|| ಶ್ರೀ ರಾಮ ಜಯ ರಾಮ ಜಯ ಜಯ ರಾಮ ||
Showing posts with label ತುಣುಕು ಬರಹಗಳು. Show all posts
Showing posts with label ತುಣುಕು ಬರಹಗಳು. Show all posts

Tuesday, January 10, 2012

ಇಂದಿನ ದಿನವೇ ಶುಭದಿನವು..

ವೇ||ಬ್ರ||ಶ್ರೀ ಸುಬ್ರಹ್ಮಣ್ಯಂ [ಬಲತುದಿ]

 ಸಜ್ಜನರ ಮತ್ತು ಜ್ಞಾನವಂತರ ಸಾನ್ನಿಧ್ಯ ಸಿಗುವುದು ಪೂರ್ವಾಕೃತ ಸುಕೃತಗಳಿಂದಲೇ ಎಂಬುದು ನನ್ನ ನಂಬಿಕೆ. ನಾನು ನನ್ನ ಬ್ಲಾಗ್ ಗಳಲ್ಲಿ ಮತ್ತು ಇತರೆ ಮಾಸಪತ್ರಿಕೆಗಳಲ್ಲಿ ಮತ್ತು ವೃತ್ತಪತ್ರಿಕೆಗಳಲ್ಲಿ ಬರೆಯುತ್ತಿದ್ದ ಕೆಲವು ಲೇಖನಗಳ ಸಂಗ್ರಹವನ್ನು ಹೊರತರಲು ನಿಶ್ಚಯಿದಾಗ ಮುನ್ನುಡಿ ಯಾರಿಂದ ಬರೆಸಬಹುದು ಎಂಬ ಪ್ರಶ್ನೆ ಮೂಡಿತು. ನನಗೂ "ಸ್ವಯಂಪ್ರಕಾಶ" [ಹರಿಹರಪುರ ಮಠದಿಂದ ಪ್ರಕಟವಾಗುವ ಮಾಸಿಕ ಧಾರ್ಮಿಕ ಪತ್ರಿಕೆ] ಪತ್ರಿಕೆಗೂ ಸುಮಾರು 4-5 ವರ್ಷಗಳ ಅನುಬಂಧ - ನನ್ನ ಅನೇಕ ಲೇಖನಗಳು ಅದರಲ್ಲಿ ನಿಯಮಿತವಾಗಿ ಪ್ರಕಟವಾಗಿವೆ. ಹಾಗಾಗಿ ಅದರ ಗೌರವ ಸಂಪಾದಕರೂ, ವಯೋವೃದ್ಧರೂ, ಜ್ಞಾನವೃದ್ಧರೂ ಆದ ವೇ||ಬ್ರ||ಶ್ರೀ|| ಹರಿಹರಪುರ ಸುಬ್ರಹ್ಮಣ್ಯಂರವರನ್ನೇ ವಿನಂತಿಸಬಹುದೆಂದು ತೀರ್ಮಾನಿಸಿದೆ. ಆದರೆ ಪತ್ರಮುಖೇನ ಬಿಟ್ಟರೆ ಅವರ ಮುಖತ: ಭೇಟಿ ಒಮ್ಮೆಯೂ ಆಗಿದ್ದಿಲ್ಲ. ಹಾಗಾಗಿ ಅವರ ಸುಪುತ್ರರಾದ ಶ್ರೀ ಹರಿಹರಪುರ ಮಂಜುನಾಥ್ ರವರನ್ನು ದೂರವಾಣಿಯಲ್ಲಿ ಸಂಪರ್ಕಿಸಿ ನನ್ನ ಇರಾದೆ ತಿಳಿಸಿದೆ. ಅವರು ಕೂಡಲೇ ಅವರ ತೀರ್ಥರೂಪುರವರನ್ನು ಸಂಪರ್ಕಿಸಿ, ಅವರ ಅನುಮತಿ ಪಡೆದು, ಕರಡು ಕಳಿಸುವಂತೆ ತಿಳಿಸಿದರು. ಮುನ್ನುಡಿ ಸಿದ್ಧವಾದ ಮೇಲೆ ನಾನೇ ಬಂದು ಪಡೆಯುವುದಾಗಿ ತಿಳಿಸಿದ್ದೆ. ಅವರಿಂದ ಆ ಬಗ್ಗೆ ಮಾಹಿತಿ ಬಂದಕೂಡಲೇ 1.1.2012 ರಂದು ಅದರ ಪ್ರತಿಯನ್ನು ಪಡೆಯಲು ನಾನು ಬೆಂಗಳೂರಿಗೆ ಹೊರಟೆ. ಶ್ರೀ ಮಂಜುನಾಥ್ ರವರ ಮಾರ್ಗದರ್ಶನದಂತೆ ನಾನು ಅವರ ಮನೆ ತಲುಪಿದಾಗ ಅವರ ಶ್ರೀಮತಿ ಲೀಲಾ ಮಂಜುನಾಥ್ ರವರು ಆತ್ಮೀಯವಾಗಿ ಸ್ವಾಗತಿಸಿದ ಕೆಲವೇ ಕ್ಷಣಗಳಲ್ಲಿ ಶ್ರೀ ಮಂಜುನಾಥ್ ರವರು ಅವರು ತಂದೆಯವರೊಂದಿಗೆ ಬಂದರು. 95 ವರ್ಷದ ಶ್ರೀ ಸುಬ್ರಹ್ಮಣ್ಯಂ ರವರು ಯಾವುದೇ ಆಯಾಸವಿಲ್ಲದೇ ಮೊದಲನೇ ಮಹಡಿಯನ್ನು ಏರಿ ಬಂದು ಮುಗುಳ್ನಕ್ಕಾಗ ನನಗಾದ ಆನಂದ ಅನಂತ. ಬಲು ಅಭಿಮಾನದಿಂದ ಬರೆದ ಮುನ್ನುಡಿಯನ್ನು ನನ್ನ ಕೈಗಿರಿಸಿ ಆಶೀರ್ವದಿಸಿದಾಗ ಧನ್ಯತೆಯ ಭಾವ ನನ್ನದಾಗಿತ್ತು. ಅವರ ಬಗ್ಗೆ ನಾನು ಏನೇ ಬರೆದರೂ ಅಲ್ಪವೇ. ಅವರ ಆತ್ಮ ಚರಿತ್ರೆ : "ಗಂಗಾ ತೀರದ ಬದುಕು" ಎಲ್ಲರೂ ಓದಿ ಆಸ್ವಾದಿಸಲೇಬೇಕಾದ ಅನುಭವಾಮೃತ. ನಿಷ್ಠೆ, ಪ್ರಾಮಾಣಿಕತೆ, ಶ್ರದ್ಧೆ, ಧೈರ್ಯ, ಗುರುಭಕ್ತಿ, ದೈವಭಕ್ತಿ, ವಿನಯಶೀಲತೆ ಮುಂತಾದ ಉನ್ನತ ಗುಣಗಳು ವ್ಯಕ್ತಿಯನ್ನು ಯಾವ ಮಟ್ಟಕ್ಕೇರಿಸಬಹುದೆಂಬುದಕ್ಕೇ ಶ್ರೀ ಸುಬ್ರಹ್ಮಣ್ಯಂರವರೇ ಜೀವಂತ ಸಾಕ್ಷಿ.  ಅವರ ಸಾನ್ನಿಧ್ಯ ಮತ್ತು ಆಶೀರ್ವಾದ ಲಭಿಸಿದ್ದು ನನ್ನ ಪುಣ್ಯವೇ ಸರಿ. ಅವರ ಅಭಿಮಾನಕ್ಕೆ ಮತ್ತು ಆಶಿರ್ವಾದಕ್ಕೆ ನನ್ನ ಶತಕೋಟಿ ನಮನಗಳು.

ಪ್ರೊ.ಜಿ.ವೆಂಕಟಸುಬ್ಬಯ್ಯ
ಪ್ರೊ.ಜಿವಿ. [ನನ್ನ ಕರಡು ವೀಕ್ಷಣೆಯಲ್ಲಿ]

ನಾನು ಕನ್ನಡದಲ್ಲಿ ಕೆಲವು ಪ್ರಾಸಬದ್ಧ ಪದಗಳ ಸಂಗ್ರಹ ಪ್ರಾರಂಭಿಸಿದ್ದೆ. ಅದರ ಬಗ್ಗೆ 'ನಿಘಂಟು ಬ್ರಹ್ಮ' ಎಂದೇ ಖ್ಯಾತಿಯಾದ ಪ್ರೊ.ಜಿ.ವೆಂಕಟಸುಬ್ಬಯ್ಯನವರನ್ನೊಮ್ಮೆ ಸಂದರ್ಶಿಸಿ ಮಾರ್ಗದರ್ಶನ ಪಡೆಯಬೇಕೆಂಬ ಇಚ್ಛೆಯೂ ಇತ್ತು.  ಆದರೆ ಅವರ ಪರಿಚಯವಿರಲಿಲ್ಲ.  ಶ್ರೀ ಸುಬ್ರಹ್ಮಣ್ಯಂರವರನ್ನು ನೋಡಲು ಹೊರಟಾಗ ಅವರು ನನಗೆ ವಿಶ್ವಾಸಪೂರ್ವಕವಾಗಿ ಕಳುಹಿಸಿದ್ದ ಅವರ ಆತ್ಮಚರಿತ್ರೆ : "ಗಂಗಾ ತೀರದ ಬದುಕು" ಪುಸ್ತಕವನ್ನು ರೈಲಿನಲ್ಲಿ ಓದುತ್ತಾ ಸಾಗುತ್ತಿದ್ದೆ. ಬೆಂಗಳೂರು ಸಮೀಪಿಸುವ ಹೊತ್ತಿಗೆ ನಾನು ಪುಸ್ತಕದ ಅಂತಿಮ ಭಾಗಕ್ಕೆ ಬಂದಿದ್ದೆ. ಅಲ್ಲಿ ಅವರು ತಮ್ಮ ಅನೇಕ ವಿಶ್ವಾಸಿಗರ ಪರಿಚಯ ಮಾಡುವಲ್ಲಿ ಪ್ರೊ.ಜಿ.ವೆಂಕಟಸುಬ್ಬಯ್ಯನವರ ಬಗ್ಗೆಯೂ ಪ್ರಸ್ತಾಪಿಸಿದ್ದರು. ಅದನ್ನು ನೋಡಿ ನನಗೆ ನಿಧಿಯೇ ಸಿಕ್ಕಷ್ಟು ಸಂತಸವಾಯಿತು. ಅದೃಷ್ಟವಶಾತ್, ನಾನು ಪದಸಂಗ್ರಹದ ಕರಡನ್ನೂ ಒಯ್ದಿದ್ದೆ. ವಿಷಯ ತಿಳಿದ ಶ್ರೀ ಸುಬ್ರಹ್ಮಣ್ಯಂ ರವರು ಕೂಡಲೇ ನನ್ನೊಡನೆ ಪ್ರೊ.ಜಿ.ವಿ.ಯವರನ್ನು ಭೇಟಿಯಾಗಲು ಹೊರಟೇ ಬಿಟ್ಟರು! ಅವರ ಪುತ್ರ ಶ್ರೀ ಹ.ಮಂಜುನಾಥ್ ರವರು ದೂರವಾಣಿಯಲ್ಲಿ ಪ್ರೊ.ಜಿ.ವಿ.ಯವರನ್ನು ಸಂಪರ್ಕಿಸಿದಾಗ ಅವರೂ ಸಹ ಕೂಡಲೇ ಬರಲು ತಿಳಿಸಿದರು. ಇದನ್ನು ಅದೃಷ್ಟವೆನ್ನಲೇ, ದೈವಕೃಪೆಯೆನ್ನಲೇ? ಹಾಗಾಗಿ ಅವರೊಂದಿಗೆ ಪ್ರೊ.ಜಿ.ವಿ.ಯವರನ್ನು ಭೇಟಿಯಾಗಲು ಹೊರಟೆವು. ಅವರ ಮನೆ ತಲುಪಿದಾಗ ಸ್ವತಃ ಪ್ರೊ.ಜಿ.ವಿಯವರೇ [98 ವರ್ಷ] ಬಾಗಿಲು ತೆಗೆದು ಸ್ವಾಗತಿಸಿದರು. ನಾನು ಕನ್ನಡದಲ್ಲಿ ಯಾವುದೇ ಅಧಿಕೃತ ವ್ಯಾಸಂಗ ಮಾಡಿಲ್ಲವೆಂದೂ [ಕೇವಲ ಬಿ.ಕಾಂ.ಪದವೀಧರ], ಕೇವಲ ಹವ್ಯಾಸಕ್ಕಾಗಿ ಈ ಪದಸಂಗ್ರಹ

ಪ್ರೊ.ಜಿ.ವಿ.ಯವರಿಗೆ ಗೌರವಾರ್ಪಣೆ
ಮಾಡುತ್ತಿರುವುದಾಗಿಯೂ ಅವರಿಗೆ ವಿನಯಪೂರ್ವಕವಾಗಿ ತಿಳಿಸಿದೆ. ಅವರೆಂದರು: "ಕನ್ನಡದ ಕೆಲಸ ಮಾಡಲಿಕ್ಕೆ ಪದವಿ ಬೇಕಾಗಿಲ್ಲ; ಮನಸ್ಸಿದ್ದರಷ್ಟೇ ಸಾಕು" ಎಂದು ಹೇಳಿ ನಾನು ಸಿದ್ಧಪಡಿಸಿದ್ದ ಕರಡನ್ನು ನೋಡಿ, ಕೆಲವು ಸಲಹೆ-ಸೂಚನೆಗಳನ್ನು ನೀಡಿದರು. ಕರಡನ್ನು ಅವರ ಕೈಗೆ ಕೊಟ್ಟೊಡನೆಯೇ ತಮ್ಮ ಪಕ್ಕದಲ್ಲಿಯೇ ಕುಳಿತುಕೊಳ್ಳಲು ಹೇಳಿ, ಆತ್ಮೀಯವಾಗಿ ಸ್ಫಂದಿಸಿದ ಅವರ ಬಗ್ಗೆ ಏನು ಹೆಚ್ಚಿಗೆ ಹೇಳಲಿ?  ಅವರ ಆರೋಗ್ಯ ಮತ್ತು ಚಟುವಟಿಕೆಯ ರಹಸ್ಯವೇನೆಂದು ಕೇಳಿದಾಗ ಅವರು ಹೇಳಿದ್ದಿಷ್ಟೇ: "ನಾನೇನೂ ಹೊಸದಾಗಿ ಮಾಡಿಲ್ಲ. ನನ್ನ ತಂದೆ-ತಾಯಿಯವರು ಹೇಗೆ ಬದುಕಿದರೋ ಅದೇ ರೀತಿಯಲ್ಲಿ ಬದುಕುತ್ತಿದ್ದೇನೆ" ಎಂದಷ್ಟೇ ಮಾರ್ಮಿಕವಾಗಿ ನುಡಿದರು. ಈ ಈರ್ವ ಸಜ್ಜನರೊಂದಿಗೆ ಕಳೆದ ಸುಮಾರು 1-2 ಗಂಟೆಗಳ ಕಾಲ ನಿಜಕ್ಕೂ ನನ್ನ ಜೀವನದ ಅಮೂಲ್ಯ ಕ್ಷಣಗಳು. ಆ ಸಾನ್ನಿಧ್ಯದಲ್ಲಿ ನಾನನುಭವಿಸಿದ ಸುಪ್ತ-ಚೇತನಾನುಭವ ಅವರ್ಣನೀಯ ಮತ್ತು ಅವಿಸ್ಮರಣೀಯ.

ಇನ್ನು ಈರ್ವರ ಭೇಟಿಗೆ ಮೂಲ ಕಾರಣಕರ್ತರು ಶ್ರೀ ಹ.ಮಂಜುನಾಥ್ ಮತ್ತು ಅವರ  ಶ್ರೀಮತಿ ಲೀಲಾ ಮಂಜುನಾಥ್. ದಂಪತಿಗಳೀರ್ವರೂ ಸಾಹಿತಿಗಳು ಮತ್ತು ಪ್ರಕಾಶಕರು [ಮಾಲವಿಕ ಪ್ರಕಾಶನ, ಬೆಂಗಳೂರು]. ಅವರ ಅಭಿಮಾನಕ್ಕೆ ಮತ್ತು ಆತ್ಮೀಯತೆಗೆ ನಾನು ಚಿರಋಣಿ. ಶ್ರೀ ಮಂಜುನಾಥ್ ರವರು ಈ ಸುಂದರ ಕ್ಷಣಗಳನ್ನು ತಮ್ಮ ಮೊಬೈಲ್ ಕ್ಯಾಮೆರಾದಲ್ಲಿ ಸೆರೆಹಿಡಿದು ಈ ಕ್ಷಣಗಳನ್ನು ಹಿಡಿದಿಟ್ಟು ಬೃಹದುಪಕಾರ ಮಾಡಿದ್ದಾರೆ. 
ಸಂದರ್ಶನದ ಸೂತ್ರಧಾರ: ಶ್ರೀ ಹ.ಸು.ಮಂಜುನಾಥ್

ಅವರ ಶ್ರೀಮತಿ ಲೀಲಾ ಮಂಜುನಾಥ್ ಬಗ್ಗೆ ಕೂಡಾ ಒಂದೆರಡು ಮಾತುಗಳನ್ನು ಹೇಳಲೇಬೇಕು. ಅವರು ಕೆಳದಿ ಕವಿ ಮನೆತನದ ದೂರದ ಬಂಧುಗಳೂ ಎನ್ನುವುದು ಮತ್ತೊಂದು ವಿಶೇಷ. ಪತಿಯಂತೆಯೇ ಸಾಹಿತ್ಯದಲ್ಲಿ ತೊಡಗಿಸಿಕೊಂಡಿರುವ ಇವರು ಪಾಕಶಾಸ್ತ್ರಕ್ಕೆ ಸಂಬಂಧಪಟ್ಟಂತೆ ಅನೇಕ ಉಪಯುಕ್ತ ಪುಸ್ತಕಗಳನ್ನು ಹೊರತಂದಿದ್ದಾರೆ. ಕೆಲವು ಪುಸ್ತಕಗಳು ಮರುಮುದ್ರಣಗಳನ್ನೂ ಕಂಡಿರುವುದು ಈ ಪುಸ್ತಕಗಳ ಜನಪ್ರಿಯತೆಗೆ ಸಾಕ್ಷಿ.  ಈ ಸಂದರ್ಭದಲ್ಲಿ ಅವರ ಸಹಾಯವನ್ನೂ ಸಹಾ ನಾನು ನೆನೆಯಲೇಬೇಕು.

ಹೊಸ ವರುಷವನ್ನು ಹೊಸ ಹರುಷದೊಂದಿಗೆ, ಹೊಸ ಉತ್ಸಾಹದೊಂದಿಗೆ ಕಾಲಿಡಲು ಅನುವು ಮಾಡಿಕೊಟ್ಟ ಈ ಎಲ್ಲ ಸಜ್ಜನರಿಗೂ ಇದೋ ನನ್ನೀ ನುಡಿನಮನಗಳು.





Saturday, July 9, 2011

ಹೀಗೇಕೆ...?

* ಗಂಡನ ಸಂಬಳ ತಿಂಗಳಿಗೆ 1 ಲಕ್ಷ; ಆದರೆ ಹೆಂಡತಿಯೂ ದುಡಿಯಲೇಬೇಕು!

* Softfare ಗುದ್ದಾಟದಲ್ಲಿ ಮಕ್ಕಳಾಗಿದ್ದಾವೆ Toy-ware.

* ಮದುವೆ ಈಗ ಎರಡು 'ಮನ' ಗಳ ಸಮಾಗಮವಲ್ಲ; ಎರಡು 'money' ಗಳ ಸಂಗಮ.

* ಮಾನವ ಜನ್ಮ ದೊಡ್ಡದು; ಆದರೆ ಮಾನವನ ಬುದ್ಧಿ....?

* ನಕ್ಕರೆ ಅದೇ ಸ್ವರ್ಗ; ಬಿದ್ದರೆ ಬೇರೆಯವರಿಗೆ ಸ್ವರ್ಗ

* 'ಉಪ್ಪು ತಿಂದ ಮೇಲೆ ನೀರು ಕುಡಿಯಲೇಬೇಕು' - ಕುಡಿದರಾಯಿತು ಬಿಡಿ        ಎನ್ನುವರೇ ಬಹು ಮಂದಿ.

* ಮೂರು ಬಿಟ್ಟವರು ನಾಯಕರು; ಮೂರೂ ಇದ್ದವರು ಅಮಾಯಕರು

* ನಾಲ್ಕಾಣೆ ಕಾಣೆ; ಆಣೆಗೆ ಮಂಜುನಾಥನೇ ಹೊಣೆ

* ಕ್ರಿಕೆಟ್ ಗಿದೆ ಎಲ್ಲಾ ಸವಲತ್ತು; ಬೇರೆ ಆಟಗಳಿಗಿಲ್ಲ ಕವಡೆ ಕಿಮ್ಮತ್ತು.

* 'ಎಲೆ ಮರೆಯ ಕಾಯಿ'ಗಳನ್ನು ಹುಡುಕಿ, ಹೆಕ್ಕಿ, ತೆಗೆದು ಬಳಸುವ ವ್ಯವಧಾನ ಯಾರಿಗೂ ಇಲ್ಲ.

* 'Job satisfaction' ಗಿಂತ 'ಜೋಬ್ satisfaction' ಮೇಲು

* ಕುರಿ ಕಟುಕನನ್ನು ಹಿಂಬಾಲಿಸುವಂತೆ ಹೆಚ್ಚು ಹಣ ಕೀಳುವ ವೈದ್ಯರನ್ನೇ ಜನ ನಂಬುತ್ತಾರೆ.

* ಅಲೋಪತಿಯ ಅಡ್ಡ ಪರಿಣಾಮಗಳ ಅರಿವಿದ್ದೂ ಜನ ಅದಕ್ಕೇ ಜೋತು ಬೀಳುತ್ತಾರೆ.

ರಾಜಕೀಯ ಅಗ್ನಿಹೋತ್ರ
ಊರಿನ ಕೆರೆ ಕಟ್ಟೆ           ..            ..       ಸ್ವಾಹಾ
ಊರಿನ ನಿವೇಶನಗಳು    ..            ..       ಸ್ವಾಹಾ
ಊರಿನ ಗೋಮಾಳ        ..            ..       ಸ್ವಾಹಾ
ಊರಿನ ಮಾನಮರ್ಯಾದೆ             ..       ಸ್ವಾಹಾ
ಊರಿನ ಬಡರೈತರ ಜಮೀನು         ..       ಸ್ವಾಹಾ
ಸರ್ವಂ                         ..            ..       ಸ್ವಾಹಾ

ಇದೆಲ್ಲಾ ನನ್ನದೇ             ..            ..       ಸ್ವಾಹಾ


Sunday, May 1, 2011

ಹೀಗೇಕೆ.....?

                                                                             [ಮುಂದುವರೆದುದು]

* ಕಂಡದ್ದೆಲ್ಲಾ ಬೇಕು; ಪಡೆಯುವ ಶ್ರಮ ಮಾತ್ರಾ ಬೇಡ.

* ಬದುಕು ಅನಿಶ್ಚಿತ; ಸಾವು ಶಾಶ್ವತ. ಆದರೂ ಕೂಡಿಡುವುದು ಮಾತ್ರಾ ಅಪರಿಮಿತ.

* ಗಂಡ-ಹೆಂಡತಿ ಜಗಳ ಉಂಡು ಮಲಗುವ ತನಕ. ದಾಯಾದೀ ಜಗಳ ಜೀವವಿರುವ ತನಕ.

* ಪ್ರತಿಯೊಬ್ಬರಿಗೂ ಶಾಂತಿ-ನೆಮ್ಮದಿ-ಆರೋಗ್ಯ ಬೇಕು. ಆದರೆ ಪ್ರತಿಯೊಂದರಲ್ಲೂ ಶಿಸ್ತು/ಸಂಯಮ ಮಾತ್ರಾ ಬೇಡ.

* ಅಪ್ಪ-ಅಮ್ಮ ಇರುವ ತನಕ. ಬಂಧು-ಬಾಂಧವರು ಮರೆಯಾಗುವ ತನಕ.

* ಗಂಡ (ಡು) ಮಾತ್ರಾ ಬೇಕು. ಗಂಡನ ಪರಿವಾರ ಮಾತ್ರಾ ದೂರದಲ್ಲಿರಬೇಕು.

* ಸೊಸೆ ಅತ್ತೆ-ಮಾವಂದಿರೊಂದಿಗೆ ಬೆರೆತು ನಗುನಗುತಾ ಬಾಳಬೇಕು. ತಗ್ಗಿ ಬಗ್ಗಿ ನಡೆಯಬೇಕು. ಎದುರು ಮಾತನಾಡಬಾರದು. ಆದರೆ ಮಗಳು....?

* ಟಿ.ವಿ. ನೋಡುವ ಅರ್ಧ ಸಮಯವಾದರೂ ನಮ್ಮ ಆತ್ಮ ಚಿಂತನೆಗೆ ಮೀಸಲಿಡಲಾಗದು.

* ಹಾಲಿಗೆ ಹುಳಿ ಹಿಂಡುವವರ ದಂಡೇ ಇಂದು ಜಾಸ್ತಿ.

* ಬೇರೆಯವರು ತೊಂದರೆಯಲ್ಲಿದ್ದಾಗ ಮತ್ತೊಬ್ಬರು ಅವರಿಗೆ ಸಹಾಯ ಮಾಡಲಿ ಎಂದು ನಿರೀಕ್ಷಿಸುವವರೇ ಬಹು ಮಂದಿ.

* ವೃದ್ಧಾಪ್ಯ ಸಮೀಪಿಸುತ್ತಿದ್ದಂತೆ ಪದೇ ಪದೇ ಕಾಡುವ ರೋಗಗಳು ಸಾವನ್ನು ನೆನಪಿಸುವ ಎಚ್ಚರಿಕೆ ಗಂಟೆ ಇದ್ದಂತೆ. ಆದರೂ ಇದನ್ನರಿತವರು ಎಷ್ಟು ಮಂದಿ?

* ದಾನ ಕೊಟ್ಟದ್ದಕ್ಕೆ ಲೆಕ್ಕವುಂಟು; ಅಮೃತಶಿಲೆಯಲ್ಲಿ ಕೆತ್ತಿದ ಹೆಸರುಂಟು. ಪಡೆದದ್ದಕ್ಕೆ?

* ನಮ್ಮನ್ನು ಕಂಡರೆ ಅಸಡ್ಡೆ, ಅಗೌರವ ತೋರುವ ವ್ಯಕ್ತಿಗಳನ್ನೇ ಓಲೈಸಬೇಕಾದ ಅನಿವಾರ್ಯ ಪರಿಸ್ಥಿತಿ ಅನೇಕ ಸಲ ಬಂದೊದಗುವುದು.

* ಮಳೆ ಬಂದು ತಂಪಾದ ಕೂಡಲೇ ಕಪ್ಪೆ 'ವಟರ್, ವಟರ್' ಎನ್ನುವುದು. ತೃಪ್ತಿಯಾಗಿ ಉಂಡವ 'ಢರ್' ಎಂದು ತೇಗುವನು. ಎಷ್ಟೇ ಕೊಟ್ಟು, ಏನೇ ಮಾಡಿದರೂ ಬಹುಜನರು ಸದಾ 'ಗುರ್, ಗುರ್' ಎಂದೇ ಗುರುಗುಟ್ಟುವರು.

* ಪರಿಣಾಮ ಅರಿತೂ ದುಷ್ಚಟಗಳಿಗೆ ಬಲಿಯಾಗುವವರಲ್ಲಿ ವಿದ್ಯಾವಂತರೇ ಹೆಚ್ಚು.

* ಆಮೋದ, ಆನಂದ, ಮೃಷ್ಟಾನ್ನ ಭೋಜನ, ಮನೋರಂಜನೆ ಇತ್ಯಾದಿಗಳೆಲ್ಲವೂ ಪ್ರತಿ ದಿನ ಬೇಕು. ಸದ್ವಿಚಾರ, ಸತ್ಸಂಗ, ಸದಾಚಾರ ಗಳ ವಿಚಾರ ನಂತರ ನೋಡಿದರಾಯಿತು.

* ಪ್ರತಿ ಕ್ಷಣವೂ ಸಾವು ಸಮೀಪಿಸುತ್ತಿದ್ದರೂ ಅಕಾರ್ಯಗಳಲ್ಲಿ ಮಗ್ನರಾಗಿ ಜೀವನ ವ್ಯರ್ಥ ಮಾಡಿಕೊಳ್ಳುವವರೇ ಬಹು ಮಂದಿ.

* ಅಣು-ರೇಣು-ತೃಣ-ಕಾಷ್ಠ ಗಳೆಲ್ಲದರಲ್ಲೂ ಭಗವಂಗನಿದ್ದಾನೆಂಬ ಪರಮಭಾವದ ಅಭಾವವೇ ಎಲ್ಲೆಲ್ಲೂ.

* ನುಡಿದಂತೆ ನಡೆಯದೇ ಇರುವವರೇ ಇಂದು ಮಹಾನುಭಾವರು.

                                                                                                            [ಮುಂದುವರೆಯುವುದು]


Wednesday, March 2, 2011

ಹೀಗೇಕೆ? .......................... (ಮುಂದುವರೆದುದು)

* ಕಾಲು ಮುಟ್ಟಿ ನಮಸ್ಕರಿಸುವ ಬಹು ಮಂದಿಯೇ ಹೆಚ್ಚು ಹೆಚ್ಚು ಕಾಲೆಳೆಯುತ್ತಾರೆ.

* ನಮ್ಮಲ್ಲಿ ಒಂದು ಅಂದಾಜಿನ ಪ್ರಕಾರ ಶೇ.90 ರಷ್ಟು ಮಂದಿ ಕುಡುಕರಿದ್ದಾರೆ. ಯಾವುದೇ ಕ್ಷೇತ್ರವನ್ನು ಸೂಕ್ಷ್ಮವಾಗಿ ಅವಲೋಕಿಸಿ, ನಿಮ್ಮದೇ ಲೆಕ್ಕಾಚಾರ ಮಾಡಿನೋಡಿ ಇದು ಸ್ಪಷ್ಟವಾಗುತ್ತದೆ. ಆದರೂ ಇಂದಿಗೂ ಇದು ಒಂದು ದೊಡ್ಡ ಸಮಸ್ಯೆಯೆಂದು ಯಾರಿಗೂ ಅನಿಸಿಲ್ಲ.

* ಸಂಪ್ರದಾಯ, ಆಚರಣೆಗಳು ಬೇರೆಯವರಿಗೆ ಹಾನಿ ಉಂಟು ಮಾಡದೇ, ಪಾಲಿಸಿದವರಿಗೆ ಮುದ ನೀಡುವಂತಿದ್ದರೆ, ವಿಚಾರವಂತರು ಏಕೆ ಬೊಬ್ಬೆ ಹೊಡೆಯಬೇಕು? 

*ಉಳಿದ ಅಲ್ಪ ಕಾಲದಲ್ಲಿ ನೆಮ್ಮದಿಗಾಗಿ ಸರಳಸೂತ್ರಗಳನ್ನು ಅಳವಡಿಸಿಕೊಂಡು ಬಾಳುವ ಬದಲು ಸತ್ಯಾಸತ್ಯತೆ, ಸತ್ಯದ ಅನ್ಷೇಷಣೆ, ಅಧ್ಯಯನ ಮುಂತಾದ ವಿಚಾರಗಳಲ್ಲಿ ತಲೆ ಕೆಡಿಸಿಕೊಳ್ಳುವುದು ಬೇಕೇ? ಶಂಕರಾಚಾರ್ಯರು ಹೇಳಿದಂತೆ ಮುಪ್ಪಿನಲ್ಲಿ ವ್ಯಾಕರಣ ಕಲಿತೇನು ಪ್ರಯೋಜನ?

*ಆರೋಗ್ಯ, ನೆಮ್ಮದಿಗೆ ಹಾದಿಗಳು ಹಲವಾರು. ಒಬ್ಬೊಬ್ಬರಿಗೆ ಒಂದೊಂದು ಹಾದಿ. ಅದನ್ನೂ ಅನುಸರಿಸದೇ ಬೇರೆಯವರ ರೀತಿ-ನೀತಿಗಳನ್ನು ಟೀಕಿಸುವುದರಲ್ಲಿಯೇ ತಮ್ಮ ಆರೋಗ್ಯ-ನೆಮ್ಮದಿಗೆ ಕಲ್ಲು ಹಾಕಿಕೊಳ್ಳುವವರೇ ಇಂದು ಅನೇಕ ಮಂದಿ.

* ತಮ್ಮ ತಪ್ಪುಗಳಿಗಾಗಿ ಘೋರ ಶಿಕ್ಷೆಯನ್ನು ಈ ಜನ್ಮದಲ್ಲಿಯೇ ಅನುಭವಿಸುವ/ಅನುಭವಿಸುತ್ತಿರುವ ಅನೇಕ ಮಂದಿಯನ್ನು ನಾವು ನೋಡುತ್ತಿರುತ್ತೇವೆ. ಆದರೂ   ಅವರ ಅಹಂಕಾರದಲ್ಲಿ, ನಡೆ-ನುಡಿಯಲ್ಲಿ ಸ್ವಲ್ಪವಾದರೂ ಬದಲಾವಣೆ ಕಾಣದು. ಪ್ರಾಯಶ್ಚಿತ್ತದ ಮಾತಂತೂ ಅತೀ ದೂರ.

* ಮೂರೂ ಬಿಟ್ಟವರು ಊರಿಗೆ ದೊಡ್ಡವರು - ತಿಳಿದೂ ಅವರ ಹಾದಿಯಲ್ಲಿಯೇ ಸಾಗುವವರು ಹಲವರು!

* ಪ್ರತಿಯೊಬ್ಬರಿಗೂ ಅವರವರ ಸಮಸ್ಯೆಗಳೇ ದೊಡ್ಡವು; ಆದ್ದರಿಂದ ಇತರರ ಸಮಸ್ಯೆಗಳಿಗಿಲ್ಲ ನಮ್ಮಲ್ಲಿ ಸಮಯವು!

[ಮುಂದುವರೆಯುವುದು...]

Monday, February 7, 2011

ಹೀಗೇಕೆ...... (ಮುಂದುವರೆದುದು)

* ಪ್ರತಿ ದಿನ ಕಾರಿನಲ್ಲಿ ಓಡಾಡುವ ಮಂದಿ, ಪಕ್ಕದ ಮನೆಯ ದಿನಾ ಸೈಕಲ್ಲಿನಲ್ಲಿ ಹೋಗುವ ಆಸಾಮಿ ಮೊಪೆಡ್ ಕೊಂಡ ಕೂಡಲೇ, ಅವನನ್ನು ಕೆಂಗಣ್ಣಿನಿಂದ ನೋಡುತ್ತಾನೆ.

* ಬಹುತೇಕ ಸಂದರ್ಭಗಳಲ್ಲಿ ವ್ಯಕ್ತಿ/ವಿಷಯ/ವಿಚಾರದ ಒಂದು ಮಗ್ಗುಲನ್ನೇ ಆಧರಿಸಿ ನಾವು ನಮ್ಮ ಅಭಿಪ್ರಾಯವನ್ನು ರೂಪಿಸಿಕೊಂಡು ಬಿಡುತ್ತೇವೆ.
                                                                                                                                  
 * ಬಹುತೇಕ ಚರ್ಚಾಗೋಷ್ಠಿಗಳು ವಿಷಯಕ್ಕಿಂತ ವಿಷಯಾಂತರಕ್ಕೇ ಹೆಚ್ಚು ಸೀಮಿತವಾಗಿರುತ್ತವೆ.

* ತಗ್ಗಿ ಬಗ್ಗಿ ನಡೆದಾಗ ಬೆನ್ನೇರಿ ಸವಾರಿ ಮಾಡುವವರೇ ಹೆಚ್ಚು!

* ಸತ್ಯ ವಿಚಾರಗಳಿಗಿಂತ (ಅಥವಾ ಅದನ್ನರಿಯುವ ಪ್ರಯತ್ನಕ್ಕಿಂತ) ಚಾಡಿ ಮಾಡುಗಳೇ ಹೆಚ್ಚು ಆಪ್ಯಾಯಮಾನವಾಗಿ ಬಿಡುತ್ತವೆ.

* ಸಕ್ಕರೆ ಇದ್ದಲ್ಲಿ ಮಾತ್ರಾ ಇರುವೆಗಳು ಮುತ್ತುತ್ತವೆ.

* ದೇಹ ನಶ್ವರ. ಬದುಕು ಅಶಾಶ್ವತ. ದೇಹ-ಬದುಕಿನ ಶ್ರಮವೆಲ್ಲವೂ ಲೌಕಿಕ ವಸ್ತುಗಳ ಸಂಗ್ರಹಕ್ಕೇ ವ್ಯಯ!

   (ಮುಂದುವರೆಯುತ್ತದೆ...)

ಸಮಚಿತ್ತ

ಹೊಗಳಿಕೆ ಮಾತಿಗೆ ಉಬ್ಬದವನಿಲ್ಲ; ತೆಗಳಿಕೆಗಳಿಗೆ ಕುಗ್ಗದವನಿಲ್ಲ. ಸಂದರ್ಭಾನುಸಾರ (ಅನೇಕ ಸಲ ಸ್ವಾರ್ಥಸಾಧನೆಗಾಗಿ) ಹೊಗಳಿಕೆಗಳು ಬಂದರೆ, ತಾವು ಭಾವಿಸಿದಂತೆ ತಮ್ಮ ಸುತ್ತಲಿನ ವ್ಯಕ್ತಿ, ವಿಷಯ ಮತ್ತು ಪರಿಸರ ಸ್ಪಂದಿಸದಿದ್ದರೆ, ಮನಸೋಯೇಚ್ಛೆ, ತೆಗಳಿಕೆಗಳು ಪುಂಖಾನುಪುಂಖವಾಗಿ, ಹಿಂದೆ ಹೊಗಳಿದವರಿಂದಲೇ, ಬರುವುದೂ ಕೂಡ ಸರ್ವೇ ಸಾಮಾನ್ಯ.  ಆಳವಾಗಿ ಇದರ ಬಗ್ಗೆ ನೋಡಿದಾಗ, ಅನಿಸುವುದೇನೆಂದರೆ, ಈ ಹೊಗಳಿಕೆಗಳು ಮತ್ತು ತೆಗಳಿಕೆಗಳು ಎರಡೂ ಆ ಕ್ಷಣದ ತಕ್ಷಣದ ಪ್ರತಿಕ್ರಿಯೆಗಳು ಅಷ್ಟೆ. ಅದು ಹೃದಯಾಂತರಾಳದಿಂದ ಮತ್ತು ವಿಚಾರ ವಿಮರ್ಶೆ ಮಾಡಿ ಹೊರಬಂದ ಪ್ರತಿಕ್ರಿಯೆಗಳಲ್ಲ. ಆದರೂ ಈ ಹೊಗಳಿಕೆ ಮತ್ತು ತೆಗಳಿಕೆ ಬಂದಾಗ ನಾವು, ಅದನ್ನು ನೀಡಿದವರಂತೆ,  ವಿಚಾರ ವಿಮರ್ಶೆ ಮಾಡದೇ ಕೂಡಲೇ ಹೊಗಳಿಕೆಯಲ್ಲಿ ತೇಲಿ ಹೋಗಿ ಬಿಡುತ್ತೇವೆ; ತೆಗಳಿಕೆ ಬಂದಾಗ ಚಿತ್ತಕ್ಷೋಭೆಗೊಳಗಾಗಿ ವಿಹ್ವಲರಾಗಿಬಿಡುತ್ತೇವೆ. ತನ್ನವರೆಂದು ನಂಬಿದವರಿಂದಲೇ ಇಂತಹ ಪ್ರಸಂಗಗಳು ಎದುರಾದಾಗ ಮತ್ತಷ್ಟು ಮನ ಮುದುಡುತ್ತದೆ. ತಾತ್ಪರ್ಯ: ಇಂತಹ ಹೊಗಳಿಕೆ/ತೆಗಳಿಕೆ ನೀಡುವವರ ಮತ್ತು ಸ್ವೀಕರಿಸುವವರ ಮನವಿನ್ನೂ ಪಕ್ವವಾಗಬೇಕಾಗಿದೆ ಎಂಬುದು. ಮನಮನಗಳ ಇಂದಿನ ಅಶಾಂತಿಗೆ ಬಹುಶ: ಇದರದ್ದೂ ಸಾಕಷ್ಟು ಕಾಣಿಕೆಯಿರಬಹುದು. ತೆಗಳುವಾತನಿಗೆ ಆತನ ಬೆನ್ನು ಕಾಣಿಸದೆಂಬುದು ಎಷ್ಟು ಸತ್ಯವೋ ತೆಗಳಿಸಿಕೊಂಡಾತನೂ ಆತನ ಬೆನ್ನನ್ನು ನೋಡಿಕೊಂಡಿಲ್ಲವೆಂಬುದೂ ಸತ್ಯವೇ. ಇಲ್ಲದಿದ್ದರೆ ಅಂತಹ ಅರೆಬೆಂದ ಹೊಗಳಿಕೆ/ತೆಗಳಿಕೆಗಳಿಗೆ ಪಕ್ವವಾದ ಮನಸ್ಸು ಎಂದಿಗೂ ವಿಹ್ವಲವಾಗದು; ವಿಹ್ವಲವಾಗಬಾರದು. ಹೊಗಳಿಕೆ/ತೆಗಳಿಕೆಗಳಿಗೆ ನಮ್ಮ ಪ್ರತಿಕ್ರಿಯೆ ಸೊನ್ನೆಯಾದಾಗ ಮತ್ತೊಮ್ಮೆ ನಮ್ಮನ್ನು ಹೊಗಳುವ/ತೆಗಳುವ ಪ್ರಸಂಗ ಬಂದಾಗ ಇತರರು ಮತ್ತೊಮ್ಮೆ ಯೋಚಿಸುವಂತಾಗುತ್ತದೆ. ಪರಸ್ಪರ ಅರಿವು, ವಿಶ್ವಾಸ ಇನ್ನಷ್ಟು ಬಲವಾಗುತ್ತದೆ. ಏನಂತೀರಿ....?

Friday, November 12, 2010

ಹೀಗೇಕೆ...?? (ಮುಂದುವರೆದುದು)

* Software ಮತ್ತು hardware  ಭರಾಟೆಯಲ್ಲಿ ಬಹು ಜನರಾಗಿದ್ದಾರೆ footware!

* ಮನೆ ನಾಯಿಗೆ ನಿತ್ಯ ಸ್ನಾನ, ಸತ್ವಯುತ ಭೋಜನ; ಕಾರಿಗುಂಟು ನಿತ್ಯ ಸ್ನಾನ, ಕಾಲಕಾಲಕ್ಕೆ ನವೀಕರಣ; ಮನೆ ಯಜಮಾನನಿಗೆ ಪುರಸೊತ್ತಿಲ್ಲ ಉಣ್ಣಲು ನೆಮ್ಮದಿಯ ಭೋಜನ ಮತ್ತು ಕಾಪಾಡಲು ತನ್ನದೇ ದೇಹದ ಸ್ವಾಸ್ಥ್ಯವ;

* ಮನೆ ವಾರ್ತೆಗೆ ಸಮಯವುಂಟು, ತಲೆಹರಟೆಗೆ ಸಮಯವುಂಟು, ಪರಟೀಕೆಗೆ ಸಮಯವುಂಟು, ಮನೋರಂಜನೆಗೆ ಸಮಯವುಂಟು ಆದರೆ ಅಲ್ಪಕಾಲವಾದರೂ ಜಪ-ತಪ ಮಾಡಲು ಸಮಯವೆಲ್ಲುಂಟು?

* ಹಣ ಮತ್ತು ಚಿನ್ನಾಭರಣಗಳ ಜೊತೆಗೆ ಪ್ರೀತಿ, ವಾತ್ಸಲ್ಯ, ಪರಸ್ಪರ ಸ್ಪಂದನೆ, ಕಳಕಳಿ ಎಲ್ಲವೂ ಬ್ಯಾಂಕ್ ಲಾಕರ್ ಪಾಲು!

* ಕಷ್ಟಪಟ್ಟು ಸಪೋಟ ಹಣ್ಣು ಬೆಳೆದವಗೆ ಕೆ.ಜಿ.ಗೆ 10 ರುಪಾಯಿ; ಅದನ್ನು ಕೊಂಡು ಮಾರುವವ ಸಂಪಾದಿಸುತ್ತಾನೆ ಕೆ.ಜಿ.ಗೆ 30 ರುಪಾಯಿ! (ಬಹುತೇಕ ಎಲ್ಲ ರೈತರ ಇಂದಿನ ಪಾಡು)

* ಪ್ರಪಂಚವೇ 'ನೀನು ತಪ್ಪಿತಸ್ಥ' ಎಂದು ಸಾಕ್ಷಾಸಮೇತ ಕರೆದರೂ,  ಒಪ್ಪಿಕೊಳ್ಳದ ಏಕೈಕ ವ್ಯಕ್ತಿಯೆಂದರೆ ರಾಜಕಾರಣಿ!

* ಪರರ ಏಳಿಗೆಯ ಬಗ್ಗೆ, ಪರರ ಸಾಧನೆಯ ಬಗ್ಗೆ, ಪರರ ಉಚಿತಾನುಚಿತಗಳ ಬಗ್ಗೆ, ಪರರ ವೇಷಭೂಷಣಗಳ ಬಗ್ಗೆ, ಪರರ ಚಟುವಟಿಕೆಗಳ ಬಗ್ಗೆ ಚಿಂತೆಗೇ ನಮ್ಮ ಬಹುಪಾಲು ಸಮಯ ಮೀಸಲು! 

[ಮುಂದುವರೆಯುವುದು]


Friday, November 5, 2010

ಹೀಗೇಕೆ...??


* ಅಲಾರಾಂ ಹೊಡೆದ ನಂತರವೇ ಗಾಢ ನಿದ್ರೆ

* ಬೀರು ತುಂಬಾ ನೂರಾರು ಸೀರೆ; ಉಡುವುದು ಮಾತ್ರಾ ಸದಾ ನೈಟೀ

* ನವನವೀನ ಪಾತ್ರೆ-ಪಡಗಗಳೆಲ್ಲ ಟ್ರಂಕಿನಾ ಒಳಗೆ; ಮಸಿಹಿಡಿದ, ನುಗ್ಗು-ಜಗ್ಗಾದ ಪಾತ್ರೆಗಳು ಮಾತ್ರಾ ಅಡಿಗೆಮನೆಯೊಳಗೆ;

* ಬ್ಯಾಂಕ್ ಲಾಕರ್ ತುಂಬಾ ಚಿನ್ನದಾ ಆಭರಣಗಳು; ಜೀವನಪೂರ್ತಿ ಮೈಮೇಲೆ ಬರೀ ಥಳುಕಿನಾ ಒಡವೆಗಳು

* ಕಡಲೆಯಿದ್ದವಗೆ ಹಲ್ಲಿಲ್ಲ; ಹಲ್ಲಿದ್ದವಗೆ ಕಡಲೆಯಿಲ್ಲ - ಎರಡೂ ಇದ್ದವ ತಿನ್ನುವ ಹಾಗಿಲ್ಲ (ಮಧುಮೇಹಿಗಳಿಗೆ)

* ತಿಂಗಳಿಗೊಮ್ಮೆ ಭರಪೂರ್ತಿ ಸಂಬಳ; ಹಾಕುವುದು ಮಾತ್ರಾ ಚಿಂದಿಯಾ ಅರಿವೆ (ಈಗಿನ ಫ್ಯಾಷನ್!)

* ಹೋಟೆಲ್ ಮಾಣಿಗೆ ಟಿಪ್ಸ್ 100 ರೂಪಾಯಿ; ಭಿಕ್ಷುಕನಿಗೆ ಮಾತ್ರಾ ಒಂದೇ ರೂಪಾಯಿ!

[ಮುಂದುವರೆಯುವುದು...]

Friday, October 29, 2010

ನೀರು ಮನೆಯೊಳಗೋ ಮನೆಯೊಳು ನೀರೋ!!!


* ಬದುಕು ಕೊನೆಯಾಗುತ್ತಿದ್ದರೂ ಧೈರ್ಯದಿಂದ ಎದುರಿಸಿ ಬದುಕುವ ಛಲವೇ?


* ಪ್ರಾಣಕ್ಕೇ ಸಂಚಕಾರ ಬಂದರೂ ಲೌಕಿಕ ವಸ್ತುಗಳ ಮೇಲೆ ಇಂಗದ ಮೋಹವೇ?


* ಪ್ರಾಪಂಚಿಕ ವಸ್ತುಗಳನ್ನು ಕೂಡಿ ಹಾಕಿ ಸ್ವತಂತ್ರದೆಡೆಗೆ ಸಾಗುವ ನಿರ್ಮೋಹವೇ?


* ಎಲ್ಲಾ ಮುಳುಗಿ ಹೋದರೂ ಪುನ: ಅಲ್ಲೇ ಬಂದು ನೆಲೆಸುವೆನೆಂಬ ಅಚಲ ನಂಬಿಕೆಯೇ?


* ನೀರು ಎಷ್ಟೇ ಮೇಲೆ ಬಂದರೂ ತಲೆಯೆತ್ತಿ ಪಾರಾಗುವೆನೆಂಬ ದೃಢ ವಿಶ್ವಾಸವೇ?



ಏನೆನ್ನಲಿ? .... ದಾಸರು ಹೇಳಿದಂತೆ -
"ನೀ ಮಾಯೆಯೊಳಗೋ ನಿನ್ನೊಳು ಮಾಯೆಯೋ...."

Wednesday, September 15, 2010

ಬೆಲಗೂರಿನಲ್ಲಿ ನಡೆದ ಮಹಾಲಕ್ಷ್ಮೀ ಯಾಗದ ಕೆಲವು ಚಿತ್ರಗಳು


ಇತ್ತೀಚೆಗಷ್ಟೇ ಹೊಸದುರ್ಗ ತಾಲೂಕಿನ ಬೆಲಗೂರಿನಲ್ಲಿ ಶ್ರೀ ವೀರಪ್ರತಾಪ ಆಂಜನೇಯ ಸ್ವಾಮಿಯ ಸನ್ನಿಧಿಯಲ್ಲಿ ಶ್ರೀ ಶ್ರೀ ಬಿಂದು ಮಾಧವ ಶರ್ಮ ಸ್ವಾಮೀಜಿಗಳ ನೇತೃತ್ವದಲ್ಲಿ ಸುಮಾರು 8 ದಿನಗಳ ಕಾಲ ಅನೇಕ ಹೋಮ-ಯಾಗಗಳ ನಡುವೆ ಪ್ರಮುಖವಾಗಿ ಶ್ರೀ ಮಹಾಲಕ್ಷ್ಮೀ ಯಾಗ ಬಹು ವಿಜೃಂಭಣೆಯಿಂದ, ವಿಧಿ ವತ್ತಾಗಿ ನಡೆಯಿತು. ಆಗ ತೆಗೆದ ಕೆಲವು ಚಿತ್ರಗಳನ್ನು ಆಸಕ್ತರಿಗೆ ಇಲ್ಲಿ ಕೊಡಲಾಗಿದೆ. ಪ್ರಾರಂಭದ ದಿನ ಉತ್ಸವ ಮೂರ್ತಿಯ ಮೆರವಣಿಗೆಯ ಜೊತೆಗೆ "ವೇದೋತ್ಸವ" ವನ್ನೂ ಹಮ್ಮಿಕೊಳ್ಳಲಾಗಿತ್ತು. ಕ್ಷೇತ್ರದಲ್ಲಿ ಚತುರ್ವೇದ ಸಂಹಿತಾ ಯಾಗಗಳನ್ನೂ ನಡೆಸಲಾಯಿತು. ವೇದಕ್ಕೆ ಸಂಬಂಧಪಟ್ಟ ಮತ್ತು ಶಾಸ್ತ್ರ ಪುರಾಣಗಳಿಗೆ ಸಂಬಂಧಪಟ್ಟ ಪವಿತ್ರ ಗ್ರಂಥಗಳನ್ನು ಸಾಲಂಕೃತ ರಥದ ಮೇಲೆ ಇರಿಸಿ ಸುಮಾರು 300ಕ್ಕೂ ಹೆಚ್ಚು ಋತ್ವಿಜರ ವೇದಘೋಷದೊಂದಿಗೆ ಸಾವಿರಾರು ಮಂದಿ ಭಕ್ತರೊಂದಿಗೆ ಊರಿನ ಪ್ರಮುಖ ಬೀದಿಗಳನ್ನು ಸಾಗಿದ್ದು ಬಹುಶ: ಇದೇ ಪ್ರಥಮವಿರಬಹುದು. 8 ದಿನಗಳ ಈ ಕಾಲಾವಧಿಯಲ್ಲಿ ಸುಮಾರು 3 ಲಕ್ಷ್ಕ್ಕೂ ಅಧಿಕ ಮಂದಿ ಭಕ್ತರು ಇಲ್ಲಿಗೆ ಬಂದಿದ್ದು, ಸರ್ವರಿಗೂ ಸದಾಕಾಲ ಪಾನೀಯ, ಉಪಹಾರ ಮತ್ತು ಭೋಜನದ ವ್ಯವಸ್ಥೆಯನ್ನು ಅಚ್ಚುಕಟ್ಟಾಗಿ ಮಾಡಲಾಗಿತ್ತು. ಸ್ವಾಮೀಜಿಯವರು 2-3 ದಿನ ಕ್ಷೇತ್ರಕ್ಕೆ ಬಂದ ಎಲ್ಲ ಸುಮಂಗಲಿಯರಿಗೆ (ಯಾವುದೇ ಭೇದ-ಭಾವವಿಲ್ಲದೆ) ಸೀರೆಗಳನ್ನು ಮತ್ತು ಮಂಗಳದ್ರವ್ಯಗಳನ್ನು ಆಶೀರ್ವಾದಪೂರ್ವಕವಾಗಿ ನೀಡಿದಾಗ ಅಲ್ಲಿ ಒಂದು ಜಾತ್ರೆಯೇ ನೆರೆದಂತಿತ್ತು. ಕ್ಷೇತ್ರಕ್ಕೆ ಹೆಬ್ಬೂರಿನ ಶ್ರೀ ದತ್ತಾವಧೂತರು ಭೇಟಿ ನೀಡಿದ್ದು ಮತ್ತು ಅವರಿಗೆ ಶ್ರೀ ಬಿಂದು ಮಾಧವ ಶರ್ಮ ಸ್ವಾಮೀಜಿಯವರು ಪಾದಪೂಜೆ ಮಾಡಿದ್ದು ಎಲ್ಲರಿಗೂ ಅವಿಸ್ಮರಣೀಯ ಅನುಭವವಾಯಿತು.

ಇಲ್ಲಿ ಭಕ್ತಾದಿಗಳು ನೀಡುವ ದಾನಧರ್ಮಗಳು, ನಡೆವ ದಾರ್ಮಿಕ ಕಾರ್ಯಕ್ರಮಗಳು ಇತ್ಯಾದಿಗಳನ್ನು ನೋಡಿದಾಗ, ಅನೇಕ ವಿಚಾರಗಳ ಬಗ್ಗೆ ನಮ್ಮನ್ನೇ ನಾವು ಬಲು ದೊಡ್ಡವರೆಂದು ಭಾವಿಸಿದ ನಮಗೆ, ನಮ್ಮ ಕುಬ್ಜತನದ ಅರಿವು ಉಂಟಾಗುವುದರಲ್ಲಿ ಸಂಶಯವಿಲ್ಲ. ಇಲ್ಲಿನ ಬಹುತೇಕ ಎಲ್ಲ ದಾನಿಗಳೂ ಅನಾಮಧೇಯರು. ಎಷ್ಟು ಅನುಕರಣೀಯ ನಡತೆ ಅಲ್ಲವೇ? ಇಲ್ಲಿ ನಡೆವ ಬೃಹತ್ ಕಾರ್ಯಗಳೂ ಕೂಡ ಎಷ್ಟು ಸುಲಭವಾಗಿ ನಡೆಯುತ್ತವೆ ಎಂದರೆ ಅದು ಒಂದು ಅಲೌಕಿಕ ಶಕ್ತಿಯ ಪವಾಡವೇ ಸರಿ. ಶ್ರೀ ವೀರಪ್ರತಾಪ ಆಂಜನೇಯ ಸ್ವಾಮಿಯ ಮತ್ತು ಶ್ರೀ ಗುರೂಜಿಗಳ ಕೃಪೆ ಎಲ್ಲರ ಮೇಲಿರಲಿ ಎಂಬ ಆಶಯದೊಂದಿಗೆ.























Thursday, August 26, 2010

ನಿವೃತ್ತಿ-ಪ್ರವೃತ್ತಿ


ವೃತ್ತಿಯ ನಂತರ ನಿವೃತ್ತಿ. ನಿವೃತ್ತಿಯ ನಂತರ ಪ್ರವೃತ್ತಿ! ಅಂತಹ ಪ್ರವೃತ್ತಿಯಿದ್ದಾಗಲೇ ನಿವೃತ್ತಿ ಆರಾಮದಾಯಕ ಮತ್ತು ಸಂತೋಷದಾಯಕವಾದೀತು. ಹಾಗೆಂದು ನಿವೃತ್ತಿಯಾದ ನಂತರವೇ ಪ್ರವೃತ್ತಿಗೆ ಸ್ಥಾನವೆಂದರ್ಥವಲ್ಲ. ಸಾಧಾರಣವಾಗಿ ಸಾಕಷ್ಟು ಮಂದಿ ತಮ್ಮ ವೃತ್ತಿಯೊಡನೆಯೇ ಪ್ರವೃತ್ತಿಯನ್ನೂ ರೂಢಿಸಿಕೊಂಡಿರುತ್ತಾರೆ. ಅವರಿಗಂತೂ ನಿವೃತ್ತಿಯ ಕಾವು ತಾಕುವುದೇ ಇಲ್ಲ. ಆದರೆ ಬಹುಮಂದಿ ದುಡಿಮೆಯ ಜಂಜಾಟದಲ್ಲಿ ಹವ್ಯಾಸಗಳನ್ನು ಬೆಳೆಸಿಕೊಂಡಿರುವುದಿಲ್ಲ. ಹಾಗೆಂದೇ ಸೇವೆಯಿಂದ ಬಿಡುಗಡೆ ಹೊಂದಿ ಮನೆಗೆ ಬಂದಾಗ "ಕಾಲ ಕಳೆಯುವ" ದೊಡ್ಡ ಪ್ರಶ್ನೆ ಎದುರಾಗುತ್ತದೆ. ಅಧಿಕಾರದ ನಷ್ಟ, ಆದಾಯದಲ್ಲಿ ಕುಂಠಿತ ಎರಡೂ ಸಾಕಷ್ಟು ಮನ:ಕ್ಲೇಷಕ್ಕೂ ಎಡೆ ಮಾಡುತ್ತದೆ.

ಹಾಗಾಗಿ ವಿಶ್ರಾಂತ ಜೀವನಕ್ಕಾಗಿ ಮೊದಲೇ ಸಾಕಷ್ಟು ತಯಾರಿ - ಮಾನಸಿಕ ಮತ್ತು ಆರ್ಥಿಕ - ಅತ್ಯವಶ್ಯ. ಇಲ್ಲದಿದ್ದಲ್ಲಿ 'ಕುರುಡು ನಾಯಿ ಸಂತೆಗೆ ಬಂದಂತೆ' ಎಲ್ಲೆಲ್ಲೋ ಗೊತ್ತು ಗುರಿಯಿಲ್ಲದೇ ಬಾಳಬೇಕಾದ ಸ್ಥಿತಿ ಬಂದೀತು. ಜೀವನಪೂರ್ತಿ ನಡೆಸಿದ ವೃತ್ತಿಯ ನೆರಳಿನಲ್ಲಿಯೇ ಬರುವ ಅನೇಕ ಹವ್ಯಾಸಗಳನ್ನು ನಂತರ ಬಳಸಿಕೊಳ್ಳಬಹುದು. ಶಾಲಾ ಮಾಸ್ತರರಾಗಿದ್ದರೆ ನಂತರ ಕೆಲ ಮಕ್ಕಳಿಗೆ ಪಾಠ (ಉಚಿತ!) ಹೇಳಿಕೊಡಬಹುದು;ವೃತ್ತಿಯಲ್ಲಿ ಇಂಜಿನಿಯರ್ ಆಗಿದ್ದರೆ, ನಂತರ ಊರಿನ ದೇವಸ್ಥಾನ, ಗುಡಿ-ಗೋಪುರ ನಿರ್ಮಾಣ ಮುಂತಾದ ಕಾರ್ಯದಲ್ಲಿ ತಮ್ಮ ವೃತ್ತಿ ಕೌಶಲ್ಯವನ್ನು ಬಳಸಿಕೊಳ್ಳಬಹುದು; ಹೆಚ್ಚಿನ ಪಾಲು ಬರವಣಿಗೆಯಲ್ಲಿ ತೊಡಗಿದ್ದವರು ಸಾಹಿತ್ಯದಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳಬಹುದು. ಹೀಗೆ ದಾರಿಗಳು ಹತ್ತು ಹಲವಾರು. ಇಂತಹ ಪ್ರವೃತ್ತಿಗಳಿಂದ ಆದಾಯ ನಿರೀಕ್ಷಿಸಿದಷ್ಟೂ ಆ ಕೆಲಸದಿಂದ ದೊರೆಯುವ ತೃಪ್ತಿಯಿಂದ ನಾವು ವಂಚಿತರಾಗುತ್ತೇವೆ. ಅನಾಯಾಸವಾಗಿ ಬಂದರೆ ಬರಲಿ. ಆದರೆ ಆಸೆ ಬೇಡ. ಆಗಲೇ ಮಾಡಿದ ಅಂತಹ ಕೆಲಸಗಳು ಮನಸ್ಸಿಗೆ ಹೆಚ್ಚು ಹೆಚ್ಚು ಮುದ, ನೆಮ್ಮದಿ ನೀಡಬಲ್ಲವು. ಸಾಂಸಾರಿಕ ಜಂಜಾಟಗಳಿಂದ ಆದಷ್ಟೂ ದೂರವಿರುವುದೇ ಲೇಸು.

ಕೆಳದಿ ಕವಿ ವಂಶದ ಓರ್ವ ಶ್ರೇಷ್ಠ ಕಲಾವಿದ ಸಾಗರದ ಕವಿ ಲಿಂಗಣ್ಣಯ್ಯ[1879-1943]. ಅವರ ಪುತ್ರರಾದ ಕವಿ ಕೃಷ್ಣಮೂರ್ತಿಯವರು ಒದಗಿಸಿದ ಅವರ ತಂದೆ ದಿನವೂ ಮಾಡುತ್ತಿದ್ದ ಪ್ರಾರ್ಥನೆಯ ಸಾರಾಂಶ ಹೀಗಿದೆ:

"ಓ ಪರಮಾತ್ಮನೇ, ನನಗೆ ವಯಸ್ಸಾಗುತ್ತಿದೆ. ಆದ್ದರಿಂದ ಮಾತು ಕಡಿಮೆ ಮಾಡುವಂತೆ ಮಾಡು. ಪ್ರತಿ ವಿಷಯದಲ್ಲೂ ತಲೆ ಹಾಕದಂತೆ ಮಾಡು. ಎಲ್ಲರ ತಪ್ಪನ್ನೂ ತಿದ್ದುವ ಕಾಳಜಿ ನನಗೆ ಬೇಡ. ಇಂತಹ ಬುದ್ಧಿ ನನಗೆ ಕೊಡು. ಇತರರ ನೋವು ನಲಿವುಗಳ ಬಗ್ಗೆ ನನಗೆ ಅನುಕಂಪ ಬರಲಿ. ಏಕೆಂದರೆ ನನ್ನ ನೋವುಗಳೇ ದಿನೇದಿನೇ ಹೆಚ್ಚಾಗಬಹುದು. ಅದನ್ನು ಇತರರೊಡನೆ ಆದಷ್ಟೂ ಕಡಿಮೆ ಹಂಚಿಕೊಳ್ಳುತ್ತೇನೆ. ಅನೇಕ ವೇಳೆ ನನ್ನ ಅಭಿಪ್ರಾಯಗಳು ತಪ್ಪಾಗಬಹುದೆಂಬ ಅರಿವೂ ನನಗಾಗಲಿ. ಹಸನ್ಮುಖಿಯಾಗಿರಲು ಕರುಣಿಸು. ನಾನೇನೂ ಮಹಾತ್ಮನಲ್ಲ. ಆದರೆ ಸಪ್ಪೆಮುಖದಿಂದ ಖಿನ್ನನಾಗಿ ಬಾಳಲಾರೆ. ನನ್ನನ್ನು ವಿಚಾರವಂತನನ್ನಾಗಿ ಮಾಡು. ಆದರೆ ಭಾವನಾಜೀವಿಯಾಗಿಸಬೇಡ. ಇತರರಿಗೆ ಸಹಾಯಕನಾಗಿ ಬಾಳುತ್ತೇನೆ. ಆದರೆ ಇತರರನ್ನು ಒತ್ತಾಯ ಮಾಡುವುದಿಲ್ಲ. ಸ್ವಾವಲಂಬಿಯಾಗಿರುತ್ತೇನೆ. ಇತರರ ಔದಾರ್ಯಕ್ಕೆ ಋಣಿಯಾಗಿರುತ್ತೇನೆ. ನನಗೆ ವಯಸ್ಸಾಗಿದೆ ಎಂಬ ಕಾರಣದಿಂದ ವಿವೇಕಿ ಎಂಬ ಭಾವನೆ ನನಗೆ ಉಂಟಾಗದಿರಲಿ. ಇತ್ತೀಚಿನ ದಿನಗಳಲ್ಲಿ ಆಗಿರುವ ಬದಲಾವಣೆಗಳು ನನಗೆ ಇಷ್ಟವಾಗಿರದಿದ್ದರೆ ಅದನ್ನು ನಾನು ವ್ಯಕ್ತಪಡಿಸದೆ ಮೌನವಾಗಿರುವಂತೆ ಮಾಡು. ಇನ್ನೆಷ್ಟು ದಿನ ಇರುತ್ತೇನೋ ನಾನರಿಯೆ. ಕಡೆಗಾಲದಲ್ಲಿ ನನಗೆ ಸ್ನೇಹಿತರು ಒಬ್ಬಿಬ್ಬರಾದರೂ ಉಳಿದಿರಲಿ ಎಂಬುದು ನನ್ನ ಆಶಯ."

ಇದಕ್ಕಿಂತ ಹೆಚ್ಚೇನು ಬೇಕು? ನಮ್ಮ ಹವ್ಯಾಸಗಳಲ್ಲಿ ನಾವು ತೊಡಗಿ, ಮಕ್ಕಳಿಗೆ ಸಂಪೂರ್ಣ ಜವಾಬ್ದಾರಿ ನೀಡಿ, ಅವರ ವ್ಯವಹಾರಗಳಲ್ಲಿ ಮೂಗು ತೂರಿಸದೇ, ಆಶೀರ್ವಾದಪೂರ್ವಕವಾಗಿ ನಮ್ಮ ನಡೆಗಳು ಇದ್ದಾಗ ತೊಂದರೆಗೆ, ಮನಸ್ತಾಪಕ್ಕೆ ಎಡೆ ಎಲ್ಲಿ? ನಿವೃತ್ತಾನಂತರ ನಮ್ಮ ಸಬಲ ಆರ್ಥಿಕ ಸ್ಥಿತಿಯಿಂದ ಮಕ್ಕಳ ಮೇಲೆ ನಮ್ಮ ಅಭಿಪ್ರಾಯಗಳನ್ನು ಹೇರುವುದರಿಂದಲೇ ಕುಟುಂಬದಲ್ಲಿ ಅಶಾಂತಿ ಬರುವುದು. ನಿವೃತ್ತಾನಂತರ ವೃದ್ಧಾಶ್ರಮಕ್ಕೆ ಸೇರುವ ಪರಿಸ್ಥಿತಿಗೆ ನಮ್ಮ ಮಕ್ಕಳ ಪಾತ್ರದೊಂದಿಗೆ ನಮ್ಮ ಇಂತಹ ಸ್ವಪ್ರತಿಷ್ಠೆ ನಡವಳಿಕೆಗಳೂ ಅಷ್ಠೇ ಕಾರಣವೆಂಬುದೂ ಸತ್ಯಾಂಶವೇ.

Saturday, July 3, 2010

ನಮಗೇನಾಗಿದೆ.


ಮಾವಿನ ಮರ - ಕೋಗಿಲೆ ; ಎರಡೂ ಬೇರೆ ಬೇರೆ ಒಂದಕ್ಕೊಂದು ಸಂಬಂಧವಿಲ್ಲದ ಅಸ್ತಿತ್ವಗಳು. ಆದರೆ ಅವೆರಡಕ್ಕೂ ಅಗಲಲಾಗದ ನಂಟು. ಮಾವಿನ ಮರ ಚಿಗುರೊಡೆದೊಡನೆಯೇ ಕೋಗಿಲೆ ತನ್ನ ಗಾನಸುಧೆಯೊಂದಿಗೆ ಹಾಜರ್. ಅದೇ ನಮ್ಮನ್ನು ನೋಡಿ. ಹುಟ್ಟಿದ ಕೂಡಲೇ ಅಪ್ಪ-ಅಮ್ಮನ ಸಂಬಂಧ; ಸ್ವಲ್ಪ ಸಮಯದ ನಂತರ ಅಣ್ಣ-ತಂಗಿಯರ ಸಂಬಂಧ; ಬಂಧುಗಳ ಸಂಬಂಧ - ಹೀಗೆ ಈ ಸಂಬಂಧಗಳ ಸರಪಳಿ ಕೊನೆಯವರೆಗೂ ಬೆಳೆಯುತ್ತಲೇ ಹೋಗುತ್ತದೆ. ಆದರೆ ಇಂದು ನಾನಾ ಕಾರಣಗಳಿಂದ ಈ ರಕ್ತ ಸಂಬಂಧದ ಬೆಸುಗೆ ಸಾಕಷ್ಟು ಸಡಿಲವಾಗಿದೆ. ಅನೇಕ ಸಂದರ್ಭಗಳಲ್ಲಿ ಮುರಿದುಬೀಳುವ ಮಟ್ಟಕ್ಕೂ ಬಂದು ನಿಂತಿದೆ. ಇವತ್ತು ಎಲ್ಲರಲ್ಲೂ ವಿದ್ಯೆಯಿದೆ, ಹಣವಿದೆ. ಆದರೆ ವಿಶಾಲವಾದ ಹೃದಯ ಮತ್ತು ತೆರೆದ ಮನಸ್ಸು ವಿರಳವಾಗುತ್ತಿದೆ. ನಿಷ್ಕಲ್ಮಷವಾದ ನಗುಮುಖ ಮರೆಯಾಗಿದೆ. ಯಾರನ್ನು ದೂಷಿಸುವುದು? ಏಕೆ ಹೀಗೆ? ನಮಗೇನಾಗಿದೆ? ಎಂದು ಪ್ರಶ್ನಿಸಿಕೊಂಡರೆ ಅವು ಉತ್ತರವಿಲ್ಲದ ಪ್ರಶ್ನೆಗಳಾಗಿಯೇ ಉಳಿದುಬಿಡುತ್ತವೆ. ಎಲ್ಲಕ್ಕಿಂತ ಹೆಚ್ಚಾಗಿ ಇತ್ತೀಚಿನ ಪೀಳಿಗೆಗಳಲ್ಲಿ ಇಂತಹ ಒಂದು ತುಡಿತವೇ ಮಾಯವಾಗಿಬಿಟ್ಟಿದೆ. ಸುಮಧುರ ಸಂಬಂಧಗಳ ಸವಿಯನ್ನೇ ಅರಿಯದ ಇವರು ಅದರ ಮಹತ್ವವನ್ನು ಹೇಗೆ ತಾನೇ ತಿಳಿಯಬಲ್ಲರು? ಪಾಶ್ಚಾತ್ಯ ರೀತಿಯಂತೆ ನಾನು ಬದುಕುವುದೇ ನನ್ನ ಸುಖಕ್ಕಾಗಿ; ಇತರರ (ಅಂದರೆ ತನ್ನ ಸಂಬಂಧಿಕರನ್ನು ಕುರಿತು ಮಾತ್ರ ಇಲ್ಲಿ ಹೇಳಿರುವುದು) ಉಸಾಬರಿ ತನಗೇಕೆ ಎಂಬ ಭಾವನೆ ಎಲ್ಲರಲ್ಲಿ ಮನೆ ಮಾಡುತ್ತಿದೆ. ಸಮಾರಂಭಗಳಲ್ಲಿ ಅಪರೂಪಕ್ಕೆ ಸಿಗುವ ನೆಂಟರಿಗೆ 'ಹಾಯ್' 'ಬಾಯ್' ಹೇಳಿಬಿಟ್ಟು, ಮುಂದಿನ ಕ್ಷಣ ತನ್ನ ಲೋಕಕ್ಕೇ ಜಾರುವವರು ಬಹುಬಂದಿ ಇಂದು. ಆಪ್ತೇಷ್ಟರು ಮರಣ ಹೊಂದಿ ದೇಹವನ್ನು ಭಸ್ಮ ಮಾಡಿದೊಡನೆಯೇ ಸಂಬಂಧಗಳೂ ಭಸ್ಮವಾಗುವ ಕಾಲ ಬಂದಿರುವುದು ನಮ್ಮ ಸಂಸ್ಕೃತಿ ಎತ್ತ ಸಾಗುತ್ತಿದೆ ಎಂಬುದರ ಸೂಚಿ. ಬ್ಯಾಂಕ್ ಬ್ಯಾಲೆನ್ಸ್, 3-4 ನಿವೇಶನಗಳು, ಐಷಾರಾಮಿ ವಸ್ತುಗಳು ಇತ್ಯಾದಿ ಇಷ್ಟೇ ನಮ್ಮ ಜೀವನದ ಪರಮ ಗುರಿ ಎಂದಾದಾಗ ಪರಿಣಾಮ ಮೇಲಿನಂತೆಯೇ ಆಗಲೇಬೇಕಲ್ಲ್ಲವೇ? ಹುಟ್ಟಿದ ಮಗುವನ್ನು ಕ್ರೀಷೆಗೋ, ಆಯಾ ಸುಪರ್ದಿಗೋ ನೀಡಿ ದುಡಿಮೆಗೆ (ದುಡಿಯುವ ಇಂತಹ ಬಹುತೇಕ ಮಂದಿಗೆ ಷೋಕಿ ಬಿಟ್ಟರೆ ಹಣದ ನಿಜವಾದ ಅವಶ್ಯಕತೆ ಇರುವುದು; ಅನಿವಾರ್ಯತೆ ಇರುವುದು ಕೆಲವೇ ಮಂದಿಗೆ ಮಾತ್ರ) ಹೊರಟಾಗ ಮಗುವಿಗೆ ತಾಯಿಯ ಪ್ರೀತಿ, ಮಧುರ ಬಾಂಧವ್ಯದ ಸವಿಯನ್ನು ಉಣಿಸುವವರು ಯಾರು? ಕಾಲಾಂತರದಲ್ಲಿ ಆ ಮಗು ಆ ತಾಯಿ ಮಾಡಿದ್ದನ್ನೇ ಮಾಡುತ್ತದೆ. ಒಂದಿಷ್ಟು ಸೌಲಭ್ಯ, ಹಣಕಾಸು ನೀಡಿ, ತನ್ನ ಪಾಡಿಗೆ ತಾನು ತನ್ನ ಸುಖದ ಅನ್ವೇಷಣೆಯಲ್ಲಿ ತೊಡಗಿಬಿಡುತ್ತದೆ. ಆಗ ತಾಯಿ ಮಗುವನ್ನು ದೂಷಿಸಿ ಪ್ರಯೋಜನವೇನು? ನೇರವಾಗಿ ಹೇಳಬೇಕೆಂದರೆ, ಇಂದು ಸಮಾಜದಲ್ಲಿ ತಾಯಿ ತನ್ನ ಪಾತ್ರವನ್ನು ಸರಿಯಾಗಿ ನಿರ್ವಹಿಸದೇ ಇರುವುದೇ ಈ ಸಂಬಂಧಗಳ ಹಳಸುವಿಕೆಗೆ ಮೂಲ ಕಾರಣವೆಂದರೆ ತಪ್ಪಾಗಲಾರದು. ತಾಯಿ ಸ್ವಾರ್ಥಿಯಾದಾಗ ಅವಳ ಸಂತಾನ ಕೂಡಾ ಅದೇ ಹಾದಿ ಹಿಡಿದೇ ಹಿಡಿಯುತ್ತದೆ. ಕುರುಡು ಕಾಂಚಾಣದ ಹಿಂದೆ ಬಿದ್ದು ನಾಗಾಲೋಟದಲ್ಲಿ ಓಡುತ್ತಿರುವವರಿಗೆ ಮುಂದಿನ ಪರಿಣಾಮಗಳು ಹೇಗೆ ತಾನೇ ಅರಿವಾದೀತು ಅಲ್ಲವೇ? ಪರಿಣಾಮ ಸಂಬಂಧಗಳು ಸೊರಗುತ್ತಿವೆ; ನಿಧಾನವಾದ ಆದರೆ ಅಷ್ಟೇ ಖಚಿತವಾದ ಅನಾಹುತಗಳೆಡೆಗೆ ಸಾಗುತ್ತಿವೆ. [ಇಂತಹ ವಿಚಾರಗಳು ತಲೆ ಹೊಕ್ಕಾಗ ಉಂಟಾಗುವ ತಳವಳ, ವೇದನೆ ಇನ್ಯಾರೊಂದಿಗೂ ಹಂಚಿಕೊಳ್ಳದ ಪರಿಸ್ಥಿತಿಯುಂಟಾದಾಗ ಮನಸ್ಸಿನ ದುಗುಡವನ್ನು ಈ ರೀತಿಯಲ್ಲಾದರೂ ಹೊರಹಾಕಿ ಅಲ್ಪ ನೆಮ್ಮದಿ ಸಿಗುವದೇನೋ ಎಂಬ ಹಂಬಲದೊಂದಿಗೆ ಈ ಬರಹ.]

Friday, July 2, 2010


ಆಂಗ್ಲ ಭಾಷೆಯಲ್ಲಿ ಹೀಗೊಂದು ನುಡಿ ಇದೆ: An idle mind is devil's workshop ಅಂತ. ಆದರೆ ನಿಜವಾಗಿ ಯೋಚಿಸಿ ನೋಡಿ. ನಮ್ಮ ಮನಸ್ಸು ಸೋಮಾರಿ ಅಥವಾ ನಿಷ್ಕ್ರಿಯವಾಗಿರಲು ಸಾಧ್ಯವೇ ಎಂದು. ಒಂದಲ್ಲಾ ಒಂದು ವಿಚಾರವನ್ನು ಸದಾ ಮನಸ್ಸು ಮಂಥನ ಮಾಡುತ್ತಿರುತ್ತಲೇ ಇರುತ್ತದೆ ಎಂಬುದು ಎಲ್ಲರ ಅನುಭವ. ಹಾಗಾಗಿ idle mind ಎನ್ನುವುದಕ್ಕಿಂತ idle body ಎನ್ನುವುದು ಹೆಚ್ಚು ಸೂಕ್ತವೆಂದು ನನ್ನ ಭಾವನೆ. ಮೇಲಿನ ಹೇಳಿಕೆಯಂತೆ ನಿಜವಾಗಿ ನಾವು idle mind ಸ್ಥಿತಿಯನ್ನು ತಲುಪಿದರೆ ಬಹುಶ: ಅದು ನಿರ್ವಿಕಾರದ ಮತ್ತು ನಿಷ್ಕಲ್ಮಷ ಮನಸ್ಸಿನ ಪ್ರತೀಕವೇ ಆಗುತ್ತದೆ. ಹಾಗಾದಾಗ ನಾವು ಮನಸ್ಸಿನ ನೆಮ್ಮದಿಯ ಪರಾಕಾಷ್ಠೆಯನ್ನು ತಲುಪಿದ್ದೇವೆಂದೇ ಭಾವಿಸಬೇಕಾಗುತ್ತದೆ. ಅಂತೆಯೇ idle mind ನ ಸ್ಥಿತಿ ಎಲ್ಲರೂ ತಲುಪಲು ಬಲು ಕಠಿಣ ಸಾಧನೆಯನ್ನೇ ಮಾಡಬೇಕು. idle body ಸ್ಥಿತಿಯಲ್ಲಿ ಮನಸ್ಸು devil's workshop ಆಗಬಹುದು. ಕೈಯಲ್ಲಿ ಮಾಡಲು ಕೆಲಸವಿಲ್ಲದಿದ್ದಾಗ, ಸೋಮಾರಿಯಾಗಿದ್ದಾಗ ಸಹಜವಾಗಿಯೇ ಅನುಪಯುಕ್ತ ಯೋಚನೆಗಳು ನಮ್ಮನ್ನು ಆವರಿಸುತ್ತವೆ. ತಾತ್ಪರ್ಯ ಇಷ್ಟೆ. ಪ್ರತಿ ನಿಮಿಷವೂ (ಜಾಗೃದಾವಸ್ಥೆಯಲ್ಲಿ) ನಾವು ಒಂದಿಲ್ಲೊಂದು ಚಟುವಟಿಕೆಯಲ್ಲಿ ಮಗ್ನರಾಗಿರಬೇಕು. ಆ ಚಟುವಟಿಕೆಗಳು ಸ್ವ-ಹಿತ ಸಾಧನೆಯ ಜೊತೆಜೊತೆಗೆ ಲೋಕಕಲ್ಯಾಣಕ್ಕೂ ಕೈ ಜೋಡಿಸುವಂತಹವಾಗಿರಬೇಕು. ಆ ಚಟುವಟಿಕೆಗಳಿಂದ ನಮಗೂ, ಪರರಿಗೂ ನಿಜವಾದ ಆನಂದ ಮತ್ತು ನೆಮ್ಮದಿ ಲಭ್ಯವಾಗುವಂತಿರಬೇಕು. ಇಂತಹ ಒಂದು ನಿಟ್ಟಿನಲ್ಲಿ ನಮ್ಮ ಚಟುವಟಿಕೆಗಳು ರೂಪುಗೊಂಡಾಗ ನಮ್ಮ ಮನಸ್ಸೂ ಕೂಡ ನಮಗರಿವಿಲ್ಲದೆಯೇ ಅರಳುತ್ತದೆ, ನಗುತ್ತದೆ ಮತ್ತು ನೆಮ್ಮದಿಯ ಗೂಡಾಗುತ್ತದೆ. ಮನಸ್ಸು ಸದಾ ಪ್ರಫುಲ್ಲವಾಗಿದ್ದಷ್ಟೂ ಸತ್ಕಾರ್ಯ, ಸಚ್ಚಿಂತನೆ ಮತ್ತು ಸನ್ನಡತೆಯ ಚಟುವಟಿಕೆಗಳು ತಂತಾನೇ ಹಿಂಬಾಲಿಸುತ್ತವೆ. ಆದುದರಿಂದ ನಮ್ಮ ಮನಸ್ಸು ಮತ್ತು ದೇಹ ಎರಡೂ God's workshop ಆಗುವತ್ತ ನಮ್ಮ ಪ್ರಯತ್ನ ಸಾಗಬೇಕು.

Saturday, May 29, 2010

ಪ್ರಕೃತಿ ಮತ್ತು ಮನಸ್ಸು

ನಾವೆಲ್ಲರೂ ಪ್ರಕೃತಿಯ ಕಂದಮ್ಮಗಳು. ಪ್ರಕೃತಿಗೂ ನಮಗೂ ಅವಿಚ್ಛಿನ್ನವಾದ ಮತ್ತು ಅವಿನಾಭಾವದ ಸಂಬಂಧ. ಪ್ರಕೃತಿಯಿಂದ ನಮ್ಮ ಮನಸ್ಸು ಎಂದಿಗೂ, ಯಾವ ಕಾರಣಕ್ಕೂ ಕ್ಷೋಭೆಗೊಳ್ಳುವುದೇ ಇಲ್ಲ. ಬದಲಾಗಿ ಪ್ರಕೃತಿಯ ಒಡನಾಟ ಮನಸ್ಸನ್ನು ಇನ್ನಷ್ಟು ಪ್ರಫುಲ್ಲವಾಗಿಸುತ್ತದೆ ಎಂಬುದು ಎಲ್ಲರ ಅನುಭವವೇದ್ಯವಾದ ಸಂಗತಿ. ಮನಸ್ಸು ಸಂಗೀತವಾದರೆ, ಪ್ರಕೃತಿಯೇ ಅದರ ಶೃತಿ. ಶೃತಿಯನ್ನು ಸಂಗೀತದ ತಾಯಿ ಎಂದು ಕರೆಯುತ್ತಾರೆ. ಶೃತಿ ಸರಿಯಾಗಿ ಬೆರೆತಾಗಲೇ ಸಂಗೀತ ಆಸ್ವಾದನೀಯ; ಇಲ್ಲವೇ ಅಸಹನೀಯ. ಹಾಗಾಗಿ ಮನಸ್ಸೆಂಬ ಈ ಸಂಗೀತಕ್ಕೆ ಪ್ರಕೃತಿಯೆಂಬ ಶೃತಿ ಸೇರಿದಾಗ ಆ ಸಚ್ಚಿದಾನಂದದ ಅನುಭವ ಸಾಧ್ಯವಾದೀತು. ಅರ್ಥಾತ್, ಪಂಚೇಂದ್ರಿಯಗಳು ಬಲು ಸುಲಭವಾಗಿ ಬಾಹ್ಯ ಪ್ರಲೋಭನೆಗಳಿಗೆ ಒಳಗಾಗುವುದನ್ನು ತಡೆಯಲು, ಮನಸ್ಸು ಹೆಚ್ಚು ಹೆಚ್ಚು ಕಾಲ ಪ್ರಕೃತಿಯ ಮಡಿಲಲ್ಲಿ ವಿಹರಿಸುವುದರತ್ತ ಗಮನವೀಯಬೇಕು. ಅದಕ್ಕೆಂದೇ ನಮ್ಮ ಮನಸ್ಸೇ ನಮಗೆ ವರವೂ ಹೌದು; ಶಾಪವೂ ಹೌದು. ಗಿಡ, ಮರ, ಬಳ್ಳಿ, ನದಿ, ಹಳ್ಳ, ಕೊಳ್ಳ, ಗುಡ್ಡ, ಬೆಟ್ಟ, ಕಣಿವೆಗಳು, ಜಲಪಾತಗಳು, ಶುಭ್ರ ಆಕಾಶ, ಮೋಡಗಳು, ವೈವಿಧ್ಯಮಯವಾದ ಪ್ರಾಣಿ-ಪಕ್ಷಿಗಳು ಮುಂತಾದ ಪ್ರಕೃತಿಯ ರಚನೆಗಳನ್ನು ನೋಡಿದಷ್ಟೂ, ಅವುಗಳೊಡನೆ ಸಮಯ ಕಳೆದಷ್ಟೂ ನಮ್ಮ ಮನಸ್ಸು ಶಾಂತವಾಗಿರುತ್ತದೆ; ನೆಮ್ಮದಿಯಿಂದಿರುತ್ತದೆ. ಪಂಚೇಂದ್ರಿಯಗಳ ಅನುಭವಕ್ಕೆ ಬರುವ ಬಹುತೇಕ ಎಲ್ಲ ವಸ್ತು-ವಿಷಯಗಳೂ ನಮ್ಮ ಶಾಂತಿಯನ್ನು ಅಂತಿಮವಾಗಿ ಕೆಡಿಸುವಂತಹವುಗಳೇ. ಅವುಗಳಿಂದ ಶಾಶ್ವತ ಶಾಂತಿ ಅಸಾಧ್ಯ. ಅಂತೆಯೇ ಪ್ರಕೃತಿಯೊಡನೆ ನಿರಂತರ ನಮ್ಮ ಮನಸ್ಸನು ಬೆಸೆಯುವ ಪ್ರಕ್ರಿಯೆ ಪ್ರಜ್ಞಾಪೂರ್ವಕವಾಗಿ ಸದಾ ನಡೆಯುತ್ತಲೇ ಇರಬೇಕು. ಅದುವೇ ಮನಸ್ಸನ್ನು ಸ್ವಲ್ಪ ಮಟ್ಟಿಗಾದರೂ ಹತೋಟಿಯಲ್ಲಿಡಲು, ಸಂಯಮದಲ್ಲಿಡಲು ಮತ್ತು ಶಾಂತಿ ಪಡೆಯಲು ಇರುವ ಸುಲಭ ಸಾಧನ.

Thursday, May 27, 2010

ಮುಂದುವರೆದ ಸ್ವಗತ


ನನಗನ್ನಿಸುತ್ತದೆ 'ನಾನು' ,'ನನ್ನದು' ಇತ್ಯಾದಿ ಭಾವನೆಗಳು ಹುಟ್ಟುವುದೇ ಇತರರು ನಮ್ಮನ್ನು ಗುರುತಿಸುವುದರಿಂದ ಮತ್ತು ಅದಕ್ಕೆ ತಕ್ಕ ಪ್ರತಿಕ್ರಿಯೆಗಳನ್ನು ನೀಡುವುದರಿಂದ. ಯಾರಾದರೂ ನಮ್ಮನ್ನು ಗುರುತಿಸುತ್ತಲೇ ಇರುವುದರಿಂದ ಮತ್ತು ನಮ್ಮ ವಶದಲ್ಲಿರುವ ಅನೇಕ ವಿಚಾರಗಳ ಬಗ್ಗೆ ಇತರರು ಗಮನಿಸುತ್ತಲೇ ಇರುವುದರಿಂದ ಈ ಭಾವನೆಗಳು ಗರಿಗೆದರಿಕೊಂಡು, ಬಹು ಸಂದರ್ಭಗಳಲ್ಲಿ, ಅವಶ್ಯಕತೆಗೂ ಮೀರಿ ಬೆಳೆದುಬಿಡುತ್ತವೆ. ಅಧಿಕಾರ, ಕುರ್ಚಿ ಮತ್ತು ಹಣದ ಪ್ರಭಾವದಿಂದ ಇತರರು ನಮ್ಮನ್ನು ಹೊಗಳಿ, ಹೊಗಳಿ ನಮ್ಮ ನಿಜತನವನ್ನು ಮರೆಸಿಬಿಡುತ್ತಾರೆ. ಅಂತಹ ಸಂದರ್ಭಗಳಲ್ಲಿಯೇ ಅಹಂಕಾರ ತಲೆ ಎತ್ತುತ್ತದೆ. ಅನಾಯಾಸವಾಗಿ ಅನೇಕ ತಪ್ಪು-ಪ್ರಮಾದಗಳಿಗೂ ಎಡೆ ಮಾಡಿಬಿಡುತ್ತವೆ. ಆದುದರಿಂದ ಈ ಬಾಹ್ಯ ಪ್ರಚೋದನೆ ಗಳು ಮತ್ತು ಪ್ರಲೋಭಗಳೆಲ್ಲವೂ ನಮ್ಮ ನಿಜವಾದ ಅಂತ:ಸತ್ವವನ್ನು, ನಮ್ಮ ನಿಜವಾದ ನಮ್ಮತನವನ್ನು ಮತ್ತು ನಮ್ಮ ಸಾಮಾನ್ಯವಾದ ಶಕ್ತಿ-ಸಾಮರ್ಥ್ಯವನ್ನು ಮರೆಮಾಚುವ ಪರದೆಗಳು. ಈ ಬಲೆಯೊಳಗೆ ಸಿಕ್ಕಿಕೊಂಡು ಹೊರಬರಲು ಆಗದೇ, ನಿಜಸತ್ಯವನ್ನೂ ಅರಿಯದೇ ತೊಳಲಾಡುವವರೇ ಬಹುಮಂದಿ. ಹಾಗಾಗಿ ನಮ್ಮನ್ನರಿಯುವ ಪ್ರಕ್ರಿಯೆ ಸುಲಭವಾಗಬೇಕಾದರೆ ನಾವು ಈ ಎಲ್ಲಾ ಬಾಹ್ಯ ಆಕರ್ಷಣೆಗಳ ಪ್ರಭಾವದಿಂದ ಹೊರಗೆ ಬರಬೇಕು. ಹಣ, ಕುರ್ಚಿ, ಅಧಿಕಾರ ಇದ್ದಾಗ ಮತ್ತು ಇಲ್ಲದಾಗ ಸಮಾಜದ ಪ್ರತಿಕ್ರಿಯೆಗಳ ನೈಜ ವಿಶ್ಲೇಷಣೆಯೇ ಸಾಕು ನಮ್ಮ ನಿಜತನವನ್ನು ಅರಿಯಲು. ಈ ಒಂದು ಪರಾಮರ್ಶೆಯೇ ನಮಗೇ ಸಾಕಷ್ಟು ಅರಿವನ್ನು ಮತ್ತು ಅಂತಿಮವಾಗಿ ನೆಮ್ಮದಿಯನ್ನೂ ನೀಡಬಲ್ಲದು. ಹೊರಗಿನ ಪ್ರಚೋದನೆಗಳಿಗೆ ನಗಣ್ಯ ಮನೋಭಾವನೆ ಕೂಡ ಈ ನಿಟ್ಟಿನಲ್ಲಿ ಬಲು ಸಹಕಾರಿ. ಅನವಶ್ಯವಾದುವುಗಳಿಗೆ ಕೂಡ ನಮ್ಮ ಪ್ರತಿಕ್ರಿಯೆ ಶೂನ್ಯವಾದಷ್ಟೂ ನೆಮ್ಮದಿ ಹೆಚ್ಚಬಲ್ಲದು. "ನಿನ್ನ ನೀನು ಮರೆತರೇನು ಸುಖವಿದೇ..." ಅಲ್ಲವೇ?

Tuesday, May 18, 2010

ಹರಿಹರಪುರ ಶ್ರೀಗಳೊಂದಿಗೆ


ನಾವು ಕೆಳದಿ ಕವಿ ಮನೆತನಕ್ಕೆ ಸೇರಿದವರೆಂದು ನಮಗೀಗ 4-5 ವರ್ಷಗಳ ಹಿಂದಷ್ಟೇ ತಿಳಿದದ್ದು. ವಂಶದ ಜಾಡನ್ನು ಹಿಡಿದು ಒಂದು ಸ್ವರೂಪಕ್ಕೆ ತಂದು, ಪುಸ್ತಕದ ಕರಡನ್ನು ಹರಿಹರಪುರ ಮಠದ ಶ್ರೀಗಳ ಸನ್ನಿಧಿಯಲ್ಲಿ ಸಲ್ಲಿಸಿದಾಗ, ಅವರು ಬಹಳ ಸಂತಸಪಟ್ಟರು ಮತ್ತು ಹಿರಿಯರನ್ನು ಸ್ಮರಿಸುವ ಇಂತಹ ಪ್ರಯತ್ನವನ್ನು ಶ್ಲಾಘಿಸಿದರು. ಪುಸ್ತಕಕ್ಕೆ ಆಶೀರ್ವಾದಪೂರ್ವಕವಾಗಿ ಬರೆದ ಅವರ ನುಡಿಗಳಂತೂ ಅನುಪಮ. ಅವರ ಅನುಗ್ರಹದಿಂದ ಪುಸ್ತಕ ಬಿಡುಗಡೆ ಆದದ್ದೇ ಅಲ್ಲದೇ ಪ್ರತಿ ವರ್ಷ ಕವಿ ಕುಟುಂಬದ ಎಲ್ಲರೂ ಒಂದೆಡೆ ಸೇರುತ್ತಿರುವುದೂ ಕೂಡ ಹೆಗ್ಗಳಿಕೆಯ ವಿಚಾರ. ಆ ಪುಸ್ತಕ ಮತ್ತು ಕೆಳದಿ ಕವಿ ವಂಶಾವಳಿಯನ್ನು ಅವರಿಗೆ ಸಲ್ಲಿಸಲು ಹೋದ ಕೂಡಲೇ ಅವರು ಮೊದಲು ಕೇಳಿದ ಪ್ರಶ್ನೆಯೇ: "ಕವಿ ವಂಶದ ಪುಸ್ತಕ ಬಿಡುಗಡೆ ಆಯಿತಾ?" ಎಂದು. ನಾವು ಭೇಟಿಯಾದದ್ದು ಪ್ರಥಮ ಭೇಟಿಯ 4-5 ತಿಂಗಳ ನಂತರ. ಆ ಸಂದರ್ಭದಲ್ಲಿ ಅವರು ನನಗೆ ಶಾಲು ಹೊದಿಸಿ ಆಶೀರ್ವದಿಸಿದ ಆ ಘಳಿಗೆಯನ್ನು ನಾನು ಎಂದೂ ಮರೆಯಲಾರೆ. ಚಿತ್ರದಲ್ಲಿ ನನ್ನ ದಿವಂಗತ ತಂದೆ ಕವಿ ವೆಂಕಟಸುಬ್ಬರಾವ್ ಮತ್ತು ನನ್ನ 'ಆಪ್ತ ಸ್ನೇಹಿತ' ರಮೇಶ್ ರವರನ್ನೂ ನೋಡಬಹುದು.

[ಪುಸ್ತಕದ ಹೆಸರು: ಹಳೆ ಬೇರು ಹೊಸ ಚಿಗುರು : ನಮ್ಮ ನಮ್ಮ ವಂಶದ ವಂಶಾವಳಿಯನ್ನು ಮುಂದಿನ ಪೀಳಿಗೆಗಾಗಿ ದಾಖಲಿಸುವುದು ಅತ್ಯವಶ್ಯ. ಅಂತಹ ಪ್ರಯತ್ನಕ್ಕೆ ಈ ಪುಸ್ತಕ ನೆರವಾಗಬಲ್ಲದು. ]

Monday, May 17, 2010


ನನ್ನನ್ನು ನಾನು ಅರ್ಥ ಮಾಡಿ ಕೊಳ್ಳುವ ಪ್ರಕ್ರಿಯೆಯೇ ಪ್ರಾರಂಭವಾಗಿಲ್ಲವೆಂದು ನನಗೀಗ ಅನಿಸತೊಡಗಿದೆ. ಏಕೆಂದರೆ ಅಂತಹ ಒಂದು ಪ್ರಯತ್ನ ನಡೆದೇ ಇಲ್ಲವೇನೋ ಎಂಬ ಅನುಮಾನ ಕೂಡ ಕಾಡತೊಡಗಿದೆ. ಬೇರೆಯವರ ತಪ್ಪು-ಒಪ್ಪುಗಳನ್ನು ಹೆಕ್ಕಿ, ಕೆದಕುವುದರಲ್ಲಿಯೇ ಸಾಕಷ್ಟು ಸಮಯ ಹೋಗಿದ್ದು ಈಗ ಅರಿವಾಗತೊಡಗಿದೆ. ನನ್ನ ತನು-ಮನವ ಮೊದಲರಿಯದೇ ಅನ್ಯರ ವಿಚಾರಕ್ಕೆ ತಲೆ ಹಾಕಿ ನಾನು ತಪ್ಪು ಮಾಡಿದೆನೇನೋ ಎಂಬ ಭಾವನೆ ಕೂಡ ಕಾಡುತ್ತಿದೆ. ನನಗೆ ನಾನೇ ಅರ್ಥವಾಗದಿರುವಾಗ, ಅಂತಹ ಒಂದು ಪ್ರಯತ್ನವನ್ನೂ ಮಾಡದಿರುವಾಗ, ಇತರರನ್ನರಿಯುವ, ಅವರ ಆಚಾರ-ವಿಚಾರಗಳ ಬಗ್ಗೆ ತಲೆಹರಟುವ ಪ್ರವೃತ್ತಿ ಕೂಡ ಎಷ್ಟು ಅನುಚಿತವೆಂದು ನನಗೀಗ ಭಾಸವಾಗುತ್ತಿದೆ. ತಪ್ಪಿನ ಅರಿವು ಈಗಲಾದರೂ ಆಯಿತಲ್ಲ ಎಂಬ ಕೊಂಚ ಸಮಾಧಾನವೇ ಮನಸ್ಸಿಗೆ ಸ್ವಲ್ಪ ಹಗುರ ಭಾವನೆ ನೀಡಿದೆ. ನನ್ನರಿಯುವ ಪ್ರಕ್ರಿಯೆ ಆರಂಭಿಸಿದ್ದೀನಿ. ಸದ್ಯದಲ್ಲಿಯೇ ನನ್ನ ಭಾವನೆಗಳನ್ನು ಪುನ: ಹಂಚಿಕೊಳ್ಳುವವನಿದ್ದೀನಿ.