|| ಶ್ರೀ ರಾಮ ಜಯ ರಾಮ ಜಯ ಜಯ ರಾಮ ||

Thursday, July 28, 2011

ಗಣಿ ನಾಮಾವಳಿ ಮಹಾಮಂತ್ರ

ಓಂ ಶ್ರೀ ಯಡಿಯೂರಪ್ಪಾಯ ನಮ:
ಓಂ ಶ್ರೀ ಜನಾರ್ಧನಾಯ ನಮ:
ಓಂ ಶ್ರೀ ಕರುಣಾಕರಾಯ ನಮ:
ಓಂ ಶ್ರೀ ರಾಮುಲುನೇ ನಮ:
ಓಂ ಶ್ರೀ ಸೋಮಾಯ ನಮ:
ಓಂ ಶ್ರೀ ಕುಮಾರಾಯ ನಮ:
ಓಂ ಶ್ರೀ ಅನಿಲಾಯ ನಮ:
ಓಂ ಶ್ರೀ ನಾಗೇಂದ್ರಾಯ ನಮ:
ಓಂ ಶ್ರೀ ಸರ್ವ ಗಣಿ ದೇವತಾಭ್ಯೋ ನಮ:

ಇತಿ ಶ್ರೀ ಸಂತೋಷ್ ಹೆಗಡೆ ವಿರಚಿತ ಶ್ರೀ ಗಣಿ ನಾಮಾವಳಿ ಮಹಾಮಂತ್ರಂ ಸಂಪೂರ್ಣಂ

||ಶ್ರೀ ರಂಗನಾಥಾರ್ಪಣ ಮಸ್ತು||
||ಶ್ರೀ ಭಾರದ್ವಾಜಾರ್ಪಣ ಮಸ್ತು||

ಪ್ರಜಾ ಉವಾಚ

|| ಸರ್ವಂ ತಿಲಾರ್ಪಣ ಮಸ್ತು ||

Wednesday, July 27, 2011

ಅಜ್ಜನ ಪ್ರೀತಿ

೧೯೭೩ರಲ್ಲಿ ನಾನು ಶಿವಮೊಗ್ಗದ ಬ್ರಾಹ್ಮಣರ ವಸತಿ ನಿಲಯದಲ್ಲಿದ್ದುಕೊಂಡು ಡಿ.ವಿ.ಎಸ್. ಕಾಲೇಜಿನಲ್ಲಿ ಪ್ರಥಮ ಪಿ.ಯು.ಸಿ. ಓದುತ್ತಿದ್ದೆ. ಎಸ್.ಎಸ್.ಎಲ್.ಸಿ.ಯಲ್ಲಿ ಫಸ್ಟ್ ಕ್ಲಾಸ್ ಬಂದಿದ್ದರಿಂದ ನನಗೆ ಪೂರ್ಣ ಸ್ಕಾಲರ್‌ಷಿಪ್ ಸಿಕ್ಕಿತ್ತು; ಊಟ-ತಿಂಡಿ ಫ್ರೀ; ರೂಂ ಬಾಡಿಗೆ ತಿಂಗಳಿಗೆ ರೂ.೧೩ ಮಾತ್ರಾ ಕಟ್ಟಬೇಕಾಗಿತ್ತು. ಅಲ್ಲಿನ ಎಲ್ಲಾ ವ್ಯವಸ್ಥೆಗಳೂ ಕೂಡ ಅಚ್ಚುಕಟ್ಟಾಗಿತ್ತು. ಸುಮಾರು ೪ ತಿಂಗಳ ನಂತರ ನಮ್ಮ ತಂದೆಯವರಿಗೆ ನರಸಿಂಹರಾಜಪುರದಿಂದ ಮೈಸೂರಿಗೆ ವರ್ಗವಾಯಿತು. ಹಾಗಾಗಿ ನಾನು ಆಗಾಗ ಶಿವಮೊಗ್ಗೆಯಿಂದ ಮೈಸೂರಿಗೆ ಬೆಳಿಗ್ಗೆ ೫ ಕ್ಕೆ ಹೊರಡುವ ಖಾಸಗೀ ಬಸ್ಸಿನಲ್ಲಿ ಹೋಗುತ್ತಿದ್ದೆ. ವಸತಿ ನಿಲಯದಲ್ಲಿ ಅಡಿಗೆ ಮಾಡುವ ನಾಲ್ಕೈದು ಮಂದಿಯಲ್ಲಿ ಸುಮಾರು ೭೦ ದಾಟಿದ ವಯೋವೃದ್ಧರೊಬ್ಬರಿದ್ದರು. ಒಮ್ಮೆ ನಾನು ಮೈಸೂರಿನಿಂದ ವಾಪಸಾದಾಗ ಅವರು ನನ್ನನ್ನು ಕರೆದು, ನೀನು ಎಷ್ಟು ಹೊತ್ತಿಗೆ ಶಿವಮೊಗ್ಗ ಬಿಟ್ಟೆ ಎಂದು ಕೇಳಿದರು. ನಾನು ೪.೩೦ ಕ್ಕೇ ಬಿಟ್ಟೆ; ೫ಕ್ಕೆ ಬಸ್ಸು ಎಂದೆ. ದಿನಾ ಬೆಳಿಗ್ಗೆ ೬ ಘಂಟೆಯಾಗಿ ಎಲ್ಲರೂ ಪ್ರಾಥ:ಸಂಧ್ಯಾ ವಂದನೆ ಮುಗಿಸದ ಹೊರತೂ ಕಾಫಿ ಕೊಡುತ್ತಿರಲಿಲ್ಲ. ಅವರೆಂದರು ಇನ್ನು ಮುಂದೆ ಮೈಸೂರಿಗೆ ಹೋಗುವಾಗ ನನಗೆ ಹಿಂದಿನ ದಿನ ರಾತ್ರಿಯೇ ತಿಳಿಸು; ಹೋಗುವ ಮುನ್ನ ಅಡಿಗೆ ಮನೆಗೆ ಬಂದು ಹೋಗು ಎಂದರು. ಅಂದಿನಿಂದ ನಾನು ಬೆಳಿಗ್ಗೆ ಅಲ್ಲಿಗೆ ಹೋದರೆ ಅವರು ನನ್ನನ್ನು ಪ್ರತ್ಯೇಕವಾಗಿ ಕರೆದು ಒಂದು ಲೋಟ ತುಂಬ ಬಿಸಿ ಬಿಸಿ ಹಾಲನ್ನು ನೀಡಿ, ನಾನು ಕುಡಿಯುವುದನ್ನೇ ಅಕ್ಕರೆಯಿಂದ ನೋಡುತ್ತಿದ್ದು, ಮುಗಿದ ಮೇಲೆ ಹುಷಾರಾಗಿ ಹೋಗಿ ಬಾ ಎಂದು ತಲೆ ಸವರಿ ಕಳಿಸುತ್ತಿದ್ದರು. ಆ ವಯಸ್ಸಿನಲ್ಲಿಯೂ ಅವರು ದುಡಿಯುವ ಅನಿವಾರ್ಯತೆ ಏನಿತ್ತೋ ಮತ್ತು ಅವರು ನನ್ನಲ್ಲಿ ಯಾರನ್ನು ಕಾಣುತ್ತಿದ್ದರೋ ನನಗೆ ಗೊತ್ತಿಲ್ಲ. ಅವರ ಹೆಸರೂ ಸಹ ನನಗೆ ನೆನಪಿಲ್ಲ. ಆದರೆ ಅವರ ಅಕ್ಕರೆ, ಅವರ ಪ್ರೀತಿ ತುಂಬಿದ ನೋಟ ಮತ್ತು ನನ್ನ ಮೇಲಿದ್ದ ಅವರ ಮಮಕಾರ-ಅನುಕಂಪ ಇಂದಿಗೂ ನನ್ನ ಮನದಲ್ಲಿ ಹಚ್ಚ ಹಸಿರಾಗಿದೆ.

Sunday, July 17, 2011

ಅಯ್ಯೋ! ಎನ್ನದ ಮನವೇಕೆ?....


ಮಾನವೀಯತೆಯ ಮುಖಗಳು ಹಲವಾರು. ಬಹಳಷ್ಟು ಸನ್ನಿವೇಶಗಳಲ್ಲಿ ಅದು ಸಂದರ್ಭೋಚಿತವಾಗಿ ಪ್ರಕಟವಾಗುವಂತಹುದು. ಮಾನವೀಯತೆ ಮೆರೆಯ ಬೇಕಾದರೆ ಮನುಷ್ಯನ ಸಂವೇದನಾಶೀಲ ಪ್ರವೃತ್ತಿ ಕೂಡ ಸದಾ ಜಾಗೃತವಾಗಿರಬೇಕು. ಅದಕ್ಕೊಂದು ಉದಾಹರಣೆ.

ನಾನು ವಿಧಾನಸೌಧದಲ್ಲಿ ಓರ್ವ ಹಿರಿಯ ಐ.ಎ.ಎಸ್. ಅಧಿಕಾರಿಯ ಆಪ್ತ ಕಾರ್ಯದರ್ಶಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ಕಾಲ. ಅತ್ಯಂತ ಜವಾಬ್ದಾರಿಯುತ ಕಛೇರಿಯಾಗಿದ್ದರಿಂದ ಕಾರ್ಯಬಾಹುಳ್ಯವೂ ಅತ್ಯಧಿಕ. ಹಾಗಾಗಿ ಪ್ರತಿದಿನ ಬೆಳಿಗ್ಗೆ 8 ಘಂಟೆಗೆ ಕಛೇರಿಗೆ ಹೋದರೆ ಮನೆ ಸೇರುವುದು ರಾತ್ರಿ 9ರ ನಂತರವೇ. ಒಮ್ಮೊಮ್ಮೆ ರಾತ್ರಿ 12-1 ಘಂಟೆಯೂ ಆಗುತ್ತಿತ್ತು. ಒಂದು ದಿನ ರಾತ್ರಿ 8  ಘಂಟೆಗೆ  ಸಚಿವರ ನಿವಾಸಕ್ಕೆ ಸಭೆಗಾಗಿ ನನ್ನ ಬಾಸ್ ತೆರಳಿದ್ದರು. ವಾಪಸ್ಸು ಬಂದಾಗ ರಾತ್ರಿ 12 ಆಗಿತ್ತು. ನಮಗೋ ಸಾಕಷ್ಟು  ಹಸಿವಾಗಿ ಮನೆ ಸೇರಿದರೆ ಸಾಕಪ್ಪಾ ಎಂದೆನಿಸುತ್ತಿತ್ತು. ಬಾಸ್ ಬಂದ ಕೂಡಲೇ ಮನೆಗೆ ತೆರಳಲು ಸಿದ್ಧರಾದೆವು. ಅವರನ್ನು ಬೀಳ್ಕೊಟ್ಟು ನಾವು ಹೊರಡಲು ಅವರೊಂದಿಗೆ ಪೋರ್ಟಿಕೋಗೆ ಬಂದೆವು. ಆಗ ವಿಪರೀತ ಮಳೆ ಬೇರೆ ಸುರಿಯುತ್ತಿತ್ತು. ಬಾಸ್ ಕಾರಿನ ಒಳಗೆ ಕುಳಿತ ತಕ್ಷಣ ಬಾಗಿಲು ಪುನ: ತೆರೆದುಕೊಂಡು ಹೊರಬಂದರು. ನಾವುಗಳು ಇನ್ನೇನು ಜ್ಞಾಪಿಸಿಕೊಂಡರಪ್ಪಾ, ಇನ್ನೇನು ಕೆಲಸ ಇದೆಯೋ ಎಂದುಕೊಳ್ಳುವಷ್ಟರಲ್ಲಿ, ಪಕ್ಕದಲ್ಲೇ ನಿಂತಿದ್ದ ಪೋಲಿಸಿನವನನ್ನು ಕರೆದು ಬಾಸ್ ಇಂತೆಂದರು: "ನೋಡಿ, ಪೋರ್ಟಿಕೋದ ಆ ಮೂಲೆಯಲ್ಲಿ ಒದ್ದೆಯಾದ ನಾಯಿಯೊಂದು ಮುದುರಿಕೊಂಡು ಮಲಗಿದೆ. ಅದನ್ನು ಓಡಿಸಬೇಡಿ. ಅದು ಹೋದಾಗ ಹೋಗಲಿ" ಎಂದು ಹೇಳಿ ಪುನ: ಕಾರ್ ಹತ್ತಿ ಹೊರಟರು. 

ರಾತ್ರಿ 12ರ ಸಮಯ; ಜೋರಾದ ಮಳೆ; ತೀವ್ರವಾದ ಹಸಿವು; ಮನೆ ಸೇರಿದರೆ ಸಾಕಪ್ಪಾ ಎನ್ನುವಷ್ಟು ಆಯಾಸ - ಈ ಸಂದರ್ಭದಲ್ಲಿ ನನ್ನ ಬಾಸ್ ಒಂದು ಪ್ರಾಣಿಗೆ ತೋರಿದ ಅನುಕಂಪ ಮತ್ತು ಕಾಳಜಿ ಒಂದು ಕ್ಷಣ ನಮ್ಮೆಲ್ಲರ ಹಸಿವು-ಆಯಾಸವನ್ನು ಮರೆಸಿ ಅವರಲ್ಲಿ ಅನನ್ಯ ಗೌರವ ಭಾವವನ್ನು ತುಂಬಿತ್ತು.

[ಮುಂದುವರೆಯುವುದು]

Friday, July 15, 2011

ಸಂಕೀರ್ಣವಾಗುತ್ತಿರುವ  ಸಂ ಬಂ ಧ ಗ ಳು
 
 
ಮಾವಿನ ಮರ - ಕೋಗಿಲೆ ; ಎರಡೂ ಬೇರೆ ಬೇರೆ ಒಂದಕ್ಕೊಂದು ಸಂಬಂಧವಿಲ್ಲದ ಅಸ್ತಿತ್ವಗಳು. ಆದರೆ ಅವೆರಡಕ್ಕೂ ಅಗಲಲಾಗದ ನಂಟು. ಮಾವಿನ ಮರ ಚಿಗುರೊಡೆದೊಡನೆಯೇ ಕೋಗಿಲೆ ತನ್ನ ಗಾನಸುಧೆಯೊಂದಿಗೆ ಹಾಜರ್. ಅದೇ ನಮ್ಮನ್ನು ನೋಡಿ. ಹುಟ್ಟಿದ ಕೂಡಲೇ ಅಪ್ಪ-ಅಮ್ಮನ ಸಂಬಂಧ; ಸ್ವಲ್ಪ ಸಮಯದ ನಂತರ ಅಣ್ಣ-ತಂಗಿಯರ ಸಂಬಂಧ; ಬಂಧುಗಳ ಸಂಬಂಧ - ಹೀಗೆ ಈ ಸಂಬಂಧಗಳ ಸರಪಳಿ ಕೊನೆಯವರೆಗೂ ಬೆಳೆಯುತ್ತಲೇ ಹೋಗುತ್ತದೆ. ಆದರೆ ಇಂದು ನಾನಾ ಕಾರಣಗಳಿಂದ ಈ ರಕ್ತ ಸಂಬಂಧದ ಬೆಸುಗೆ ಸಾಕಷ್ಟು ಸಡಿಲವಾಗಿದೆ. ಅನೇಕ ಸಂದರ್ಭಗಳಲ್ಲಿ ಮುರಿದುಬೀಳುವ ಮಟ್ಟಕ್ಕೂ ಬಂದು ನಿಂತಿದೆ. ಇವತ್ತು ಎಲ್ಲರಲ್ಲೂ ವಿದ್ಯೆಯಿದೆ, ಹಣವಿದೆ. ಆದರೆ ವಿಶಾಲವಾದ ಹೃದಯ ಮತ್ತು ತೆರೆದ ಮನಸ್ಸು ವಿರಳವಾಗುತ್ತಿದೆ. ನಿಷ್ಕಲ್ಮಷವಾದ ನಗುಮುಖ ಮರೆಯಾಗಿದೆ. ಯಾರನ್ನು ದೂಷಿಸುವುದು? ಏಕೆ ಹೀಗೆ? ನಮಗೇನಾಗಿದೆ? ಎಂದು ಪ್ರಶ್ನಿಸಿಕೊಂಡರೆ ಅವು ಉತ್ತರವಿಲ್ಲದ ಪ್ರಶ್ನೆಗಳಾಗಿಯೇ ಉಳಿದುಬಿಡುತ್ತವೆ. ಎಲ್ಲಕ್ಕಿಂತ ಹೆಚ್ಚಾಗಿ ಇತ್ತೀಚಿನ ಪೀಳಿಗೆಗಳಲ್ಲಿ ಇಂತಹ ಒಂದು ತುಡಿತವೇ ಮಾಯವಾಗಿಬಿಟ್ಟಿದೆ. ಸುಮಧುರ ಸಂಬಂಧಗಳ ಸವಿಯನ್ನೇ ಅರಿಯದ ಇವರು ಅದರ ಮಹತ್ವವನ್ನು ಹೇಗೆ ತಾನೇ ತಿಳಿಯಬಲ್ಲರು? ಪಾಶ್ಚಾತ್ಯ ರೀತಿಯಂತೆ ನಾನು ಬದುಕುವುದೇ ನನ್ನ ಸುಖಕ್ಕಾಗಿ; ಇತರರ (ಅಂದರೆ ತನ್ನ ಸಂಬಂಧಿಕರನ್ನು ಕುರಿತು ಮಾತ್ರ ಇಲ್ಲಿ ಹೇಳಿರುವುದು) ಉಸಾಬರಿ ತನಗೇಕೆ ಎಂಬ ಭಾವನೆ ಎಲ್ಲರಲ್ಲಿ ಮನೆ ಮಾಡುತ್ತಿದೆ. ಸಮಾರಂಭಗಳಲ್ಲಿ ಅಪರೂಪಕ್ಕೆ ಸಿಗುವ ನೆಂಟರಿಗೆ ’ಹಾಯ್’ ’ಬಾಯ್’ ಹೇಳಿಬಿಟ್ಟು, ಮುಂದಿನ ಕ್ಷಣ ತನ್ನ ಲೋಕಕ್ಕೇ ಜಾರುವವರು ಬಹುಬಂದಿ ಇಂದು. ಆಪ್ತೇಷ್ಟರು ಮರಣ ಹೊಂದಿ ದೇಹವನ್ನು ಭಸ್ಮ ಮಾಡಿದೊಡನೆಯೇ ಸಂಬಂಧಗಳೂ ಭಸ್ಮವಾಗುವ ಕಾಲ ಬಂದಿರುವುದು ನಮ್ಮ ಸಂಸ್ಕೃತಿ ಎತ್ತ ಸಾಗುತ್ತಿದೆ ಎಂಬುದರ ಸೂಚಿ. ಬ್ಯಾಂಕ್ ಬ್ಯಾಲೆನ್ಸ್, 3-4 ನಿವೇಶನಗಳು, ಐಷಾರಾಮಿ ವಸ್ತುಗಳು ಇತ್ಯಾದಿ ಇಷ್ಟೇ ನಮ್ಮ ಜೀವನದ ಪರಮ ಗುರಿ ಎಂದಾದಾಗ ಪರಿಣಾಮ ಮೇಲಿನಂತೆಯೇ ಆಗಲೇಬೇಕಲ್ಲವೇ?

ಹುಟ್ಟಿದ ಮಗುವನ್ನು ಕ್ರೀಷೆಗೋ, ಆಯಾ ಸುಪರ್ದಿಗೋ ನೀಡಿ ದುಡಿಮೆಗೆ ಹೊರಟಾಗ ಮಗುವಿಗೆ ತಾಯಿಯ ಪ್ರೀತಿ, ಮಧುರ ಬಾಂಧವ್ಯದ ಸವಿಯನ್ನು ಉಣಿಸುವವರು ಯಾರು? ಕಾಲಾಂತರದಲ್ಲಿ ಆ ಮಗು ಆ ತಾಯಿ ಮಾಡಿದ್ದನ್ನೇ ಮಾಡುತ್ತದೆ. ಮುಂದೆ ತನ್ನ ಮಕ್ಕಳಿಗೆ ಒಂದಿಷ್ಟು ಸೌಲಭ್ಯ, ಹಣಕಾಸು ನೀಡಿ, ತನ್ನ ಪಾಡಿಗೆ ತಾನು ತನ್ನ ಸುಖದ ಅನ್ವೇಷಣೆಯಲ್ಲಿ ತೊಡಗಿಬಿಡುತ್ತದೆ. ಆಗ ತಾಯಿ ಮಗುವನ್ನು ದೂಷಿಸಿ ಪ್ರಯೋಜನವೇನು? ನೇರವಾಗಿ ಹೇಳಬೇಕೆಂದರೆ, ಇಂದು ಸಮಾಜದಲ್ಲಿ ತಾಯಿ ತನ್ನ ಪಾತ್ರವನ್ನು ಸರಿಯಾಗಿ ನಿರ್ವಹಿಸದೇ ಇರುವುದೇ ಈ ಸಂಬಂಧಗಳ ಹಳಸುವಿಕೆಗೆ ಮೂಲ ಕಾರಣವೆಂದರೆ ತಪ್ಪಾಗಲಾರದು. ಅದಕ್ಕಂದೇ ಮನೆಯೆ ಮೊದಲ ಪಾಠಶಾಲೆ; ತಾಯಿಯೇ ಮೊದಲ ಗುರುವು ಎಂದು ಹೇಳಿರುವುದು. ತಾಯಿ ಸ್ವಾರ್ಥಿಯಾದಾಗ ಅವಳ ಸಂತಾನ ಕೂಡಾ ಅದೇ ಹಾದಿ ಹಿಡಿದೇ ಹಿಡಿಯುತ್ತದೆ. ಕುರುಡು ಕಾಂಚಾಣದ ಹಿಂದೆ ಬಿದ್ದು ನಾಗಾಲೋಟದಲ್ಲಿ ಓಡುತ್ತಿರುವವರಿಗೆ ಮುಂದಿನ ಪರಿಣಾಮಗಳು ಹೇಗೆ ತಾನೇ ಅರಿವಾದೀತು ಅಲ್ಲವೇ? ಪರಿಣಾಮ ಸಂಬಂಧಗಳು ಸೊರಗುತ್ತಿವೆ; ನಿಧಾನವಾದ ಆದರೆ ಅಷ್ಟೇ ಖಚಿತವಾದ ಅನಾಹುತಗಳೆಡೆಗೆ ಸಾಗುತ್ತಿವೆ.

ಇನ್ನು ಮುಂದೆ ಅಣ್ಣ, ಅಕ್ಕ, ತಮ್ಮ, ತಂಗಿ ಸಂಬಂಧಗಳು ಅನುಭವಿಸಿದವರಿಗೆ ನೆನಪು ಮಾತ್ರಾ,. ಈಗಿನ ಪೀಳಿಗೆಗೆ ಈ ಅನುಬಂಧದ ಖುಷಿ ಬರೀ ಮರೀಚಿಕೆ ಅಷ್ಟೆ. ಏಕೆಂದರೆ ಪ್ರತಿ ಕುಟುಂಬದಲ್ಲೂ ಈಗ ಒಂದೇ ಮಗು. ಹಾಗಾಗಿ ಈ ಸಂಬಂಧಗಳು ಸಂಕೀರ್ಣವಾಗುವ ಬದಲು ಸಂಪೂರ್ಣ ಸ್ವಲ್ಪ ಕಾಲಾಂತರದಲ್ಲಿಯೇ ಮಾಯವಾದರೂ ಆಶ್ಚರ್ಯಪಡಬೇಕಾಗಿಲ್ಲ. ಮನೆಯಲ್ಲಿ ಸಹಜಾತರಿಲ್ಲದೇ ಬೆಳೆಯುವ ಒಂಟಿ ಮಗುವಿನ ಮನ:ಸ್ಥಿತಿ ಮತ್ತು ಇತರ ಸಂಬಂಧಿಗಳೊಡನೆ ಅದರ ವ್ಯವಹಾರ ಎಲ್ಲವೂ ಇದರಿಂದ ಪ್ರಭಾವಿತವಾಗುವುದಂತೂ ಶತ:ಸ್ಸಿದ್ಧ. ಸಹಬಾಳ್ವೆ ಮತ್ತು ಸಹಜೀವನದ ಸೌಖ್ಯ ಮತ್ತು ಅನುಭವದಿಂದ ವಂಚಿತವಾಗುವ ಈ ಮಕ್ಕಳ ಪರಿಸ್ಥಿತಿ ನೋಡಿದಾಗ ನಿಜವಾಗಿಯೂ ಖೇದವೆನಿಸುತ್ತದೆ.

ಮದುವೆ ಎಂದರೆ ಎರಡು ಮನಗಳ ಸಮಾಗಮ. ಗಂಡು-ಹೆಣ್ಣು ಪರಸ್ಪರ ಭಾವನೆಗಳಿಗೆ ಸ್ಪಂದಿಸುವ ಮತ್ತು ನೋವು-ನಲಿವುಗಳಿಗೆ ನಿರಂತರ ಭಾಗಿಯಾಗುವ ಒಂದು ಸಾಮಾಜಿಕ ವ್ಯವಸ್ಥೆ. ಆದರಿಂದು ಮದುವೆ ಮನ ಗಳ ಸಮಾಗಮವಲ್ಲ ಕೇವಲ ಮನಿ [money] ಗಳ ಸಮಾಗಮದ ವ್ಯವಸ್ಥೆಯಾಗಿದೆ. ಗಂಡ ತಿಂಗಳಿಗೆ ೧ ಲಕ್ಷಕ್ಕಿಂತಲೂ ಹೆಚ್ಚಿಗೆ ದುಡಿದರೂ ಹೆಂಡತಿ ಕೂಡಾ ಕೆಲಸಕ್ಕೆ ಹೋಗಲೇ ಬೇಕು. ಓದ್ದಿದ್ದೇವೆ ಎಂಬ ಏಕೈಕ ಕಾರಣದಿಂದ ದುಡಿಮೆ ಏಕೆ ಹೆಣ್ಣು ಮಕ್ಕಳಿಗೆ ಇಂದು ಅನಿವಾರ‍್ಯವಾಗಿದೆಯೋ ಅರ್ಥವಾಗದು. ಬದುಕಿನ ಗುರಿ ಅದಕ್ಕಿಂತ ಮಿಗಿಲಾಗಿ ಸಂಸಾರ ಬಂಧನದ ಗುರಿ ಮತ್ತು ಕರ್ತವ್ಯಗಳ ಪರಿಕಲ್ಪನೆಯ ಅಭಾವ ಇಂದು ಎದ್ದು ಕಾಣುತ್ತಿದೆ. ಹುಟ್ಟಿದ ಮಗುವಿಗೆ ತಾಯಿಯ ಮಡಿಲು ಮತ್ತು ಮಮತೆಯೇ ಇಂದು ಮರೀಚಿಕೆಯಾದರೆ, ಹೆತ್ತ-ತಾಯಿಗೆ ಮಗು ಪಾಲನೆ-ಪೋಷಣೆಯೇ ಹೊರೆಯಾದರೆ, ಕಾರ್ಯ ಒತ್ತಡದಿಂದ ಗಂಡ-ಹೆಂಡಿರ ಸಂಬಂಧಗಳೇ ಹಳಸುವುದಾದರೆ, ತಮ್ಮ ಹಾಗೂ ತಮ್ಮ ಏಕೈಕ ಸಂತಾನದ ದೈಹಿಕ ಮತ್ತು ಮಾನಸಿಕ ಆರೋಗ್ಯವೂ ಬಲಿಪಶುವಾಗಬಹುದಾದರೆ, ಅಂತಹ ದುಡಿಮೆಯಿಂದ ಏನು ಸಾರ್ಥಕ ಎಂಬ ಸಾಮಾನ್ಯ ಪ್ರಶ್ನೆಗೆ ಈಗಿನ ಸುಶಿಕ್ಷಿತ ಯುವಕ/ಯುವತಿಯರಿಗೆ ಉತ್ತರ ಏಕೆ ಹೊಳೆಯುತ್ತಿಲ್ಲ ಎಂಬುದೇ ಸೋಜಿಗವೆನಿಸುತ್ತದೆ. ಗಂಡ-ಹೆಂಡರ ಜಗಳದಲ್ಲಿ ಕೂಸು ಬಡವಾಯಿತು ಎಂಬ ಗಾದೆ ಮಾತು ಇಂದು ಅಕ್ಷರಶ: ನಿಜವಾಗುತ್ತಿದೆ. ಸಂಬಂಧಗಳ ದೃಷ್ಟಿಯಲ್ಲಿ (ಪ್ರೀತಿ, ಪ್ರೇಮ) ಮಗು ಬಡವಾದರೂ ಬಲವಾದ ಆರ್ಥಿಕ ಬೆಂಬಲದಿಂದ ಮುಂದೆ ಅದು ಭಡವ ಆದರೂ ಆಶ್ಚರ್ಯ ಪಡಬೇಕಾಗಿಲ್ಲ.

ತಮ್ಮ ವೃತ್ತಿಜೀವನವೇ ಪ್ರಾಧಾನ್ಯವಾದರೆ ಅಮಾಯಕವಾದ ಒಂದು ಜೀವವನ್ನು ಈ ಪ್ರಪಂಚಕ್ಕೆ ತಂದು, ಅದನ್ನು ಅನ್ಯರ ಪಾಲನೆ-ಪೋಷಣೆಯಲ್ಲಿ ಬಿಟ್ಟು, ಅದರ ಜೀವನಕ್ಕೆ (ಅದರಲ್ಲೂ ವಿಶೇಷವಾಗಿ ಅದರ ಸಹಜ ಮಾನಸಿಕ ಬೆಳವಣಿಗೆಗೆ) ಕಲ್ಲು ಹಾಕುವ ಹಕ್ಕು ಕೂಡಾ ಇವರಿಗಿಲ್ಲವಷ್ಟೇ? ಒಂದು ಮಗು ಎಲ್ಲಾ ಐಷಾರಾಮಿ ವಸ್ತು-ಸೌಲಭ್ಯಗಳಿಗಿಂತಲೂ ಬೆಲೆ ಕಟ್ಟಲಾಗದಂತಹ ಆಸ್ತಿ. ಅಂತಹ ಅಮೂಲ್ಯವಾದ ಆಸ್ತಿಯನ್ನು ಜತನವಾಗಿ ಕಾಪಾಡಿ, ಪೋಷಿಸಿ, ಬೆಳೆಸಿದರೆ ಅದು ಕುಟುಂಬಕ್ಕಷ್ಟೇ ಅಲ್ಲ ಇಡೀ ದೇಶಕ್ಕೇ ಒಂದು ಅಪೂರ್ವವಾದ ಆಸ್ತಿಯಾಗಬಲ್ಲದು. ಪ್ರಮುಖವಾಗಿ ಮಕ್ಕಳ ಬಾಲ್ಯದಲ್ಲಿ ಹೆಜ್ಜೆ-ಹೆಜ್ಜೆಗೂ ಅದರ ನಡೆ-ನುಡಿಗಳನ್ನು ತಿದ್ದುವ ಕೆಲಸ ಪೋಷಕರದ್ದು; ಅದರಲ್ಲೂ ವಿಶೇಷವಾಗಿ ತಾಯಿಯದ್ದು. ಗಿಡವಾಗಿ ಬಗ್ಗದ್ದು ಖಂಡಿತವಾಗಿ ಮರವಾದ ಮೇಲೆ ಬಗ್ಗಲಾರದು. ಜೀವನ ನಿರ್ವಹಣೆಗೆ ಹೆಣ್ಣಿನ ದುಡಿಮೆ ಅನಿವಾರ್ಯವಾದಾಗ ಬದುಕಿನೊಂದಿಗೆ ರಾಜಿ ಮಾಡಿಕೊಳ್ಳಬೇಕಾದ್ದು ಒಪ್ಪಬಹುದಾದ ಮಾತು. ಆದರಿಂದು ಕನಿಷ್ಠಪಕ್ಷ ದುಡಿಯುವ ಶೇ.೬೦-೭೦ ಕ್ಕಿಂತ ಹೆಚ್ಚು ಮಹಿಳೆಯರಿಗೆ ಅಂತಹ ಪರಿಸ್ಥಿತಿ ಇಲ್ಲ; ಅದು ಕೇವಲ ಷೋಕಿಯ ಮತ್ತು ಸಾಮಾಜಿಕ ಪ್ರತಿಷ್ಠೆಯ ಪ್ರತೀಕ ಮಾತ್ರಾ ಆಗಿ ಉಳಿದಿದೆ. ಈ ಪ್ರವೃತ್ತಿಯಿಂದ ಏನೂ ಅರಿಯದ ಮುಗ್ಧ ಕಂದಮ್ಮಗಳು ನರಳುವಂತಾಗಿದೆ. ಕೇವಲ ಹಣದಿಂದ ಮಕ್ಕಳ ಎಲ್ಲಾ ಅವಶ್ಯಕತೆಗಳನ್ನೂ ನಾವು ಪೂರೈಸುತ್ತಿದ್ದೇವೆ ಎಂಬ ಭ್ರ,ಮೆಯಲ್ಲಿ ಇಂದು ಬಹುಮಂದಿ ಇದ್ದಾರೆ. ಮುಂದೆ ಬೆಳೆದು ನಿಂತ ಮಕ್ಕಳು ನಿಮ್ಮನ್ನು ಕೇವಲ ಒಂದು ATM ಆಗಿ ಮಾತ್ರಾ ನೋಡುತ್ತಾರೆ. ಅವರಲ್ಲಿ ನೀವವರ ತಂದೆ-ತಾಯಿಯರೆಂಬ ಭಾವನೆಗಳೂ ಕೂಡ ಇಲ್ಲದಿದ್ದಲ್ಲಿ ನೀವು ಆಶ್ಚರ್ಯ ಪಡಬೇಕಾಗಿಲ್ಲ. ಏಕೆಂದರೆ ನೀವು ಅದರ ನಿಜವಾದ ತಂದೆ-ತಾಯಿಯರೆಂಬ ವಾತ್ಸಲ್ಯದಿಂದ ಅದನ್ನು ವಂಚಿಸಿದರ ಫಲ ಅದು. ವಿದೇಶಕ್ಕೆ ತೆರಳಿ, ಹೆತ್ತ ಮಗುವನ್ನು, ಅಜ್ಜ-ಅಜ್ಜಿಯರ ಅಥವಾ ಅನ್ಯರ ಪೋಷಣೆಯಲ್ಲಿ ಬಿಟ್ಟು ಧನದಾಹಿ ಗಳಾಗಿರುವ ಅನೇಕರನ್ನು ನಾವಿನ್ನು ನೋಡಬಹುದು. ಬಹುಶ: ಐದಾರು ವರ್ಷಗಳ ನಂತರ ಇವರೇ ನಿಮ್ಮ ತಾಯಿ-ತಂದೆ ಎಂದು ಅಜ್ಜ-ಅಜ್ಜಿಯರು ಮಗುವಿಗೆ ಪರಿಚಯ ಮಾಡಿಕೊಡುವ ಸನ್ನಿವೇಶ ಕೂಡ ಖಂಡಿತ ಬಾರದಿರದು. ವೃದ್ಧಾಪ್ಯದಲ್ಲಿ ತಂದೆ-ತಾಯಿಯರನ್ನು ನೆಮ್ಮದಿಯಿಂದ ಬಾಳುವಂತೆ ನೋಡಿಕೊಳ್ಳುವುದಿರಲಿ; ಅವರಿಗೆ ಆ ಕಾಲದಲ್ಲಿ ಪುನ: ಪೋಷಕರ ಜವಾಬ್ದಾರಿ ಹೊರಿಸುವ ಈ ನಿಷ್ಕರುಣಿಗಳಿಗೆ ಏನೆನ್ನಬೇಕೋ ತಿಳಿಯದಾಗಿದೆ. ಇದೇ ಧಾಟಿ ಮುಂದುವರಿದಲ್ಲಿ, ಬಹುಶ: ವೃದ್ಧಾಶ್ರಮ ಮತ್ತು ಅಬಲಾಶ್ರಮಗಳಂತೆ ಬಾಲಾಶ್ರಮಗಳೂ ಕಾಲಾನುಕ್ರಮದಲ್ಲಿ ತಲೆಯೆತ್ತಿದರೆ ಆಶ್ಚರ್ಯ ಪಡಬೇಕಾಗಿಲ್ಲ. ಸಾಕಷ್ಟು ಸಂಖ್ಯೆಯಲ್ಲಿ ಬೆಳೆಯುತ್ತಿರುವ ಬೋರ್ಡಿಂಗ್ ಸ್ಕೂಲ್‌ಗಳೂ ಬಹುಶ: ಇದರ ಮುನ್ಸೂಚನೆಯಿರಬಹುದು! ದಿಕ್ಕೆಟ್ಟ ಮಕ್ಕಳಿಂದ ಮುಂದೆ ದಿಕ್ಕೆಟ್ಟ ಸಮಾಜವನ್ನು ಸೃಷ್ಟಿಸಿದ ಶಾಪಕ್ಕೂ ಅಂತಹವರು ಗುರಿಯಾಗಬೇಕಾಗುತ್ತದೆ. ಧನ ಮದ, ವಿದ್ಯಾಮದ ಮತ್ತು ಅದರೊಂದಿಗೆ ಮಿಳಿತವಾದ ಅಹಂ ಕಾರ ಇಂದಿನ ಈ ಪ್ರವೃತ್ತಿಗೆ ಬಹುಶ: ಪ್ರಮುಖ ಕಾರಣಗಳು ಎನ್ನಬಹುದು.

ಆರ್ಥಿಕ ಸ್ವಾತಂತ್ರ್ಯ ಮತ್ತು ಸಹಾಯ ಒಂದು ಮಟ್ಟದವರೆಗೆ ಗಂಡು-ಹೆಣ್ಣು ಇಬ್ಬರಿಗೂ ಅತ್ಯಂತ ಅವಶ್ಯ. ಆ ಮಟ್ಟ ಮುಟ್ಟಿದ ಕೂಡಲೇ ಅದು ನಮ್ಮ ಸಂಬಂಧಗಳ ಮೇಲೆ, ನಮ್ಮ ನೆಮ್ಮದಿಯ ಮೇಲೆ ಮತ್ತು ಎಲ್ಲಕ್ಕಿಂತ ಮಿಗಿಲಾಗಿ ಮುಗ್ಧ ಎಳೆ ಜೀವಗಳ ಮೇಲೆ ಸವಾರಿ ಮಾಡಲು ಬಿಡಬಾರದು. ಹಣ ಕೇವಲ ನಮ್ಮ ಅವಶ್ಯಕತೆಗಳನ್ನು ಪೂರೈಸುವ ಒಂದು ಸಾಧನವಾಗಬೇಕಷ್ಟೇ ಅಲ್ಲದೇ ಅದು ನಮ್ಮ ಜೀವನ ಶೈಲಿಯನ್ನೇ ಪ್ರಭಾವಿಸುವ ಯಜಮಾನ ನಾಗಬಾರದು. ಅವಶ್ಯಕತೆಗೆ ಮೀರಿದ ಹಣ ನಮಗರಿವಿಲ್ಲದಂತೆಯೇ ನಮ್ಮ ಮೇಲೆ ಸವಾರಿ ಮಾಡಲುಪಕ್ರಮಿಸುತ್ತದೆ; ಸಂಬಂಧಗಳನ್ನು ಹದಗೆಡಿಸುತ್ತದೆ; ಅಂತಿಮವಾಗಿ ಮಾನವೀಯತೆ ಸಾಯುತ್ತದೆ. ಹಾಗಾಗಬಾರದೆಂದರೆ, ವಿಶೇಷವಾಗಿ ಇಂದಿನ ಯುವಕ-ಯುವತಿಯರು ತಮ್ಮ ಆದ್ಯತೆಗಳನ್ನು, ಅದರಲ್ಲೂ ಪ್ರಮುಖವಾಗಿ ಮದುವೆಯ ನಂತರದ ಜೀವನವನ್ನು ಸುಗಮವಾಗಿಸುವ ದೃಷ್ಟಿಯಿಂದ, ಬಹಳ ಜೋಪಾನವಾಗಿ ಗುರುತಿಸಿಕೊಳ್ಳಬೇಕು. ನಾಳಿನ ಸುಸಂಸ್ಕೃತ ಪ್ರಜೆಗಳನ್ನು ರೂಪುಗೊಳಿಸುವ ಗುರುತರ ಜವಾಬ್ದಾರಿಯನ್ನರಿತು ಜೀವನದಲ್ಲಿ, ಅದರಲ್ಲೂ ವಿಶೇಷವಾಗಿ ಸುಶಿಕ್ಷಿತ ಹೆಣ್ಣು ಮಕ್ಕಳು, ಅತೀ ಜಾಗರೂಕವಾದ ತೀರ್ಮಾನಗಳನ್ನು ತೆಗೆದುಕೊಳ್ಳುವುದು ಇಂದಿನ ತುರ್ತು ಅಗತ್ಯತೆ ಮತ್ತು ಅನಿವಾರ್ಯತೆ. ಅಂತಹ ಒಂದು ಧೀರ ನಿರ್ಧಾರದಿಂದ ಸಂಸಾರ ಆನಂದ ಸಾಗರವಾಗುತ್ತದೆ; ಹಣ ಕೊಡಲಾರದ, ಕೊಳ್ಳಲಾರದ, ಅಪರಿಮಿತ ಸೌಖ್ಯ ಕುಟುಂಬದ ಎಲ್ಲ ಸದಸ್ಯರ ಪಾಲಾಗುತ್ತದೆ.

ಸಂಸಾರದ ಕರ್ತವ್ಯ ನಿರ್ವಹಣೆಗೆ ಹಣ ಅಗತ್ಯ ನಿಜ. ಎಷ್ಟು ಹಣ ಬೇಕು ಎಂಬುದು ಸುಶಿಕ್ಷಿತರು ತಾವೇ ನಿರ್ಧರಿಸಿಕೊಳ್ಳಬೇಕಾದ ವಿಚಾರ. ಈ ಒಂದು ನಿರ್ಧಾರವನ್ನು ತೆಗೆದುಕೊಳ್ಳುವಲ್ಲೇ ಇಂದಿನ ಅನೇಕ ಯುವಕ-ಯುವತಿಯರು ಎಡವುತ್ತಿರುವುದರಿಂದಲೇ ಸಾಂಸಾರಿಕ ನೆಮ್ಮದಿ-ಸುಖ ನೇಪಥ್ಯಕ್ಕೆ ಸರಿದಿದೆ. ಎಲ್ಲೋ ಒಂದು ಕಡೆ ‘full-stop’ ಹಾಕದಿದ್ದರೆ, ವಾಕ್ಯ ಅಪೂರ್ಣವಾಗುವಂತೆ, ಜೀವನವೂ ಅಪೂರ್ಣವಾಗುತ್ತದೆ; ಅಸಹನೀಯವಾಗುತ್ತದೆ. ಅಪರಿಮಿತ ಅಷ್ಟೈಶ್ವರ್ಯಗಳು ಬೇಕೋ - ಸಾಂಸಾರಿಕ ನೆಮ್ಮದಿ, ಸೌಖ್ಯ ಬೇಕೋ - ಆಯ್ಕೆ ನಿಮ್ಮದೇ!
-ಕವಿ ವೆಂ. ಸುರೇಶ್
8.7.2011

Saturday, July 9, 2011

ಹೀಗೇಕೆ...?

* ಗಂಡನ ಸಂಬಳ ತಿಂಗಳಿಗೆ 1 ಲಕ್ಷ; ಆದರೆ ಹೆಂಡತಿಯೂ ದುಡಿಯಲೇಬೇಕು!

* Softfare ಗುದ್ದಾಟದಲ್ಲಿ ಮಕ್ಕಳಾಗಿದ್ದಾವೆ Toy-ware.

* ಮದುವೆ ಈಗ ಎರಡು 'ಮನ' ಗಳ ಸಮಾಗಮವಲ್ಲ; ಎರಡು 'money' ಗಳ ಸಂಗಮ.

* ಮಾನವ ಜನ್ಮ ದೊಡ್ಡದು; ಆದರೆ ಮಾನವನ ಬುದ್ಧಿ....?

* ನಕ್ಕರೆ ಅದೇ ಸ್ವರ್ಗ; ಬಿದ್ದರೆ ಬೇರೆಯವರಿಗೆ ಸ್ವರ್ಗ

* 'ಉಪ್ಪು ತಿಂದ ಮೇಲೆ ನೀರು ಕುಡಿಯಲೇಬೇಕು' - ಕುಡಿದರಾಯಿತು ಬಿಡಿ        ಎನ್ನುವರೇ ಬಹು ಮಂದಿ.

* ಮೂರು ಬಿಟ್ಟವರು ನಾಯಕರು; ಮೂರೂ ಇದ್ದವರು ಅಮಾಯಕರು

* ನಾಲ್ಕಾಣೆ ಕಾಣೆ; ಆಣೆಗೆ ಮಂಜುನಾಥನೇ ಹೊಣೆ

* ಕ್ರಿಕೆಟ್ ಗಿದೆ ಎಲ್ಲಾ ಸವಲತ್ತು; ಬೇರೆ ಆಟಗಳಿಗಿಲ್ಲ ಕವಡೆ ಕಿಮ್ಮತ್ತು.

* 'ಎಲೆ ಮರೆಯ ಕಾಯಿ'ಗಳನ್ನು ಹುಡುಕಿ, ಹೆಕ್ಕಿ, ತೆಗೆದು ಬಳಸುವ ವ್ಯವಧಾನ ಯಾರಿಗೂ ಇಲ್ಲ.

* 'Job satisfaction' ಗಿಂತ 'ಜೋಬ್ satisfaction' ಮೇಲು

* ಕುರಿ ಕಟುಕನನ್ನು ಹಿಂಬಾಲಿಸುವಂತೆ ಹೆಚ್ಚು ಹಣ ಕೀಳುವ ವೈದ್ಯರನ್ನೇ ಜನ ನಂಬುತ್ತಾರೆ.

* ಅಲೋಪತಿಯ ಅಡ್ಡ ಪರಿಣಾಮಗಳ ಅರಿವಿದ್ದೂ ಜನ ಅದಕ್ಕೇ ಜೋತು ಬೀಳುತ್ತಾರೆ.

ರಾಜಕೀಯ ಅಗ್ನಿಹೋತ್ರ
ಊರಿನ ಕೆರೆ ಕಟ್ಟೆ           ..            ..       ಸ್ವಾಹಾ
ಊರಿನ ನಿವೇಶನಗಳು    ..            ..       ಸ್ವಾಹಾ
ಊರಿನ ಗೋಮಾಳ        ..            ..       ಸ್ವಾಹಾ
ಊರಿನ ಮಾನಮರ್ಯಾದೆ             ..       ಸ್ವಾಹಾ
ಊರಿನ ಬಡರೈತರ ಜಮೀನು         ..       ಸ್ವಾಹಾ
ಸರ್ವಂ                         ..            ..       ಸ್ವಾಹಾ

ಇದೆಲ್ಲಾ ನನ್ನದೇ             ..            ..       ಸ್ವಾಹಾ


Wednesday, July 6, 2011

ಕೂಪ ಮಂಡೂಕೋಪನಿಷತ್!

     ಸಾಮಾನ್ಯವಾಗಿ ಅಲ್ಪಜ್ಞಾನಿಗಳನ್ನು, ವಿಶಾಲ ಮನಸ್ಸಿಲ್ಲದವರನ್ನು ಮತ್ತು ತಮ್ಮನ್ನೇ ಸರ್ವಜ್ಞರೆಂದುಕೊಂಡವರನ್ನು ಕಂಡಾಗ ಕೂಪ ಮಂಡೂಕ ಗಳೆಂದು ಮೂದಲಿಸುವುದು ವಾಡಿಕೆ. ನಿಜಾರ್ಥದಲ್ಲಿ ನೋಡಿದರೆ ಈ ಹೋಲಿಕೆ ಆ ಕೂಪದಲ್ಲಿರುವ ಮಂಡೂಕಕ್ಕೆ ಮಾಡುವ ಅಪಚಾರ/ಅವಹೇಳನವೇ ಸರಿ. ಆ ಭಾವಿಯಲ್ಲಿ ಆ ಕಪ್ಪೆ ತನಗೆ ಬೇಕಾದ ಆಹಾರಾಶ್ರಯಾದಿಗಳನ್ನು ಪಡೆದು ತನ್ನಷ್ಟಕ್ಕೆ ತಾನು ಸುಖ-ನೆಮ್ಮದಿಯಿಂದ ವಟರ್...ವಟರ್... ಎಂದು ಹಾಡುತ್ತಾ ಬದುಕುತ್ತಿದೆ. ಅದಕ್ಕೆ ಹೊರಗಿನ ನದಿ-ಸಮುದ್ರಗಳ ಅರಿವಿಲ್ಲ; ಅದಕ್ಕೆ ಆ ಅರಿವು ಬೇಡವೂ ಬೇಡ! ತನಗೆ ಬೇಕಾದದ್ದೆಲ್ಲಾ ಅದಕ್ಕೆ ಅಲ್ಲಿಯೇ ಸಿಕ್ಕಿದೆ; ಇಲ್ಲವೇ ಸಿಕ್ಕಷ್ಟರಲ್ಲಿ ತೃಪ್ತಿ ಹೊಂದಿದೆ. ಹಾಗಾಗಿಯೇ ಅದು ಅಲ್ಲಿ ಹಾಯಾಗಿದೆ!

     ಹಾಗೆ ನೋಡಿದರೆ ನಾವು ಒಬ್ಬೊಬ್ಬರೂ ಕೂಪ ಮಂಡೂಕಿಗಳೇ. ವ್ಯತ್ಯಾಸವಿಷ್ಟೇ: ಅದು ಪಡೆದುದನ್ನನುಭವಿಸುತ್ತಾ ಅದರಲ್ಲೇ ತೃಪ್ತಿ ಹೊಂದಿ ಹಾಯಾಗಿದೆ. ನಾವಿಲ್ಲ ಅಷ್ಟೆ. ನಮಗೆ ಇರುವ ಕೂಪದಲ್ಲೇ ನೆಮ್ಮದಿಯಾಗಿ ಬದುಕಲೂ ಬಾರದು; ನದಿ-ಸಮುದ್ರಗಳಲ್ಲಿ ಈಜಿ ಬದುಕಲೂ ಧೈರ್ಯ ಸಾಲದು. ಪ್ರತಿಯೊಬ್ಬರನ್ನೂ ಗಮನಿಸಿ. ಅವರವರ ಕಾರ್ಯಕ್ಷೇತ್ರವೇ ಅವರವರ ಕೂಪ! ಅದನ್ನು ಮೀರಿ ಬಹುಮಂದಿ ಚಿಂತಿಸಲಾರರು; ಬದುಕಲಾರರು. ಜಾಣನಾದವನು ಬೇರೆ ಕೂಪಗಳಲ್ಲಿನ ಮಂಡೂಕಗಳ ಬಗ್ಗೆ ತಲೆ ಕೆಡಿಸಿಕೊಳ್ಳದೇ ತನ್ನ ಕೂಪದಲ್ಲಿಯೇ ಸುಖ-ಸಂತೋಷ-ನೆಮ್ಮದಿಯನ್ನು ಕಂಡುಕೊಳ್ಳುತ್ತಾನೆ. ಇಂತಹವರು ವಿರಳ. ತನ್ನ ಕೂಪವನ್ನೇ ಪಾಪಕೂಪವನ್ನಾಗಿಸಿಕೊಂಡು ಇತರೇ ಕೂಪಗಳಲ್ಲಿರುವ ಮಾನವ-ಮಂಡೂಕಗಳ ಬಗ್ಗೆಯೇ ಟೀಕೆ-ಟಿಪ್ಪಣಿ, ಪರಿಹಾಸ, ವ್ಯಂಗ್ಯ ಮತ್ತು ಅಪಹಾಸ್ಯ ಮಾಡುತ್ತಾ ಬಾಳುವವರೇ ಇಂದು ಬಹುಜನ. ಅಂತಹವರು ತಮ್ಮ ಕೂಪದಲ್ಲಿಯೂ ನೆಮ್ಮದಿಯಾಗಿ ಬಾಳಲಾರರು; ಇತರರನ್ನೂ ನೆಮ್ಮದಿಯಾಗಿ ಬದುಕಲು ಬಿಡಲಾರರು. ತಾನೂ ಬಾಳಲಾರ, ಉಳಿದವರನ್ನೂ ಬಾಳಲೂ ಬಿಡಲಾರ ಎಂಬಂತೆ.

     ಒಬ್ಬ ಬಡವನಿದ್ದನಂತೆ. ಅವನು ಪ್ರತಿದಿನ ಅಚಂಚಲ ಭಕ್ತಿಯಿಂದ ದೇವಸ್ಥಾನಕ್ಕೆ ಹೋಗಿ ನಮಸ್ಕರಿಸಿ ಕಾರ್ಯಪ್ರವೃತ್ತನಾಗುತ್ತಿದ್ದ. ಆತನ ಭಕ್ತಿಗೆ ಒಲಿದ ದೇವರು ಪ್ರತ್ಯಕ್ಷನಾಗಿ ನಿನಗೇನು ವರ ಬೇಕು, ಕೇಳು ಎಂದನಂತೆ. ಆ ಬಡವ ನನಗೆ ಆನೆ ಬೇಕು ಎಂದನಂತೆ. ಚಕಿತಗೊಂಡ ದೇವರು, ಅಲ್ಲಾ, ನಿನ್ನನ್ನು ನೀನೇ ಸಾಕಲು ನಿನಗಾಗುತ್ತಿಲ್ಲ. ಇನ್ನು ಆನೆಯನ್ನು ಎಲ್ಲಿಂದ ಸಾಕುವೆ, ಬೇರೆ ವರ ಕೇಳು ಎಂದನಂತೆ. ಆದರೆ ಆ ಬಡವ ತನಗೆ ಅನೆ ಯೇ ಬೇಕೆಂದಾಗ, ಬಹುಶ: ಚಿನ್ನದ ಆನೆ ಕೇಳುತ್ತಿದ್ದಾನೆಂದು ಭಾವಿಸಿ ದೇವರು ಅದನ್ನು ಕರುಣಿಸಲು ಮುಂದಾಗುತ್ತಾನೆ. ಆ ಬಡವ ಅದಲ್ಲ, ನನಗೆ ಆನೆ ಎಂದರೆ ರೋಗ್ಯ ಮತ್ತು ನೆಮ್ಮದಿಯ ವರ ಕರುಣಿಸು ಎಂದನಂತೆ!

     ನಮಗೆಲ್ಲರಿಗೂ ಬೇಕಾದ್ದೂ ಅದೇ ಆನೆಯೇ! ದಿನನಿತ್ಯ ನಡೆಸುವ ಎಲ್ಲ ಕಸರತ್ತುಗಳೂ ಅದಕ್ಕಾಗಿಯೇ. ಕಸರತ್ತುಗಳ ವೈಖರಿ, ಮಾರ್ಗ, ಪರಿಕಲ್ಪನೆಗಳು ಮಾತ್ರಾ ಬೇರೆ ಬೇರೆ. ಹಾಗಾಗಿ ಒಬ್ಬೊಬ್ಬರದು ಒಂದೊಂದು ರೀತಿಯ ಸಾಧನಾಪಥ. ಕೆಲವರ ನನ್ನ ಪಥವೇ ಅಂತಿಮ - ಸುಗಮ ಎಂಬುದು ಬಹುಶ: ಅತೀ ಬಾಲಿಶವಾದ, ಅಹಂಕಾರದ ಮತ್ತು ಅಜ್ಞಾನದ ಮಾತಾದೀತು. ಭಗವದ್ಗೀತೆ ಕೂಡ ಆಧ್ಯಾತ್ಮಿಕ ಸಾಧನೆಗಾಗಿ ಕರ್ಮಯೋಗ, ಭಕ್ತಿಯೋಗ, ಜ್ಞಾನಯೋಗ ಮುಂತಾದ ಹಲವಾರು ಸಾಧನಾ ಪಥಗಳನ್ನು ಪ್ರತಿಪಾದಿಸಿದೆ. ಎಲ್ಲರೂ ಎಲ್ಲವನ್ನೂ ಪರಿಪಾಲಿಸುವುದು ಅತೀ ಕಷ್ಟಸಾಧ್ಯವಾದ ವಿಚಾರ. ಅವರವರ ಕರ್ಮಾನುಸಾರ, ಶಕ್ತ್ಯಾನುಸಾರ ಮತ್ತು ಸಂಸ್ಕಾರಾನುಸಾರ ಒಬ್ಬೊಬ್ಬರು ಒಂದೊಂದು ಮಾರ್ಗಾಶ್ರಯವನ್ನು ಆರಿಸಿಕೊಳ್ಳುತ್ತಾರೆ. ಅದಕ್ಕೆಂದೇ ಭಗವದ್ಗೀತೆಯಲ್ಲಿ ಶ್ರೀ ಕೃಷ್ಣ ಅಲ್ಪ ಅನುಷ್ಠಾನವೂ ಕಾರ್ಯಸಿದ್ಧಿ ನೀಡುವುದು ಎಂಬುದನ್ನು ಈ ರೀತಿ ಹೇಳಿದ್ದಾರೆ:
'ಸ್ವಲ್ಪಮಪ್ಯಸ್ಯ ಧರ್ಮಸ್ಯ ತ್ರಾಯತೇ ಮಹತೋ ಭೂಯಾತ್ '- ಅಂದರೆ ಗೀತಾಸಾರದ ಸ್ವಲ್ಪ ಅನುಷ್ಠಾನ ಕೂಡ ಮನುಷ್ಯನನ್ನು ಹೆಚ್ಚು ಶ್ರೀಮಂತನೂ, ಸುಂದರನೂ ಹಾಗೂ ಭಯರಹಿತನೂ ಆಗಿ ರೂಪುಗೊಳ್ಳುವಲ್ಲಿ ನೆರವಾಗುತ್ತದೆ. ಹೇಗೆ ಕೂಪದಲ್ಲಿರುವ ಮಂಡೂಕ ತನಗೆಟಕಿದಷ್ಟನ್ನು ಪಡೆದು ಮುನ್ನಡೆಯುತ್ತದೆಯೋ ಮತ್ತು ಅಷ್ಟರಲ್ಲಿಯೇ ನೆಮ್ಮದಿಯನ್ನು ಪಡೆಯುತ್ತದೆಯೋ ಅದೇ ರೀತಿ ನಮ್ಮ ಜ್ಞಾನಚಕ್ಷುಗಳಿಗೆಟಕುವಂತಹ ಕೆಲವೇ ಉತ್ತಮ ವಿಚಾರಗಳನ್ನು ಅರಿತು, ಪರಾಮರ್ಶಿಸಿಕೊಂಡು, ಅಳವಡಿಸಿಕೊಂಡು ನಂತರ ನಿರಂತರ ಸಾಧನೆಗೈಯುವುದು ದ್ವಂದ್ವರಹಿತ ಬಾಳ್ವೆಗೆ ಶ್ರೀ ಕೃಷ್ಣ ಹೇಳಿದಂತೆ ನಾಂದಿಯಾಗಬಲ್ಲದು.

     ಹಾಗಾಗಿ ಕೂಪದಲ್ಲಿರುವ ಬಡಪಾಯಿ ಮಂಡೂಕದ ಗೊಡವೆ ನಮಗೆ ಬೇಡ. ಅದು ಅಲ್ಲಿ ಸುಖವಾಗಿಯೇ ಇದೆ; ಇರುತ್ತದೆ. ಅದನ್ನು ಹಾಗೆಯೇ ಅಲ್ಲಿಯೇ ಬಿಟ್ಟುಬಿಡೋಣ. ಮಂಡೂಕದ ಬಾಳು ನಮಗೆ ಆದರ್ಶಪ್ರಾಯವದರಷ್ಟೇ ಸಾಕು. ಅದರಂತೇ, ನಮ್ಮ ಇತಿ-ಮಿತಿಯಲ್ಲಿಯೇ, ನಮ್ಮ ನಮ್ಮ ಕೂಪಗಳಲ್ಲಿಯೇ, ಸಂತೋಷ-ಚಿತ್ತರಾಗಿ ಬಾಳಿದರೆ ಅದಕ್ಕಿಂತ ಸುಖ-ಶಾಂತಿ-ನೆಮ್ಮದಿ ಬೇಕೆ?
ಅಲ್ಪಜ್ಞರೇ ಎಲ್ಲ ಇಲ್ಲಿ ಸರ್ವಜ್ಞರು ಯಾರು ಇಲ್ಲ
ಅಲ್ಪವಿದ್ಯಾ ಮಹಾಗರ್ವಿಗಳೇ ಬಹುತೇಕ ಇಲ್ಲಿ ಎಲ್ಲ
ಅಲ್ಪಮತಿಯಲ್ಲೇ ಅರಸೋಣ ಮನದ ಸಚ್ಚಿದಾನಂದ
ಅದಕ್ಕಿಂತಿನ್ನೇನು ಬೇಕು ಓ ಮುಕುಂದ 
 
     ಜಗದ ಎಲ್ಲ ಸ್ವಯಂ-ನಿರ್ಮಿತ ಕೂಪಗಳಲ್ಲಿರುವ ಮಾನವ-ಮಂಡೂಕಿಗಳೆಲ್ಲರೂ ಸಮಾನರೇ. ಎಲ್ಲರೂ ಸಮಾನ-ಸುಖಿಗಳಾಗಿ ಬಾಳಲಿ ಎಂಬ ಭಾವ ಅಲ್ಪಮತಿಯನ್ನೂ (ಕೂಪ ಮಾನವ-ಮಂಡೂಕವನ್ನೂ) ಸರ್ವಜ್ಞನನ ಸಮೀಪವಾದರೂ ತರಬಲ್ಲದು.
                                                                                                                                    -ಕವಿ ವೆಂ. ಸುರೇಶ್