ಜೀವನವೇ ಒಂದು ಅನ್ವೇಷಣೆ; ಅದೂ ನಿರಂತರವಾದ, ಆದಿ-ಅಂತ್ಯವಿಲ್ಲದ ಮತ್ತು ಬಹುತೇಕ ಸಂದರ್ಭಗಳಲ್ಲಿ ಗೊತ್ತು-ಗುರಿಯಿಲ್ಲದ ಅನ್ವೇಷಣೆ. ಲೌಕಿಕ ಜೀವನ ನಿರ್ವಹಣೆಗೇ ನಮ್ಮ ಜೀವನದ ಬಹುಪಾಲು ಸಮಯ ಮತ್ತು ಶ್ರಮ ಮೀಸಲು. ಆದರೆ ಸೋಜಿಗವೆಂದರೆ ಮುನಷ್ಯನೇ ಒಂದು ವಿಚಿತ್ರ ಪ್ರಾಣಿ. ಅವನ ಇಂದ್ರಿಯಾತ್ಮಕ, ಲೌಕಿಕ ಮತ್ತು ವಿಶೇಷವಾಗಿ ಆತನ ಬೌದ್ಧಿಕ ಅವಶ್ಯಕತೆಗಳನ್ನು ಪೂರೈಸಿದಷ್ಟೂ ಅವುಗಳು ಪುನ: ಪುನ: ಬೇರೊಂದು ರೂಪದಲ್ಲಿ ತಲೆಯೆತ್ತುತ್ತಲೇ ಇರುತ್ತವೆ. ಹೀಗೆ ನಾನಾ ಮೂಲಗಳಿಂದ ಉದ್ಭವವಾಗುವ ಇಂತಹ ಸನ್ನಿವೇಶಗಳು, ಅನುಭವಗಳು ಮತ್ತು ಎಲ್ಲಕ್ಕಿಂತ ಹೆಚ್ಚಾಗಿ ಉಂಟಾದ ನಷ್ಟ, ದು:ಖ ಮತ್ತು ಸಾವು-ನೋವುಗಳು ಆತನಲ್ಲಿ ಜೀವನದ ಉದ್ಧೇಶದ ಬಗ್ಗೆ, ಜೀವನಾರ್ಥದ ಬಗ್ಗೆ ಮತ್ತು ಅಲ್ಪಸ್ವಲ್ಪ ಸಂಸ್ಕಾರ ಮತ್ತು ಯೋಗ್ಯತೆ ಇರುವವರಲ್ಲಿ ಜೀವನ್ಮುಕ್ತಿಯ ಬಗ್ಗೆ ಸಾವಿರಾರು ಪ್ರಶ್ನೆಗಳನ್ನು ಹುಟ್ಟಿಹಾಕುತ್ತವೆ. ಇಂತಹ ಪ್ರಶ್ನೆಗಳ ಚಿಂತನ-ಮಂಥನವೇ ಸತ್ಯಶೋಧನೆ ಅಥವಾ ಸತ್ಯಾನ್ವೇಷಣೆ ಎನ್ನಬಹುದು. ಇಂತಹ ಪ್ರಶ್ನೆಗಳು ಅಥವಾ ದ್ವಂದ್ವಗಳು ಮನಸ್ಸಿನಲ್ಲಿ ಒಂದು ಆಂದೋಳನವನ್ನೇ ಸೃಷ್ಟಿಸಿಬಿಡುತ್ತವೆ. ಆ ಆಂದೋಳನ ಅಥವಾ ಚಿಂತನಕ್ಕೆ ಒಂದು ಅರ್ಥ ಸಿಗಬೇಕಾದರೆ ಅದಕ್ಕೆ ತಕ್ಕುದಾದ ಶ್ರಮ (ಶಾರೀರಿಕ ಮತ್ತು ಬೌದ್ಧಿಕ), ಅರ್ಥಾತ್ ಸಾಧನೆಯನ್ನು ನಾವೇ ಮಾಡಬೇಕು. ವೇದ, ಉಪನಿಷತ್ತು, ಶಾಸ್ತ್ರ-ಪುರಾಣಗಳು, ರಾಮಾಯಣ, ಮಹಾಭಾರತ ಮುಂತಾದ ದಿವ್ಯ ಭಂಡಾರವಿರುವ ಭಾರತೀಯ ಜ್ಞಾನ ಸಂಪತ್ತು ಅಪಾರ ಮತ್ತು ಅಪರಿಮಿತ. ಅದೇ ರೀತಿ, ಸಾಧಕರೂ ಕೂಡಾ ಅಸಂಖ್ಯ. ಆದರೆ ಇವೆಲ್ಲಾ ನಮ್ಮ ಪ್ರಯತ್ನದಲ್ಲಿ ಕೇವಲ ಕೈಮರಗಳಾಗಬಹುದಷ್ಟೇ. ಅನೇಕ ಸಾಧಕ ವ್ಯಕ್ತಿಗಳನ್ನು ನೋಡಿ. ಅವರ ಸಾಮೀಪ್ಯವೇ ಒಂದು ಚೈತನ್ಯದೊಡನಿದ್ದಂತೆ. ಅಂತಹ ಸತ್ಯ ಸಾಕ್ಷಾತ್ಕಾರ ಮಾಡಿಕೊಂಡವರ ವಿಚಾರಧಾರೆ ಕೇಳುವವರಿಗೆ ಮತ್ತು ಅವರ ಸಂಪರ್ಕಕ್ಕೆ ಬಂದವರಿಗೆ ಅಂತಹ ಒಂದು ದಿವ್ಯಾನುಭವ ಸ್ವಯಂವೇದ್ಯ. ಆದರೂ, ನಿಜವಾದ ಸತ್ಯ ಶೋಧನೆಯನ್ನು ನಾವೇ ಮಾಡಬೇಕು; ನಾವೇ ಸಂಪಾದಿಸಬೇಕು ಮತ್ತು ನಾವೇ ಅರ್ಥ ಮಾಡಿಕೊಳ್ಳಬೇಕು. ಆಗ ಅನೇಕ ಮಹಾತ್ಮರೊಡನೆ ನಾವು ಸಂಪರ್ಕಕ್ಕೆ ಬಂದಾಗ ಆಗುವ ಚೈತನ್ಯದ ಅನುಭವ ನಮ್ಮಲ್ಲೂ ಜಾಗೃತವಾಗಬಲ್ಲದು.
ಪ್ರಮುಖವಾಗಿ ಹುಟ್ಟು, ಬದುಕು ಮತ್ತು ಸಾವು - ಇವೇ ನಿಜವಾದ ಸತ್ಯಗಳೆಂದರೆ ತಪ್ಪಾಗಲಾರದು. ಈ ಮೂರೂ ಅವಸ್ಥೆಗಳ ಸಂಪೂರ್ಣ ಹಿನ್ನೆಲೆ, ಅವಕ್ಕೆ ಸಂಬಂಧಿಸಿದ ಲಭ್ಯವಿರುವ ನಾನಾ ವಿಚಾರಗಳ ಸಂಗ್ರಹಣೆ, ಮನನ ಮತ್ತು ಆಚರಣೆಯನ್ನು ಅಳವಡಿಸಿಕೊಳ್ಳಲು ಒಂದು ಜೀವಿತಾವಧಿಯೇ ಸಾಕಾಗಲಾರದು. ಆದುದರಿಂದ, ನಿಜ ಹೇಳಬೇಕೆಂದರೆ ರಹಸ್ಯಗಳನ್ನು ಭೇದಿಸುವುದೇ ಸತ್ಯಾನ್ಷೇಷಣೆ. ಆದರೆ ಯಾವುದು ಸತ್ಯವೆಂಬುದೇ ಬಹು ಜನರಿಗೆ ಇಂದಿಗೂ ಎಟುಕದ ವಿಷಯವಾಗಿದೆ. ಸತ್ಯದ ಪರಿಕಲ್ಪನೆ ವ್ಯಕ್ತಿಗತ. ಹಾಗಾಗಿಯೇ ನಾವಿಂದು ಇಂತಹ ವಿಚಾರಗಳ ಬಗ್ಗೆ ಲೆಕ್ಕವಿಲ್ಲದಷ್ಟು ಸಿದ್ಧಾಂತಗಳನ್ನು, ವಾದ-ವಿವಾದಗಳನ್ನು ಮತ್ತು ಪ್ರತಿಪಾದನೆಗಳನ್ನೂ ನೋಡಬಹುದು.
"ಅರಿವೇ ಗುರುವು" ಎಂಬ ಮಾತೊಂದಿದೆ. ಅಂತೆಯೇ ಜೀವನದುದ್ದಕ್ಕೂ ನಮ್ಮಲ್ಲಿ ಅನೇಕ ಪ್ರಶ್ನೆಗಳು, ಸಂಶಯಗಳು ಮತ್ತು ದ್ವಂದ್ವಗಳು ನಿರಂತರವಾಗಿ ಏಳುತ್ತಿವೆಯೆಂದರೆ ಅದೇ ಅರಿವಿನ ಮೊದಲ ಚಿಹ್ನೆ/ಹೆಜ್ಜೆ. ಪ್ರಶ್ನೆಗಳೆದ್ದಾಗ ಉತ್ತರ ಎಲ್ಲಾದರೂ ಸಿಕ್ಕೀತು. ಆದರೆ ಪ್ರಶ್ನೆಗಳೇ ಏಳದಿದ್ದರೆ ಏನೂ ಮಾಡಲಾಗದು. ಆಗ ಪ್ರಾಣಿಗಳಿಗೂ ನಮಗೂ ಯಾವುದೇ ವ್ಯತ್ಯಾಸವಿರದು. ವಿಷಯ/ವ್ಯಕ್ತಿ/ ವಸ್ತುಗಳ ಅರಿವು ಮತ್ತು ಆ ತಿಳುವಳಿಕೆ ಸರಿಯೇ/ತಪ್ಪೇ ಎಂಬ ನಿರಂತರ ವಿಮರ್ಶೆ/ತರ್ಕಗಳು ನಮ್ಮನ್ನು ಸತ್ಯದೆಡೆಗೆ ಸಾಗಿಸುವ ಪ್ರಮುಖ ಸಾಧನ. ಆದುದರಿಂದ ಸತ್ಯ ಶೋಧನೆಗೆ ತಕ್ಕ ಅರ್ಹತೆ ಮತ್ತು ಯೋಗ್ಯತೆ ಕೂಡಾ ಅತ್ಯಾವಶ್ಯಕ. ಸತ್ಯದ ಪರಿಮಿತಿ ಅಗಾಧವಾದದ್ದು. ಅಂತೆಯೇ ನಮ್ಮ ಸಾಧನೆಗೆ ತಕ್ಕಷ್ಟು ಮಾತ್ರಾ ಸತ್ಯದ ಅರಿವನ್ನು ಪಡೆಯಲು ಸಾಧ್ಯ. ಸಾಗರದಿಂದ ಒಂದು ಬಿಂದಿಗೆ ನೀರು ತಂದಂತೆ! ಅದು ನಮ್ಮ ಸಾಧನೆಯ ಮಟ್ಟಕ್ಕೆ ನಮಗೆ ದೊರೆತ ಸತ್ಯ. ಆದರೆ ಅದೇ ಸಂಪೂರ್ಣ ಸತ್ಯವಲ್ಲ!
ಕಿಟಕಿ ಪರದೆ ಸರಿಸಿದರೇನೆಯೇ ಬೆಳಕು ಬರುವುದು. ಎಳ್ಳನ್ನು ಗಾಣಕ್ಕೆ ಹಾಕಿದಾಗಲೇ ಎಣ್ಣೆ ಬರುವುದು. ನದಿ ತೀರದ ಮರಳನ್ನು ಬಗೆದರೇ ನೀರು ಸಿಗುವುದು. ಅದೇ ರೀತಿ ಸತ್ಯಶೋಧನೆಯಲ್ಲಿ ಇಂತಹ ನಾನಾ ಮಾಯೆಗಳನ್ನು ನಾವು ದಾಟಬೇಕು. ಕ್ರಿಯಾಶೀಲರಲ್ಲಿ ಸಂಸ್ಕರಣೆ ಮತ್ತು ಪರಿವರ್ತನೆ ಒಂದು ನಿರಂತರ ಪ್ರಕ್ರಿಯೆ. ಹಾಗಾಗಿ ಮಾಯೆಗಳ ಛಾಯೆಯನ್ನು ದಾಟುವುದಕ್ಕೆ ಬೇಕು ತಕ್ಕ ಮಾನಸಿಕ ಪರಿಪಕ್ವತೆ, ಸಿದ್ಧತೆ ಮತ್ತು ದೃಢ ಸಂಕಲ್ಪ. ಮಾನಸಿಕ ಸಂತುಲತೆ ಇಲ್ಲದಾದಾಗ ಗ್ರಹಿಕೆಗಿಂತ ಹೆಚ್ಚಾಗಿ ತಪ್ಪು ಗ್ರಹಿಕೆಗಳೇ ಆದೀತು. ಹಾಗಾಗಿ ಯಾವುದೇ ವಿಚಾರದ ಬಗ್ಗೆ ಉದ್ವೇಗರಹಿತವಾದ ಮತ್ತು ಪೂರ್ವಾಗ್ರಹ ರಹಿತವಾದ ದೃಷ್ಟಿಕೋನ ಅಗತ್ಯ. ಹಿಂದೆ ಹೇಳಿದಂತೆ ಸತ್ಯದ ಕಲ್ಪನೆ ವ್ಯಕ್ತಿಗತ. ನಾಲ್ಕಾರು ಕುರುಡರು ಆನೆಯನ್ನು ಮುಟ್ಟಿನೋಡಿ ಬೇರೆ ಬೇರೆ ರೀತಿಯಲ್ಲಿ ಅರ್ಥೈಸಿದಂತೆ! ಒಂದೇ ವಿಚಾರದ ಬಗ್ಗೆ ನಾವು ನಾನಾ ದೃಷ್ಟಿಕೋನಗಳಿರುವುದನ್ನು ಗಮನಿಸದ್ಧೇವೆ. ಅವೆಲ್ಲವೂ ಅದರದೇ ಆದ ಹಿನ್ನೆಲೆಯಲ್ಲಿ ಸತ್ಯವೆಂದೂ ತೋರುತ್ತವೆ. ಆದುದರಿಂದ ಅವೆಲ್ಲವನ್ನೂ ತಪ್ಪೆಂದು ಭಾವಿಸಲಾಗುವುದಿಲ್ಲ; ಅನೇಕ ವೇಳೆ, ಸತ್ಯವೆಂದೂ ಒಪ್ಪಲಾಗುವುದಿಲ್ಲ! ಎಲ್ಲಾ ಮಜಲುಗಳಿಂದಲೂ ವಿಷಯವನ್ನು ಪರಾಂಬರಿಸಿ, ಪರಾಮರ್ಶಿಸಿ ಮತ್ತು ಅರ್ಥೈಸಿಕೊಳ್ಳುವ ಪ್ರಕ್ರಿಯೆ ಮಾತ್ರಾ ನಮ್ಮ ಸಂಸ್ಕಾರಾನುಸಾರ, ನಮ್ಮ ಜ್ಞಾನಾನುಸಾರ ಮತ್ತು ನಮ್ಮ ಶಕ್ತ್ಯಾನುಸಾರ ನಾವೇ ಮಾಡಬೇಕು. ಅಂತೆಯೇ ನಮ್ಮಲ್ಲಿರುವ ಸಾಧನ ಸಂಪತ್ತುಗಳ ಸದ್ಭಳಕೆಯಿಂದ ನಾವೇನು ಪರಿಶ್ರಮ ಪಟ್ಟು ಒಂದನ್ನು ನಮ್ಮ ಅಂತರಾತ್ಮ ಸತ್ಯವೆಂದು ಒಪ್ಪುತ್ತದೆಯೋ ಅದೇ ನಮ್ಮ ಪಾಲಿಗೆ ಅಂತಿಮ ಸತ್ಯ.
ದೇಹವೊಂದು ನಾವೆ. ನಾವೇ ಅದರ ನಾವಿಕರು. ಸಾಗರ ದಾಟಲು ದೇಹವೂ ಚೆನ್ನಾಗಿರಬೇಕು, ನಾವೆಯೂ (ಸಾಧನ) ಸುಭದ್ರವಾಗಿರಬೇಕು ಮತ್ತು ನಾವಿಕನು ಹಾಕುವ ಹುಟ್ಟುಗಳೂ ಸರಿಯಾಗಿರಬೇಕು. ಆಗಲೇ ಈ ಭವಸಾಗರವನ್ನು ದಾಟಿ ಗುರಿ ಮುಟ್ಟಲು ಸಾಧ್ಯ. ಆದರಿಲ್ಲಿ ದೇಹವೂ ನಶ್ವರ-ನಾವೆಯೂ ನಶ್ವರ. ಗುರಿ ತಲುಪಿದ್ದೊಂದೇ ಸತ್ಯ. ಸತ್ಯ ಸಾಕ್ಷಾತ್ಕಾರಕ್ಕೆ ಈ ಮುನ್ನ ಹೇಳಿದಂತೆ ತಕ್ಕ ಸಿದ್ಧತೆ ಬೇಕು. ಅಂದರೆ ಈ ಲೌಕಿಕ ವಸ್ತುಗಳೆಲ್ಲವೂ ಅಶಾಶ್ವತ, ಲೌಕಿತ ವಸ್ತುಗಳಲ್ಲಿ ಮೇಲ್ನೋಟಕ್ಕೆ ಗೋಚರವಾಗುವಂತಹ ಮತ್ತು ಆಕರ್ಷಿಸುವಂತಹ ಸುಖ-ಸೌಲಭ್ಯಗಳೆಲ್ಲವೂ ಮಿಥ್ಯ ಮತ್ತು ಅನಿಶ್ಚಿತ, ಲೌಕಿಕಾರ್ಷಣೆ ಕ್ಷಣಿಕ, ಲೌಕಿಕಾಕರ್ಷಣೆಗಳ ಬಗ್ಗೆ ವಿರಕ್ತಿ ಭಾವ, ಪೂರ್ವಾಗ್ರಹ ರಹಿತವಾದ ಮನಸ್ಥಿತಿ, ಪರಮಾತ್ಮ ವಸ್ತು ನಮ್ಮೊಳಗೂ ಇದೆ, ಎಲ್ಲೆಡೆಯೂ ಇದೆ ಮತ್ತು ಎಲ್ಲಕ್ಕೂ ಅತೀತವಾಗಿದೆ ಎಂಬ ನಂಬಿಕೆ ಮುಂತಾದವು ಸತ್ಯಶೋಧನೆಗೆ ಬೇಕಾದ ಪೂರ್ವಸಿದ್ಧತೆಗಳು. ನಮ್ಮ ಮನಸ್ಸಿನ ಸತ್ಯದ ಪರಿಕಲ್ಪನೆಯಂತೆ ನಮ್ಮ ಶಕ್ತ್ಯಾನುಸಾರ ಆ ಸತ್ಯಶೋಧನೆಯೆಡೆಗೆ ಸಾಗಲು ನಮಗೆ ಸಾಕಷ್ಟು ಸಾಧನ-ಸಂಪತ್ತುಗಳಿವೆ. ಮಾರ್ಗದರ್ಶಕರೂ ಇದ್ದಾರೆ. ಆದರೆ ಅವೆಲ್ಲದರ ಆಯ್ಕೆ ಮತ್ತು ವಿವೇಕಯುತ ಸದ್ಬಳಕೆ ಮಾತ್ರಾ ನಮ್ಮದೇ. ನಾವು ಅಗೋಚರದಿಂದ ಬಂದು ಅಗೋಚರ ಸ್ಥಾನಕ್ಕೇ ಹೋಗುವುದು ನಿತ್ಯಸತ್ಯ. ಅದರ ಹಿಂದಿರುವ ಪರತತ್ತ್ವ ಶಕ್ತಿಯೇ ಆ ಭಗವಂತ. ಪ್ರತಿಯೊಂದು ಚರಾಚರ ವಸ್ತು ಕೂಡ ಆ ಅಖಂಡ ಚೈತನ್ಯದಿಂದ ಕೂಡಿದೆ. ಜೀವ ಅನುಭವಿಸುವ ಪ್ರತಿಯೊಂದು ಅನುಭವಗಳೂ, ನೋಡುವ ಪ್ರತಿಯೊಂದು ವಸ್ತುವೂ/ವ್ಯಕ್ತಿಯೂ ಆ ಭಗವಂತನ ಚೈತನ್ಯದಿಂದ ಆವರಿಸಲ್ಪಟ್ಟಿದೆ ಎಂಬ ಭಾವ ಬಂಧಮುಕ್ತಿಗೆ ರಾಜಮಾರ್ಗ. ಪ್ರತಿಯೊಂದರಲ್ಲೂ ಆ ಮಹಾ ಚೈತನ್ಯ ನಮಗೆ ಸ್ಪಷ್ಟವಾಗ ತೊಡಗಿದಂತೆ ನಮ್ಮ ಅಜ್ಞಾನದ ಮತ್ತು ದ್ವಂದ್ವಗಳ ಬೀಡಾದ ಈ ಮನಸ್ಸು ತಿಳಿಯಾಗಲಾರಂಭಿಸುತ್ತದೆ. ವ್ಯಕ್ತಿ/ವಸ್ತು/ವಿಷಯಗಳ ಬಗ್ಗೆ ನಮ್ಮ ಪೂರ್ವಾಗ್ರಹಗಳೂ ಕೂಡ ಮರೆಯಾಗುತ್ತವೆ. ಅಂತಹ ತಿಳಿಯಾದ ಮನವೆಂಬ ಕೊಳದಲ್ಲಿ ನಿಶ್ಚಿತವಾಗಿ ಜ್ಞಾನವೆಂಬ ಕಮಲ ಅರಳುತ್ತದೆ. ಆ ಜ್ಞಾನವೇ ನಮ್ಮನ್ನು ಸತ್ಯದೆಡೆಗೆ ಸುಗಮವಾಗಿ ಕೊಂಡೊಯ್ಯುತ್ತದೆ.
ಹುಟ್ಟಿದ ಮೇಲೆ ಸಾಯಲೇ ಬೇಕು. ಜೀವನದಲ್ಲಿ ಏನು ಸಾದಿಸದಿದ್ದರೂ ಅಥವಾ ಸಾಧಿಸಿದರೂ ಸಾವು ಶತಸ್ಸಿದ್ಧ. ಬರೀ ಅಜ್ಙಾನದಲ್ಲಿ, ಅರೆ ತಿಳುವಳಿಕೆಯಲ್ಲಿ ಮತ್ತು ಪ್ರಾಣಿ ರೀತಿಯಲ್ಲಿ ಬದುಕಿ ಸಾಯುವ ಬದಲು, ಜ್ಞಾನದ, ತಿಳುವಳಿಕೆಯ ಮತ್ತು ಅಂತಿಮವಾಗಿ ಆ ಪರತತ್ತ್ವದ ನಿಜಸತ್ಯವನ್ನು ಅರಿಯಲು ನಿರಂತರ ಹೋರಾಡಿ ಸಾಯುವುದೇ ಒಂದು ರೀತಿಯಲ್ಲಿ ನಿಜವಾದ ವೀರ ಮರಣ. ಆ ಒಂದು ಹೋರಾಟದಲ್ಲಿ ನಾವು ಸಾಕಷ್ಟು ಸತ್ಯದ ಸಮೀಪವೇ ಬಂದಿರುತ್ತೇವೆ. ಕೆಲವು ಪುಣ್ಯಾತ್ಮರು ಅದನ್ನು ಸಾಕ್ಷಾತ್ಕರಿಸಿಕೊಂಡೇ ಬಿಡುತ್ತಾರೆ. ಆದರೆ ಅಂತಿಮವಾಗಿ ಅಂತಹ ಒಂದು ಪ್ರಯತ್ನವೇ ಒಂದು ಮಹತ್ಸಾಧನೆ ಮತ್ತು ಅವರ್ಣನೀಯ ಆನಂದದ ದಿವ್ಯಾನುಭವ. ಹಿಮಾಲಯದ ತುಟ್ಟ ತುದಿ ತಲುಪಲಾಗದಿದ್ದರೂ ಅದನ್ನು ತಲುಪಲು ಪ್ರಾಮಾಣಿಕ ಮತ್ತು ಯಥಾಶಕ್ತಿ ಪ್ರಯತ್ನಶೀಲನಾಗಿ ತೃಪ್ತಿ ಹೊಂದುವವನೇ ನಿಜವಾದ ಸತ್ಯಶೋಧಕ.
ಫೈನಲ್ ಕಿಕ್:
ಸತ್ಯ ಶೋದನೆಗೆ ಸಾಧನಗಳು ಹಲವಾರು. ಒಂದೇ ಊರಿಗೆ ನಾನಾ ದಾರಿಗಳಿದ್ದಂತೆ. ಅತ್ಯಂತ ಸುಗಮವಾದ, ಮನೋಹರವಾದ, ಸಮೀಪವಾದ ಮತ್ತು ಆಹ್ಲಾದಕರವಾದ ದಾರಿಯ ಆಯ್ಕೆ ಮಾತ್ರಾ ನಮ್ಮದೇ. ಆಧ್ಯಾತ್ಮಿಕ ಸತ್ಯಗಳು ಸರ್ವಕಾಲಿಕವಾಗಿ ಮಾನವನನ್ನು ಆಕರ್ಷಿಸುತ್ತಲೇ ಇವೆ. ಭಗವಂತಹ ಕೃಪೆಯೊಂದಿಗೆ ನಾವು ಆ ಸತ್ಯದೆಡೆಗೆ ಸಾಗಲು ನಮ್ಮ ಮೊದಲ ಹೆಜ್ಜೆ ಇಡೋಣ; ನಿರಂತರವಾಗಿ ನಡೆಯೋಣ ಮತ್ತು ನಿಶ್ಚಿತವಾಗಿ ಲಭ್ಯಾನುಸಾರ ಮತ್ತು ಯಥಾಶಕ್ತಿ ಗುರಿ ತಲುಪೋಣ.
"ಸತ್ಯಮೇವ ಜಯತೇ"
ಸತ್ಯ ಶೋದನೆಗೆ ಸಾಧನಗಳು ಹಲವಾರು. ಒಂದೇ ಊರಿಗೆ ನಾನಾ ದಾರಿಗಳಿದ್ದಂತೆ. ಅತ್ಯಂತ ಸುಗಮವಾದ, ಮನೋಹರವಾದ, ಸಮೀಪವಾದ ಮತ್ತು ಆಹ್ಲಾದಕರವಾದ ದಾರಿಯ ಆಯ್ಕೆ ಮಾತ್ರಾ ನಮ್ಮದೇ. ಆಧ್ಯಾತ್ಮಿಕ ಸತ್ಯಗಳು ಸರ್ವಕಾಲಿಕವಾಗಿ ಮಾನವನನ್ನು ಆಕರ್ಷಿಸುತ್ತಲೇ ಇವೆ. ಭಗವಂತಹ ಕೃಪೆಯೊಂದಿಗೆ ನಾವು ಆ ಸತ್ಯದೆಡೆಗೆ ಸಾಗಲು ನಮ್ಮ ಮೊದಲ ಹೆಜ್ಜೆ ಇಡೋಣ; ನಿರಂತರವಾಗಿ ನಡೆಯೋಣ ಮತ್ತು ನಿಶ್ಚಿತವಾಗಿ ಲಭ್ಯಾನುಸಾರ ಮತ್ತು ಯಥಾಶಕ್ತಿ ಗುರಿ ತಲುಪೋಣ.
"ಸತ್ಯಮೇವ ಜಯತೇ"
ಇಷ್ಟವಾಯಿತು, ಚೆನ್ನಾಗಿ ಮೂಡಿಬಂದಿದೆ, ಧನ್ಯವಾದಗಳು
ReplyDeleteವಂದನೆಗಳು.
ReplyDelete