|| ಶ್ರೀ ರಾಮ ಜಯ ರಾಮ ಜಯ ಜಯ ರಾಮ ||

Saturday, May 29, 2010

ಪ್ರಕೃತಿ ಮತ್ತು ಮನಸ್ಸು

ನಾವೆಲ್ಲರೂ ಪ್ರಕೃತಿಯ ಕಂದಮ್ಮಗಳು. ಪ್ರಕೃತಿಗೂ ನಮಗೂ ಅವಿಚ್ಛಿನ್ನವಾದ ಮತ್ತು ಅವಿನಾಭಾವದ ಸಂಬಂಧ. ಪ್ರಕೃತಿಯಿಂದ ನಮ್ಮ ಮನಸ್ಸು ಎಂದಿಗೂ, ಯಾವ ಕಾರಣಕ್ಕೂ ಕ್ಷೋಭೆಗೊಳ್ಳುವುದೇ ಇಲ್ಲ. ಬದಲಾಗಿ ಪ್ರಕೃತಿಯ ಒಡನಾಟ ಮನಸ್ಸನ್ನು ಇನ್ನಷ್ಟು ಪ್ರಫುಲ್ಲವಾಗಿಸುತ್ತದೆ ಎಂಬುದು ಎಲ್ಲರ ಅನುಭವವೇದ್ಯವಾದ ಸಂಗತಿ. ಮನಸ್ಸು ಸಂಗೀತವಾದರೆ, ಪ್ರಕೃತಿಯೇ ಅದರ ಶೃತಿ. ಶೃತಿಯನ್ನು ಸಂಗೀತದ ತಾಯಿ ಎಂದು ಕರೆಯುತ್ತಾರೆ. ಶೃತಿ ಸರಿಯಾಗಿ ಬೆರೆತಾಗಲೇ ಸಂಗೀತ ಆಸ್ವಾದನೀಯ; ಇಲ್ಲವೇ ಅಸಹನೀಯ. ಹಾಗಾಗಿ ಮನಸ್ಸೆಂಬ ಈ ಸಂಗೀತಕ್ಕೆ ಪ್ರಕೃತಿಯೆಂಬ ಶೃತಿ ಸೇರಿದಾಗ ಆ ಸಚ್ಚಿದಾನಂದದ ಅನುಭವ ಸಾಧ್ಯವಾದೀತು. ಅರ್ಥಾತ್, ಪಂಚೇಂದ್ರಿಯಗಳು ಬಲು ಸುಲಭವಾಗಿ ಬಾಹ್ಯ ಪ್ರಲೋಭನೆಗಳಿಗೆ ಒಳಗಾಗುವುದನ್ನು ತಡೆಯಲು, ಮನಸ್ಸು ಹೆಚ್ಚು ಹೆಚ್ಚು ಕಾಲ ಪ್ರಕೃತಿಯ ಮಡಿಲಲ್ಲಿ ವಿಹರಿಸುವುದರತ್ತ ಗಮನವೀಯಬೇಕು. ಅದಕ್ಕೆಂದೇ ನಮ್ಮ ಮನಸ್ಸೇ ನಮಗೆ ವರವೂ ಹೌದು; ಶಾಪವೂ ಹೌದು. ಗಿಡ, ಮರ, ಬಳ್ಳಿ, ನದಿ, ಹಳ್ಳ, ಕೊಳ್ಳ, ಗುಡ್ಡ, ಬೆಟ್ಟ, ಕಣಿವೆಗಳು, ಜಲಪಾತಗಳು, ಶುಭ್ರ ಆಕಾಶ, ಮೋಡಗಳು, ವೈವಿಧ್ಯಮಯವಾದ ಪ್ರಾಣಿ-ಪಕ್ಷಿಗಳು ಮುಂತಾದ ಪ್ರಕೃತಿಯ ರಚನೆಗಳನ್ನು ನೋಡಿದಷ್ಟೂ, ಅವುಗಳೊಡನೆ ಸಮಯ ಕಳೆದಷ್ಟೂ ನಮ್ಮ ಮನಸ್ಸು ಶಾಂತವಾಗಿರುತ್ತದೆ; ನೆಮ್ಮದಿಯಿಂದಿರುತ್ತದೆ. ಪಂಚೇಂದ್ರಿಯಗಳ ಅನುಭವಕ್ಕೆ ಬರುವ ಬಹುತೇಕ ಎಲ್ಲ ವಸ್ತು-ವಿಷಯಗಳೂ ನಮ್ಮ ಶಾಂತಿಯನ್ನು ಅಂತಿಮವಾಗಿ ಕೆಡಿಸುವಂತಹವುಗಳೇ. ಅವುಗಳಿಂದ ಶಾಶ್ವತ ಶಾಂತಿ ಅಸಾಧ್ಯ. ಅಂತೆಯೇ ಪ್ರಕೃತಿಯೊಡನೆ ನಿರಂತರ ನಮ್ಮ ಮನಸ್ಸನು ಬೆಸೆಯುವ ಪ್ರಕ್ರಿಯೆ ಪ್ರಜ್ಞಾಪೂರ್ವಕವಾಗಿ ಸದಾ ನಡೆಯುತ್ತಲೇ ಇರಬೇಕು. ಅದುವೇ ಮನಸ್ಸನ್ನು ಸ್ವಲ್ಪ ಮಟ್ಟಿಗಾದರೂ ಹತೋಟಿಯಲ್ಲಿಡಲು, ಸಂಯಮದಲ್ಲಿಡಲು ಮತ್ತು ಶಾಂತಿ ಪಡೆಯಲು ಇರುವ ಸುಲಭ ಸಾಧನ.

No comments:

Post a Comment