|| ಶ್ರೀ ರಾಮ ಜಯ ರಾಮ ಜಯ ಜಯ ರಾಮ ||

Saturday, May 29, 2010

ಪ್ರಕೃತಿ ಮತ್ತು ಮನಸ್ಸು

ನಾವೆಲ್ಲರೂ ಪ್ರಕೃತಿಯ ಕಂದಮ್ಮಗಳು. ಪ್ರಕೃತಿಗೂ ನಮಗೂ ಅವಿಚ್ಛಿನ್ನವಾದ ಮತ್ತು ಅವಿನಾಭಾವದ ಸಂಬಂಧ. ಪ್ರಕೃತಿಯಿಂದ ನಮ್ಮ ಮನಸ್ಸು ಎಂದಿಗೂ, ಯಾವ ಕಾರಣಕ್ಕೂ ಕ್ಷೋಭೆಗೊಳ್ಳುವುದೇ ಇಲ್ಲ. ಬದಲಾಗಿ ಪ್ರಕೃತಿಯ ಒಡನಾಟ ಮನಸ್ಸನ್ನು ಇನ್ನಷ್ಟು ಪ್ರಫುಲ್ಲವಾಗಿಸುತ್ತದೆ ಎಂಬುದು ಎಲ್ಲರ ಅನುಭವವೇದ್ಯವಾದ ಸಂಗತಿ. ಮನಸ್ಸು ಸಂಗೀತವಾದರೆ, ಪ್ರಕೃತಿಯೇ ಅದರ ಶೃತಿ. ಶೃತಿಯನ್ನು ಸಂಗೀತದ ತಾಯಿ ಎಂದು ಕರೆಯುತ್ತಾರೆ. ಶೃತಿ ಸರಿಯಾಗಿ ಬೆರೆತಾಗಲೇ ಸಂಗೀತ ಆಸ್ವಾದನೀಯ; ಇಲ್ಲವೇ ಅಸಹನೀಯ. ಹಾಗಾಗಿ ಮನಸ್ಸೆಂಬ ಈ ಸಂಗೀತಕ್ಕೆ ಪ್ರಕೃತಿಯೆಂಬ ಶೃತಿ ಸೇರಿದಾಗ ಆ ಸಚ್ಚಿದಾನಂದದ ಅನುಭವ ಸಾಧ್ಯವಾದೀತು. ಅರ್ಥಾತ್, ಪಂಚೇಂದ್ರಿಯಗಳು ಬಲು ಸುಲಭವಾಗಿ ಬಾಹ್ಯ ಪ್ರಲೋಭನೆಗಳಿಗೆ ಒಳಗಾಗುವುದನ್ನು ತಡೆಯಲು, ಮನಸ್ಸು ಹೆಚ್ಚು ಹೆಚ್ಚು ಕಾಲ ಪ್ರಕೃತಿಯ ಮಡಿಲಲ್ಲಿ ವಿಹರಿಸುವುದರತ್ತ ಗಮನವೀಯಬೇಕು. ಅದಕ್ಕೆಂದೇ ನಮ್ಮ ಮನಸ್ಸೇ ನಮಗೆ ವರವೂ ಹೌದು; ಶಾಪವೂ ಹೌದು. ಗಿಡ, ಮರ, ಬಳ್ಳಿ, ನದಿ, ಹಳ್ಳ, ಕೊಳ್ಳ, ಗುಡ್ಡ, ಬೆಟ್ಟ, ಕಣಿವೆಗಳು, ಜಲಪಾತಗಳು, ಶುಭ್ರ ಆಕಾಶ, ಮೋಡಗಳು, ವೈವಿಧ್ಯಮಯವಾದ ಪ್ರಾಣಿ-ಪಕ್ಷಿಗಳು ಮುಂತಾದ ಪ್ರಕೃತಿಯ ರಚನೆಗಳನ್ನು ನೋಡಿದಷ್ಟೂ, ಅವುಗಳೊಡನೆ ಸಮಯ ಕಳೆದಷ್ಟೂ ನಮ್ಮ ಮನಸ್ಸು ಶಾಂತವಾಗಿರುತ್ತದೆ; ನೆಮ್ಮದಿಯಿಂದಿರುತ್ತದೆ. ಪಂಚೇಂದ್ರಿಯಗಳ ಅನುಭವಕ್ಕೆ ಬರುವ ಬಹುತೇಕ ಎಲ್ಲ ವಸ್ತು-ವಿಷಯಗಳೂ ನಮ್ಮ ಶಾಂತಿಯನ್ನು ಅಂತಿಮವಾಗಿ ಕೆಡಿಸುವಂತಹವುಗಳೇ. ಅವುಗಳಿಂದ ಶಾಶ್ವತ ಶಾಂತಿ ಅಸಾಧ್ಯ. ಅಂತೆಯೇ ಪ್ರಕೃತಿಯೊಡನೆ ನಿರಂತರ ನಮ್ಮ ಮನಸ್ಸನು ಬೆಸೆಯುವ ಪ್ರಕ್ರಿಯೆ ಪ್ರಜ್ಞಾಪೂರ್ವಕವಾಗಿ ಸದಾ ನಡೆಯುತ್ತಲೇ ಇರಬೇಕು. ಅದುವೇ ಮನಸ್ಸನ್ನು ಸ್ವಲ್ಪ ಮಟ್ಟಿಗಾದರೂ ಹತೋಟಿಯಲ್ಲಿಡಲು, ಸಂಯಮದಲ್ಲಿಡಲು ಮತ್ತು ಶಾಂತಿ ಪಡೆಯಲು ಇರುವ ಸುಲಭ ಸಾಧನ.

Thursday, May 27, 2010

ಮನಸ್ಸಿನ ಒಂದು ಪರಿಭಾಷೆ

ಒಳಗೊಂದು ಮುಖ, ಹೊರಗೆ ನಾನಾ ಮುಖ
ಒಳಗೆ ಒಂದೇ ಭಾವನೆ, ಹೊರಗೆ ಹರಿವುದು ನಾನಾ ಭಾವನೆ
ಒಳಗೆಲ್ಲ ತಳಮಳ-ಕಳವಳ, ಹೊರಗೆ ಮಾತ್ರ ಫಳಫಳ
ಒಳಗೆಲ್ಲ ಬರೀ ಬೇಗುದಿ, ಹೊರಗೆ ತೋರಿಕೆಯ ನೆಮ್ಮದಿ
ಒಳಗಿದೆ ಎಡವಿದ ನೋವು, ಹೊರಗೆ ಮಾತ್ರ ಸತ್ಯದ ಸಾವು
ನನಗಿರಲಿ ಎಲ್ಲವೂ, ಉಳಿದವರಿಗೇಕೆ ಅನ್ಯಥಾ ಎಲ್ಲವೂ?

ಮುಂದುವರೆದ ಸ್ವಗತ


ನನಗನ್ನಿಸುತ್ತದೆ 'ನಾನು' ,'ನನ್ನದು' ಇತ್ಯಾದಿ ಭಾವನೆಗಳು ಹುಟ್ಟುವುದೇ ಇತರರು ನಮ್ಮನ್ನು ಗುರುತಿಸುವುದರಿಂದ ಮತ್ತು ಅದಕ್ಕೆ ತಕ್ಕ ಪ್ರತಿಕ್ರಿಯೆಗಳನ್ನು ನೀಡುವುದರಿಂದ. ಯಾರಾದರೂ ನಮ್ಮನ್ನು ಗುರುತಿಸುತ್ತಲೇ ಇರುವುದರಿಂದ ಮತ್ತು ನಮ್ಮ ವಶದಲ್ಲಿರುವ ಅನೇಕ ವಿಚಾರಗಳ ಬಗ್ಗೆ ಇತರರು ಗಮನಿಸುತ್ತಲೇ ಇರುವುದರಿಂದ ಈ ಭಾವನೆಗಳು ಗರಿಗೆದರಿಕೊಂಡು, ಬಹು ಸಂದರ್ಭಗಳಲ್ಲಿ, ಅವಶ್ಯಕತೆಗೂ ಮೀರಿ ಬೆಳೆದುಬಿಡುತ್ತವೆ. ಅಧಿಕಾರ, ಕುರ್ಚಿ ಮತ್ತು ಹಣದ ಪ್ರಭಾವದಿಂದ ಇತರರು ನಮ್ಮನ್ನು ಹೊಗಳಿ, ಹೊಗಳಿ ನಮ್ಮ ನಿಜತನವನ್ನು ಮರೆಸಿಬಿಡುತ್ತಾರೆ. ಅಂತಹ ಸಂದರ್ಭಗಳಲ್ಲಿಯೇ ಅಹಂಕಾರ ತಲೆ ಎತ್ತುತ್ತದೆ. ಅನಾಯಾಸವಾಗಿ ಅನೇಕ ತಪ್ಪು-ಪ್ರಮಾದಗಳಿಗೂ ಎಡೆ ಮಾಡಿಬಿಡುತ್ತವೆ. ಆದುದರಿಂದ ಈ ಬಾಹ್ಯ ಪ್ರಚೋದನೆ ಗಳು ಮತ್ತು ಪ್ರಲೋಭಗಳೆಲ್ಲವೂ ನಮ್ಮ ನಿಜವಾದ ಅಂತ:ಸತ್ವವನ್ನು, ನಮ್ಮ ನಿಜವಾದ ನಮ್ಮತನವನ್ನು ಮತ್ತು ನಮ್ಮ ಸಾಮಾನ್ಯವಾದ ಶಕ್ತಿ-ಸಾಮರ್ಥ್ಯವನ್ನು ಮರೆಮಾಚುವ ಪರದೆಗಳು. ಈ ಬಲೆಯೊಳಗೆ ಸಿಕ್ಕಿಕೊಂಡು ಹೊರಬರಲು ಆಗದೇ, ನಿಜಸತ್ಯವನ್ನೂ ಅರಿಯದೇ ತೊಳಲಾಡುವವರೇ ಬಹುಮಂದಿ. ಹಾಗಾಗಿ ನಮ್ಮನ್ನರಿಯುವ ಪ್ರಕ್ರಿಯೆ ಸುಲಭವಾಗಬೇಕಾದರೆ ನಾವು ಈ ಎಲ್ಲಾ ಬಾಹ್ಯ ಆಕರ್ಷಣೆಗಳ ಪ್ರಭಾವದಿಂದ ಹೊರಗೆ ಬರಬೇಕು. ಹಣ, ಕುರ್ಚಿ, ಅಧಿಕಾರ ಇದ್ದಾಗ ಮತ್ತು ಇಲ್ಲದಾಗ ಸಮಾಜದ ಪ್ರತಿಕ್ರಿಯೆಗಳ ನೈಜ ವಿಶ್ಲೇಷಣೆಯೇ ಸಾಕು ನಮ್ಮ ನಿಜತನವನ್ನು ಅರಿಯಲು. ಈ ಒಂದು ಪರಾಮರ್ಶೆಯೇ ನಮಗೇ ಸಾಕಷ್ಟು ಅರಿವನ್ನು ಮತ್ತು ಅಂತಿಮವಾಗಿ ನೆಮ್ಮದಿಯನ್ನೂ ನೀಡಬಲ್ಲದು. ಹೊರಗಿನ ಪ್ರಚೋದನೆಗಳಿಗೆ ನಗಣ್ಯ ಮನೋಭಾವನೆ ಕೂಡ ಈ ನಿಟ್ಟಿನಲ್ಲಿ ಬಲು ಸಹಕಾರಿ. ಅನವಶ್ಯವಾದುವುಗಳಿಗೆ ಕೂಡ ನಮ್ಮ ಪ್ರತಿಕ್ರಿಯೆ ಶೂನ್ಯವಾದಷ್ಟೂ ನೆಮ್ಮದಿ ಹೆಚ್ಚಬಲ್ಲದು. "ನಿನ್ನ ನೀನು ಮರೆತರೇನು ಸುಖವಿದೇ..." ಅಲ್ಲವೇ?

Tuesday, May 18, 2010

ಹರಿಹರಪುರ ಶ್ರೀಗಳೊಂದಿಗೆ


ನಾವು ಕೆಳದಿ ಕವಿ ಮನೆತನಕ್ಕೆ ಸೇರಿದವರೆಂದು ನಮಗೀಗ 4-5 ವರ್ಷಗಳ ಹಿಂದಷ್ಟೇ ತಿಳಿದದ್ದು. ವಂಶದ ಜಾಡನ್ನು ಹಿಡಿದು ಒಂದು ಸ್ವರೂಪಕ್ಕೆ ತಂದು, ಪುಸ್ತಕದ ಕರಡನ್ನು ಹರಿಹರಪುರ ಮಠದ ಶ್ರೀಗಳ ಸನ್ನಿಧಿಯಲ್ಲಿ ಸಲ್ಲಿಸಿದಾಗ, ಅವರು ಬಹಳ ಸಂತಸಪಟ್ಟರು ಮತ್ತು ಹಿರಿಯರನ್ನು ಸ್ಮರಿಸುವ ಇಂತಹ ಪ್ರಯತ್ನವನ್ನು ಶ್ಲಾಘಿಸಿದರು. ಪುಸ್ತಕಕ್ಕೆ ಆಶೀರ್ವಾದಪೂರ್ವಕವಾಗಿ ಬರೆದ ಅವರ ನುಡಿಗಳಂತೂ ಅನುಪಮ. ಅವರ ಅನುಗ್ರಹದಿಂದ ಪುಸ್ತಕ ಬಿಡುಗಡೆ ಆದದ್ದೇ ಅಲ್ಲದೇ ಪ್ರತಿ ವರ್ಷ ಕವಿ ಕುಟುಂಬದ ಎಲ್ಲರೂ ಒಂದೆಡೆ ಸೇರುತ್ತಿರುವುದೂ ಕೂಡ ಹೆಗ್ಗಳಿಕೆಯ ವಿಚಾರ. ಆ ಪುಸ್ತಕ ಮತ್ತು ಕೆಳದಿ ಕವಿ ವಂಶಾವಳಿಯನ್ನು ಅವರಿಗೆ ಸಲ್ಲಿಸಲು ಹೋದ ಕೂಡಲೇ ಅವರು ಮೊದಲು ಕೇಳಿದ ಪ್ರಶ್ನೆಯೇ: "ಕವಿ ವಂಶದ ಪುಸ್ತಕ ಬಿಡುಗಡೆ ಆಯಿತಾ?" ಎಂದು. ನಾವು ಭೇಟಿಯಾದದ್ದು ಪ್ರಥಮ ಭೇಟಿಯ 4-5 ತಿಂಗಳ ನಂತರ. ಆ ಸಂದರ್ಭದಲ್ಲಿ ಅವರು ನನಗೆ ಶಾಲು ಹೊದಿಸಿ ಆಶೀರ್ವದಿಸಿದ ಆ ಘಳಿಗೆಯನ್ನು ನಾನು ಎಂದೂ ಮರೆಯಲಾರೆ. ಚಿತ್ರದಲ್ಲಿ ನನ್ನ ದಿವಂಗತ ತಂದೆ ಕವಿ ವೆಂಕಟಸುಬ್ಬರಾವ್ ಮತ್ತು ನನ್ನ 'ಆಪ್ತ ಸ್ನೇಹಿತ' ರಮೇಶ್ ರವರನ್ನೂ ನೋಡಬಹುದು.

[ಪುಸ್ತಕದ ಹೆಸರು: ಹಳೆ ಬೇರು ಹೊಸ ಚಿಗುರು : ನಮ್ಮ ನಮ್ಮ ವಂಶದ ವಂಶಾವಳಿಯನ್ನು ಮುಂದಿನ ಪೀಳಿಗೆಗಾಗಿ ದಾಖಲಿಸುವುದು ಅತ್ಯವಶ್ಯ. ಅಂತಹ ಪ್ರಯತ್ನಕ್ಕೆ ಈ ಪುಸ್ತಕ ನೆರವಾಗಬಲ್ಲದು. ]

Monday, May 17, 2010


ನನ್ನನ್ನು ನಾನು ಅರ್ಥ ಮಾಡಿ ಕೊಳ್ಳುವ ಪ್ರಕ್ರಿಯೆಯೇ ಪ್ರಾರಂಭವಾಗಿಲ್ಲವೆಂದು ನನಗೀಗ ಅನಿಸತೊಡಗಿದೆ. ಏಕೆಂದರೆ ಅಂತಹ ಒಂದು ಪ್ರಯತ್ನ ನಡೆದೇ ಇಲ್ಲವೇನೋ ಎಂಬ ಅನುಮಾನ ಕೂಡ ಕಾಡತೊಡಗಿದೆ. ಬೇರೆಯವರ ತಪ್ಪು-ಒಪ್ಪುಗಳನ್ನು ಹೆಕ್ಕಿ, ಕೆದಕುವುದರಲ್ಲಿಯೇ ಸಾಕಷ್ಟು ಸಮಯ ಹೋಗಿದ್ದು ಈಗ ಅರಿವಾಗತೊಡಗಿದೆ. ನನ್ನ ತನು-ಮನವ ಮೊದಲರಿಯದೇ ಅನ್ಯರ ವಿಚಾರಕ್ಕೆ ತಲೆ ಹಾಕಿ ನಾನು ತಪ್ಪು ಮಾಡಿದೆನೇನೋ ಎಂಬ ಭಾವನೆ ಕೂಡ ಕಾಡುತ್ತಿದೆ. ನನಗೆ ನಾನೇ ಅರ್ಥವಾಗದಿರುವಾಗ, ಅಂತಹ ಒಂದು ಪ್ರಯತ್ನವನ್ನೂ ಮಾಡದಿರುವಾಗ, ಇತರರನ್ನರಿಯುವ, ಅವರ ಆಚಾರ-ವಿಚಾರಗಳ ಬಗ್ಗೆ ತಲೆಹರಟುವ ಪ್ರವೃತ್ತಿ ಕೂಡ ಎಷ್ಟು ಅನುಚಿತವೆಂದು ನನಗೀಗ ಭಾಸವಾಗುತ್ತಿದೆ. ತಪ್ಪಿನ ಅರಿವು ಈಗಲಾದರೂ ಆಯಿತಲ್ಲ ಎಂಬ ಕೊಂಚ ಸಮಾಧಾನವೇ ಮನಸ್ಸಿಗೆ ಸ್ವಲ್ಪ ಹಗುರ ಭಾವನೆ ನೀಡಿದೆ. ನನ್ನರಿಯುವ ಪ್ರಕ್ರಿಯೆ ಆರಂಭಿಸಿದ್ದೀನಿ. ಸದ್ಯದಲ್ಲಿಯೇ ನನ್ನ ಭಾವನೆಗಳನ್ನು ಪುನ: ಹಂಚಿಕೊಳ್ಳುವವನಿದ್ದೀನಿ.