|| ಶ್ರೀ ರಾಮ ಜಯ ರಾಮ ಜಯ ಜಯ ರಾಮ ||

Monday, February 7, 2011

ಸಮಚಿತ್ತ

ಹೊಗಳಿಕೆ ಮಾತಿಗೆ ಉಬ್ಬದವನಿಲ್ಲ; ತೆಗಳಿಕೆಗಳಿಗೆ ಕುಗ್ಗದವನಿಲ್ಲ. ಸಂದರ್ಭಾನುಸಾರ (ಅನೇಕ ಸಲ ಸ್ವಾರ್ಥಸಾಧನೆಗಾಗಿ) ಹೊಗಳಿಕೆಗಳು ಬಂದರೆ, ತಾವು ಭಾವಿಸಿದಂತೆ ತಮ್ಮ ಸುತ್ತಲಿನ ವ್ಯಕ್ತಿ, ವಿಷಯ ಮತ್ತು ಪರಿಸರ ಸ್ಪಂದಿಸದಿದ್ದರೆ, ಮನಸೋಯೇಚ್ಛೆ, ತೆಗಳಿಕೆಗಳು ಪುಂಖಾನುಪುಂಖವಾಗಿ, ಹಿಂದೆ ಹೊಗಳಿದವರಿಂದಲೇ, ಬರುವುದೂ ಕೂಡ ಸರ್ವೇ ಸಾಮಾನ್ಯ.  ಆಳವಾಗಿ ಇದರ ಬಗ್ಗೆ ನೋಡಿದಾಗ, ಅನಿಸುವುದೇನೆಂದರೆ, ಈ ಹೊಗಳಿಕೆಗಳು ಮತ್ತು ತೆಗಳಿಕೆಗಳು ಎರಡೂ ಆ ಕ್ಷಣದ ತಕ್ಷಣದ ಪ್ರತಿಕ್ರಿಯೆಗಳು ಅಷ್ಟೆ. ಅದು ಹೃದಯಾಂತರಾಳದಿಂದ ಮತ್ತು ವಿಚಾರ ವಿಮರ್ಶೆ ಮಾಡಿ ಹೊರಬಂದ ಪ್ರತಿಕ್ರಿಯೆಗಳಲ್ಲ. ಆದರೂ ಈ ಹೊಗಳಿಕೆ ಮತ್ತು ತೆಗಳಿಕೆ ಬಂದಾಗ ನಾವು, ಅದನ್ನು ನೀಡಿದವರಂತೆ,  ವಿಚಾರ ವಿಮರ್ಶೆ ಮಾಡದೇ ಕೂಡಲೇ ಹೊಗಳಿಕೆಯಲ್ಲಿ ತೇಲಿ ಹೋಗಿ ಬಿಡುತ್ತೇವೆ; ತೆಗಳಿಕೆ ಬಂದಾಗ ಚಿತ್ತಕ್ಷೋಭೆಗೊಳಗಾಗಿ ವಿಹ್ವಲರಾಗಿಬಿಡುತ್ತೇವೆ. ತನ್ನವರೆಂದು ನಂಬಿದವರಿಂದಲೇ ಇಂತಹ ಪ್ರಸಂಗಗಳು ಎದುರಾದಾಗ ಮತ್ತಷ್ಟು ಮನ ಮುದುಡುತ್ತದೆ. ತಾತ್ಪರ್ಯ: ಇಂತಹ ಹೊಗಳಿಕೆ/ತೆಗಳಿಕೆ ನೀಡುವವರ ಮತ್ತು ಸ್ವೀಕರಿಸುವವರ ಮನವಿನ್ನೂ ಪಕ್ವವಾಗಬೇಕಾಗಿದೆ ಎಂಬುದು. ಮನಮನಗಳ ಇಂದಿನ ಅಶಾಂತಿಗೆ ಬಹುಶ: ಇದರದ್ದೂ ಸಾಕಷ್ಟು ಕಾಣಿಕೆಯಿರಬಹುದು. ತೆಗಳುವಾತನಿಗೆ ಆತನ ಬೆನ್ನು ಕಾಣಿಸದೆಂಬುದು ಎಷ್ಟು ಸತ್ಯವೋ ತೆಗಳಿಸಿಕೊಂಡಾತನೂ ಆತನ ಬೆನ್ನನ್ನು ನೋಡಿಕೊಂಡಿಲ್ಲವೆಂಬುದೂ ಸತ್ಯವೇ. ಇಲ್ಲದಿದ್ದರೆ ಅಂತಹ ಅರೆಬೆಂದ ಹೊಗಳಿಕೆ/ತೆಗಳಿಕೆಗಳಿಗೆ ಪಕ್ವವಾದ ಮನಸ್ಸು ಎಂದಿಗೂ ವಿಹ್ವಲವಾಗದು; ವಿಹ್ವಲವಾಗಬಾರದು. ಹೊಗಳಿಕೆ/ತೆಗಳಿಕೆಗಳಿಗೆ ನಮ್ಮ ಪ್ರತಿಕ್ರಿಯೆ ಸೊನ್ನೆಯಾದಾಗ ಮತ್ತೊಮ್ಮೆ ನಮ್ಮನ್ನು ಹೊಗಳುವ/ತೆಗಳುವ ಪ್ರಸಂಗ ಬಂದಾಗ ಇತರರು ಮತ್ತೊಮ್ಮೆ ಯೋಚಿಸುವಂತಾಗುತ್ತದೆ. ಪರಸ್ಪರ ಅರಿವು, ವಿಶ್ವಾಸ ಇನ್ನಷ್ಟು ಬಲವಾಗುತ್ತದೆ. ಏನಂತೀರಿ....?

1 comment: