|| ಶ್ರೀ ರಾಮ ಜಯ ರಾಮ ಜಯ ಜಯ ರಾಮ ||

Tuesday, January 10, 2012

ಇಂದಿನ ದಿನವೇ ಶುಭದಿನವು..

ವೇ||ಬ್ರ||ಶ್ರೀ ಸುಬ್ರಹ್ಮಣ್ಯಂ [ಬಲತುದಿ]

 ಸಜ್ಜನರ ಮತ್ತು ಜ್ಞಾನವಂತರ ಸಾನ್ನಿಧ್ಯ ಸಿಗುವುದು ಪೂರ್ವಾಕೃತ ಸುಕೃತಗಳಿಂದಲೇ ಎಂಬುದು ನನ್ನ ನಂಬಿಕೆ. ನಾನು ನನ್ನ ಬ್ಲಾಗ್ ಗಳಲ್ಲಿ ಮತ್ತು ಇತರೆ ಮಾಸಪತ್ರಿಕೆಗಳಲ್ಲಿ ಮತ್ತು ವೃತ್ತಪತ್ರಿಕೆಗಳಲ್ಲಿ ಬರೆಯುತ್ತಿದ್ದ ಕೆಲವು ಲೇಖನಗಳ ಸಂಗ್ರಹವನ್ನು ಹೊರತರಲು ನಿಶ್ಚಯಿದಾಗ ಮುನ್ನುಡಿ ಯಾರಿಂದ ಬರೆಸಬಹುದು ಎಂಬ ಪ್ರಶ್ನೆ ಮೂಡಿತು. ನನಗೂ "ಸ್ವಯಂಪ್ರಕಾಶ" [ಹರಿಹರಪುರ ಮಠದಿಂದ ಪ್ರಕಟವಾಗುವ ಮಾಸಿಕ ಧಾರ್ಮಿಕ ಪತ್ರಿಕೆ] ಪತ್ರಿಕೆಗೂ ಸುಮಾರು 4-5 ವರ್ಷಗಳ ಅನುಬಂಧ - ನನ್ನ ಅನೇಕ ಲೇಖನಗಳು ಅದರಲ್ಲಿ ನಿಯಮಿತವಾಗಿ ಪ್ರಕಟವಾಗಿವೆ. ಹಾಗಾಗಿ ಅದರ ಗೌರವ ಸಂಪಾದಕರೂ, ವಯೋವೃದ್ಧರೂ, ಜ್ಞಾನವೃದ್ಧರೂ ಆದ ವೇ||ಬ್ರ||ಶ್ರೀ|| ಹರಿಹರಪುರ ಸುಬ್ರಹ್ಮಣ್ಯಂರವರನ್ನೇ ವಿನಂತಿಸಬಹುದೆಂದು ತೀರ್ಮಾನಿಸಿದೆ. ಆದರೆ ಪತ್ರಮುಖೇನ ಬಿಟ್ಟರೆ ಅವರ ಮುಖತ: ಭೇಟಿ ಒಮ್ಮೆಯೂ ಆಗಿದ್ದಿಲ್ಲ. ಹಾಗಾಗಿ ಅವರ ಸುಪುತ್ರರಾದ ಶ್ರೀ ಹರಿಹರಪುರ ಮಂಜುನಾಥ್ ರವರನ್ನು ದೂರವಾಣಿಯಲ್ಲಿ ಸಂಪರ್ಕಿಸಿ ನನ್ನ ಇರಾದೆ ತಿಳಿಸಿದೆ. ಅವರು ಕೂಡಲೇ ಅವರ ತೀರ್ಥರೂಪುರವರನ್ನು ಸಂಪರ್ಕಿಸಿ, ಅವರ ಅನುಮತಿ ಪಡೆದು, ಕರಡು ಕಳಿಸುವಂತೆ ತಿಳಿಸಿದರು. ಮುನ್ನುಡಿ ಸಿದ್ಧವಾದ ಮೇಲೆ ನಾನೇ ಬಂದು ಪಡೆಯುವುದಾಗಿ ತಿಳಿಸಿದ್ದೆ. ಅವರಿಂದ ಆ ಬಗ್ಗೆ ಮಾಹಿತಿ ಬಂದಕೂಡಲೇ 1.1.2012 ರಂದು ಅದರ ಪ್ರತಿಯನ್ನು ಪಡೆಯಲು ನಾನು ಬೆಂಗಳೂರಿಗೆ ಹೊರಟೆ. ಶ್ರೀ ಮಂಜುನಾಥ್ ರವರ ಮಾರ್ಗದರ್ಶನದಂತೆ ನಾನು ಅವರ ಮನೆ ತಲುಪಿದಾಗ ಅವರ ಶ್ರೀಮತಿ ಲೀಲಾ ಮಂಜುನಾಥ್ ರವರು ಆತ್ಮೀಯವಾಗಿ ಸ್ವಾಗತಿಸಿದ ಕೆಲವೇ ಕ್ಷಣಗಳಲ್ಲಿ ಶ್ರೀ ಮಂಜುನಾಥ್ ರವರು ಅವರು ತಂದೆಯವರೊಂದಿಗೆ ಬಂದರು. 95 ವರ್ಷದ ಶ್ರೀ ಸುಬ್ರಹ್ಮಣ್ಯಂ ರವರು ಯಾವುದೇ ಆಯಾಸವಿಲ್ಲದೇ ಮೊದಲನೇ ಮಹಡಿಯನ್ನು ಏರಿ ಬಂದು ಮುಗುಳ್ನಕ್ಕಾಗ ನನಗಾದ ಆನಂದ ಅನಂತ. ಬಲು ಅಭಿಮಾನದಿಂದ ಬರೆದ ಮುನ್ನುಡಿಯನ್ನು ನನ್ನ ಕೈಗಿರಿಸಿ ಆಶೀರ್ವದಿಸಿದಾಗ ಧನ್ಯತೆಯ ಭಾವ ನನ್ನದಾಗಿತ್ತು. ಅವರ ಬಗ್ಗೆ ನಾನು ಏನೇ ಬರೆದರೂ ಅಲ್ಪವೇ. ಅವರ ಆತ್ಮ ಚರಿತ್ರೆ : "ಗಂಗಾ ತೀರದ ಬದುಕು" ಎಲ್ಲರೂ ಓದಿ ಆಸ್ವಾದಿಸಲೇಬೇಕಾದ ಅನುಭವಾಮೃತ. ನಿಷ್ಠೆ, ಪ್ರಾಮಾಣಿಕತೆ, ಶ್ರದ್ಧೆ, ಧೈರ್ಯ, ಗುರುಭಕ್ತಿ, ದೈವಭಕ್ತಿ, ವಿನಯಶೀಲತೆ ಮುಂತಾದ ಉನ್ನತ ಗುಣಗಳು ವ್ಯಕ್ತಿಯನ್ನು ಯಾವ ಮಟ್ಟಕ್ಕೇರಿಸಬಹುದೆಂಬುದಕ್ಕೇ ಶ್ರೀ ಸುಬ್ರಹ್ಮಣ್ಯಂರವರೇ ಜೀವಂತ ಸಾಕ್ಷಿ.  ಅವರ ಸಾನ್ನಿಧ್ಯ ಮತ್ತು ಆಶೀರ್ವಾದ ಲಭಿಸಿದ್ದು ನನ್ನ ಪುಣ್ಯವೇ ಸರಿ. ಅವರ ಅಭಿಮಾನಕ್ಕೆ ಮತ್ತು ಆಶಿರ್ವಾದಕ್ಕೆ ನನ್ನ ಶತಕೋಟಿ ನಮನಗಳು.

ಪ್ರೊ.ಜಿ.ವೆಂಕಟಸುಬ್ಬಯ್ಯ
ಪ್ರೊ.ಜಿವಿ. [ನನ್ನ ಕರಡು ವೀಕ್ಷಣೆಯಲ್ಲಿ]

ನಾನು ಕನ್ನಡದಲ್ಲಿ ಕೆಲವು ಪ್ರಾಸಬದ್ಧ ಪದಗಳ ಸಂಗ್ರಹ ಪ್ರಾರಂಭಿಸಿದ್ದೆ. ಅದರ ಬಗ್ಗೆ 'ನಿಘಂಟು ಬ್ರಹ್ಮ' ಎಂದೇ ಖ್ಯಾತಿಯಾದ ಪ್ರೊ.ಜಿ.ವೆಂಕಟಸುಬ್ಬಯ್ಯನವರನ್ನೊಮ್ಮೆ ಸಂದರ್ಶಿಸಿ ಮಾರ್ಗದರ್ಶನ ಪಡೆಯಬೇಕೆಂಬ ಇಚ್ಛೆಯೂ ಇತ್ತು.  ಆದರೆ ಅವರ ಪರಿಚಯವಿರಲಿಲ್ಲ.  ಶ್ರೀ ಸುಬ್ರಹ್ಮಣ್ಯಂರವರನ್ನು ನೋಡಲು ಹೊರಟಾಗ ಅವರು ನನಗೆ ವಿಶ್ವಾಸಪೂರ್ವಕವಾಗಿ ಕಳುಹಿಸಿದ್ದ ಅವರ ಆತ್ಮಚರಿತ್ರೆ : "ಗಂಗಾ ತೀರದ ಬದುಕು" ಪುಸ್ತಕವನ್ನು ರೈಲಿನಲ್ಲಿ ಓದುತ್ತಾ ಸಾಗುತ್ತಿದ್ದೆ. ಬೆಂಗಳೂರು ಸಮೀಪಿಸುವ ಹೊತ್ತಿಗೆ ನಾನು ಪುಸ್ತಕದ ಅಂತಿಮ ಭಾಗಕ್ಕೆ ಬಂದಿದ್ದೆ. ಅಲ್ಲಿ ಅವರು ತಮ್ಮ ಅನೇಕ ವಿಶ್ವಾಸಿಗರ ಪರಿಚಯ ಮಾಡುವಲ್ಲಿ ಪ್ರೊ.ಜಿ.ವೆಂಕಟಸುಬ್ಬಯ್ಯನವರ ಬಗ್ಗೆಯೂ ಪ್ರಸ್ತಾಪಿಸಿದ್ದರು. ಅದನ್ನು ನೋಡಿ ನನಗೆ ನಿಧಿಯೇ ಸಿಕ್ಕಷ್ಟು ಸಂತಸವಾಯಿತು. ಅದೃಷ್ಟವಶಾತ್, ನಾನು ಪದಸಂಗ್ರಹದ ಕರಡನ್ನೂ ಒಯ್ದಿದ್ದೆ. ವಿಷಯ ತಿಳಿದ ಶ್ರೀ ಸುಬ್ರಹ್ಮಣ್ಯಂ ರವರು ಕೂಡಲೇ ನನ್ನೊಡನೆ ಪ್ರೊ.ಜಿ.ವಿ.ಯವರನ್ನು ಭೇಟಿಯಾಗಲು ಹೊರಟೇ ಬಿಟ್ಟರು! ಅವರ ಪುತ್ರ ಶ್ರೀ ಹ.ಮಂಜುನಾಥ್ ರವರು ದೂರವಾಣಿಯಲ್ಲಿ ಪ್ರೊ.ಜಿ.ವಿ.ಯವರನ್ನು ಸಂಪರ್ಕಿಸಿದಾಗ ಅವರೂ ಸಹ ಕೂಡಲೇ ಬರಲು ತಿಳಿಸಿದರು. ಇದನ್ನು ಅದೃಷ್ಟವೆನ್ನಲೇ, ದೈವಕೃಪೆಯೆನ್ನಲೇ? ಹಾಗಾಗಿ ಅವರೊಂದಿಗೆ ಪ್ರೊ.ಜಿ.ವಿ.ಯವರನ್ನು ಭೇಟಿಯಾಗಲು ಹೊರಟೆವು. ಅವರ ಮನೆ ತಲುಪಿದಾಗ ಸ್ವತಃ ಪ್ರೊ.ಜಿ.ವಿಯವರೇ [98 ವರ್ಷ] ಬಾಗಿಲು ತೆಗೆದು ಸ್ವಾಗತಿಸಿದರು. ನಾನು ಕನ್ನಡದಲ್ಲಿ ಯಾವುದೇ ಅಧಿಕೃತ ವ್ಯಾಸಂಗ ಮಾಡಿಲ್ಲವೆಂದೂ [ಕೇವಲ ಬಿ.ಕಾಂ.ಪದವೀಧರ], ಕೇವಲ ಹವ್ಯಾಸಕ್ಕಾಗಿ ಈ ಪದಸಂಗ್ರಹ

ಪ್ರೊ.ಜಿ.ವಿ.ಯವರಿಗೆ ಗೌರವಾರ್ಪಣೆ
ಮಾಡುತ್ತಿರುವುದಾಗಿಯೂ ಅವರಿಗೆ ವಿನಯಪೂರ್ವಕವಾಗಿ ತಿಳಿಸಿದೆ. ಅವರೆಂದರು: "ಕನ್ನಡದ ಕೆಲಸ ಮಾಡಲಿಕ್ಕೆ ಪದವಿ ಬೇಕಾಗಿಲ್ಲ; ಮನಸ್ಸಿದ್ದರಷ್ಟೇ ಸಾಕು" ಎಂದು ಹೇಳಿ ನಾನು ಸಿದ್ಧಪಡಿಸಿದ್ದ ಕರಡನ್ನು ನೋಡಿ, ಕೆಲವು ಸಲಹೆ-ಸೂಚನೆಗಳನ್ನು ನೀಡಿದರು. ಕರಡನ್ನು ಅವರ ಕೈಗೆ ಕೊಟ್ಟೊಡನೆಯೇ ತಮ್ಮ ಪಕ್ಕದಲ್ಲಿಯೇ ಕುಳಿತುಕೊಳ್ಳಲು ಹೇಳಿ, ಆತ್ಮೀಯವಾಗಿ ಸ್ಫಂದಿಸಿದ ಅವರ ಬಗ್ಗೆ ಏನು ಹೆಚ್ಚಿಗೆ ಹೇಳಲಿ?  ಅವರ ಆರೋಗ್ಯ ಮತ್ತು ಚಟುವಟಿಕೆಯ ರಹಸ್ಯವೇನೆಂದು ಕೇಳಿದಾಗ ಅವರು ಹೇಳಿದ್ದಿಷ್ಟೇ: "ನಾನೇನೂ ಹೊಸದಾಗಿ ಮಾಡಿಲ್ಲ. ನನ್ನ ತಂದೆ-ತಾಯಿಯವರು ಹೇಗೆ ಬದುಕಿದರೋ ಅದೇ ರೀತಿಯಲ್ಲಿ ಬದುಕುತ್ತಿದ್ದೇನೆ" ಎಂದಷ್ಟೇ ಮಾರ್ಮಿಕವಾಗಿ ನುಡಿದರು. ಈ ಈರ್ವ ಸಜ್ಜನರೊಂದಿಗೆ ಕಳೆದ ಸುಮಾರು 1-2 ಗಂಟೆಗಳ ಕಾಲ ನಿಜಕ್ಕೂ ನನ್ನ ಜೀವನದ ಅಮೂಲ್ಯ ಕ್ಷಣಗಳು. ಆ ಸಾನ್ನಿಧ್ಯದಲ್ಲಿ ನಾನನುಭವಿಸಿದ ಸುಪ್ತ-ಚೇತನಾನುಭವ ಅವರ್ಣನೀಯ ಮತ್ತು ಅವಿಸ್ಮರಣೀಯ.

ಇನ್ನು ಈರ್ವರ ಭೇಟಿಗೆ ಮೂಲ ಕಾರಣಕರ್ತರು ಶ್ರೀ ಹ.ಮಂಜುನಾಥ್ ಮತ್ತು ಅವರ  ಶ್ರೀಮತಿ ಲೀಲಾ ಮಂಜುನಾಥ್. ದಂಪತಿಗಳೀರ್ವರೂ ಸಾಹಿತಿಗಳು ಮತ್ತು ಪ್ರಕಾಶಕರು [ಮಾಲವಿಕ ಪ್ರಕಾಶನ, ಬೆಂಗಳೂರು]. ಅವರ ಅಭಿಮಾನಕ್ಕೆ ಮತ್ತು ಆತ್ಮೀಯತೆಗೆ ನಾನು ಚಿರಋಣಿ. ಶ್ರೀ ಮಂಜುನಾಥ್ ರವರು ಈ ಸುಂದರ ಕ್ಷಣಗಳನ್ನು ತಮ್ಮ ಮೊಬೈಲ್ ಕ್ಯಾಮೆರಾದಲ್ಲಿ ಸೆರೆಹಿಡಿದು ಈ ಕ್ಷಣಗಳನ್ನು ಹಿಡಿದಿಟ್ಟು ಬೃಹದುಪಕಾರ ಮಾಡಿದ್ದಾರೆ. 
ಸಂದರ್ಶನದ ಸೂತ್ರಧಾರ: ಶ್ರೀ ಹ.ಸು.ಮಂಜುನಾಥ್

ಅವರ ಶ್ರೀಮತಿ ಲೀಲಾ ಮಂಜುನಾಥ್ ಬಗ್ಗೆ ಕೂಡಾ ಒಂದೆರಡು ಮಾತುಗಳನ್ನು ಹೇಳಲೇಬೇಕು. ಅವರು ಕೆಳದಿ ಕವಿ ಮನೆತನದ ದೂರದ ಬಂಧುಗಳೂ ಎನ್ನುವುದು ಮತ್ತೊಂದು ವಿಶೇಷ. ಪತಿಯಂತೆಯೇ ಸಾಹಿತ್ಯದಲ್ಲಿ ತೊಡಗಿಸಿಕೊಂಡಿರುವ ಇವರು ಪಾಕಶಾಸ್ತ್ರಕ್ಕೆ ಸಂಬಂಧಪಟ್ಟಂತೆ ಅನೇಕ ಉಪಯುಕ್ತ ಪುಸ್ತಕಗಳನ್ನು ಹೊರತಂದಿದ್ದಾರೆ. ಕೆಲವು ಪುಸ್ತಕಗಳು ಮರುಮುದ್ರಣಗಳನ್ನೂ ಕಂಡಿರುವುದು ಈ ಪುಸ್ತಕಗಳ ಜನಪ್ರಿಯತೆಗೆ ಸಾಕ್ಷಿ.  ಈ ಸಂದರ್ಭದಲ್ಲಿ ಅವರ ಸಹಾಯವನ್ನೂ ಸಹಾ ನಾನು ನೆನೆಯಲೇಬೇಕು.

ಹೊಸ ವರುಷವನ್ನು ಹೊಸ ಹರುಷದೊಂದಿಗೆ, ಹೊಸ ಉತ್ಸಾಹದೊಂದಿಗೆ ಕಾಲಿಡಲು ಅನುವು ಮಾಡಿಕೊಟ್ಟ ಈ ಎಲ್ಲ ಸಜ್ಜನರಿಗೂ ಇದೋ ನನ್ನೀ ನುಡಿನಮನಗಳು.





2 comments:

  1. ನಿಮ್ಮ ಶ್ರಮವೇನು ಕಮ್ಮಿಯೇ ಸುರೇಶ್ ? ನಿಮ್ಮ ಶ್ರಮಕ್ಕೆ ಸೂಕ್ತವಾದ ಬೆಲೆ! ಹಿರಿಯ ಚೇತನಗಳಿಗೆ ಹೃದಯಪೂರ್ವಕ ನಮನಗಳು.

    ReplyDelete
  2. ಧನ್ಯವಾದಗಳು ಶ್ರೀದರ್, ನಿಮ್ಮಭಿಮಾನದ ನುಡಿಗಳಿಗೆ.

    ReplyDelete