|| ಶ್ರೀ ರಾಮ ಜಯ ರಾಮ ಜಯ ಜಯ ರಾಮ ||
Showing posts with label ಮಾನವೀಯತೆ. Show all posts
Showing posts with label ಮಾನವೀಯತೆ. Show all posts

Wednesday, July 27, 2011

ಅಜ್ಜನ ಪ್ರೀತಿ

೧೯೭೩ರಲ್ಲಿ ನಾನು ಶಿವಮೊಗ್ಗದ ಬ್ರಾಹ್ಮಣರ ವಸತಿ ನಿಲಯದಲ್ಲಿದ್ದುಕೊಂಡು ಡಿ.ವಿ.ಎಸ್. ಕಾಲೇಜಿನಲ್ಲಿ ಪ್ರಥಮ ಪಿ.ಯು.ಸಿ. ಓದುತ್ತಿದ್ದೆ. ಎಸ್.ಎಸ್.ಎಲ್.ಸಿ.ಯಲ್ಲಿ ಫಸ್ಟ್ ಕ್ಲಾಸ್ ಬಂದಿದ್ದರಿಂದ ನನಗೆ ಪೂರ್ಣ ಸ್ಕಾಲರ್‌ಷಿಪ್ ಸಿಕ್ಕಿತ್ತು; ಊಟ-ತಿಂಡಿ ಫ್ರೀ; ರೂಂ ಬಾಡಿಗೆ ತಿಂಗಳಿಗೆ ರೂ.೧೩ ಮಾತ್ರಾ ಕಟ್ಟಬೇಕಾಗಿತ್ತು. ಅಲ್ಲಿನ ಎಲ್ಲಾ ವ್ಯವಸ್ಥೆಗಳೂ ಕೂಡ ಅಚ್ಚುಕಟ್ಟಾಗಿತ್ತು. ಸುಮಾರು ೪ ತಿಂಗಳ ನಂತರ ನಮ್ಮ ತಂದೆಯವರಿಗೆ ನರಸಿಂಹರಾಜಪುರದಿಂದ ಮೈಸೂರಿಗೆ ವರ್ಗವಾಯಿತು. ಹಾಗಾಗಿ ನಾನು ಆಗಾಗ ಶಿವಮೊಗ್ಗೆಯಿಂದ ಮೈಸೂರಿಗೆ ಬೆಳಿಗ್ಗೆ ೫ ಕ್ಕೆ ಹೊರಡುವ ಖಾಸಗೀ ಬಸ್ಸಿನಲ್ಲಿ ಹೋಗುತ್ತಿದ್ದೆ. ವಸತಿ ನಿಲಯದಲ್ಲಿ ಅಡಿಗೆ ಮಾಡುವ ನಾಲ್ಕೈದು ಮಂದಿಯಲ್ಲಿ ಸುಮಾರು ೭೦ ದಾಟಿದ ವಯೋವೃದ್ಧರೊಬ್ಬರಿದ್ದರು. ಒಮ್ಮೆ ನಾನು ಮೈಸೂರಿನಿಂದ ವಾಪಸಾದಾಗ ಅವರು ನನ್ನನ್ನು ಕರೆದು, ನೀನು ಎಷ್ಟು ಹೊತ್ತಿಗೆ ಶಿವಮೊಗ್ಗ ಬಿಟ್ಟೆ ಎಂದು ಕೇಳಿದರು. ನಾನು ೪.೩೦ ಕ್ಕೇ ಬಿಟ್ಟೆ; ೫ಕ್ಕೆ ಬಸ್ಸು ಎಂದೆ. ದಿನಾ ಬೆಳಿಗ್ಗೆ ೬ ಘಂಟೆಯಾಗಿ ಎಲ್ಲರೂ ಪ್ರಾಥ:ಸಂಧ್ಯಾ ವಂದನೆ ಮುಗಿಸದ ಹೊರತೂ ಕಾಫಿ ಕೊಡುತ್ತಿರಲಿಲ್ಲ. ಅವರೆಂದರು ಇನ್ನು ಮುಂದೆ ಮೈಸೂರಿಗೆ ಹೋಗುವಾಗ ನನಗೆ ಹಿಂದಿನ ದಿನ ರಾತ್ರಿಯೇ ತಿಳಿಸು; ಹೋಗುವ ಮುನ್ನ ಅಡಿಗೆ ಮನೆಗೆ ಬಂದು ಹೋಗು ಎಂದರು. ಅಂದಿನಿಂದ ನಾನು ಬೆಳಿಗ್ಗೆ ಅಲ್ಲಿಗೆ ಹೋದರೆ ಅವರು ನನ್ನನ್ನು ಪ್ರತ್ಯೇಕವಾಗಿ ಕರೆದು ಒಂದು ಲೋಟ ತುಂಬ ಬಿಸಿ ಬಿಸಿ ಹಾಲನ್ನು ನೀಡಿ, ನಾನು ಕುಡಿಯುವುದನ್ನೇ ಅಕ್ಕರೆಯಿಂದ ನೋಡುತ್ತಿದ್ದು, ಮುಗಿದ ಮೇಲೆ ಹುಷಾರಾಗಿ ಹೋಗಿ ಬಾ ಎಂದು ತಲೆ ಸವರಿ ಕಳಿಸುತ್ತಿದ್ದರು. ಆ ವಯಸ್ಸಿನಲ್ಲಿಯೂ ಅವರು ದುಡಿಯುವ ಅನಿವಾರ್ಯತೆ ಏನಿತ್ತೋ ಮತ್ತು ಅವರು ನನ್ನಲ್ಲಿ ಯಾರನ್ನು ಕಾಣುತ್ತಿದ್ದರೋ ನನಗೆ ಗೊತ್ತಿಲ್ಲ. ಅವರ ಹೆಸರೂ ಸಹ ನನಗೆ ನೆನಪಿಲ್ಲ. ಆದರೆ ಅವರ ಅಕ್ಕರೆ, ಅವರ ಪ್ರೀತಿ ತುಂಬಿದ ನೋಟ ಮತ್ತು ನನ್ನ ಮೇಲಿದ್ದ ಅವರ ಮಮಕಾರ-ಅನುಕಂಪ ಇಂದಿಗೂ ನನ್ನ ಮನದಲ್ಲಿ ಹಚ್ಚ ಹಸಿರಾಗಿದೆ.

Sunday, July 17, 2011

ಅಯ್ಯೋ! ಎನ್ನದ ಮನವೇಕೆ?....


ಮಾನವೀಯತೆಯ ಮುಖಗಳು ಹಲವಾರು. ಬಹಳಷ್ಟು ಸನ್ನಿವೇಶಗಳಲ್ಲಿ ಅದು ಸಂದರ್ಭೋಚಿತವಾಗಿ ಪ್ರಕಟವಾಗುವಂತಹುದು. ಮಾನವೀಯತೆ ಮೆರೆಯ ಬೇಕಾದರೆ ಮನುಷ್ಯನ ಸಂವೇದನಾಶೀಲ ಪ್ರವೃತ್ತಿ ಕೂಡ ಸದಾ ಜಾಗೃತವಾಗಿರಬೇಕು. ಅದಕ್ಕೊಂದು ಉದಾಹರಣೆ.

ನಾನು ವಿಧಾನಸೌಧದಲ್ಲಿ ಓರ್ವ ಹಿರಿಯ ಐ.ಎ.ಎಸ್. ಅಧಿಕಾರಿಯ ಆಪ್ತ ಕಾರ್ಯದರ್ಶಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ಕಾಲ. ಅತ್ಯಂತ ಜವಾಬ್ದಾರಿಯುತ ಕಛೇರಿಯಾಗಿದ್ದರಿಂದ ಕಾರ್ಯಬಾಹುಳ್ಯವೂ ಅತ್ಯಧಿಕ. ಹಾಗಾಗಿ ಪ್ರತಿದಿನ ಬೆಳಿಗ್ಗೆ 8 ಘಂಟೆಗೆ ಕಛೇರಿಗೆ ಹೋದರೆ ಮನೆ ಸೇರುವುದು ರಾತ್ರಿ 9ರ ನಂತರವೇ. ಒಮ್ಮೊಮ್ಮೆ ರಾತ್ರಿ 12-1 ಘಂಟೆಯೂ ಆಗುತ್ತಿತ್ತು. ಒಂದು ದಿನ ರಾತ್ರಿ 8  ಘಂಟೆಗೆ  ಸಚಿವರ ನಿವಾಸಕ್ಕೆ ಸಭೆಗಾಗಿ ನನ್ನ ಬಾಸ್ ತೆರಳಿದ್ದರು. ವಾಪಸ್ಸು ಬಂದಾಗ ರಾತ್ರಿ 12 ಆಗಿತ್ತು. ನಮಗೋ ಸಾಕಷ್ಟು  ಹಸಿವಾಗಿ ಮನೆ ಸೇರಿದರೆ ಸಾಕಪ್ಪಾ ಎಂದೆನಿಸುತ್ತಿತ್ತು. ಬಾಸ್ ಬಂದ ಕೂಡಲೇ ಮನೆಗೆ ತೆರಳಲು ಸಿದ್ಧರಾದೆವು. ಅವರನ್ನು ಬೀಳ್ಕೊಟ್ಟು ನಾವು ಹೊರಡಲು ಅವರೊಂದಿಗೆ ಪೋರ್ಟಿಕೋಗೆ ಬಂದೆವು. ಆಗ ವಿಪರೀತ ಮಳೆ ಬೇರೆ ಸುರಿಯುತ್ತಿತ್ತು. ಬಾಸ್ ಕಾರಿನ ಒಳಗೆ ಕುಳಿತ ತಕ್ಷಣ ಬಾಗಿಲು ಪುನ: ತೆರೆದುಕೊಂಡು ಹೊರಬಂದರು. ನಾವುಗಳು ಇನ್ನೇನು ಜ್ಞಾಪಿಸಿಕೊಂಡರಪ್ಪಾ, ಇನ್ನೇನು ಕೆಲಸ ಇದೆಯೋ ಎಂದುಕೊಳ್ಳುವಷ್ಟರಲ್ಲಿ, ಪಕ್ಕದಲ್ಲೇ ನಿಂತಿದ್ದ ಪೋಲಿಸಿನವನನ್ನು ಕರೆದು ಬಾಸ್ ಇಂತೆಂದರು: "ನೋಡಿ, ಪೋರ್ಟಿಕೋದ ಆ ಮೂಲೆಯಲ್ಲಿ ಒದ್ದೆಯಾದ ನಾಯಿಯೊಂದು ಮುದುರಿಕೊಂಡು ಮಲಗಿದೆ. ಅದನ್ನು ಓಡಿಸಬೇಡಿ. ಅದು ಹೋದಾಗ ಹೋಗಲಿ" ಎಂದು ಹೇಳಿ ಪುನ: ಕಾರ್ ಹತ್ತಿ ಹೊರಟರು. 

ರಾತ್ರಿ 12ರ ಸಮಯ; ಜೋರಾದ ಮಳೆ; ತೀವ್ರವಾದ ಹಸಿವು; ಮನೆ ಸೇರಿದರೆ ಸಾಕಪ್ಪಾ ಎನ್ನುವಷ್ಟು ಆಯಾಸ - ಈ ಸಂದರ್ಭದಲ್ಲಿ ನನ್ನ ಬಾಸ್ ಒಂದು ಪ್ರಾಣಿಗೆ ತೋರಿದ ಅನುಕಂಪ ಮತ್ತು ಕಾಳಜಿ ಒಂದು ಕ್ಷಣ ನಮ್ಮೆಲ್ಲರ ಹಸಿವು-ಆಯಾಸವನ್ನು ಮರೆಸಿ ಅವರಲ್ಲಿ ಅನನ್ಯ ಗೌರವ ಭಾವವನ್ನು ತುಂಬಿತ್ತು.

[ಮುಂದುವರೆಯುವುದು]