ಮನಸಿನ ಭಾವನೆಗಳನ್ನು, ತುಮುಲಗಳನ್ನು, ಸಂತೋಷ, ಸುಖ-ದು:ಖಗಳನ್ನು ಇನ್ನೊಬ್ಬರೊಡನೆ ಹಂಚಿಕೊಂಡಾಗಲೇ ನೆಮ್ಮದಿ. ಆ "ಇನ್ನೊಬ್ಬರು" ಈಗ, ಅನೇಕ ಕಾರಣಗಳಿಂದ ಬಲು ದುರ್ಲಭರಾಗಿದ್ದಾರೆ. ಅಂತಹವರು ಸಿಗದಿದ್ದಾಗ ಮನಸಿನ ಭಾವನೆಗಳನ್ನು ಹೊರಹಾಕಲು ಈ ಬ್ಲಾಗಿನ ಪಯಣ - ನಿಮ್ಮೊಂದಿಗೆ.
|| ಶ್ರೀ ರಾಮ ಜಯ ರಾಮ ಜಯ ಜಯ ರಾಮ ||
Thursday, May 27, 2010
ಮುಂದುವರೆದ ಸ್ವಗತ
ನನಗನ್ನಿಸುತ್ತದೆ 'ನಾನು' ,'ನನ್ನದು' ಇತ್ಯಾದಿ ಭಾವನೆಗಳು ಹುಟ್ಟುವುದೇ ಇತರರು ನಮ್ಮನ್ನು ಗುರುತಿಸುವುದರಿಂದ ಮತ್ತು ಅದಕ್ಕೆ ತಕ್ಕ ಪ್ರತಿಕ್ರಿಯೆಗಳನ್ನು ನೀಡುವುದರಿಂದ. ಯಾರಾದರೂ ನಮ್ಮನ್ನು ಗುರುತಿಸುತ್ತಲೇ ಇರುವುದರಿಂದ ಮತ್ತು ನಮ್ಮ ವಶದಲ್ಲಿರುವ ಅನೇಕ ವಿಚಾರಗಳ ಬಗ್ಗೆ ಇತರರು ಗಮನಿಸುತ್ತಲೇ ಇರುವುದರಿಂದ ಈ ಭಾವನೆಗಳು ಗರಿಗೆದರಿಕೊಂಡು, ಬಹು ಸಂದರ್ಭಗಳಲ್ಲಿ, ಅವಶ್ಯಕತೆಗೂ ಮೀರಿ ಬೆಳೆದುಬಿಡುತ್ತವೆ. ಅಧಿಕಾರ, ಕುರ್ಚಿ ಮತ್ತು ಹಣದ ಪ್ರಭಾವದಿಂದ ಇತರರು ನಮ್ಮನ್ನು ಹೊಗಳಿ, ಹೊಗಳಿ ನಮ್ಮ ನಿಜತನವನ್ನು ಮರೆಸಿಬಿಡುತ್ತಾರೆ. ಅಂತಹ ಸಂದರ್ಭಗಳಲ್ಲಿಯೇ ಅಹಂಕಾರ ತಲೆ ಎತ್ತುತ್ತದೆ. ಅನಾಯಾಸವಾಗಿ ಅನೇಕ ತಪ್ಪು-ಪ್ರಮಾದಗಳಿಗೂ ಎಡೆ ಮಾಡಿಬಿಡುತ್ತವೆ. ಆದುದರಿಂದ ಈ ಬಾಹ್ಯ ಪ್ರಚೋದನೆ ಗಳು ಮತ್ತು ಪ್ರಲೋಭಗಳೆಲ್ಲವೂ ನಮ್ಮ ನಿಜವಾದ ಅಂತ:ಸತ್ವವನ್ನು, ನಮ್ಮ ನಿಜವಾದ ನಮ್ಮತನವನ್ನು ಮತ್ತು ನಮ್ಮ ಸಾಮಾನ್ಯವಾದ ಶಕ್ತಿ-ಸಾಮರ್ಥ್ಯವನ್ನು ಮರೆಮಾಚುವ ಪರದೆಗಳು. ಈ ಬಲೆಯೊಳಗೆ ಸಿಕ್ಕಿಕೊಂಡು ಹೊರಬರಲು ಆಗದೇ, ನಿಜಸತ್ಯವನ್ನೂ ಅರಿಯದೇ ತೊಳಲಾಡುವವರೇ ಬಹುಮಂದಿ. ಹಾಗಾಗಿ ನಮ್ಮನ್ನರಿಯುವ ಪ್ರಕ್ರಿಯೆ ಸುಲಭವಾಗಬೇಕಾದರೆ ನಾವು ಈ ಎಲ್ಲಾ ಬಾಹ್ಯ ಆಕರ್ಷಣೆಗಳ ಪ್ರಭಾವದಿಂದ ಹೊರಗೆ ಬರಬೇಕು. ಹಣ, ಕುರ್ಚಿ, ಅಧಿಕಾರ ಇದ್ದಾಗ ಮತ್ತು ಇಲ್ಲದಾಗ ಸಮಾಜದ ಪ್ರತಿಕ್ರಿಯೆಗಳ ನೈಜ ವಿಶ್ಲೇಷಣೆಯೇ ಸಾಕು ನಮ್ಮ ನಿಜತನವನ್ನು ಅರಿಯಲು. ಈ ಒಂದು ಪರಾಮರ್ಶೆಯೇ ನಮಗೇ ಸಾಕಷ್ಟು ಅರಿವನ್ನು ಮತ್ತು ಅಂತಿಮವಾಗಿ ನೆಮ್ಮದಿಯನ್ನೂ ನೀಡಬಲ್ಲದು. ಹೊರಗಿನ ಪ್ರಚೋದನೆಗಳಿಗೆ ನಗಣ್ಯ ಮನೋಭಾವನೆ ಕೂಡ ಈ ನಿಟ್ಟಿನಲ್ಲಿ ಬಲು ಸಹಕಾರಿ. ಅನವಶ್ಯವಾದುವುಗಳಿಗೆ ಕೂಡ ನಮ್ಮ ಪ್ರತಿಕ್ರಿಯೆ ಶೂನ್ಯವಾದಷ್ಟೂ ನೆಮ್ಮದಿ ಹೆಚ್ಚಬಲ್ಲದು. "ನಿನ್ನ ನೀನು ಮರೆತರೇನು ಸುಖವಿದೇ..." ಅಲ್ಲವೇ?
Subscribe to:
Post Comments (Atom)
No comments:
Post a Comment