|| ಶ್ರೀ ರಾಮ ಜಯ ರಾಮ ಜಯ ಜಯ ರಾಮ ||

Thursday, November 18, 2010

ಶೂನ್ಯದಿಂದ ಶೂನ್ಯದೆಡೆಗೆ

ನಾವು ಎಲ್ಲಿದ್ದೆವು?  ಎಲ್ಲಿಂದ ಬಂದೆವು?   ಹೇಗೆ ಬಂದೆವು? ಎಂಬೀ ಪ್ರಶ್ನೆಗಳು ಜೀವನದಲ್ಲಿ   ನಮ್ಮನ್ನೊಮ್ಮೆಯಾದರೂ ಕಾಡದೇ ಇರಲಾರವು.  ಈ ದೇಹ ಪಂಚ ಭೂತಗಳಿಂದ ಸೃಷ್ಟಿಯಾಯಿತೆಂಬುದು ಸಾಮಾನ್ಯ ನಂಬಿಕೆ. ನಾವು ಎಲ್ಲಿದ್ದೆವು? ಹಿಂದೆ ಏನಾಗಿದ್ದೆವು? ಎಂಬ ಪ್ರಶ್ನೆಗಳಿಗೆ ಮಾತ್ರ ಉತ್ತರ ಇನ್ನೂ ನಿಗೂಢವೇ. ಕೆಲವು ಪೂರ್ವಜನ್ಮದ ನೆನಪನ್ನು ಈ ಜನ್ಮದಲ್ಲಿ ತೋರಿದಂತಹ ಮತ್ತು ಅನುಭವಿಸಿದಂತಹ ಕೆಲವೇ ಕೆಲವು ಪ್ರಕರಣಗಳನ್ನು ಬಿಟ್ಟರೆ, ಆ ಬಗ್ಗೆ ಚೆಲ್ಲಿರುವ ಬೆಳಕು ಏನಕ್ಕೂ ಸಾಲದು. ಅದೇ ರೀತಿ, ಸಾವಿನ ನಂತರ ಮುಂದಿನ ನಮ್ಮ ’posting’ ಕೂಡಾ ನಿಗೂಢ - ಅನಿಶ್ಚಿತ. ಉಸಿರಾಡುವ ತನಕ ಈ ದೇಹ ತನ್ನ ಚಟುವಟಿಕೆಗಳನ್ನು ನಿರಂತರ ಸಾವಕಾಶವಾಗಿ ಮಾಡುತ್ತಿರುವ ತನಕ, ನಾವು ಜೀವಿತವಿದ್ದೇವೆ ಎನ್ನವುದೇ ನಿತ್ಯಾನುಭವ - ನಿತ್ಯ ಸತ್ಯ. ಅದುವೇ ವಾಸ್ತವ.
    ಹಿಂದಿನದು ಅರಿಯೆ - ಮುಂದಿನದು ತಿಳಿಯೆ - ಎಂಬುದು ಸೂರ್ಯನ ಬೆಳಕಷ್ಟೇ ನಿಚ್ಚಳವಾದಾಗ, ನಾವು ಅನುಭವಿಸಿ ಬಾಳುತ್ತಿರುವ ಬಾಳು - ಅಂದರೆ ಪ್ರಸ್ತುತ ಜೀವನ - ಸುಂದರವಾಗಿರಬೇಕು; ಅರ್ಥಪೂರ್ಣವಾಗಿರಬೇಕು; ಇತರರಿಗೆ ಸಹನೀಯ-ಸಹಕಾರಿಯಾಗಿರಬೇಕು ಎನ್ನವುದು ಸ್ವಸ್ಥ ಮಾನವರೆನಿಸಿಕೊಂಡವರೆಲ್ಲರ ಬಯಕೆ. ಬಾಳು ಅನಿಶ್ಚಿತ - ಸಾವು ನಿಶ್ಚಿತ. ಬದುಕಿನ ಅನಿಶ್ಚಿತತೆಯ ಅವಿರತ ನೆನಪು ಬದುಕನ್ನು ಹೆಚ್ಚು ಸುಂದರವಾಗಿರಿಸಿಕೊಳ್ಳಲು ತುಂಬಾ ಸಹಕಾರಿಯಾದೀತು. ಎಂತಲೇ ಬದುಕಿನ ಪ್ರತಿ ಹಂತದಲ್ಲಿ (ಬಾಲ್ಯ, ಯೌವನ, ಗೃಹಸ್ಥಾಶ್ರಮ ಮತ್ತು ವಾನಪ್ರಸ್ಥಾಶ್ರಮ) ನಾವು ಹೇಗಿದ್ದರೆ ಚೆನ್ನ ಎಂಬುದನ್ನೊಮ್ಮೆ ಮೆಲುಕು ಹಾಕಬಹುದಲ್ಲವೇ? ಪ್ರಪಂಚ ಬರೀ ಸಂಕಟ, ನರಳಾಟಗಳಿಂದ ತುಂಬಿದ ಸ್ಥಳವಲ್ಲ. ಇದು ಸುಂದರವಾದ ಮತ್ತು ಶಾಂತವಾದ ಸನ್ನಿವೇಶದಲ್ಲಿ ಜೀವನೋನ್ನತಿಗೆ ಹಾಗೂ ಸದ್ಗತಿ ಪ್ರಾಪ್ತಿಗೆ ಅನುವು ಮಾಡಿಕೊಡುವಂತಹ ಪರಮಾತ್ಮನ ಶಾಲೆ. ಆದುದರಿಂದ, ಜೀವನದ ಪ್ರತಿಯೊಂದು ಘಟ್ಟವನ್ನೂ ಅನುಭವಿಸಿ ಅದರ ಸಾರವನ್ನು ಆತ್ಮೋದ್ಧಾರಕ್ಕೆ ಸೋಪಾನ ಮಾಡಿಕೊಂಡಾಗ ಜೀವನ ನಿಜಕ್ಕೂ ಸುಂದರವಾದೀತು.

    ಬಾಲ್ಯಾವಸ್ಥೆ (ಬುದ್ದಿ ಬರುವವರೆಗೆ) ಬಹುಶ: ಮನುಷ್ಯ ನಿಶ್ಚಿಂತತೆಯಿಂದ, ಯಾವುದೇ ಪೂರ್ವಾಪರ ವಿಚಾರಗಳಿಂದ ಹೊರತಾಗಿ ಮತ್ತು ರಾಗ-ದ್ವೇಷಗಳ ಛಾಯೆಯಿಲ್ಲದೇ ಇರುವ ಏಕೈಕ ಘಟ್ಟ; ಬಹುಶ: ನಮ್ಮ ಜೀವನದ ’only colourful and golder period!’.  ಎಂತಲೇ ಮಕ್ಕಳನ್ನು ದೇವರು - ದೇವರ ಸಮಾನರೆನ್ನುವುದು. ದೈವತ್ವಕ್ಕೆ ಮತ್ತು ಮುಗ್ಧತೆಗೆ ಮತ್ತೊಂದು ಹೆಸರೇ ಏನೂ ಅರಿಯದ ಈ ಮಕ್ಕಳು. ತಂದೆ-ತಾಯಿಯರ ಬೆಚ್ಚಗಿನ ಆಸರೆಯಲ್ಲಿ ಅಜ್ಜ-ಅಜ್ಜಿಯರ ಪ್ರೀತಿಯ ಝರಿಯಲ್ಲಿ ಹಾಗೂ ನೆರೆ-ಹೊರೆ ಪುಟಾಣಿಗಳ ಸಹಯೋಗದಲ್ಲಿ ಬಾಲ್ಯಾವಸ್ಥೆ ಬಲುಬೇಗ ಕಳೆದುಬಿಡುತ್ತದೆ. ಸ್ವ-ಬುದ್ಧಿ ಮತ್ತು ಸ್ವ-ಚಿಂತನಾ ಶಕ್ತಿಗಳು ಈ ಹಂತದಲ್ಲಿ ಇನ್ನೂ ಪೂರ್ಣವಾಗಿ ವಿಕಸನ ಆಗದ ಕಾರಣ ವ್ಯಕ್ತಿ ತಾನಾಗಿಯೇ (ಸ್ವತಂತ್ರನಾಗಿ) ಏನೂ ಮಾಡಲಾರನು.
    ಬಾಲ್ಯ ಕಳೆದು ಶಾಲೆಗೆ ಸೇರಿದೊಡನೆಯೇ ಮನುಷ್ಯ ಜೀವನದ ಜಂಜಾಟದ ಪರಿ ಆರಂಭವಾಯಿತೆಂದೇ ಅರ್ಥ - ಅಂದರೆ ವಿದ್ಯಾರ್ಥಿ ದೆಸೆ. ಹಿಂದೆ ಗುರುಕುಲ ಪದ್ಧತಿಯಿದ್ದು ಈಗ ಸಾಕಷ್ಟು ವಿಕಸಿತವಾದ ಮತ್ತು ವಿಸ್ತೃತವಾದ ಶೈಕ್ಷಣಿಕ ವ್ಯವಸ್ಥೆ ಇದೆ. ಆದರೆ ಈ ಶಿಕ್ಷಣ ಪದ್ಧತಿ ಎಷ್ಟರ ಮಟ್ಟಿಗೆ ವ್ಯಕ್ತಿ ವಿಕಾಸಕ್ಕೆ ಮತ್ತು ಮೌಲ್ಯವರ್ಧನೆಗೆ ಪೂರಕವಾಗಿದೆ ಎಂಬುದು ಚರ್ಚಾಸ್ಪದ ವಿಚಾರ. ’ಬೆಳೆಯುವ ಸಿರಿ ಮೊಳಕೆಯಲ್ಲಿ’ ಎಂಬಂತೆ ಮುಂದೆ ನಾವು ಏನಾಗುತ್ತೇವೆ ಎಂಬುವ ಎಲ್ಲಾ ಸೂಚನೆಗಳೂ ಈ ಘಟ್ಟದಲ್ಲೇ ಸೂಕ್ಷ್ಮವಾಗಿ ಗೋಚರವಾಗುತ್ತವೆ. ವಿದ್ಯಾರ್ಥಿ ಜೀವನ ಹೇಗಿರಬೇಕು? ವಿದ್ಯಾರ್ಥಿ ಹೇಗಿರಬೇಕು? ಎಂಬ ಬಗ್ಗೆ ಈಗ ಸಾಕಷ್ಟು ಮಾಹಿತಿ ಇದೆ. ಮಾರ್ಗಧರ್ಶಕರೂ ಇದ್ದಾರೆ. ಆದರೆ ಈಗಿನ ವಿದ್ಯಾಭ್ಯಾಸ ಕ್ರಮ ’knowledge-based’ ಅಗಿದೆಯೇ ಹೊರತು ಅದರ ಒತ್ತು ವ್ಯಕ್ತಿ-ವಿಕಸನ ಆಗಿಲ್ಲ. ಒಂದು ರೀತಿ ನೋಡಿದರೆ ಈ ಆಧುನಿಕ ಶಿಕ್ಷಣ ಅರ್ಥಹೀನವಾದದ್ದು. ಅದು ಹಣ ಗಳಿಸುವ ಬಗ್ಗೆ (ಹಣ ಗಳಿಕೆ ಯಾವ ರೀತಿಯಿಂದ ಎನ್ನುವ ಬಗ್ಗೆ ಲಕ್ಷ್ಯವೇ ಇಲ್ಲ), ಮಾಹಿತಿ ಸಂಗ್ರಹಿಸುವ ಬಗ್ಗೆ ಒತ್ತು ನೀಡಿ, ಉತ್ತಮ ನೈತಿಕತೆ, ನಡತೆಗಳ ಬಗ್ಗೆ ಚಕಾರವೆತ್ತುವುದಿಲ್ಲ. ಅರ್ಥಾತ್ ಸಾಸಿವೆಯಲ್ಲಿ ಸಾಗರವನ್ನು ಹಿಡಿದಿಡುವ ವ್ಯರ್ಥ ಪ್ರಯತ್ನ. ನಮ್ಮ ತಲೆ ಬರೀ ಮಾಹಿತಿಗಳ ಆಕರವಷ್ಟೇ ಆದರೆ ಸಾಲದು; ಮಾನವೀಯತೆ ಮತ್ತು ಸುಸಂಸ್ಕೃತಿಯನ್ನು ಮೆರೆಯುವ ಮೆದುಳೂ ಆಗಬೇಕು. ಉತ್ತಮ ಸಂಸ್ಕಾರ, ಉತ್ತಮ ನಡೆ-ನುಡಿ, ವಿಧೇಯತೆ, ಗುರು-ಹಿರಿಯರಲ್ಲಿ ಗೌರವ, ಓದಿನಲ್ಲಿ ಶ್ರದ್ಧಾಭಕ್ತಿ, ಸಹಪಾಠಿಗಳಲ್ಲಿ ಪ್ರೇಮ-ಸಹಕಾರ, ಅವರ ನೋವು-ನಲಿವುಗಳಿಗೆ ಸ್ಪಂದಿಸುವ ಪ್ರಜ್ಞೆ ಮುಂತಾದುವುಗಳನ್ನು ಬೆಳೆಸುವುದು, ಪೋಷಿಸುವುದು ವ್ಯವಸ್ಥೆಯ ಮತ್ತು ಪೋಷಕರ ಜವಾಬ್ದಾರಿಯಾದರೂ ಕೂಡ. ಮಕ್ಕಳೂ ಆ ದಿಸೆಯಲ್ಲಿ ಸಕಾರಾತ್ಮಕವಾಗಿ ಸ್ಪಂದಿಸಿದಾಗ, ಅವರ ವಿದ್ಯಾರ್ಥಿ ಜೀವನ ಸಾರ್ಥಕ ಕಂಡೀತು. ೪೦ ವರ್ಷ ದಾಟಿದ ನಂತರ ನಾನು ಎಸ್.ಎಸ್.ಎಲ್.ಸಿ.ಯಲ್ಲಿ ಸ್ವಲ್ಪ ಹೆಚ್ಚು ಅಂಕ ಪಡೆದಿದ್ದರೆ ಚೆನ್ನಾಗಿರುತ್ತಿತ್ತು ಅಥವಾ ಇನ್ನೂ ಸ್ವಲ್ಪ ಚೆನ್ನಾಗಿ ಓದಿದ್ದರೆ ಚೆನ್ನಾಗಿರುತ್ತಿತ್ತು ಎನ್ನುವ ಪಶ್ಚಾತ್ತಾಪಕ್ಕೆ ಅವಕಾಶವಿಲ್ಲದಾದೀತು!
    ರೆಕ್ಕೆ-ಪುಕ್ಕ ಬಂದೊಡನೆ ಮರಿಹಕ್ಕಿ ಗೂಡಿನಿಂದ ಹಾರಿ ಹೋಗಿ ಬಿಡುತ್ತದೆ; ತಂದೆ-ತಾಯಿಗಳೆಂಬ ಬಂಧವನ್ನು ಕೂಡ ಕಳಚಿಕೊಂಡು. ತನ್ನ ಸ್ವಂತ ಶ್ರಮದ ಮೇಲೆ ತನ್ನ ಹೊಸ ಜೀವನ ಆರಂಭಿಸಿಯೇ ಬಿಡುತ್ತದೆ. ಅದೇ ರೀತಿ, ವಿದ್ಯಾಭ್ಯಾಸ ಮುಗಿದ ಕೂಡಲೇ ಸೂಕ್ತ ಉದ್ಯೋಗ ಬೇಟೆ ಪ್ರಾರಂಭ. ಏಕೆಂದರೆ ಇಲ್ಲಿ ದುಡಿಯುವವರಿಗೆ (ಸಂಪಾದಿಸುವವರಿಗೆ) ಮಾತ್ರ ಮನ್ನಣೆ.  ದುಡಿಯದ ಗಂಡನನ್ನು ಹೆಂಡತಿ ಕೂಡ ಮೂಲೆಗುಂಪು ಮಾಡುವಳು. ಈಗಿನ ಕಾಲದಲ್ಲಿ ಓದಿಗೆ ತಕ್ಕಂತೆ, ಪ್ರತಿಭೆಗೆ ತಕ್ಕಂತೆ ಉದ್ಯೋಗ ಅನೇಕ ಬಾರಿ ಅನೇಕರಿಗೆ ಸಿಗದು. ಓದಿಗೂ-ಉದ್ಯೋಗಕ್ಕೂ ಅನೇಕ ಕಡೆ ಸಾಮ್ಯವೇ ಇರದು. ಆದಾಗ್ಯೂ, ಪಾಲಿಗೆ ಬಂದ ಕರ್ತವ್ಯವನ್ನು ನಿಸ್ಪೃಹವಾಗಿ, ಪ್ರಾಮಾಣಿಕವಾಗಿ ಹಾಗೂ ದಕ್ಷತೆಯಿಂದ ಮಾಡುವುದು ಮೊದಲು ಎಲ್ಲರ ಧ್ಯೇಯವಾಕ್ಯವಾಗಬೇಕು. ಈ ಪ್ರಪಂಚವೆಂಬ ನಾಟಕ ಶಾಲೆಯಲ್ಲಿ ಭಗವಂತ ನಮಗೆ ಕೊಟ್ಟಿರುವ ಪಾತ್ರವನ್ನು ಯಶಸ್ವಿಯಾಗಿ ನಿರ್ವಹಿಸಿದಾಗಲೇ ನಾಟಕಕ್ಕೂ ಮತ್ತು ಕಲಾಕಾರನಿಗೂ ಸಾರ್ಥಕ್ಯ. ಸಂಪಾದಿಸಿದ ಹಣದ ನಿರ್ವಹಣೆ ಕೂಡ ಅಷ್ಟೇ ಪ್ರಾಮುಖ್ಯವಾದುದು. ಯೌವನ + ಹಣ - ಬಹಳ ತುಂಟ ಜೊತೆಗಾರರು. ಕ್ಷಣದಲ್ಲಿ ಹಾದಿ ತಪ್ಪಿಸಿ, ಅರಿವಾಗುವ ಮುಂಚೆಯೇ   ಹಳ್ಳಕ್ಕೆ ತಳ್ಳುವುದರಲ್ಲಿ ನಿಸ್ಸೀಮರು. ವೈವಾಹಿಕ ಜೀವನಕ್ಕೆ ಹಾಗೂ ಮುಂದೆ ನಿವೃತ್ತಿ ಜೀವನಕ್ಕೆ ನೆರವಾಗುವಂತೆ ಸೂಕ್ತ ವ್ಯವಸ್ಥೆಯನ್ನು ಮಾಡಿ, ದುಶ್ಚಟಗಳಿಗೆ ಬಲಿ ಬೀಳದೇ, ಸಮಾಜದ ನಾಲ್ಕು ಜನ ಮೆಚ್ಚುವ ಜೀವನ ಶೈಲಿ ರೂಢಿಸಿಕೊಳ್ಳಬೇಕು. ಸ್ವ-ಪ್ರಯತ್ನ, ಸ್ವ-ಸಹಾಯ ಮಂತ್ರವಾಗಿ ಇತರರ ಮುಂದೆ ಕೈ ಚಾಚುವ ಪರಿ ತ್ಯಜಿಸಿ ಬಾಳುವ ಬಾಳೇ ನಿಜವಾದ ಬಾಳು.
ಉದ್ಯೋಗ ಸಿಕ್ಕ ಮೇಲೆ ಜೀವನ ಸಂಗಾತಿ ಬಯಕೆ;  ವಿವಾಹ - ಮಡದಿ - ಮಕ್ಕಳು. ಎಲ್ಲಾ ಹೊಸತು. ಎಲ್ಲೆಡೆ ಸಂತಸ, ಸಂಭ್ರಮ. ಇಡೀ ಪ್ರಪಂಚವೇ ಒಂದು ಸುಂದರ ತಾಣ. ದಿನ ಕಳೆದಂತೆ, ಮಕ್ಕಳು ದೊಡ್ಡವರಾದಂತೆ ಸಂಸಾರದ ನಿಜವಾದ ಜಂಜಾಟದ ಅರಿವು. ಮಕ್ಕಳನ್ನು ಸರಿದಾರಿಯಲ್ಲಿ ಮುನ್ನಡೆಸುವುದು ತಂದೆ-ತಾಯಿಯರ ಒಂದು ಗುರುತರ ಕರ್ತವ್ಯ. ಅತ್ಯಂತ ಕಲುಷಿತಗೊಂಡಿರುವ ಇಂದಿನ ಸಮಾಜದಲ್ಲಿ ಪೋಷಕರೆ ಮಕ್ಕಳಿಗೆ ನಿಜವಾದ ’role-model’ ಗಳು. ಉತ್ತಮ ಸಂಸ್ಕಾರ, ಉತ್ತಮ ನಡವಳಿಕೆ, ಗುರು-ಹಿರಿಯರಲ್ಲಿ ಭಕ್ತಿ-ಭಾವನೆ, ವಂಶದ ಆಚರಣೆಗಳ ಬಗ್ಗೆ, ಕಟ್ಟು ಪಾಡುಗಳ ಬಗ್ಗೆ ಹಾಗೂ ಹಿರಿಯರ ಬಗ್ಗೆ ಮಾಹಿತಿ ಮುಂತಾದವುಗಳನ್ನು ನೀಡುವುದು ಹಿರಿಯರ ಆದ್ಯ ಕರ್ತವ್ಯ. ನಾವು ಸಮಾಜಕ್ಕೆ ಏನನ್ನು ನೀಡದಿದ್ದರೂ, ಮಾಡದಿದ್ದರೂ ಪರವಾಗಿಲ್ಲ - ಉತ್ತಮ ನಾಗರೀಕರನ್ನು ಸಮಾಜಕ್ಕೆ (ನಮ್ಮ ಮಕ್ಕಳ ರೂಪದಲ್ಲಿ) ನೀಡಿ - ಅದಕ್ಕಿಂತ ಬೇರೆ ಸಂತೃಪ್ತಿ ಮತ್ತು ಸಾಧನೆ ಮತ್ತೊಂದಿಲ್ಲ. ಸುಖೀ ಮತ್ತು ಸಂತೃಪ್ತ ಸಂಸಾರ ನಮ್ಮೆಲ್ಲರ ಗುರಿಯಾಗಲಿ. ಗೃಹಸ್ಥಾಶ್ರಮದ ಸಾರ್ಥಕತೆ ಬಗ್ಗೆ ಚಾಣಕ್ಯನ ಈ ನೀತಿ ಮಾತು ಇಲ್ಲಿ ಪ್ರಸ್ತುತ:

ಸಾನಂದಂ ಸದನಂ ಸುತಾಶ್ಚ ಸುಧಿಯ: ಕಾಂತಾ ನ ದುರ್ಭಾಷಿಣೀ
ಸನ್ಮಿತ್ರಂ ಸುಧನಂ ಸ್ವಯೋಪಿತಿ ರತಿ: ಆಜ್ಞಾಪರಾ: ಸೇವಕಾ: |
ಆತಿಥ್ಯಂ ಶಿವಪೂಜನಂ ಪ್ರತಿದಿನಂ ಮಿಷ್ಟಾನ್ನಪಾನಂ ಗೃಹೇ
ಸಾಧೋ: ಸಂಗಮುಪಾಸನೇ ಹಿ ಸತತಂ ಧನ್ಯೋ ಗೃಹಸ್ಥಾಶ್ರಮ: ||


[ಆನಂದ ತುಂಬಿದ ಮನೆ, ಬುದ್ಧಿವಂತರಾದ ಮಕ್ಕಳು, ಎದುರು ವಾದಿಸದ ಪತ್ನಿ, ಹಿತೈಷಿಗಳಾದ ಸ್ನೇಹಿತರು, ಧರ್ಮ ಮೂಲದಿಂದ ಸಂಪಾದಿಸಿದ ಧನ, ಸ್ವಪತ್ನಿಯಲ್ಲಿ ನಲಿಯುವಿಕೆ, ಆಜ್ಞೆಯನ್ನು ಮೀರದ ಸೇವಕರು, ಅತಿಥಿ ಸತ್ಕಾರ, ಪ್ರತಿ ನಿತ್ಯ ಭಗವದಾರಾಧನೆ, ಇಷ್ಟವಾದ ಅನ್ನ ಪಾನಾದಿಗಳು, ಮನೆಗೆ ಸದಾ ಸಾಧು-ಸಂತರು ಬಂದು ಹೋಗುತ್ತಿರುವುದು - ಹೀಗೆ ಇದ್ದಾಗ ಗೃಹಸ್ಥಾಶ್ರಮವು ಧನ್ಯವಾಗುತ್ತದೆ].

    ಸುಂದರವಾದ ಗೃಹಸ್ಥಾಶ್ರಮದ ಸವಿ ಇನ್ನೂ ಸವಿಯುತ್ತಿರುವಾಗಲೇ ನಮಗೇ ತಿಳಿಯದಂತೆ ವಯಸ್ಸು (ಆಯಸ್ಸು) ನಮ್ಮನ್ನು ಬೆನ್ನು ಹತ್ತಿರುತ್ತದೆ. ಒಂದು ದಿನ ಕಛೇರಿಯಲ್ಲಿ ಹೂವು-ಹಣ್ಣು ಕೊಟ್ಟು, ಹಾರ ಹಾಕಿ ನೀವೀಗ ’ರಿಟೈರ್’ ಎಂದು ಮನೆಗೆ ಕಳಿಸಿ ಬಿಡುತ್ತಾರೆ. ಉದ್ಯೋಗದಲ್ಲಿದ್ದಾಗಲೇ ಮಕ್ಕಳ ವಿದ್ಯಾಭ್ಯಾಸ, ಹೆಣ್ಣು ಮಕ್ಕಳ ಮದುವೆ ಮತ್ತು ಎಲ್ಲಕ್ಕಿಂತ ಹೆಚ್ಚಾಗಿ  ನಿವೃತ್ತಾನಂತರದ ಪ್ರವೃತ್ತಿ ಮುಂತಾದವುಗಳ ಬಗ್ಗೆ ಸೂಕ್ತ ವ್ಯವಸ್ಥೆ ಮಾಡಿಕೊಂಡಿದ್ದರೆ, ಈ ’ನಿವೃತ್ತಿ’ ಎಂಬ ಭೂತ ನಿಮ್ಮನ್ನು ಹೆಚ್ಚು ಕಾಡಲಾರದು. ಆದರೆ ನಿವೃತ್ತಿ ಆಗುವ ತನಕ ನಮ್ಮ ಜೀವನದ ಎಲ್ಲ ರಂಗಗಳಲ್ಲಿ - ಉದ್ಯೋಗ, ಹಣ ಸಂಪಾದನೆ, ಆಸ್ತಿ ಗಳಿಕೆ ಇತ್ಯಾದಿ - ಮುಗಿಲು ಮುಟ್ಟುವ ಪ್ರಯತ್ನ ಮತ್ತು ಶ್ರಮ ನಮ್ಮ ಪ್ರವೃತ್ತಿಯಾಗಿರಬೇಕು. ಆದರೆ ಅವೆಲ್ಲವೂ ಪ್ರಾಮಾಣಿಕವಾದ, ಪಾರದರ್ಶಕವಾದ ಮತ್ತು ಪರರನ್ನು ನೋಯಿಸದ ಮಾರ್ಗದಲ್ಲಿರಬೇಕೆಂದು ಪ್ರತ್ಯೇಕವಾಗಿ ಹೇಳಬೇಕಾಗಿಲ್ಲವಷ್ಟೆ. ಜೀವನದಲ್ಲಿ ನಿವೃತ್ತಿ (ಅದು ಉದ್ಯೋಗದಿಂದ ಮಾತ್ರ ನಿವೃತ್ತಿ ಎಂಬುದು ನೆನಪಿರಲಿ) ನಾವು ಈವರೆಗೆ ಬದುಕಿ-ಬಾಳಿದ ಜೀವನದ ’balance-sheet’ ತೆಗೆಯಲು ಸಕಾಲ. ಈ ತ:ಖ್ತೆ ಹೇಗಿರಬೇಕೆಂದರೆ, ನಾವು ಇತರರಿಂದ (ಒಟ್ಟಾರೆ ಸಮಾಜದಿಂದ) ಪಡೆದ ಸಹಾಯ-ಸವಲತ್ತುಗಳು ಹಾಗೂ ನಾವು ಇತರರಿಗೆ (ಸಮಾಜಕ್ಕೆ) ಪ್ರತಿಫಲವಾಗಿ ಕೈಗೊಂಡ ಕೈಕಂರ್ಯಗಳು ಖಂಡಿತ ತಾಳೆ ಹೊಂದದಿದ್ದರೂ - ಕನಿಷ್ಠಪಕ್ಷ ೬೦:೪೦ ರ ಅನುಪಾತದಲ್ಲಾದರೂ ಇದ್ದಲ್ಲಿ ನಮ್ಮ ಬದುಕು ಸಾರ್ಥಕವೆಂದೇ ಅಂದುಕೊಳ್ಳಬಹುದು. ರೆಕ್ಕೆ ಬಲಿತ ಮಕ್ಕಳಿಗೆ ಜವಾಬ್ದಾರಿ ಹೊರಿಸಿ, ಈಗಲಾದರೂ ಸತ್ಕಾರ್ಯಗಳಲ್ಲಿ, ಸಜ್ಜನರ ಸಂಗದಲ್ಲಿ,  ಸದ್ವಿಚಾರ ಚಿಂತನೆಯಲ್ಲಿ, ಭಗವದಾರಾಧನೆಯಲ್ಲಿ - ಒಟ್ಟಾರೆ ಮಾನಸಿಕ ಮತ್ತು ಆಧ್ಯಾತ್ಮಿಕ ಉನ್ನತಿಯೆಡೆಗಿನ ಪಥದಲ್ಲಿ ಸಾಗುವುದು ಎಲ್ಲ ಶಿಷ್ಟ ಮಾನವರ ಲಕ್ಷಣ ಮತ್ತು ಅವಶ್ಯಕತೆ ಕೂಡಾ. ಜೀವನದಲ್ಲಿ - ವಿಶೇಷವಾಗಿ ಈ ಘಟ್ಟದಲ್ಲಿ ನಮ್ಮ ಪರಿ ಹೇಗಿರಬೇಕೆಂಬುದನ್ನು ಕೆಳದಿ ಆಸ್ಥಾನ ಕವಿ ವಂಶದ ಕೆಳದಿ ಕವಿ ವೆಂಕಣ್ಣ ತನ್ನ ಕೀರ್ತನೆಯಲ್ಲಿ ಬಹು ಮಾರ್ಮಿಕವಾಗಿ ತಿಳಿಸಿದ್ದಾನೆ:
.. .. ತನ್ನ ತಾನೇ ತಿಳಿಯಬೇಕು | ತೋರುವ ಲೋಕ _
ವನ್ನು ದೃಶ್ಯವೆಂದಿರಬೇಕು
ತನ್ನಂತೆ ಸಕಲರ ನೋಡಲು ಬೇಕು
ಮಾನ್ಯರ ಕಂಡರೆ ಮನ್ನಿಸಬೇಕು
ಅನ್ಯನಾದರು ಹಿತವನೆ ಮಾಡಬೇಕು
ಪ್ರಸನ್ನ ರಾಮೇಶನ ನೆನಹಿರಬೇಕು | .. ..

    ಹುಟ್ಟಿನಷ್ಟೇ ಸತ್ಯ - ಸಾವು. ಸಾವಿನ ನಂತರದ ಪಯಣ ಅನಿಶ್ಚಿತ - ನಿಗೂಢ. ದೇಹ ಪಂಚಭೂತಗಳಲ್ಲಿ ಲೀನ. ಹುಟ್ಟಿದಾಗ ಬರಿಗೈಯಲ್ಲಿ ಬಂದು - ಅಗಾಧವಾದಷ್ಟನ್ನು ಗಳಿಸಿ - ಸಾಯುವಾಗ ಪುನ: ಬರಿಗೈಯಲ್ಲಿ ಹೋಗುವ ಈ ಪರಿ ಎಷ್ಟು ನಿತ್ಯಸತ್ಯ. ಶೂನ್ಯದಿಂದ ಬಂದು ಅಂತಿಮವಾಗಿ ಶೂನ್ಯದಲ್ಲೇ ಲೀನವಾಗುವಂತೆ! (’ಬರುವಾಗ ಬೆತ್ತಲೆ, ಹೋಗುವಾಗ ಬೆತ್ತಲೆ - ನಡುವೆ ಬರೀ ಕತ್ತಲೆ ಎಂಬಂತೆ). ಮಧ್ಯೆ ಇರುವ ನಾಲ್ಕು ದಿನದಲ್ಲಿ ಬದುಕನ್ನು ನಮಗೂ-ಇತರರಿಗೂ ಸಹನೀಯವಾಗುವಂತೆ ಮತ್ತು ವಿಶೇಷವಾಗಿ ಆತ್ಮೋನ್ನತಿಯಾಗುವಂತೆ ರೂಪಿಸಿಕೊಳ್ಳುವುದೇ - ಹಾಗೂ ನಿರಂತರ ಆ ನಿಟ್ಟಿನಲ್ಲಿ ಪ್ರಜ್ಞಾಪೂರ್ವಕವಾಗಿ ಮುಂದುವರಿಯುವುದೇ ಇಂದಿನ ಎಲ್ಲರ ಅಗತ್ಯತೆ, ಅವಶ್ಯಕತೆ ಮತ್ತು ಅನಿವಾರ್ಯತೆ ಕೂಡಾ!

[ದಿ.೨೦.೬.೨೦೦೮ ರ ಶಿವಮೊಗ್ಗದ  'ನಾವಿಕ' ಪತ್ರಿಕೆಯಲ್ಲಿ ಪ್ರಕಟಿತ ಲೇಖನ]

[ಬರಹ convert  ನಿಂದ ಪೋಸ್ಟ್ ಆದ ನನ್ನ ಮೊದಲ ಲೇಖನ. ಕೃತಜ್ಞತೆ: ಶ್ರೀ ಪ್ರಸನ್ನ, ಶ್ರಿ ಶ್ರೀಧರ್, ಶ್ರೀ ಕವಿ ನಾಗರಾಜ್]

2 comments:

  1. ಒಳ್ಳೆಯ ಲೇಖನ.
    ಪರಮಾತ್ಮ ರಚಿಸಿಹನೀ ಅದ್ಭುತದರಮನೆಯ|
    ನಡೆದಾಡುವೀ ಮಹಲಿನರಸನೆ ಜೀವಾತ್ಮ||
    ಬುದ್ಧಿಯದು ಮಂತ್ರಿ ಮನವು ಸೇನಾಧಿಪತಿ
    ಇಂದ್ರಿಯಗಳು ಕಾವಲಿಗಿಹವು ಮೂಢ||

    ReplyDelete
  2. ಸುಂದರ ಬರಹ, ಅನುಭವದ ಮಾತುಗಳಿಗೆ,
    ಧನ್ಯವಾದಗಳು.

    ReplyDelete