇವೆಯೋ (ಅದು ದುರ್ಯೋಚನೆಯೂ ಇರಬಹುದು) ಅದೇ ಆಗಿನ ಸತ್ಯ. ಅಂದು ಅನುಭವಿಸುವ ಸುಖ-ದು:ಖ, ನೋವು-ನಲಿವುಗಳೇ ಆಗಿನ ಸತ್ಯ. ಆದರೆ ನಾವು ಏನು ಮಾಡುತ್ತೇವೆ, ಏನು ಮಾತನಾಡುತ್ತೇವೆ ಮತ್ತು ಏನು ಯೋಚಿಸುತ್ತೇವೆ ಎಂಬುದು ನಮ್ಮ ನಮ್ಮ ವ್ಯಕ್ತಿಗತವಾದಂತಹ ಸಂಸ್ಕಾರ, ಪರಿಸರ, ಜ್ಞಾನ ಮುಂತಾದ ಅಪರಿಮಿತ ವಿಷಯಗಳನ್ನು ಅವಲಂಬಿಸಿದೆ ಎಂದರೆ ತಪ್ಪಾಗದು.

"ಲೋಕೋ ಭಿನ್ನ ರುಚಿ:" ಎನ್ನುವುದು ಬಹಳ ಹಳೆಯ ಮಾತು. ಒಂದು ಮದುವೆಯ ಆರತಕ್ಷತೆಯ ಭೋಜನಕ್ಕೆ ಹೋಗಿದ್ಧೇವೆ. ಖಾಲಿದೋಸೆಯಿಂದ ಹಿಡಿದು ಫಿಜ್ಜಾವರೆಗೆ ಅನೇಕಾನೇಕ ಖಾದ್ಯಗಳನ್ನು ಸಾಲಾಗಿ ಇಟ್ಟು ಬಡಿಸುತ್ತಿದ್ದಾರೆ. ಆದರೆ ನೋಡಿ. ಎಲ್ಲರು ಎಲ್ಲವನ್ನೂ ತಿನ್ನುವುದಿಲ್ಲ; ತಿನ್ನಲಾಗುವುದಿಲ್ಲ. ಒಬ್ಬೊಬ್ಬರು ತಮಗಿಷ್ಟವಾದ ಖಾದ್ಯಗಳನ್ನೇ ಮನ:ಪೂರ್ತಿ ತಿನ್ನುತ್ತಾರೆ. ಏಕೆಂದರೆ ಆಸೆ ಇದ್ದರೂ ಹೊಟ್ಟೆ ಗಾತ್ರ ಸೀಮಿತ. ಅದೇ ರೀತಿ ಮಾನವನ ಮೆದುಳೂ ಸಹ. ಮೇಲ್ನೋಟಕ್ಕೆ, ರಚನೆಯಾನುಸಾರ, ಎಲ್ಲರ ಮೆದುಳೂ ಒಂದೇ ಇದ್ದರೂ ಸಹ, ಅದರ ಗ್ರಹಣಶಕ್ತಿ ಮಾತ್ರಾ ಸೀಮಿತವಾದದ್ದು. ಉಪಯುಕ್ತ/ಅನುಪಯುಕ್ತ ವಿಷಯಗಳನ್ನು ಜರಡಿ ಹಿಡಿಯುವ ಸಾಮರ್ಥ್ಯ ಕೂಡಾ ವ್ಯಕ್ತಿ ವ್ಯಕ್ತಿಗೆ ಭಿನ್ನ. ನದಿಯ ತುಂಬಾ ನೀರು ಹರಿಯುತ್ತಿದ್ದರೂ ನಾವು ಕುಡಿಯಲಾಗುವುದು (ಕುಡಿಯುವುದು) ಮೂರ್ನಾಲ್ಕು ಬೊಗಸೆಯಷ್ಟು ಮಾತ್ರ. ಅದರಲ್ಲೇ ನಾವು ಸಂತೃಪ್ತಿ ಹೊಂದುತ್ತೇವೆ. ವಿಷಯ/ವಸ್ತು ಒಂದೇ ಇದ್ದರೂ ಅದನ್ನು ಬೇರೆ ಬೇರೆ ವ್ಯಕ್ತಿಗಳು ತಮ್ಮದೇ ದೃಷ್ಟಿಕೋನದಲ್ಲಿ ಅರ್ಥೈಸಿಕೊಳ್ಳುತ್ತಾರೆ; ನೋಡುತ್ತಾರೆ. ಹೀಗಾಗಿಯೇ ನಾವು ಪ್ರಪಂಚದಲ್ಲಿ ನಾನಾ ರೀತಿಯ ಆಚಾರ-ವಿಚಾರಗಳನ್ನು ಹೊಂದಿರುವ, ನಾನಾ ನಂಬಿಕೆಗಳನ್ನಿಟ್ಟು ಕೊಂಡಿರುವ ಮತ್ತು ನಾನಾ ಸಂಪ್ರದಾಯಗಳನ್ನು ಅನುಸರಿಸುವಂತಹ ಅಸಂಖ್ಯಾತ ಜನರನ್ನು ಕಾಣುತ್ತೇವೆ.

ಅನ್ನ ಸಂಪಾದನೆಗೆ ನಾನಾ ಮಾರ್ಗಗಳಿದ್ದಂತೆ, ಜ್ಞಾನ/ಪಾರಮಾರ್ಥಿಕ ಸಾಧನೆಗೂ ಕೂಡ ಬಹು ಜನರು ತಮ್ಮ ತಮ್ಮ ಆಸ್ಥೆಯಾನುಸಾರ ನಾನಾ ಮಾರ್ಗಗಳನ್ನು ಅಳವಡಿಸಿಕೊಂಡಿರುವುದು ಸ್ವಯಂಸ್ಪಷ್ಟವಾದ ವಿಚಾರ. ತಾನು ಮಾಡುವ ನಿಷ್ಕಾಮ ಕರ್ಮವೇ ಭಗವತ್ಸೇವೆ ಎಂದು ಒಬ್ಬ ಭಾವಿಸಿದರೆ, ಮತ್ತೊಬ್ಬ ಒಂದು ಮೂರ್ತಿಯಲ್ಲಿಯೇ ತನ್ನ ಇಷ್ಟದೈವವನ್ನು ಉತ್ಕಟ ಭಕ್ತಿಯಿಂದ, ನಾನಾ ರೀತಿಯಿಂದ ಪೂಜಿಸಿ, ಭಜಿಸಿ ಸಾಕ್ಷಾತ್ಕಾರಭಾವ ಅನುಭವಿಸುತ್ತಾನೆ. ಮೂರ್ತಿ ಪೂಜೆಯನ್ನೇ ನಂಬದ ಮುಸಲ್ಮಾನರಲ್ಲಿ ಇಂದೂ ಅನೇಕ ಮುಸಲ್ಮಾನ ದಂಪತಿಗಳು ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರದಲ್ಲಿ ಸಂತಾನ ಪ್ರಾಪ್ತಿಗಾಗಿ ಆಶ್ಲೇಷ ಬಲಿ ಇತ್ಯಾದಿ ಸೇವೆ ಮಾಡಿಸುವವರನ್ನು ನೋಡಬಹುದಾಗಿದೆ; ಅದರಿಂದ ಫಲ ಪಡೆದ ಅನೇಕರ ಅನುಭವಗಳು ಇಲ್ಲಿ ಸಾಕಷ್ಟಿವೆ. ಅದೇ ಕ್ಷೇತ್ರದಲ್ಲಿ ಎಂಜಲೆಲೆಯ ಮೇಲೆ ಉರುಳು ಸೇವೆ ಮಾಡಿ ಚರ್ಮರೋಗ ಪರಿಹರಿಸಿಕೊಂಡವರಲ್ಲಿ ನನಗೆ ಅತೀ ಸಮೀಪದ ಬಂಧುವೇ ಸಾಕ್ಷಿಯಾಗಿದ್ದಾರೆ. ಇವೆಲ್ಲಾ ಅವರವರ ಶ್ರದ್ಧೆ-ನಂಬಿಕೆಯ ವಿಚಾರ. ನಮಗೆ ಅರ್ಥವಾಗದಿದ್ದರೆ (ಅಥವಾ ಅರ್ಥಮಾಡಿಕೊಳ್ಳುವ ಮನಸ್ಸಿಲ್ಲದಿದ್ದರೆ) ಅದಕ್ಕೆ ಅರ್ಥವಿಲ್ಲವೆಂದು ಜರೆಯುವುದು ಯಾವ ಧರ್ಮ?

ನಂಬದಿರ್ದನು ತಂದೆ, ನಂಬಿದನು ಪ್ರಹ್ಲಾದ |
ನಂಬಿಯುಂ ನಂಬದಿರುವಿಬ್ಬಂದಿ ನೀನು ||
ಕಂಬದಿನೊ ಬಿಂಬದಿನೊ ಮೋಕ್ಷವವರಿಂಗಾಯ್ತು |
ಸಿಂಬಳದಿ ನೊಣ ನೀನು - ಮಂಕುತಿಮ್ಮ ||

ಅದೇ ರೀತಿ ಪರೋಪಕಾರದಲ್ಲಿ ಕೆಲವರು ಭಗವದ್ಧರ್ಶನ ಪರಿಭಾವಿಸಿಕೊಂಡರೆ, ಅಪರಿಮಿತ ಪಾರಮಾರ್ಥಿಕ ಜ್ಞಾನಾರ್ಜನೆಯಲ್ಲಿ ಮತ್ತೆ ಕೆಲವರು ಸಚ್ಚಿದಾನಂದದ ಅನುಭವ ಕಾಣುತ್ತಾರೆ. ದಾನ-ಧರ್ಮದಲ್ಲಿ ಕೂಡ ಹಲವರು ನೆಮ್ಮದಿ-ಶಾಂತಿ ಕಂಡುಕೊಳ್ಳುತ್ತಾರೆ. ಜ್ಞಾನದ ಅಭಾವವೋ, ವೈಯುಕ್ತಿಕ ಪೂರ್ವಾಗ್ರಹವೋ ಅಥವಾ ಪ್ರತಿಷ್ಠೆಯೋ ಗೊತ್ತಿಲ್ಲ, ಇಂದು ಒಬ್ಬರು ಮತ್ತೊಬ್ಬರ ಆಚರಣೆಗಳನ್ನು, ನಂಬಿಕೆಗಳನ್ನು, ಅವರು ನಂಬಿಕೊಂಡ ಸಂಪ್ರದಾಯಗಳನ್ನು (ಸಾಮಾಜಿಕ ಮತ್ತು ವೈಯುಕ್ತಿಕ ಹಾನಿಮಾಡದಂತವುಗಳನ್ನು ಬಿಟ್ಟು) ಹೀಯಾಳಿಸುವುದರಲ್ಲಿಯೇ ಬಹು ಸಮಯ ವ್ಯರ್ಥ ಮಾಡುತ್ತಿರುವುದು ಇಂದಿನ ದುರಂತ. ಮೊದಲೇ ಹೇಳಿದಂತೆ, ಪ್ರತಿ ಮಾನವನ ಗ್ರಹಣ ಶಕ್ತಿ, ಆತನ ಸಂಸ್ಕಾರ, ಆತನ ಪರಿಸರ ಎಲ್ಲವೂ ಕೂಡ ಭಿನ್ನ ಭಿನ್ನ. ಹಾಗಾಗಿ ಎಲ್ಲರಿಗೂ ಒಂದೇ ಸಾಧನಾ ಪಥ ಸಾಧುವೂ ಅಲ್ಲ; ಸಾಧ್ಯವೂ ಅಲ್ಲ. ಬಹುಶ: ಇದು ಆ ಅಗೋಚರ ಶಕ್ತಿಯೇ ಉದ್ಧೇಶಪೂರ್ವಕವಾಗಿ ನಿರ್ಮಿಸಿದಂತಹ ಸನ್ನಿವೇಶವಿರಬಹುದು. ಇಲ್ಲದಿದ್ದರೆ ಲೋಕದ ಜನರು ಜೀವನದ ಆಚರಣೆಗಳಲ್ಲಿ ಏಕತಾನತೆಯಿಂದ ಬಳಲುತ್ತಿದ್ದರೋ ಏನೋ. ಭಾರತದ ಸಂಸ್ಕೃತಿಯೇ ಹಾಗೆ. ಭಗವತ್ಸಾಕ್ಷಾತ್ಕಾರಕ್ಕೆ ಪ್ರತಿಯೊಬ್ಬನಿಗೂ (ಅವನ ಇತಿಮಿತಿಯಾನುಸಾರ) ಎಟಕುವಂತಹ ಅನೇಕ ಸಾಧನಾಪಥವನ್ನು ಹಾಕಿಕೊಟ್ಟಿದೆ. ದಾರಿ ಹಲವು. ಗುರಿ ಮಾತ್ರ ಒಂದೇ. ಅಂತಿಮವಾಗಿ ನೆಮ್ಮದಿ ಮತ್ತು ಸಚ್ಚಿದಾನಂದ ಹೊಂದುವ ಗುರಿ.

ದಾರಿ ಸುಂದರವಿರಲು ಗುರಿಯ ಚಿಂತ್ಯಾಕೆ
ಗುರಿಯು ಸುಂದರವಿರಲು ದಾರಿ ಚಿಂತ್ಯಾಕೆ |
ಕಲ್ಲಿರಲಿ ಮುಳ್ಳಿರಲಿ ಹೂವು ಹಾಸಿರಲಿ
ರೀತಿ ಸುಮಧುರವಿರೆ ಯಶ ನಿನದೆ ಮೂಡ ||

[ಕವಿ ನಾಗರಾಜ್ ರವರ "ಮೂಢ ಉವಾಚ" ಪುಸ್ತಕದಿಂದ]

ಒಳ್ಳೆಯ ದಾರಿ, ಒಳ್ಳೆಯ ಚಿಂತನೆ, ಮನಸ್ಸಿಗೊಪ್ಪಿದ (ಅನ್ಯರ ನೋಯಿಸದ) ಆಚರಣೆ ಇದ್ದಾಗ ನೆಮ್ಮದಿ ಖಂಡಿತಾ ಹತ್ತಿರ ಸುಳಿದೀತು. ನನ್ನ ಆಚರಣೆಯೇ ಸರಿ, ನನ್ನ ನಂಬಿಕೆಯೇ ಸರಿ, ಬೇರೆಯವರದು ಕೆಳಮಟ್ಟದ ಮಾರ್ಗ ಎನ್ನುವ ಭಾವ ಬಹುಶ: ತರವಲ್ಲ. "ನಹಿ ಸರ್ವ: ಸರ್ವಂ ಜಾನಾತಿ" - ಎಲ್ಲರಿಗೆ ಎಲ್ಲವೂ ತಿಳಿದಿರುವುದಿಲ್ಲ. ಇದು ನಿತ್ಯಸತ್ಯವಾದ ಮಾತು. ಆದುದರಿಂದ ವಿಚಾರಗಳನ್ನು ಅಧಿಕಾರವಾಣಿಯಿಂದ ಇತರರ ಮೇಲೆ ಹೇರುವ ಪ್ರವೃತ್ತಿ ಕೂಡ ಪ್ರಶ್ನಾರ್ಹವೇ. ವಿಚಾರ ಮಂಡನೆ ಇರಲಿ. ಹೇರಿಕೆ ಬೇಡ; ಎಲ್ಲರೂ ಒಪ್ಪ ಬೇಕೆಂಬ ನಿರೀಕ್ಷೆ ಕೂಡಾ ಬೇಡ. ಮನುಷ್ಯನ ಮೆದುಳು ಬ್ಲಾಟಿಂಗ್ ಪೇಪರ ಇದ್ದ ಹಾಗೆ. ತನಗೆ ಸಾಧ್ಯವಾದಷ್ಟು ಮಾತ್ರಾ ಗ್ರಹಿಸಬಲ್ಲದು; ಒಪ್ಪಿಕೊಂಡಷ್ಟು ಮಾತ್ರಾ ಅನುಸರಿಸಬಲ್ಲದು. ಆದ್ಧರಿಂದ ಸದ್ವಿಚಾರಗಳಿಗೆ ಸದಾ ಮನಸ್ಸು ತೆರೆದಿರಲಿ. ಆದರೆ ಆಚರಣೆ ಮತ್ತು ನಮ್ಮ ದೈನಂದಿನ ನಡವಳಿಕೆ ನಮ್ಮ ಅಂತರಾತ್ಮ ನಿರ್ದೇಶಿಸಿದಂತೇ (ಸದಾ ಸನ್ಮಾರ್ಗದಲ್ಲಿಯೇ) ಸಾಗಲಿ.

".........ಇನ್ನು ಅಲ್ಪ ಸ್ವಲ್ಪ ಸಾಧನೆ ಮಾಡಿ ಆಂಶಿಕವಾಗಿ ಪರಮಾತ್ಮತತ್ತ್ವವನ್ನು ತಿಳಿದುಕೊಂಡಿರುವವರು ಭೇದ-ಭಾವಗಳ ಕೆಸರಿನ ಹೊಂಡದಲ್ಲಿ ಬಿದ್ದುಕೊಂಡಿರುತ್ತಾರೆ. ಇಂತಹವರು ಕೂಪ ಮಂಡೂಕಗಳಂತೆ ನನ್ನ ಮತವೇ ಶ್ರೇಷ್ಠ ನನ್ನ ದೇವರೇ ಶ್ರೇಷ್ಠ ಎನ್ನುವ ಭ್ರಮೆಯಲ್ಲಿ ಸಿಲುಕಿಕೊಂಡು ಒದ್ದಾಡುತ್ತಿರುತ್ತಾರೆ. ಸತ್ಯಕ್ಕೆ ಅನಂತ ಮುಖಗಳಿವೆ. ನಾನು ನೋಡಿದ್ದು ಕೇವಲ ಒಂದು ಮುಖ ಎನ್ನುವ ವಾಸ್ತವಿಕ ವಿಚಾರವನ್ನು ಇಂತಹವರು ಮರೆತಿರುತ್ತಾರೆ....."

**ಶ್ರೀ ಶ್ರೀ ಸಚ್ಚಿದಾನಂದ ಸರಸ್ವತೀ ಸ್ವಾಮಿಗಳವರು, ಶ್ರೀಮಠ, ಹರಿಹರಪುರ
(ಸ್ವಯಂಪ್ರಕಾಶ ಮಾಸಪತ್ರಿಕೆ - ಮೇ-2009)

-ಕವಿ ವೆಂ.ಸುರೇಶ್

Sunday, May 1, 2011

ಹೀಗೇಕೆ.....?

                                                                             [ಮುಂದುವರೆದುದು]

* ಕಂಡದ್ದೆಲ್ಲಾ ಬೇಕು; ಪಡೆಯುವ ಶ್ರಮ ಮಾತ್ರಾ ಬೇಡ.

* ಬದುಕು ಅನಿಶ್ಚಿತ; ಸಾವು ಶಾಶ್ವತ. ಆದರೂ ಕೂಡಿಡುವುದು ಮಾತ್ರಾ ಅಪರಿಮಿತ.

* ಗಂಡ-ಹೆಂಡತಿ ಜಗಳ ಉಂಡು ಮಲಗುವ ತನಕ. ದಾಯಾದೀ ಜಗಳ ಜೀವವಿರುವ ತನಕ.

* ಪ್ರತಿಯೊಬ್ಬರಿಗೂ ಶಾಂತಿ-ನೆಮ್ಮದಿ-ಆರೋಗ್ಯ ಬೇಕು. ಆದರೆ ಪ್ರತಿಯೊಂದರಲ್ಲೂ ಶಿಸ್ತು/ಸಂಯಮ ಮಾತ್ರಾ ಬೇಡ.

* ಅಪ್ಪ-ಅಮ್ಮ ಇರುವ ತನಕ. ಬಂಧು-ಬಾಂಧವರು ಮರೆಯಾಗುವ ತನಕ.

* ಗಂಡ (ಡು) ಮಾತ್ರಾ ಬೇಕು. ಗಂಡನ ಪರಿವಾರ ಮಾತ್ರಾ ದೂರದಲ್ಲಿರಬೇಕು.

* ಸೊಸೆ ಅತ್ತೆ-ಮಾವಂದಿರೊಂದಿಗೆ ಬೆರೆತು ನಗುನಗುತಾ ಬಾಳಬೇಕು. ತಗ್ಗಿ ಬಗ್ಗಿ ನಡೆಯಬೇಕು. ಎದುರು ಮಾತನಾಡಬಾರದು. ಆದರೆ ಮಗಳು....?

* ಟಿ.ವಿ. ನೋಡುವ ಅರ್ಧ ಸಮಯವಾದರೂ ನಮ್ಮ ಆತ್ಮ ಚಿಂತನೆಗೆ ಮೀಸಲಿಡಲಾಗದು.

* ಹಾಲಿಗೆ ಹುಳಿ ಹಿಂಡುವವರ ದಂಡೇ ಇಂದು ಜಾಸ್ತಿ.

* ಬೇರೆಯವರು ತೊಂದರೆಯಲ್ಲಿದ್ದಾಗ ಮತ್ತೊಬ್ಬರು ಅವರಿಗೆ ಸಹಾಯ ಮಾಡಲಿ ಎಂದು ನಿರೀಕ್ಷಿಸುವವರೇ ಬಹು ಮಂದಿ.

* ವೃದ್ಧಾಪ್ಯ ಸಮೀಪಿಸುತ್ತಿದ್ದಂತೆ ಪದೇ ಪದೇ ಕಾಡುವ ರೋಗಗಳು ಸಾವನ್ನು ನೆನಪಿಸುವ ಎಚ್ಚರಿಕೆ ಗಂಟೆ ಇದ್ದಂತೆ. ಆದರೂ ಇದನ್ನರಿತವರು ಎಷ್ಟು ಮಂದಿ?

* ದಾನ ಕೊಟ್ಟದ್ದಕ್ಕೆ ಲೆಕ್ಕವುಂಟು; ಅಮೃತಶಿಲೆಯಲ್ಲಿ ಕೆತ್ತಿದ ಹೆಸರುಂಟು. ಪಡೆದದ್ದಕ್ಕೆ?

* ನಮ್ಮನ್ನು ಕಂಡರೆ ಅಸಡ್ಡೆ, ಅಗೌರವ ತೋರುವ ವ್ಯಕ್ತಿಗಳನ್ನೇ ಓಲೈಸಬೇಕಾದ ಅನಿವಾರ್ಯ ಪರಿಸ್ಥಿತಿ ಅನೇಕ ಸಲ ಬಂದೊದಗುವುದು.

* ಮಳೆ ಬಂದು ತಂಪಾದ ಕೂಡಲೇ ಕಪ್ಪೆ 'ವಟರ್, ವಟರ್' ಎನ್ನುವುದು. ತೃಪ್ತಿಯಾಗಿ ಉಂಡವ 'ಢರ್' ಎಂದು ತೇಗುವನು. ಎಷ್ಟೇ ಕೊಟ್ಟು, ಏನೇ ಮಾಡಿದರೂ ಬಹುಜನರು ಸದಾ 'ಗುರ್, ಗುರ್' ಎಂದೇ ಗುರುಗುಟ್ಟುವರು.

* ಪರಿಣಾಮ ಅರಿತೂ ದುಷ್ಚಟಗಳಿಗೆ ಬಲಿಯಾಗುವವರಲ್ಲಿ ವಿದ್ಯಾವಂತರೇ ಹೆಚ್ಚು.

* ಆಮೋದ, ಆನಂದ, ಮೃಷ್ಟಾನ್ನ ಭೋಜನ, ಮನೋರಂಜನೆ ಇತ್ಯಾದಿಗಳೆಲ್ಲವೂ ಪ್ರತಿ ದಿನ ಬೇಕು. ಸದ್ವಿಚಾರ, ಸತ್ಸಂಗ, ಸದಾಚಾರ ಗಳ ವಿಚಾರ ನಂತರ ನೋಡಿದರಾಯಿತು.

* ಪ್ರತಿ ಕ್ಷಣವೂ ಸಾವು ಸಮೀಪಿಸುತ್ತಿದ್ದರೂ ಅಕಾರ್ಯಗಳಲ್ಲಿ ಮಗ್ನರಾಗಿ ಜೀವನ ವ್ಯರ್ಥ ಮಾಡಿಕೊಳ್ಳುವವರೇ ಬಹು ಮಂದಿ.

* ಅಣು-ರೇಣು-ತೃಣ-ಕಾಷ್ಠ ಗಳೆಲ್ಲದರಲ್ಲೂ ಭಗವಂಗನಿದ್ದಾನೆಂಬ ಪರಮಭಾವದ ಅಭಾವವೇ ಎಲ್ಲೆಲ್ಲೂ.

* ನುಡಿದಂತೆ ನಡೆಯದೇ ಇರುವವರೇ ಇಂದು ಮಹಾನುಭಾವರು.

                                                                                                            [ಮುಂದುವರೆಯುವುದು]