|| ಶ್ರೀ ರಾಮ ಜಯ ರಾಮ ಜಯ ಜಯ ರಾಮ ||
Showing posts with label ನನ್ನ ಕವನಗಳು. Show all posts
Showing posts with label ನನ್ನ ಕವನಗಳು. Show all posts

Tuesday, October 12, 2010

ಗುರುವನ್ನು ಸ್ಮರಿಸುತ್ತಾ











ಮುಖದಲ್ಲಿ ಸದಾ ಸಚ್ಚಿದಾನಂದ ಭಾವ

ನಡೆ ನುಡಿಯಲ್ಲಿಲ್ಲ ಯಾವ ಅನುಚಿತ ಹಾವ-ಭಾವ
ವದನಾರವಿಂದ ಹರಿಸಿದೆ ದಿವ್ಯ ತೇಜಸ್ಸಿನಾ ಪ್ರಭೆ
ಅದುವೇ ಸದ್ಗುರುವಿನ ಶ್ರೀ ರಕ್ಷೆಯೆಮಗೆ

ಬೇಡ ಅರ್ಥ ಮದ ಮೋಹಗಳಾ ದಾಹ
ಬೇಡ ಪ್ರೀತಿ ಪಾತ್ರರಲಿ ಅತಿಯಾದಾ ಮೋಹ
ಬೇಡ ಕೀರ್ತಿ ಸನ್ಮಾನ ಪುರಸ್ಕಾರಗಳಾ ಪರಿಗ್ರಹ
ಸದ್ಗುರುವೇ ಕರುಣಿಸು ಎಮಗೆ ಎಲ್ಲದರಲಿ ನಿರ್ಮೋಹ

ನಾಮಸ್ಮರಣೆಗೆ ಎಣೆಯುಂಟೇ ಅನ್ಯಸ್ಮರಣೆ
ನಿತ್ಯವೂ ನಡೆಯಲಿ ಅದರ ಪುರಶ್ಚರಣೆ
ನಾಮಸ್ಮರಣೆಗೆ ತಿಳಿಯಾಗುವುದು ಮನ
ತಿಳಿಯಾದ ಕೊಳದಲ್ಲರಳುವುದು ಅರಿವಿನಾ ಕಮಲ

ಕಣ್ಣಿದ್ದೂ ಕುರುಡನಯ್ಯಾ ನಾನು
ಕಿವಿಯಿದ್ದೂ ಕಿವುಡನಯ್ಯಾ ನಾನು
ಬಾಯಿದ್ದೂ ಮೂಕನಯ್ಯಾ ನಾನು
ದಯೆತೋರಿ ದಾರಿ ತೋರಿಸೋ ಸದ್ಗುರುವೇ ನೀನು

ಅರಿಯದೇ ನುಡಿಯಬೇಡ
ಅರಿಯದೇ ಪರರ ಟೀಕಿಸಬೇಡ
ಅರಿಯದಾ ದಾರಿಯಲಿ ನೀ ನಡೆಯಬೇಡ
ಅರಿವೇ ಗುರುವು ಸಂಶಯ ಬೇಡ

ಕಾವಿ ಬಟ್ಟೆಯಿಲ್ಲ, ಮಡಿಮೈಲಿಗೆಯಿಲ್ಲ,
ಜಾತಿ ಮತ ಭೇದವಿಲ್ಲ, ಅಂತಸ್ತು ಐಶ್ವರ್ಯದ ಗೊಡವೆಯಿಲ್ಲ
ಸಮಷ್ಟಿಭಾವವೇ ಈ ಮಹಾನುಭಾವರಾ ಗುರಿ
ಅದುವೇ ನಮ್ಮ ಬೆಲಗೂರಿನ ಸದ್ಗುರುಗಳ ನಿತ್ಯದಾ ಪರಿ

Tuesday, September 14, 2010

ಗುರುದರ್ಶನ




ಹೆಬ್ಬೂರಿನ ಶ್ರೀ ಶ್ರೀ ದತ್ತಾವಧೂತರು




ಬೆಲಗೂರಿನ ಶ್ರೀ ಶ್ರೀ ಬಿಂದು ಮಾಧವ ಶರ್ಮಸ್ವಾಮೀಜಿಗಳು



ಅರಸಿದೆ ನೆಮ್ಮದಿಯ ಬಂಧು-ಬಾಂಧವರಲ್ಲಿ
ಅರಸಿದೆ ಸಾಂತ್ವನವ ಮಿತ್ರ ಬಾಂಧವರಲ್ಲಿ
ಅರಸಿ ಸುಸ್ತಾದೆ ಸಿಗಲಿಲ್ಲ ನೆಮ್ಮದಿ
ನೆಮ್ಮದಿಗೆ ಶ್ರೀ ಗುರುಪಾದವೇ ಗತಿ!



** **

ವ್ಯಕ್ತ ಒಂದಾದರೆ ಅವ್ಯಕ್ತ ನೂರಾರು
ನುದಿ ಒಂದಾದರೆ ಅರ್ಥ ಹಲವಾರು
ಅರ್ಥವಾದದ್ದು ಒಂದಾದರೆ ಉಳಿದದ್ದು ಸಾವಿರಾರು
ಸರಿದಾರಿ ತೋರಿಸಿ ಮುನ್ನಡೆಸೋ ಓ ಸದ್ಗುರು!


** **

ಕಾವಿ ಬಟ್ಟೆಯಿಲ್ಲ, ಮಡಿ ಮೈಲಿಗೆಯಿಲ್ಲ
ಜಾತಿ ಮತ ಭೇದವಿಲ್ಲ, ಅಂತಸ್ತು ಐಶ್ವರ್ಯದ ಗೊಡವೆಯಿಲ್ಲ
ಸಮಷ್ಟಿ ಭಾವವೇ ಮಹಾನುಭಾವರ ಗುರಿ
ಅದುವೇ ನಮ್ಮ ಸದ್ಗುರುಗಳ ನಿತ್ಯದಾ ಪರಿ!

Sunday, August 8, 2010

ತೋಚಿದ್ದು-ಗೀಚಿದ್ದು - ಭಾಗ-2










ಸಾಹಿತ್ಯ ಗೊತ್ತಿಲ್ಲ, ಸಾಹಿತ್ಯ ಪ್ರಾಕಾರ ಗೊತ್ತಿಲ್ಲ,
ಗದ್ಯ ಗೊತ್ತಿಲ್ಲ, ಪದ್ಯ ತಿಳಿದಿಲ್ಲ,
ಗದ್ಯ ಮೀಮಾಂಸೆ ಗೊತ್ತಿಲ್ಲ, ಕಾವ್ಯ ಮೀಮಾಂಸೆ ಅರಿವಿಲ್ಲ,
ಆದರೂ ಬರೆವುದ ನಾ ಬಿಟ್ಟಿಲ್ಲ!!
*** *** *** ***

ಪರಿ
ಪರಿಯಾಗಿ ನನ್ನನ್ನು ಹಳಿವವರೇ ಎಲ್ಲರೂ
ನಿಜವನರಿವ ಸಹನೆ ಇಲ್ಲದವರೇ ಎಲ್ಲರೂ
ನಾನೇನು ಮಾಡಿದೆನೋ ಮಹಾಪರಾಧ
ನನಗೇಕೆ ಶಿಕ್ಷೆ? ನನಗೇಕೆ ಬೇಗುದಿ?
*** *** *** ***
ಬಾಳಿನಂಗಳದಲ್ಲಿ ಕವಿದಿಹುದು ದು:ಖದಾ ಕಾರ್ಮೋಡ
ಎಲ್ಲೆಲ್ಲೂ ಮೂಡಿಹುದು ಮಿಂಚು-ಗುಡುಗಿನ ಅಬ್ಬರ
ಸುರಿಯಬಾರದೇ ವರ್ಷ ಧಾರಾಕಾರ
ಮೂಡಬಾರದೇ ಬಾನಂಗಳದಲಿ ಶುಭ್ರ ನೀಲಾಂಬರ!
*** *** *** ***

ಹಾಕಿಹರು ಬೆನ್ನಿಗೆ ಅಪನಂಬಿಕೆಯ ಚೂರಿ
ಮುಖದ ತುಂಬಾ ಮುಂದೆ ನಸುನಗೆಯ ಬೀರಿ
ಕೆಲಸವಾಗುವ ತನಕ ಅಂದರು ನೀನೇ ಮಹಾತ್ಮ
ಕೆಲಸವಾದೊಡನೆ ಬೈಯ್ದರು ನೀನೇ ಪಿಶಾತಾತ್ಮ!
*** *** *** ***

ಚಿಂತೆ ಚಿಂತೆ ಚಿಂತೆ ಚಿಂತೆ
ಅದುವೇ ಹೊರಲಾರದ ಜೀವನದ ಕಂತೆ
ಚಿಂತೆ ಮರೆತಷ್ಟೂ ಮತ್ತೊಂದು ಮಗದೊಂದು ಚಿಂತೆ
ಜೀವನದುದ್ದಕ್ಕೂ ಚಿಂತೆಯದೇ ಸಂತೆ!
*** *** *** ***

ಕೊಂದಿಹರು ಎನ್ನ ಬಿರುಗಣ್ಣ ನೋಟದಲಿ
ಕೊಂದಿಹರು ಎನ್ನ ಬಿರುಮಾತ ಚಾವುಟಿಯಲಿ
ಬದುಕಲೇಬೇಕು ಕರ್ತವ್ಯ ಪೂರೈಸುವತನ
ಅಲ್ಲಿಯವರೆಗೆ ನಾ ಬರೀ ನಡೆದಾಡುವ ಹೆಣ!
*** *** *** ***

ಹಸಿದಿಹುದೀ ಜೀವ ಸಾಂತ್ವನದೂಟಕ್ಕೆ
ಯಾರಾದರೂ ಬಡಿಸುವಿರಾ ಮನದುಂಬಿ ಉಣಲಿಕ್ಕೆ
ಬೇಡ ನಯಮಾತಿನ ಪರಮಾನ್ನ, ಬೇಡ ಅನುಕಂಪದ ಮೃಷ್ಟಾನ್ನ
ಹರಿಸಿರೊಮ್ಮೆ ಸಾಕು ನಿಮ್ಮ ಪ್ರೀತಿಯ ನೋಟವನ್ನ!
*** *** *** ***

ಆಗದಿರಲಿ ಒಬ್ಬರ ದು: ಇನ್ನೊಬ್ಬರ ಸುಖ
ಆಗದಿರಲಿ ಒಬ್ಬರ ನೋವು ಇನ್ನೊಬ್ಬರ ನಲಿವು
ನೋವು-ನಲಿವು ಎಲ್ಲರ ಬಾಳಿನ ಕಟ್ಟಿಟ್ಟ ಬುತ್ತಿ
ಸಾಧ್ಯವಾದರೆ ಹಂಚೋಣ ಬರೀ ನಲಿವಿನಾ ಬುತ್ತಿ!
*** *** ***

ದೇಹಕ್ಕಾದ ಗಾಯ ಬಲು ಬೇಗ ಮಾಯ
ಮಾಯಲೊಲ್ಲದು ಮನಸ್ಸಿಗಾದ ಗಾಯ
ಕಟು ಮಾತನಾಡದಿರಿ
ಅನ್ಯರಲ್ಲಿರಲಿ ಸದಾ ಪ್ರತಿಯೆಂಬ ಐಸಿರಿ!
*** *** ***

ಮನದೊಳಗೆ ಮರ್ಕಟವೋ ಮರ್ಕಟದೊಳಗೆ ಮನವೋ
ಜೀವದೊಳು ಭಾವವೋ ಭಾವದೊಳು ಜೀವವೋ
ಪ್ರಪಂಚದಾ ರೀತಿ ಬಲು ನಿಗೂಢ ನೋಡಾ
ಅರಿವಾಗದ್ದಕ್ಕೆ ತಲೆ ಬಾಗಿ ವಂದಿಪನೇ ಜಾಣ!
*** *** ***

ನನ್ನಿಂದ್ಯಾರಿಗೂ ಸುಖವಿಲ್ಲ
ನನ್ನಿಂದೆಲ್ಲರಿಗೂ ಬರೀ ದು:ಖವೇ ಎಲ್ಲ
ಏನು ಮಾಡಿದ್ದೆನೋ ಪಾಪವ ತಿಳಿಹೇಳು
ಹೇ ಭಗವಂತ! ಕೈ ಹಿಡಿದು ಮುನ್ನಡೆಸು ಎನ್ನನು
*** *** ***

ಮನವ ಹೊಕ್ಕಿತು ಸಂಶಯವೆಂಬ ಗೆದ್ದಲು
ಮನದಿಂದ ಮನಕ್ಕೆ ಹಬ್ಬಿತೀ ಗೆದ್ದಲು
ಮುರಿದು ಬಿದ್ದವು ಪ್ರೀತಿ-ವಾತ್ಸಲ್ಯದಾ ಮಹಲು
ಎಲ್ಲೆಲ್ಲೂ ಗೆದ್ದಲುಗಳೇ ಗೆದ್ದಲುಗಳು!
*** *** ***

ಮನದಲಿ ಸದಾ ತುಂಬಿರಲಿ ಚಿನ್ಮಯ ಭಕ್ತಿ
ಸುಷುಪ್ತಿಯಲೂ ಜಾಗೃತವಿರಲಿ ಭಾವ ವಿರಕ್ತಿ
ಅರಿಯದೆಯೂ ಚಿಂತಿಸದಿರಲಿ ಮನ ಕುಯುಕ್ತಿ
ಅನವರತ ಕೊಡು ನೀ ಸನ್ನಡತೆಯಾ ಶಕ್ತಿ
*** *** ***

ತಿಳಿಯಾಗಿತ್ತೊಮ್ಮೆ ನನ್ನ ಮನವೆಂಬ ಕೊಳ
ಎಲ್ಲೆಲ್ಲೂ ಕಂಗೊಳಿಸಿತ್ತು ಸುಂದರ ಕಮಲ
ಕಮಲ ಕಿತ್ತರು, ಕೊಳವ ರಾಡಿ ಮಾಡಿದರು
ನೆಮ್ಮದಿಯ ಸಹಿಸದಾ ಜನರು!
*** *** ***

ಎಲ್ಲ ಓದಲಿ ಎಂದು ನಾನು ಬರೆಯುವುದಿಲ್ಲ
ನಾ ಬರೆವುದು ನನ್ನ ನಾ ತಿಳಿಯಲಿಕ್ಕೆ
ನಾ ಬರೆವುದು ನನ್ನ ಆತ್ಮ ಸಾಕ್ಷಾತ್ಕಾರಕ್ಕೆ
ಅದಕಿರಲಿ ಸದಾ ಶ್ರೀ ಗುರುವಿನ ಶ್ರೀ ರಕ್ಷೆ

*** *** ***

Tuesday, July 13, 2010

ತೋಚಿದ್ದು-ಗೀಚಿದ್ದು

ನಾನೆಂಬುದು ನಾನಲ್ಲ,
ನನದೆಂಬುದು ನನದಲ್ಲ,
ನನ್ನವರೆಂಬುವರು ನನ್ನವರಲ್ಲ,
ಆದರೂ ಈ ಸತ್ಯ ನಾ ತಿಳಿದಿಲ್ಲ!
*** *** ***


ಬದುಕುವಾಸೆ ವರ್ಷ ನೂರು,
ಅಂದು ಕೊಂಡದ್ದು ನೂರು,
ಕನಸು ಕಂಡಿದ್ದು ನೂರು,
ಆದರೂ ಆಗಲಿಲ್ಲ ಚೂರು-ಪಾರು!
*** *** ***

ಬರುವಾಗ ಒಂಟಿ,
ಹೋಗುವಾಗ ಒಂಟಿ,
ನಡುವಿನಲೇಕೆ ಈ ಜಂಟಿ?
*** *** ***

ನನದೆಲ್ಲವೂ ಸರಿ
ನಾ ನುಡಿವುದೆಲ್ಲವೂ ಸರಿ
ನಾ ಮಾಡುವುದೆಲ್ಲವೂ ಸರಿ
ಹೌದಲ್ಲವೇ? ನೀವೇನಂತೀರಿ?
ಖಂಡಿತಾ ಅಲ್ಲ! ಸಧ್ಯಕ್ಕೆ ನೀ ಪಕ್ಕಕ್ಕೆ ಸರಿ!!
*** *** ***

ನನ್ನ ನಿತ್ಯಾನುಷ್ಠಾನದ ಮೂಲ ಜಪಮಂತ್ರ 'ಬೇಕು'
ಎಲ್ಲವೂ ಬೇಕು, ಎಲ್ಲವೂ ನನಗೇ ಬೇಕು,
ಆದರೂ ತಿಳಿಯದಾಗಿದೆ, 'ನನಗೇನು ಬೇಕು'
ಯಾರಾದರೂ ತಿಳಿಸುವಿರಾ ಈ ಬೇಕಿಗೊಂದು ಬ್ರೇಕು?
*** *** ***

ಬದುಕಬೇಡ ನೀ ನೂರು ವರುಷ
ಖಂಡಿತಾ ತರಲಾರದು ಅದು ನಿನಗೆ ಹರುಷ
ಬದುಕಾಗುವುದು ನಿತ್ಯ ಗೋಳಾಟದ ಬೇಗುದಿ
ತೊಲಗಿದರೆ ಸಾಕಪ್ಪಾ ಎಂದು ಕಾಯ್ವರೇ ಬಲು ಮಂದಿ!
*** *** ***

ದಿನಾ ನಡೆಯುತ್ತೇನೆ, ದಿನಾ ಎಡವುತ್ತೇನೆ
ದಿನಾ ನುಡಿಯುತ್ತೇನೆ, ದಿನಾ ತೊದಲುತ್ತೇನೆ
ದಿನಾ ಅಳುತ್ತೇನೆ, ದಿನಾ ನಗುತ್ತೇನೆ
ದಿನದಿನದ ಬಾಳಿನ ಅನುಭವವೆ ಇದೇ ತಾನೆ?
*** *** ***

ಒಳಗೆ ಜ್ವಾಲಾಮುಖಿ, ಹೊರಗೆ ಹಸನ್ಮುಖಿ,
ಒಳಗೆ ನಾನಾ ಜಂಜಾಟದ ನಡುವೆಯೂ ಜೀವನ್ಮುಖಿ,
ಬದುಕುವುದು ನನಗಲ್ಲ, ಪರರಿಗೆ,
ಅದುವೇ ಸದಾ ಇರಲಿ ನನ ಪಾಲಿಗೆ!
*** *** ***

ಕಡೆಗಣಿಸಬೇಡ ನಿನ್ನೀ ದೇಹವನು
ಅದೇ ಆ ಭಗವಂತನ ಅನುಪಮ ಸೃಷ್ಠಿ
ಸದಾ ಇರಲಿ ಸ್ವಸ್ಥ ದೇಹ, ಸ್ವಸ್ಥ ಮನಸ್ಸು
ಅದುವೇ ಇಹಲೋಕದಿಂದ ಪರಲೋಕಕ್ಕೊಯ್ಯುವ ಸಾಧನ ಸಂಪತ್ತು!
*** *** ***

ಸುರಿಯುತಿಹುದು ಮಳೆ

ತಂಪಾಗಿಹುದು ಇಳೆ

ಬಸಿರೊಡೆಯಿತು ಧರೆ,

ಹೊದ್ದಿತು ಹಸಿರಿನಾ ಝರಿ-ಸೀರೆ!
*** *** ***

ನಿನಗಿರಲು ಅಧಿಕಾರ
ಇರುವುದು ವಂದಿ ಮಾದಿಗರ ಜೈಜೈಕಾರ
ಅಧಿಕಾರ ಹೋದೊಡನೆ ವಂದಿ ಮಾದಿಗರು ಮಾಯ
ಕಾಲ್ಗೆ ಬೀಳುವವರಿಲ್ಲ, ಕಾಲೆಳೆಯುವವರೇ ಎಲ್ಲ!
*** *** ***

ಒಳಗೆ ತುಂಬಿದಾ ನಗು, ಹೊರಬಾರದ ನಗು,
ಒಳಗೆ ತುಂಬಿದಾ ಹರುಷ, ಹೊರಗೆ ಬರೀ ವರ್ಷ
ಒಳಗೆ ತುಂಬಿದಾ ಭಾವನೆಗಳು, ಹೊರಗೆ ಬರೀ ಗೋಜಲುಗಳು
ಉಕ್ಕಬಾರದೇ ಈ ಅಗ್ನಿಪರ್ವತ, ಉಗುಳಬಾರದೇ ತನ್ನೊಡಲಿನ ತುಡಿತಗಳ?
*** *** ***

ಒಳಗೊಂದು ಮುಖ, ಹೊರಗೆ ನಾನಾ ಮುಖ
ಒಳಗೆ ಒಂದೇ ಭಾವನೆ, ಹೊರಗೆ ಹರಿವುದು ನಾನಾ ಭಾವನೆ
ಒಳಗೆಲ್ಲ ತಳಮಳ-ಕಳವಳ, ಹೊರಗೆ ಮಾತ್ರ ಫಳಫಳ
ಒಳಗೆಲ್ಲ ಬರೀ ಬೇಗುದಿ, ಹೊರಗೆ ತೋರಿಕೆಯ ನೆಮ್ಮದಿ
ಒಳಗಿದೆ ಎಡವಿದ ನೋವು, ಹೊರಗೆ ಮಾತ್ರ ಸತ್ಯದ ಸಾವು
ನನಗಿರಲಿ ಎಲ್ಲವೂ, ಉಳಿದವರಿಗೇಕೆ ಅನ್ಯಥಾ ಎಲ್ಲವೂ?

*** *** ***
ನನಗ್ಯಾರಿಲ್ಲ ನಾನೊಬ್ಬನೇ ಎಲ್ಲ
ಎಲ್ಲವೂ ಇದೆ ಆದರೆ ನನಗೇನಿಲ್ಲ
ಹೊಳೆ ದಾಟಿದ ಮೇಲೆ ಅಂಬಿಗ ಮಿಂಡ
ಅಂಬಿಗನ ಬಾಳಿನ ಪರಿ ನನ ಬಾಳೂ ದಂಡ!
*** *** ***
ನೊಂದು ಮೂಕಾಗಿ

ಬೆಂದು ಬೆಂಡಾಗಿ

ಸೋತು ಸುಣ್ಣಾಗಿ, ಸುಟ್ಟು ಕರಕಲಾಗಿ

ರೋಧಿಸುತಿಹುದೀ ಜೀವ

*** *** ***

ಬಳಸಿದರು ನನ್ನನ್ನು ಕಬ್ಬಿನ ಜೆಲ್ಲೆಯಂತೆ

ಬಳಸಿ ಮೂಲೆ ಸೇರಿಸಿದರು ಕಸಪೊರಕೆಯಂತೆ

ಮೊಸರನ್ನ ತಿಂದು ನನ ಮೂತಿಗೆ ಸವರಿದರು ಕೋತಿಯಂತೆ

ಎಸೆದರು ಉಂಡಾದ ಮೇಲೆ ಬಾಳೆಎಲೆಯ ಪರಿಯಂತೆ!

*** *** ***

ಮಾತಾಡಿ ಕೆಟ್ಟರು ಕೆಲವರು

ಮಾಡಿ ಕೆಟ್ಟರು ಕೆಲವರು

ಮಾತಾಡಿ-ಮಾಡಿ ಕೆಟ್ಟವರೂ ಕೆಲವರು

ಮಾತಾಡದೇ, ಮಾಡದೇ ಜಾಣರಾದರು ಹಲವರು!

*** *** ***


ದುರ್ಬಳಿಸಿಹರು ಎನ್ನ ಸಹನೆಯನ್ನ

ದುರ್ಬಳಿಸಿಹರು ಎನ್ನ ಮೌನವನ್ನ

ದುರ್ಬಳಿಸಿಹರು ಎನ್ನ ಮೃದು ಮನಸ್ಸನ್ನ

ನಾನೀಗ ಬರೀ ಹಳಸಿದ ಚಿತ್ರಾನ್ನ!



*** *** ***


ಋಣದಿಂದ ಬಂತು ಸಂಬಂಧ

ಸಂಬಂಧದಿಂದ ಹೆಚ್ಚಿತು ಋಣಬಂಧ

ಅದುವೇ ಜೀವ-ಜೀವನದ ಋಣಾನುಬಂಧ

ಅದುವೇ ತಪ್ಪಿಸಿಕೊಳ್ಳಲಾರದ ಪಾಶ-ಬಂಧ!


*** *** ***