|| ಶ್ರೀ ರಾಮ ಜಯ ರಾಮ ಜಯ ಜಯ ರಾಮ ||

Saturday, July 3, 2010

ನಮಗೇನಾಗಿದೆ.


ಮಾವಿನ ಮರ - ಕೋಗಿಲೆ ; ಎರಡೂ ಬೇರೆ ಬೇರೆ ಒಂದಕ್ಕೊಂದು ಸಂಬಂಧವಿಲ್ಲದ ಅಸ್ತಿತ್ವಗಳು. ಆದರೆ ಅವೆರಡಕ್ಕೂ ಅಗಲಲಾಗದ ನಂಟು. ಮಾವಿನ ಮರ ಚಿಗುರೊಡೆದೊಡನೆಯೇ ಕೋಗಿಲೆ ತನ್ನ ಗಾನಸುಧೆಯೊಂದಿಗೆ ಹಾಜರ್. ಅದೇ ನಮ್ಮನ್ನು ನೋಡಿ. ಹುಟ್ಟಿದ ಕೂಡಲೇ ಅಪ್ಪ-ಅಮ್ಮನ ಸಂಬಂಧ; ಸ್ವಲ್ಪ ಸಮಯದ ನಂತರ ಅಣ್ಣ-ತಂಗಿಯರ ಸಂಬಂಧ; ಬಂಧುಗಳ ಸಂಬಂಧ - ಹೀಗೆ ಈ ಸಂಬಂಧಗಳ ಸರಪಳಿ ಕೊನೆಯವರೆಗೂ ಬೆಳೆಯುತ್ತಲೇ ಹೋಗುತ್ತದೆ. ಆದರೆ ಇಂದು ನಾನಾ ಕಾರಣಗಳಿಂದ ಈ ರಕ್ತ ಸಂಬಂಧದ ಬೆಸುಗೆ ಸಾಕಷ್ಟು ಸಡಿಲವಾಗಿದೆ. ಅನೇಕ ಸಂದರ್ಭಗಳಲ್ಲಿ ಮುರಿದುಬೀಳುವ ಮಟ್ಟಕ್ಕೂ ಬಂದು ನಿಂತಿದೆ. ಇವತ್ತು ಎಲ್ಲರಲ್ಲೂ ವಿದ್ಯೆಯಿದೆ, ಹಣವಿದೆ. ಆದರೆ ವಿಶಾಲವಾದ ಹೃದಯ ಮತ್ತು ತೆರೆದ ಮನಸ್ಸು ವಿರಳವಾಗುತ್ತಿದೆ. ನಿಷ್ಕಲ್ಮಷವಾದ ನಗುಮುಖ ಮರೆಯಾಗಿದೆ. ಯಾರನ್ನು ದೂಷಿಸುವುದು? ಏಕೆ ಹೀಗೆ? ನಮಗೇನಾಗಿದೆ? ಎಂದು ಪ್ರಶ್ನಿಸಿಕೊಂಡರೆ ಅವು ಉತ್ತರವಿಲ್ಲದ ಪ್ರಶ್ನೆಗಳಾಗಿಯೇ ಉಳಿದುಬಿಡುತ್ತವೆ. ಎಲ್ಲಕ್ಕಿಂತ ಹೆಚ್ಚಾಗಿ ಇತ್ತೀಚಿನ ಪೀಳಿಗೆಗಳಲ್ಲಿ ಇಂತಹ ಒಂದು ತುಡಿತವೇ ಮಾಯವಾಗಿಬಿಟ್ಟಿದೆ. ಸುಮಧುರ ಸಂಬಂಧಗಳ ಸವಿಯನ್ನೇ ಅರಿಯದ ಇವರು ಅದರ ಮಹತ್ವವನ್ನು ಹೇಗೆ ತಾನೇ ತಿಳಿಯಬಲ್ಲರು? ಪಾಶ್ಚಾತ್ಯ ರೀತಿಯಂತೆ ನಾನು ಬದುಕುವುದೇ ನನ್ನ ಸುಖಕ್ಕಾಗಿ; ಇತರರ (ಅಂದರೆ ತನ್ನ ಸಂಬಂಧಿಕರನ್ನು ಕುರಿತು ಮಾತ್ರ ಇಲ್ಲಿ ಹೇಳಿರುವುದು) ಉಸಾಬರಿ ತನಗೇಕೆ ಎಂಬ ಭಾವನೆ ಎಲ್ಲರಲ್ಲಿ ಮನೆ ಮಾಡುತ್ತಿದೆ. ಸಮಾರಂಭಗಳಲ್ಲಿ ಅಪರೂಪಕ್ಕೆ ಸಿಗುವ ನೆಂಟರಿಗೆ 'ಹಾಯ್' 'ಬಾಯ್' ಹೇಳಿಬಿಟ್ಟು, ಮುಂದಿನ ಕ್ಷಣ ತನ್ನ ಲೋಕಕ್ಕೇ ಜಾರುವವರು ಬಹುಬಂದಿ ಇಂದು. ಆಪ್ತೇಷ್ಟರು ಮರಣ ಹೊಂದಿ ದೇಹವನ್ನು ಭಸ್ಮ ಮಾಡಿದೊಡನೆಯೇ ಸಂಬಂಧಗಳೂ ಭಸ್ಮವಾಗುವ ಕಾಲ ಬಂದಿರುವುದು ನಮ್ಮ ಸಂಸ್ಕೃತಿ ಎತ್ತ ಸಾಗುತ್ತಿದೆ ಎಂಬುದರ ಸೂಚಿ. ಬ್ಯಾಂಕ್ ಬ್ಯಾಲೆನ್ಸ್, 3-4 ನಿವೇಶನಗಳು, ಐಷಾರಾಮಿ ವಸ್ತುಗಳು ಇತ್ಯಾದಿ ಇಷ್ಟೇ ನಮ್ಮ ಜೀವನದ ಪರಮ ಗುರಿ ಎಂದಾದಾಗ ಪರಿಣಾಮ ಮೇಲಿನಂತೆಯೇ ಆಗಲೇಬೇಕಲ್ಲ್ಲವೇ? ಹುಟ್ಟಿದ ಮಗುವನ್ನು ಕ್ರೀಷೆಗೋ, ಆಯಾ ಸುಪರ್ದಿಗೋ ನೀಡಿ ದುಡಿಮೆಗೆ (ದುಡಿಯುವ ಇಂತಹ ಬಹುತೇಕ ಮಂದಿಗೆ ಷೋಕಿ ಬಿಟ್ಟರೆ ಹಣದ ನಿಜವಾದ ಅವಶ್ಯಕತೆ ಇರುವುದು; ಅನಿವಾರ್ಯತೆ ಇರುವುದು ಕೆಲವೇ ಮಂದಿಗೆ ಮಾತ್ರ) ಹೊರಟಾಗ ಮಗುವಿಗೆ ತಾಯಿಯ ಪ್ರೀತಿ, ಮಧುರ ಬಾಂಧವ್ಯದ ಸವಿಯನ್ನು ಉಣಿಸುವವರು ಯಾರು? ಕಾಲಾಂತರದಲ್ಲಿ ಆ ಮಗು ಆ ತಾಯಿ ಮಾಡಿದ್ದನ್ನೇ ಮಾಡುತ್ತದೆ. ಒಂದಿಷ್ಟು ಸೌಲಭ್ಯ, ಹಣಕಾಸು ನೀಡಿ, ತನ್ನ ಪಾಡಿಗೆ ತಾನು ತನ್ನ ಸುಖದ ಅನ್ವೇಷಣೆಯಲ್ಲಿ ತೊಡಗಿಬಿಡುತ್ತದೆ. ಆಗ ತಾಯಿ ಮಗುವನ್ನು ದೂಷಿಸಿ ಪ್ರಯೋಜನವೇನು? ನೇರವಾಗಿ ಹೇಳಬೇಕೆಂದರೆ, ಇಂದು ಸಮಾಜದಲ್ಲಿ ತಾಯಿ ತನ್ನ ಪಾತ್ರವನ್ನು ಸರಿಯಾಗಿ ನಿರ್ವಹಿಸದೇ ಇರುವುದೇ ಈ ಸಂಬಂಧಗಳ ಹಳಸುವಿಕೆಗೆ ಮೂಲ ಕಾರಣವೆಂದರೆ ತಪ್ಪಾಗಲಾರದು. ತಾಯಿ ಸ್ವಾರ್ಥಿಯಾದಾಗ ಅವಳ ಸಂತಾನ ಕೂಡಾ ಅದೇ ಹಾದಿ ಹಿಡಿದೇ ಹಿಡಿಯುತ್ತದೆ. ಕುರುಡು ಕಾಂಚಾಣದ ಹಿಂದೆ ಬಿದ್ದು ನಾಗಾಲೋಟದಲ್ಲಿ ಓಡುತ್ತಿರುವವರಿಗೆ ಮುಂದಿನ ಪರಿಣಾಮಗಳು ಹೇಗೆ ತಾನೇ ಅರಿವಾದೀತು ಅಲ್ಲವೇ? ಪರಿಣಾಮ ಸಂಬಂಧಗಳು ಸೊರಗುತ್ತಿವೆ; ನಿಧಾನವಾದ ಆದರೆ ಅಷ್ಟೇ ಖಚಿತವಾದ ಅನಾಹುತಗಳೆಡೆಗೆ ಸಾಗುತ್ತಿವೆ. [ಇಂತಹ ವಿಚಾರಗಳು ತಲೆ ಹೊಕ್ಕಾಗ ಉಂಟಾಗುವ ತಳವಳ, ವೇದನೆ ಇನ್ಯಾರೊಂದಿಗೂ ಹಂಚಿಕೊಳ್ಳದ ಪರಿಸ್ಥಿತಿಯುಂಟಾದಾಗ ಮನಸ್ಸಿನ ದುಗುಡವನ್ನು ಈ ರೀತಿಯಲ್ಲಾದರೂ ಹೊರಹಾಕಿ ಅಲ್ಪ ನೆಮ್ಮದಿ ಸಿಗುವದೇನೋ ಎಂಬ ಹಂಬಲದೊಂದಿಗೆ ಈ ಬರಹ.]

2 comments:

  1. ಸಂಬಂಧಗಳು ಹಳಸುತ್ತಿರುವ ಬಗ್ಗೆ ನನಗೂ ಹೇಳಿಕೊಳ್ಳಲಾಗದ ಅನುಭವಿಸಲಾಗದ ವೇದನೆಯಿದೆ.ನಾನೂ ಬರವಣಿಗೆಯ ಬೆನ್ನು ಹತ್ತಿ ಮರೆಯಲು ಪ್ರಯತ್ನಿಸುತ್ತಿದ್ದೇನೆ.

    ReplyDelete
  2. ಕೈಲಾಗದವನು ಮೈಯೆಲ್ಲಾ ಪರಚಿಕೊಂಡಂತಾಗಿದೆ ನಮ್ಮ ಸ್ಥಿತಿ. ಪರಚಿಕೊಂಡು ಗಾಯ ಮಾಡಿಕೊಳ್ಳುವುದಕ್ಕಿಂತಲೂ ಗೀಚಿಕೊಂಡು ತೆಪ್ಪಗಾಗುವುದೇ ಮೇಲಲ್ಲವೇ?

    ReplyDelete